news18-kannada Updated:February 13, 2020, 10:59 AM IST
ಎಂಟಿಬಿ ನಾಗರಾಜ್
ಬೆಂಗಳೂರು (ಫೆ.13): ಸಚಿವ ಸ್ಥಾನ ತೊರೆದು ಬಂದು ಬಿಜೆಪಿ ಸರ್ಕಾರ ರಚನೆಗೆ ಸಹಾಯ ಮಾಡಿದ ಎಂಟಿಬಿ ನಾಗರಾಜ್ ಉಪಚುನಾವಣೆ ಸೋಲಿನಿಂದ ಕಂಗೆಟ್ಟಿದ್ದಾರೆ. ಚುನಾವಣೆ ಸೋಲಿನ ಜೊತೆಗೆ ಮಂತ್ರಿಸ್ಥಾನ ಕೈ ತಪ್ಪಿದ್ದು, ಈಗ ನಿಗಮ ಮಂಡಳಿ ಹುದ್ದೆಗಾಗಿ ಸಿಎಂ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾತನಾಡಿದ ಅವರು, ನಿಗಮ ಮಂಡಳಿ ಸ್ಥಾನ ಕೊಟ್ಟರೆ ಸಾಕು ಎನ್ನುವ ಹಂತಕ್ಕೆ ನಾನು ಬಂದಿಲ್ಲ. ನಾನು ಸಚಿವ ಸ್ಥಾನ ಬೇಕು ಎನ್ನುವ ಷರತ್ತಿನ ಮೇಲೂ ಕೂಡ ಬಿಜೆಪಿಗೆ ಬಂದಿಲ್ಲ. ಮೈತ್ರಿ ಸರ್ಕಾರದಿಂದ ಬೇಸತ್ತು ನಾನು ಬಿಜೆಪಿಗೆ ಬಂದಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ನಾನು ಯಾವ ಹುದ್ದೆಯನ್ನೂ ಕೇಳಿಲ್ಲ. ಯಾವ
ಸ್ಥಾನ ಕೊಟ್ಟರೂ ಸಂತೋಷ. ಸೋತವರಿಗೆ ಸಚಿವ ಸ್ಥಾನ ಇಲ್ಲ ಎನ್ನುವ ಕುರಿತು ಕಾನೂನು ತಜ್ಞರ ಅಭಿಪ್ರಾಯ ಪಡೆದಿದ್ದೇನೆ ಎಂದರು.
ಸೋತ ಬಳಿಕವೂ ಅನರ್ಹ ಪಟ್ಟ ಹಾಗೇ ಉಳಿಯಿತಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಒಮ್ಮೆ ನಾಮಪತ್ರ ಸಲ್ಲಿಸಿ ಸ್ವೀಕಾರವಾದರೆ, ಚುನಾವಣೆಯಲ್ಲಿ ಗೆಲ್ಲಲಿ ಸೋಲಲಿ, ಸುಪ್ರೀಂಕೋರ್ಟ್ ಆದೇಶ ರದ್ದಾಗುತ್ತದೆ. ಆ ನಂತರ ಯಾವುದೇ ಹುದ್ದೆ ಪಡೆಯಬಹುದು. ಕಾನೂನುತಜ್ಞರು ಅಭಿಪ್ರಾಯ ತಿಳಿಸಿದ್ದಾರೆ. ಸುಪ್ರೀಂ ನಿವೃತ್ತ ನ್ಯಾಯಮೂರ್ತಿಗಳಿಂದಲೂ ಅಭಿಪ್ರಾಯ ಪಡೆದಿದ್ದೇನೆ. ಈ ಕುರಿತು
ಸಿಎಂ ಬಳಿಯೂ ಈ ಬಗ್ಗೆ ಚರ್ಚಿಸಿ‘ದ್ದು, ಪರಿಶೀಲನೆ ಮಾಡೋಣ ಎಂದಿದ್ದಾರೆ ಎಂದರು.
ಹೊಸಕೋಟೆ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಫಲಿತಾಂಶ ಬಂದಿರುವುದು ಸಂತಸ ತಂದಿದೆ. ಬಿಜೆಪಿಯ ಹೆಚ್ಚು ಅಭ್ಯರ್ಥಿಗಳು ಗೆದ್ದಿದ್ದಾರೆ. ಕಾಂಗ್ರೆಸ್ ಪಕ್ಷ ಠೇವಣಿ ಕಳೆದುಕೊಂಡಿದೆ. ಗೆಲುವಿನ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದೇನೆ ಎಂದರು.
ಇದನ್ನು ಓದಿ: ಗಣಿ ವ್ಯವಹಾರ ಅಂದ್ಮೇಲೆ ಅರಣ್ಯ ನಿಯಮ ಉಲ್ಲಂಘನೆ ಪ್ರಕರಣ ಸಹಜ: ಅರಣ್ಯ ಸಚಿವ ಸ್ಥಾನ ಸಮರ್ಥಿಸಿಕೊಂಡ ಆನಂದ್ ಸಿಂಗ್
ಇನ್ನು ತಮ್ಮ ಸೋಲಿಗೆ ಕಾರಣರಾದ ಶಾಸಕ ಶರತ್ ಬಚ್ಚೇಗೌಡರ ವಿರುದ್ಧ ಕ್ರಮದ ವಿಚಾರ ಕೂಡ ಸಿಎಂ ಗಮನಕ್ಕೆ ತರುತ್ತಲೇ ಇದ್ದೇನೆ. ಇಂದು ಕೂಡ ನಾನು ಸಿಎಂ ಜೊತೆ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ನನ್ನ ಸೋಲಿಗೆ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರೇ ಕಾರಣ. ಇವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ. ಅವರು ಪಕ್ಷ ದ್ರೋಹಿಗಳು ಎಂದು ಅವರ ವಿರುದ್ಧ ಬಿಜೆಪಿಯ ಕೆಲವು ನಾಯಕರಿಗೂ ಪತ್ರ ಬರೆದಿದ್ದೇನೆ. ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿರುವ ನಾಯಕರು ಸಮಯ ಸಂದರ್ಭ ಬಂದಾಗ ಶರತ್ ಬಚ್ಚೆಡಗೌಡರನ್ನು ಉಚ್ಛಾಟನೆ ಮಾಡಲಾಗುತ್ತದೆ ಎಂಬ ಭರವಸೆ ನೀಡಿದ್ದಾರೆ ಎಂದರು.
First published:
February 13, 2020, 10:59 AM IST