ಕರ್ನಾಟಕದಲ್ಲಿ ಸಿಎಂ ಬದಲಾವಣೆ ವಿಚಾರ; ಹೈಕಮಾಂಡ್ ಭೇಟಿಗೆ ತೆರಳಿದ್ದ ಬಿಜೆಪಿ ಬಂಡಾಯ ನಾಯಕರಿಗೆ ಹಿನ್ನಡೆ

Karnataka Politics: ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಬದಲಾವಣೆ ವಿಚಾರವಾಗಿ ದೆಹಲಿಗೆ ದಂಡಯಾತ್ರೆ ಕೈಗೊಂಡಿದ್ದ ಬಂಡಾಯಗಾರರಿಗೆ ಹಿನ್ನಡೆಯಾಗಿದೆ.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

 • Share this:
  ಬೆಂಗಳೂರು (ಮೇ 26): ಕೊರೋನಾ ಅಬ್ಬರದ ನಡುವೆಯೂ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆಯ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಕುರಿತು ಚರ್ಚೆ ಆರಂಭವಾಗಿದ್ದು, ಸದ್ದಿಲ್ಲದೆ ರಾಜ್ಯ ರಾಜಕೀಯದಲ್ಲಿ ಬಿರುಸಿನ ಚರ್ಚೆಗಳು ನಡೆಯುತ್ತಿವೆ. ಇನ್ನೊಂದೆಡೆ, ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಬದಲಾವಣೆ ವಿಚಾರವಾಗಿ ದೆಹಲಿಗೆ ದಂಡಯಾತ್ರೆ ಕೈಗೊಂಡಿದ್ದ ಬಂಡಾಯಗಾರರಿಗೆ ಹಿನ್ನಡೆಯಾಗಿದೆ. ಹೈಕಮಾಂಡ್ ಭೇಟಿಗೆ ಹೋಗಿದ್ದ ಸಚಿವ ಸಿ.ಪಿ ಯೋಗೇಶ್ವರ್‌, ಶಾಸಕ ಅರವಿಂದ ಬೆಲ್ಲದ್ ಅವರಿಗೆ ಹೈಕಮಾಂಡ್ ನಾಯಕರು ಸಮಯ ನೀಡಿಲ್ಲ. ಬಿಜೆಪಿ ನಾಯಕರಾದ ಅರುಣ್ ಸಿಂಗ್, ಜೆಪಿ ನಡ್ಡಾ ಸೇರಿ ಹಲವು ನಾಯಕರ ಭೇಟಿಗೆ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ, ನಿರಾಸೆಯಿಂದ ರಾಜ್ಯ ಬಿಜೆಪಿ ನಾಯಕರು ದೆಹಲಿಯಿಂದ ವಾಪಾಸಾಗಿದ್ದಾರೆ.

  ಕೊರೊನಾ ಹಿನ್ನಲೆಯಲ್ಲಿ ರಾಜ್ಯ ಬಿಜೆಪಿ ನಾಯಕರನ್ನು ಭೇಟಿ ಮಾಡಲು ಹೈಕಮಾಂಡ್ ನಾಯಕರು ನಿರಾಕರಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಪರೋಕ್ಷವಾಗಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚಿಸಿಲು ನಕಾರ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. ತಮಗೆ ಜಿಲ್ಲಾ ಉಸ್ತುವಾರಿ ನೀಡದಕ್ಕೆ ಅರುಣ್ ಸಿಂಗ್ ಗೆ ದೂರು ನೀಡಿದ್ದ ಸಚಿವ ಸಿ.ಪಿ. ಯೋಗೇಶ್ವರ್ ಅವರನ್ನು ಪುನಃ ಭೇಟಿ ಮಾಡಲು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನಿರಾಕರಿಸಿದ್ದಾರೆ.

  ಇದನ್ನೂ ಓದಿ: PM Narendra Modi: ಕೊರೋನಾ ಲಸಿಕೆ ಕಂಡುಹಿಡಿದ ಭಾರತದ ವಿಜ್ಞಾನಿಗಳ ಬಗ್ಗೆ ಹೆಮ್ಮೆಯಿದೆ; ಪ್ರಧಾನಿ ಮೋದಿ

  ಜಿಂದಾಲ್ ಪ್ರಕರಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ಶಾಸಕರ ಸಹಿ ಸಂಗ್ರಹಿಸಿದ್ದ ಅರವಿಂದ ಬೆಲ್ಲದ್ ಅವರನ್ನು ಕೂಡ ಹೈಕಮಾಂಡ್ ನಾಯಕರು ಭೇಟಿಯಾಗಿಲ್ಲ. ಹೀಗಾಗಿ, ನಿನ್ನೆ ರಾತ್ರಿ ಸಿ.ಪಿ. ಯೋಗೇಶ್ವರ್, ಅರವಿಂದ ಬೆಲ್ಲದ್ ಹೈಕಮಾಂಡ್ ಭೇಟಿಯಾಗದೆ ದೆಹಲಿಯಿಂದ ಬೆಂಗಳೂರಿಗೆ ವಾಪಸ್ ಬಂದಿದ್ದಾರೆ. ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಮಾಡಬೇಕೆಂಬ ಒತ್ತಾಯ ಹೆಚ್ಚಾಗುತ್ತಿದ್ದಂತೆ ಬಿಜೆಪಿ ಹೈಕಮಾಂಡ್ ರಾಜ್ಯದ ಬಿಜೆಪಿ ಶಾಸಕರ ಸಭೆ ಕರೆಯುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ, ಜೂನ್ 7 ರಂದು ಯಡಿಯೂರಪ್ಪ ಶಾಸಕರ ಸಭೆ ಕರೆದಿದ್ದಾರೆ.

  ಇದನ್ನೂ ಓದಿ: Cyclone Yaas: ಪಶ್ಚಿಮ ಬಂಗಾಳ, ಒರಿಸ್ಸಾದಲ್ಲಿ ಯಾಸ್ ಚಂಡಮಾರುತ; ಭಾರೀ ಮಳೆ ಹಿನ್ನೆಲೆ 20 ಲಕ್ಷ ಜನರ ಸ್ಥಳಾಂತರ

  ಸರ್ಕಾರ ಮತ್ತು ಪಕ್ಷದ ನಾಯಕರು ನಡುವಿನ ಅಂತರ, ಸಂಪುಟ ಸಚಿವರ ಒಳಜಗಳ, ಹಾಗೂ ಸಿಎಂ ಪಟ್ಟಕ್ಕಾಗಿ ದೆಹಲಿಯಲ್ಲಿ ವಿವಿಧ ನಾಯಕರು ಲಾಬಿ ನಡೆಸುತ್ತಿದ್ದಾರೆ. ಒಂದು ವೇಳೆ ಹೈಕಮಾಂಡ್ ಒಪ್ಪಿದರೆ ಕರ್ನಾಟಕದಲ್ಲಿ ಸಿಎಂ ಬದಲಾವಣೆ ಖಚಿತ ಎನ್ನುತ್ತಿವೆ ಮೂಲಗಳು. ಸಿಎಂ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪೂರ್ಣ ಅವಧಿಯನ್ನು ಮುಗಿಸಲಿದ್ದಾರೆ ಎಂದು ತೇಪೆ ಹಚ್ಚುತ್ತಿರುವ ಕೆಲವು ನಾಯಕರು ಒಂದೆಡೆಯಾದರೆ ಸದ್ದಿಲ್ಲದೆ ಸಿಎಂ ಯಡಿಯೂರಪ್ಪನವರ ವಿರುದ್ಧ ಸಹಿ ಸಂಗ್ರಹಿಸಿದವರ ತಂಡ ಇನ್ನೊಂದೆಡೆ.

  ಕರ್ನಾಟಕದಲ್ಲಿ ಕೊರೋನಾ ಅಟ್ಟಹಾಸವನ್ನು ನಿಯಂತ್ರಿಸಲು ಕೂಡ ಸಿಎಂ ಯಡಿಯೂರಪ್ಪ ವಿಫಲರಾಗಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡಬೇಕೆಂದು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಅನೇಕ ನಾಯಕರು ಒತ್ತಾಯಿಸಿದ್ದರು.

  ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಡಿಸಿಎಂ ಲಕ್ಷ್ಮಣ ಸವದಿ, ಅರವಿಂದ್ ಬೆಲ್ಲದ, ಬಸವರಾಜ ಬೊಮ್ಮಾಯಿ ಮತ್ತು ಮುರುಗೇಶ್ ನಿರಾಣಿ ಅವರು ಸಿಎಂ ಸ್ಥಾನದ ರೇಸಿನಲ್ಲಿದ್ದಾರೆ ಎನ್ನಲಾಗುತ್ತಿದೆ. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿವೆ. ವಿಜಯೇಂದ್ರ ಆಡಳಿತದಲ್ಲಿ ಮೂಗು ತೂರಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರೇ ಅಸಮಾಧಾನವನ್ನೂ ಹೊರಹಾಕಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಅವರ ಬದಲಿಗೆ ಬೇರಾರನ್ನೂ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಲು ಹೈಕಮಾಂಡ್ ಸಿದ್ಧವಾಗಿಲ್ಲ ಎಂದೂ ಹೇಳಲಾಗುತ್ತಿದೆ.
  Published by:Sushma Chakre
  First published: