ನವದೆಹಲಿ (ಜೂ. 12): ಪ್ರತಿ ದಿನ ನಾಯಕತ್ವ ಬದಲಾವಣೆಯ ಸುತ್ತ ಯಡಿಯೂರಪ್ಪ ಪರ ವಿರೋಧ ಹೇಳಿಕೆಗಳು ಹೊರ ಬೀಳುತ್ತಿದ್ದು ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಕೊರೋನಾ ಕಾಲದಲ್ಲಿ ಆಡಳಿತದ ಮೇಲೂ ದುಷ್ಪರಿಣಾಮ ಬೀರಿದೆ. ಈ ಎಲ್ಲಾ ಹಿನ್ನಲೆಯಲ್ಲಿ ಹೈಕಮಾಂಡ್ ಅಖಾಡಕ್ಕಿ ಇಳಿದಿದ್ದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ರಾಜ್ಯಕ್ಕೆ ಕಳುಹಿಸುತ್ತಿದೆ. ಅರುಣ್ ಸಿಂಗ್ ಜೂನ್ 16 ಅಥವಾ 17ರಂದು ರಾಜ್ಯಕ್ಕೆ ಆಗಮಿಸಲಿದ್ದು ಮೂರು ದಿನ ಬೆಂಗಳೂರಿನಲ್ಲೇ ಠಿಕಾಣಿ ಹೂಡಲಿದ್ದಾರೆ. ಅರುಣ್ ಸಿಂಗ್ ಆಗಮನದ ಹಿನ್ನಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಒತ್ತಡ ಹೇರಲಾಗುತ್ತಿದೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಬಿಕ್ಕಟ್ಟು ಬಗೆಹರಿಸಲು ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸುತ್ತಿರುವಂತೆ ಕೆಲ ಬಂಡಾಯ ಶಾಸಕರು, 'ನಿರ್ಲಿಪ್ತರು' ಎನಿಸಿಕೊಂಡಿದ್ದಾರೆ. ಮತ್ತೆ ಕೆಲ ಹಿರಿಯರು ಹೊಸ ವರಸೆ ಆರಂಭಿಸಿದ್ದಾರೆ. ಇದೇ ಹಿನ್ನಲೆ ಬಂಡಾಯ ಪಾಳೆಯದಲ್ಲಿ ಗುರುತಿಸಿಕೊಂಡಿರುವ ನಾಯಕರು ಅರುಣ್ ಸಿಂಗ್, ಕೇವಲ ಆಯ್ದ ಕೆಲ ನಾಯಕರೊಂದಿಗೆ ಮಾತ್ರ ಮಾತನಾಡದೇ, ಎಲ್ಲಾ ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸಬೇಕು. ಇದೇ ಕಾರಣಕ್ಕೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಕೂಡ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸಿಎಂ ಯಡಿಯೂರಪ್ಪ ವಿರೋಧಿ ಪಾಳೆಯವು ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಒತ್ತಡ ಹೇರುತ್ತಿದ್ದು, ಈಗಾಗಲೇ ಅರುಣ್ ಸಿಂಗ್ ಅವರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಮನವಿ ಮಾಡಿರುವ ಕೆಲ ಹಿರಿಯ ಶಾಸಕರು, ಬಂಡಯಗಾರರು ಮತ್ತು ಹಿರಿಯರು 'ಕೆಲವರ ಅಭಿಪ್ರಾಯ ಎಲ್ಲರ ಅಭಿಪ್ರಾಯ ಆಗಿರುವುದಿಲ್ಲ. ಶಾಸಕಾಂಗ ಸಭೆ ಕರೆದರೆ ಎಲ್ಲಾ ಶಾಸಕರಿಗೂ ಅವಕಾಶ ಸಿಗಲಿದೆ. ಆದುದರಿಂದ ಶಾಸಕರ ಸಮಸ್ಯೆ ಕೇಳಲು ಶಾಸಕಾಂಗ ಪಕ್ಷದ ಸಭೆಯೇ ಸೂಕ್ತ. ಗೊಂದಲ ಬಗೆಹರಿಸಲು ಶಾಸಕಾಂಗ ಪಕ್ಷದ ಸಭೆ ಕರೆಯುವುದೇ ಸರಿಯಾದ ಮಾರ್ಗ' ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ: ಜಮೀರ್ ಪದೇ ಪದೇ ಕರೆಯುತ್ತಾರೆ ಅಂತ ಬರುತ್ತೇನೆ ಅಷ್ಟೇ; ಚಾಮರಾಜಪೇಟೆಯಲ್ಲಿ ಸ್ಪರ್ಧೆ ಇಲ್ಲ; ಸಿದ್ಧರಾಮಯ್ಯ
ಇನ್ನೊಂದೆಡೆ ಯಡಿಯೂರಪ್ಪ ಪಾಳೆಯದಿಂದ ಶಾಸಕಾಂಗ ಪಕ್ಷದ ಸಭೆ ನಡೆಸದಂತೆ ನೋಡಿಕೊಳ್ಳುವ ತಂತ್ರ ರೂಪಿಸಲಾಗುತ್ತಿದೆ ಎಂದು ಕೇಳಿಬಂದಿದೆ. ಕೋರ್ ಕಮಿಟಿ ಸಭೆ, ಹಿರಿಯ ನಾಯಕರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದರೆ ಸಾಕು. ಕೊರೋನಾ ಸಮಯದಲ್ಲಿ 150 ಶಾಸಕರನ್ನು ಸಭೆ ಸೇರಿಸುವುದು ಸರಿಯಲ್ಲ. ವಿಧಾನಸಭಾ ಸದಸ್ಯರು ಮತ್ತು ವಿಧಾನ ಪರಿಷತ್ ಸದಸ್ಯರು ಎಲ್ಲರೂ ಸೇರಿ150 ಶಾಸಕರು ಸಭೆ ನಡೆಸಿದರೆ ಕೊವಿಡ್ ಮಾರ್ಗಸೂಚಿ ಉಲ್ಲಂಘನೆ ಆಗಲಿದೆ. ಪ್ರತಿಪಕ್ಷಗಳಿಗೆ ನಾವೇ ಅಸ್ತ್ರ ಕೊಟ್ಟಂತಾಗುತ್ತದೆ. ರಾಜಕೀಯವಾಗಿ ಇನ್ನಷ್ಟು ಗೊಂದಲ ಸೃಷ್ಟಿಯಾಗಲು ಕಾರಣವಾಗುತ್ತದೆ. ಆದುದರಿಂದ ಶಾಸಕಾಂಗ ಸಭೆ ಕರೆಯದೆ ಸಮಸ್ಯೆ ಬಗೆಹರಿಸಿ ಎಂದು ಮನವಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ಅರುಣ್ ಸಿಂಗ್ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ