ಬೆಂಗಳೂರು: ಕಳೆದ ಕೆಲ ದಿನಗಳಿಂದ ತಣ್ಣಗಾಗಿದ್ದ ಟಿಪ್ಪು ಸುಲ್ತಾನ್ (Tipu Sultan) ವಿಚಾರವನ್ನು ರಾಜ್ಯ ಬಿಜೆಪಿ (Karnataka BJP) ಮತ್ತೆ ಕೆದಕಿ ಹಾಕಿದೆ. ಐದಾರು ವಿಷಯಗಳನ್ನು ಉಲ್ಲೇಖಿಸಿ ರಾಜ್ಯ ಕಾಂಗ್ರೆಸ್ (KPCC) ನಾಯಕರ ವಿರುದ್ಧ ಸರಣಿ ಟ್ವೀಟ್ ಮೂಲಕ ಹರಿಹಾಯ್ದಿರುವ ಕರ್ನಾಟಕ ಬಿಜೆಪಿ ಘಟಕ ಕಾಂಗ್ರೆಸ್ ಪಕ್ಷಕ್ಕೆ ಸತ್ಯ ವಿಚಾರ ಬೇಕಾಗಿಲ್ಲ ಎಂದು ಹರಿಹಾಯ್ದಿದೆ.
ತನ್ನ ಟ್ವೀಟ್ನಲ್ಲಿ ಬಿಜೆಪಿಯು, ‘ಮತಾಂಧ ಟಿಪ್ಪುವಿನಿಂದ ಮೈಸೂರು ಸಂಸ್ಥಾನವನ್ನು ಉಳಿಸಿದ್ದು ಒಕ್ಕಲಿಗ ವೀರರಾದ ರಾಜ ಮಾತೆ ಮಹಾರಾಣಿ ಲಕ್ಷ್ಮಮ್ಮ ಅಮ್ಮಣ್ಣಿಯವರ ಬಲಗೈ ಬಂಟರಾದ ದೊಡ್ಡ ನಂಜೇಗೌಡ ಮತ್ತು ಉರಿಗೌಡ ಎಂಬ ಸತ್ಯ ಕಾಂಗ್ರೆಸ್ ಪಕ್ಷಕ್ಕೆ ಬೇಕಾಗಿಲ್ಲ. ನಮ್ಮ ದೇಶದ ಚರಿತ್ರೆಯನ್ನು ಬೇಕಾದಂತೆ ತಿರುಚಿ, ತಮ್ಮನ್ನೇ ತಾವು ವೈಭವೀಕರಿಸಿಕೊಂಡಿದ್ದ ಬ್ರಿಟಿಷರಂತೆ ದೇಶವನ್ನ ಲೂಟಿ ಮಾಡಿದ ರಾಷ್ಟ್ರೀಯ ಕಾಂಗ್ರೆಸ್ಗೆ ಒಕ್ಕಲಿಗ ಸಮುದಾಯದ ವೀರರ ಕತೆಯನ್ನು ಸಮಾಜದ ಮುಂದಿಡುವುದು ಬೇಕಾಗಿಲ್ಲ ಎಂದು ಟೀಕಿಸಿದೆ.
ಇದನ್ನೂ ಓದಿ: Telangana: ಬಿಜೆಪಿ ರಾಜ್ಯಾಧ್ಯಕ್ಷನ ಪುತ್ರನಿಂದ ಕಾಲೇಜು ವಿದ್ಯಾರ್ಥಿಯ ಮೇಲೆ ಹಲ್ಲೆ: ವಿಡಿಯೋ ವೈರಲ್
ಡಿಕೆಶಿ-ಸಿದ್ದರಾಮಯ್ಯ ವಿರುದ್ಧವೂ ಕಿಡಿ
ಇನ್ನು ‘ಕಪಾಲಿ ಬೆಟ್ಟದಲ್ಲಿ ಯೇಸು ಪ್ರತಿಮೆ ಹಾಗೂ ಟಿಪ್ಪು ಸುಲ್ತಾನ್ ಜಯಂತಿಯನ್ನು ಸಮರ್ಥಿಸಿಕೊಳ್ಳುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ದೊಡ್ಡ ನಂಜೇಗೌಡ ಹಾಗೂ ಉರಿ ಗೌಡರನ್ನು ಕಾಲ್ಪನಿಕ ಪಾತ್ರಗಳೆಂದು ಬಿಂಬಿಸುವುದು ಕಷ್ಟವಲ್ಲ. ಇಂಥವರು ಒಕ್ಕಲಿಗ ವೀರರ ಜಯಂತಿ, ಪ್ರತಿಮೆ ಸ್ಥಾಪನೆಗೆ ಒಪ್ಪಿಕೊಳ್ಳುವರೇ? ಎಂದು ಪ್ರಶ್ನಿಸಿರುವ ರಾಜ್ಯ ಬಿಜೆಪಿ, ‘ನಾಡಪ್ರಭು ಕೆಂಪೇಗೌಡರ ಪ್ರತಿಮೆ ಉದ್ಘಾಟನೆ ಬಹಿಷ್ಕರಿಸುವ ನಡೆಯ ಹಿಂದಿರುವುದು ಒಕ್ಕಲಿಗ ವಿರೋಧಿ ಸಿದ್ದರಾಮಯ್ಯ ಎಂಬ ಸತ್ಯ, ಅವರ ಬಿಟ್ಟಿ ದೌರ್ಭಾಗ್ಯಗಳನ್ನು ತಿರಸ್ಕರಿಸುತ್ತಿರುವ ಸ್ವಾಭಿಮಾನಿ ಕನ್ನಡಿಗರಿಗೆ ತಿಳಿದಿದೆ’ ಎಂದು ಹೇಳಿದೆ.
ಅಂಬೇಡ್ಕರ್ಗೆ ಕಾಂಗ್ರೆಸ್ ಗೌರವ ಕೊಡಲೇ ಇಲ್ಲ
ಇನ್ನು ತನ್ನ ಸರಣಿ ಟ್ವೀಟ್ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ವಿಚಾರವನ್ನು ಪ್ರಸ್ತಾಪಿಸಿರುವ ಬಿಜೆಪಿ, ‘ಬಾಬಾ ಸಾಹೇಬರ ಹೆಸರನ್ನೇ ಹೇಳಿಕೊಂಡು ಹೆಜ್ಜೆ ಹೆಜ್ಜೆಗೂ ಸಂವಿಧಾನ ಉಲ್ಲೇಖಿಸುತ್ತಾ ರಾಜಕೀಯದ ಬೇಳೆ ಬೇಯಿಸಿಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷ, ಬಾಬಾ ಸಾಹೇಬರಿಗೆ ಕೊಡಬೇಕಾದಂಥ ಗೌರವ ಕೊಡಲೇ ಇಲ್ಲ. 1954 ರ ಉಪ ಚುನಾವಣೆಯಲ್ಲಿ ಅವರನ್ನು ಸೋಲುವಂತೆ ನೋಡಿಕೊಂಡವರು ಜವಾಹರ್ಲಾಲ್ ನೆಹರು’ ಎಂದು ಟೀಕಿಸಿದೆ.
ಇದನ್ನೂ ಓದಿ: Karnataka Congress: ‘ವ್ಯಾಪಾರ ಸೌಧದಲ್ಲಿ ಎಲ್ಲವೂ ಮಾರಾಟ, ಇದು ಬಿಜೆಪಿ ಪಾಪಪುರಾಣ‘! ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್
ಅಲ್ಲದೇ, ಅಂಬೇಡ್ಕರ್ ಅವರ ಜೀವನದ ಮೈಲುಗಲ್ಲುಗಳ ಸ್ಥಳಗಳನ್ನು ಪಂಚತೀರ್ಥ ಕ್ಷೇತ್ರಗಳನ್ನಾಗಿ ಅಭಿವೃದ್ಧಿಪಡಿಸಿದವರು ನಾವು. ಲಂಡನ್ನಿನಲ್ಲಿ ಬಸವಣ್ಣನವರ ಪ್ರತಿಮೆ ಸ್ಥಾಪಿಸಿದವರು ನಾವು. ಗುಜರಾತಿನಲ್ಲಿ ಪಟೇಲರ ಪ್ರತಿಮೆ ಸ್ಥಾಪನೆ ಮಾಡಿದ್ದು ನಾವು. ಚೆನ್ನೈನಲ್ಲಿ ಸರ್ವಜ್ಞ ಕವಿಯ ಪ್ರತಿಮೆ ಸ್ಥಾಪನೆ ಮಾಡಿದ್ದು ನಾವು ಎಂದು ಬಿಜೆಪಿ ತನ್ನ ಟ್ವೀಟ್ನಲ್ಲಿ ಹೇಳಿದೆ.
‘ಕಾಂಗ್ರೆಸ್ ಸಮಾಜದಲ್ಲಿ ಒಡಕನ್ನು ಸೃಷ್ಟಿಸುತ್ತಿದೆ’
ಇನ್ನು, ತಮ್ಮ ರಾಜಕೀಯಕ್ಕಾಗಿ ಇಲ್ಲ ಸಲ್ಲದ ಡೋಂಗಿ ಗ್ಯಾರಂಟಿಗಳ ಪ್ರಚಾರದ ಗುಂಗಿನಲ್ಲಿ ಈ ದೇಶದ, ಈ ರಾಜ್ಯದ ವೀರ ಪುರುಷರಿಗೆ ಕಾಂಗ್ರೆಸ್ ಅಪಮಾನ ಎಸಗುತ್ತಿದೆ ಎಂದು ಆರೋಪಿಸಿರುವ ಬಿಜೆಪಿ, ಕಾಂಗ್ರೆಸ್ ಸಮಾಜದಲ್ಲಿ ಒಡಕನ್ನು ಸೃಷ್ಟಿಸುತ್ತಿದೆ. ಇವರಿಗೆ ತಕ್ಕ ಶಾಸ್ತಿಯನ್ನು ರಾಜ್ಯದ ಜನ ಮಾಡಲಿದ್ದಾರೆ ಎಂದು ಹೇಳಿದೆ.
ಡಬಲ್ ಎಂಜಿನ್ ಸರ್ಕಾರದ ಸಮರ್ಥ ಆಡಳಿತದ ಫಲ
ಇನ್ನೊಂದು ಪ್ರತ್ಯೇಕ ಟ್ವೀಟ್ನಲ್ಲಿ ಬಿಜೆಪಿಯು ರಾಜ್ಯ ಸರ್ಕಾರದ ಆಡಳಿತ ವೈಖರಿಯನ್ನು ಕೊಂಡಾಡಿದೆ. ಈ ಬಗ್ಗೆ ತನ್ನ ಟ್ವೀಟ್ನಲ್ಲಿ, ‘ದಕ್ಷಿಣ ಭಾರತದ ರಾಜ್ಯಗಳನ್ನೆಲ್ಲ ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯವಲ್ಲಿ ಕರ್ನಾಟಕ ಪ್ರಮುಖ ಕೊಂಡಿಯಾಗಿದೆ. ರಾಜ್ಯದ ಮೂಲಕ ಹಾದುಹೋಗುವ ಹೊಸ ಆರು ಪಥದ ರಾಷ್ಟ್ರೀಯ ಹೆದ್ದಾರಿ 150ಸಿ, ಅಭಿವೃದ್ಧಿ ಕಾರ್ಯಗಳ ಸೂಚಕವಾಗಿದೆ' ಎಂದಿದೆ.
ಅಲ್ಲದೇ, 'ಕಲಬುರಗಿ, ಯಾದಗಿರಿ, ರಾಯಚೂರು, ಬೀದರ್ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಹೊಸ ಕಂದಾಯ ಗ್ರಾಮ ಘೋಷಣೆ ಮಾಡುವ ಮೂಲಕ ಸಾವಿರಾರು ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗುತ್ತದೆ. ಈ ಮೂಲಕ ಬಹುಕಾಲದ ಬೇಡಿಕೆಗೆ ರಾಜ್ಯದ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಸ್ಪಂದಿಸಿದೆ. ಡಬಲ್ ಎಂಜಿನ್ ಸರ್ಕಾರದ ಸಮರ್ಥ ಆಡಳಿತದ ಫಲವಾಗಿ ಕಾರ್ಯರೂಪಕ್ಕೆ ಬರುತ್ತಿರುವ ಈ ಎಲ್ಲಾ ಯೋಜನೆಗಳಿಗೆ ನಮ್ಮೆಲ್ಲರ ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರವ ಮೋದಿ ಚಾಲನೆ ನೀಡುತ್ತಿರುವುದು ನಮಗೆಲ್ಲ ಸಂತೋಷದ ವಿಚಾರ’ ಎಂದು ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ