ಬೆಂಗಳೂರು: 2023ರ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿಯೊಂದು ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ರೂ ನೀಡುವುದಾಗಿ ಘೋಷಣೆ ಮಾಡಿದೆ. ಬೆಂಗಳೂರಿನಲ್ಲಿ ನಡೆದ ನಾ ನಾಯಕಿ (Naa Nayaki) ಸಮಾವೇಷದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi) 'ಗೃಹಲಕ್ಷ್ಮೀ' (Gruhalakshmi )ಯೋಜನೆಯನ್ನು ಘೋಷಣೆ ಮಾಡಿದರು. ಆದರೆ ರಾಜ್ಯ ಬಿಜೆಪಿ (BJP) ಈ ಯೋಜನೆ ಕುರಿತು ವ್ಯಂಗ್ಯವಾಡಿದ್ದು, ಈಗಾಗಲೇ ಛತ್ತೀಸ್ಗಢ, ಹಿಮಾಚಲ ಪ್ರದೇಶದಲ್ಲಿ, ರಾಜಸ್ಥಾನದಲ್ಲಿ ಚುನಾವಣೆಗೂ ಮುನ್ನ ನಿರುದ್ಯೋಗಿ ಯುವತಿಯರಿಗೆ, ವಿಧವೆಯರಿಗೆ ಮಾಸಿಕ ವೇತನಗಳನ್ನು ನೀಡುತ್ತೇವೆಂದು ಕಾಂಗ್ರೆಸ್ ಘೋಷಣೆ ಮಾಡಿತ್ತು. ಅಲ್ಲಿ ಯಾವುದನ್ನು ಜಾರಿಗೆ ತರದವರು ಈಗ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ (Karnataka assembly elections ) ಹತ್ತಿರ ಬರುತ್ತಿದ್ದಂತೆ ಹುಸಿ ಭರವಸೆ ನೀಡುತ್ತಿದೆ ಎಂದು ಸರಣಿ ಟ್ವೀಟ್ಗಳ ಮೂಲಕ ಕಾಂಗ್ರೆಸ್ ಕಾಲೆಳೆದಿದೆ.
ಸೋಮಾವಾರ ನಡೆದ 'ನಾ ನಾಯಕಿ' ಕಾರ್ಯಕ್ರಮದಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಪ್ರತಿ ಮನೆಯ ಯಜಮಾನಿಗೆ 2 ಸಾವಿರ ರೂಪಾಯಿ ಮಾಸಿಕ ಸಹಾಯ ಧನ ನೀಡುವುದಾಗಿ ಭರವಸೆ ನೀಡಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸಮ್ಮುಖದಲ್ಲೇ 'ಗೃಹಲಕ್ಷ್ಮೀ' ಹೆಸರಿನ ಈ ಯೋಜನೆಯನ್ನು ಘೋಷಣೆ ಮಾಡಿದೆ.
ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಛತ್ತೀಸ್ಗಡದಲ್ಲಿ ನಿರುದ್ಯೋಗಿ ಯುವತಿಯರಿಗೆ ₹2500 ಮಾಸಿಕ ಭತ್ಯೆ ಮತ್ತು ವಿಧವೆಯರಿಗೆ ಮಾಸಿಕ ₹1,000 ಪಿಂಚಣೆ ಘೋಷಣೆ ಮಾಡಿತ್ತು. ಇದೇ ಕಾಂಗ್ರೆಸ್ ಹಿಮಾಚಲ ಪ್ರದೇಶದ ಚುನಾವಣೆ ವೇಳೆ 18-60 ವರ್ಷದ ಮಹಿಳೆಯರಿಗೆ ಮಾಸಿಕ ₹1,500 ನೆರವು ನೀಡುತ್ತೇವೆಂದು ಭರವಸೆ ನೀಡಿತ್ತು. ಇನ್ನೂ ರಾಜಸ್ಥಾನದಲ್ಲಿ ನಿರುದ್ಯೋಗಿ ಯುವತಿಯರಿಗೆ ₹3,500 ಮಾಸಿಕ ನಿರುದ್ಯೋಗ ಭತ್ಯೆ ಹಾಗೂ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ಜಾರಿ ಮಾಡುವುದಾಗಿ ಘೋಷಿಸಿತ್ತು. ಆದರೆ ಈ ಘೋಷಣೆಗಳೆಲ್ಲಾ ಕೇವಲ ಭರವಸೆಗಳಾಗಿಯೇ ಉಳಿದುಕೊಂಡಿವೆ. ಇದೀಗ ರಾಜ್ಯದಲ್ಲಿ ಘೋಷಿಸಿರುವ ಗೃಹಲಕ್ಷ್ಮೀ ಯೋಜನೆ ಕೂಡ ಅದೇ ರೀತಿ ಆಗಲಿದೆ ಎನ್ನುವ ರೀತಿಯಲ್ಲಿ ಟ್ವೀಟ್ ಮಾಡಿದೆ.
ಇದನ್ನೂ ಓದಿ: Priyanka Gandhi: ರಾಜ್ಯದಲ್ಲಿ ಶೇಕಡಾ 40ರ ಸರ್ಕಾರವಿದೆ! ನಾ ನಾಯಕಿ ಕಾರ್ಯಕ್ರಮದಲ್ಲಿ ಪ್ರಿಯಾಕಾಗಾಂಧಿ ವಾಗ್ದಾಳಿ
ಸುಳ್ಳು ಭರವಸೆ ಕಾಂಗ್ರೆಸ್ ಮೈಗೂಡಿಸಿಕೊಂಡಿದೆ
ಅಳಿವು ಉಳಿವಿನ ಕೊನೆಯ ಹಂತಕ್ಕೆ ತಲುಪಿದಾಗ ಸುಳ್ಳು ಹೇಳುವುದು ಮತ್ತು ಹುಸಿ ಭರವಸೆ ನೀಡುವುದು ಸಹಜವಾಗಿ ಕಾಂಗ್ರೆಸ್ ಮೈಗೂಡುತ್ತದೆ. ಆದರೆ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಲ್ಲ, ಹಾಗೆಯೇ ಉಳಿದಿದೆ. ಚುನಾವಣೆಗೂ ಮುನ್ನ ಯೋಜನೆಗಳ ಸಾಧ್ಯಾ ಸಾಧ್ಯತೆಗಳನ್ನು ಅರಿಯದೆ ಪ್ರಚಾರಕ್ಕಾಗಿ ಘೋಷಿಸುವುದು ಈಗ ಕಾಂಗ್ರೆಸ್ಗೆ ಅಭ್ಯಾಸವಾಗಿಬಿಟ್ಟಿದೆ ಎಂದು ಕಿಚಾಯಿಸಿದೆ.
ಅಭ್ಯಾಸ ಬಲ
ಚುನಾವಣೆ ಹತ್ತಿರ ಬರುವಾಗ ಇಂತಹ ಸುಳ್ಳು ಭರವಸೆ ನೀಡುವುದು ಅಭ್ಯಾಸ ಬಲ. ಅಭ್ಯಾಸ ಬಲದಲ್ಲಿ ಮುಂದುವರಿದಿರುವ ಕಾಂಗ್ರೆಸ್ ಕರ್ನಾಟಕದಲ್ಲೂ ಅದನ್ನೇ ಮಾಡುತ್ತಿದೆ. ಪ್ರಚಾರಕ್ಕಾಗಿ ಗೃಹಲಕ್ಷ್ಮಿ ಎಂಬ ಪರಿಕಲ್ಪನೆಯನ್ನು ಪ್ರಿಯಾಂಕ ಗಾಂಧಿ ಹರಿಬಿಟ್ಟಿದ್ದಾರೆ. ಉದ್ಯೋಗ ಸೃಷ್ಟಿಯ ಕಡೆಗೆ ರಾಜ್ಯ ದಾಪುಗಾಲಿಡುತ್ತಿರುವಾಗ ಕಾಂಗ್ರೆಸ್ ನಿರುದ್ಯೋಗ ಬಯಸುತ್ತಿದೆ ಎಂದು ಮತ್ತೊಂದು ಟ್ವೀಟ್ನಲ್ಲಿ ಹೇಳಿದೆ.
ವಿದ್ಯಾರ್ಥಿಗಳಿಗೆ ವಂಚನೆ
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಹೋಗಲು ಅನುಕೂಲವಾಗಲು ಬಡ್ಡಿ ರಹಿತ ಸಾಲ ನೀಡುತ್ತೇವೆ ಎಂದು ಭರವಸೆ ನೀಡಿ ಕಾಲೇಜು ವಿದ್ಯಾರ್ಥಿಗಳನ್ನು ನೀವು ವಂಚಿಸಿದ್ದೀರಿ. ಚುನಾವಣೆ ಕಳೆದ ಮೇಲೆ ಅದರ ಬಗ್ಗೆ ತುಟಿಪಿಟಿಕ್ ಎನ್ನಲಿಲ್ಲ. ಮಹಿಳೆಯರಿಗೆ ನೀಡಿದ ಸ್ಮಾರ್ಟ್ ಫೋನ್ ಭರವಸೆಯೂ ಹಾಗೆಯೇ ಉಳಿದಿದೆ. ನಿರುದ್ಯೋಗಿ ಯುವಕ ಯುವತಿಯರಿಗೆ ₹2,500 ಮಾಸಾಶನ ಕೊಡುತ್ತೇವೆ ಎಂದು ಛತ್ತೀಸ್ಘಡದಲ್ಲಿಯೂ ಇದೇ ಕಾಂಗ್ರೆಸ್ ಪಕ್ಷ ಹೇಳಿತ್ತು. ಆದರೆ ಚುನಾವಣೆ ಮುಗಿದ ಮೇಲೆ ಕಾಂಗ್ರೆಸ್ಸಿಗರಿಗೆ ಅದರ ನೆನಪೇ ಇರಲಿಲ್ಲ. ವಿಧವೆಯರಿಗೆ ತಿಂಗಳಿಗೆ ₹1,000 ಮಾಸಿಕ ಪಿಂಚಣಿ ಕಥೆಯೂ ಅಷ್ಟೇ, ಚುನಾವಣಾ ಘೋಷಣೆಗೆ ಮಾತ್ರ ಸೀಮಿತವಾಗುತ್ತದೆ ಎಂದು ಟೀಕಿಸಿದೆ.
ಛತ್ತೀಸ್ಗಡ: ನಿರುದ್ಯೋಗಿ ಯುವತಿಯರಿಗೆ ₹2,500 ಮಾಸಿಕ ಭತ್ಯೆ - ❌
ವಿಧವೆಯರಿಗೆ ಮಾಸಿಕ ₹1,000 ಪೆನ್ಷನ್ - ❌
ಹಿಮಾಚಲ: 18-60 ವರ್ಷದ ಮಹಿಳೆಯರಿಗೆ ₹1,500 ನೆರವು - ❌
ರಾಜಸ್ಥಾನ: ನಿರುದ್ಯೋಗಿ ಯುವತಿಯರಿಗೆ ₹3,500 ಮಾಸಿಕ ನಿರುದ್ಯೋಗ ಭತ್ಯೆ - ❌
ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ -❌#PriyankaKeFakePromises
1/6
— BJP Karnataka (@BJP4Karnataka) January 16, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ