ದಕ್ಷಿಣ ಭಾರತದ ಅತಿ ದೊಡ್ಡ ಜಾತ್ರೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿ (Sirsi) ಶ್ರೀ ಮಾರಿಕಾಂಬಾ ದೇವಿಯ ಜಾತ್ರೆ ಮಾರ್ಚ್ 15 ಆರಂಭವಾಗಿದೆ. 9 ದಿನಗಳ ಕಾಲ ನಡೆಯುವ ಈ ಜಾತ್ರೆಯು ಮಾರ್ಚ್ 23ರಂದು ಅಂತ್ಯಗೊಳ್ಳಲಿದೆ. ರಾಜ್ಯದ ಅತೀ ದೊಡ್ಡ ಜಾತ್ರೆ (Jatre) ಎನ್ನುವ ಹೆಸರು ಪಡೆದ ಮಾರಿಕಾಂಬಾ ಜಾತ್ರೆಗೆ ಸ್ಥಳೀಯರು ಮಾರಿ ಜಾತ್ರೆ ಎಂದೇ ಕರೆಯುತ್ತಾರೆ. ಈಗಾಗಲೇ ಜಾತ್ರೆಗೆ ಅಂಗಡಿ ಮುಂಗಟ್ಟುಗಳು, ಅಮ್ಯೂಸ್ಮೆಂಟ್ಸ್ ಸೇರಿದಂತೆ ಎಲ್ಲಾ ಸಿದ್ಧತೆಗಳು ಪೋರ್ಣಗೊಂಡಿದ್ದು, ಜಾತ್ರೆಗೆ ಪ್ರತಿನಿತ್ಯ ರಾಜ್ಯ(State), ಹೊರರಾಜ್ಯಗಳಿಂದ ಲಕ್ಷಾಂತರ ಭಕ್ತರು ಹರಿದುಬರುತ್ತಾರೆ. ಇನ್ನು, ದೇವಿ ಮಾರಿಕಾಂಬೆಯು ಶಿರಸಿಯ ಬಿಡಕಿ ಬೈಲಿನಲ್ಲಿನ ಗದ್ದುಗೆಯಲ್ಲಿ 9 ದಿನಗಳ ಮಟ್ಟಿಗೆ ಪ್ರತಿಷ್ಠಾಪಿಸಲಾಗುತ್ತದೆ. ಈಗಾಗಲೇ ದೇವಿಯು ಬಿಡಕಿ ಬೈಲಿನ ಗದ್ದುಗೆಯನ್ನು ಅಲಂಕರಿಸಿದ್ದಾಳೆ. ಮಾರ್ಚ್ 15ರಂದು ರಾತ್ರಿ ದೇವಿಯ ಕಲ್ಯಾಣ ಮಹೋತ್ಸವ ಜರುಗಿದ್ದು, 16ರಂದು ರಥದಲ್ಲಿ ದೇವಿಯನ್ನು ಗದ್ದುಗೆಗೆ ಕರೆತಂದು ಪ್ರತಿಷ್ಠಾಪಿಸಲಾಗಿದೆ.
2 ವರ್ಷಕ್ಕೊಮ್ಮೆ ನಡೆಯುವ ಜಾತ್ರೆ:
ಮಾರಿಕಾಂಬಾ ದೇವಿ ಜಾತ್ರೆಯು ಶಿರಸಿಯಲ್ಲಿ ಪ್ರತಿ 2 ವರ್ಷಕ್ಕೊಮ್ಮೆ ಜರುಗುತ್ತದೆ. ಆದರೆ ಇಲ್ಲಿನ ಪ್ರಮುಖ ವಿಶೇಷವೆಂದರೆ ಜಾತ್ರೆ ಇರುವ ವರ್ಷ ಶಿರಸಿಯಲ್ಲಿ ಹೋಳಿ ಆಚರಣೆ ಮಾಡಲಾಗುವುದಿಲ್ಲ. ಜಾತ್ರೆ ನಡೆಯದ ವರ್ಷ ಶಿರಸಿಯಲ್ಲಿ ಸಾಂಪ್ರದಾಯಿಕ ಕಲೆ ಬೇಡರ ವೇಷವನ್ನು ಆಚರಿಸಲಾಗುತ್ತದೆ.
ಮಾರಿಕಾಂಬಾ ಜಾತ್ರೆಯ ಇತಿಹಾಸ:
ಇತಿಹಾಸದ ಪ್ರಕಾರ ಮೊದಲು ಮಾರಿಕಾಂಬಾ ದೇವಿ ಜಾತ್ರೆಯನ್ನು ಹಾನಗಲ್ನಲ್ಲಿ ಆಚರಿಸಲಾಗುತ್ತಿತ್ತು. ಆದರೆ ಒಮ್ಮೆ ಜಾತ್ರೆ ಮುಗಿದ ನಂತರ ದೇವಿ ವಿಗ್ರಹ ಮತ್ತು ಆಭರಣಗಳನ್ನು ಶಿರಸಿಗೆ ತರಲಾಗುತ್ತಿತ್ತು. ಈ ವೇಳೆ ಕಳ್ಳರು ದೇವಿಯ ವಿಗ್ರಹ ಮತ್ತು ಆಭರಣವಿದ್ದ ಪೆಟ್ಟಿಗೆಯನ್ನು ಕದ್ದು, ಆಭರಣಗಳನ್ನೆಲ್ಲ ದೋಚಿ ದೇವಿಯ ವಿಗ್ರಹವನ್ನು ಶಿರಸಿ ಹತ್ತಿರದ ಕೆರೆಯೊಳಗೆ ಹಾಕಿ ಹೋಗಿದ್ದರಂತೆ. ನಂತರ ಮರುದಿನ ಓರ್ವ ಬಸವ ಎಂಬ ಭಕ್ತನಿಗೆ ಕನಸಿನಲ್ಲಿದ ಬಂದು ಇರುವ ಜಾಗ ಕಾಣಿಸಿಕೊಂಡಿತಂತೆ, ನಂತರ ಆ ಕೆರೆಯಲ್ಲಿ ಹುಡಿಕಿದಾಗ ದೇವಿ ಸಿಕ್ಕಿತು ಎಂಬ ಪ್ರತೀತಿ ಇದೆ. ಈಗ ಆ ಕೆರೆಯನ್ನು ದೇವಿಕೆರೆ ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ: Sirsi Jatre: ದಕ್ಷಿಣ ಭಾರತದ ಅತಿದೊಡ್ಡ ಜಾತ್ರೆಗೆ ಚಾಲನೆ, ಗದ್ದುಗೆಯಲ್ಲಿ ವಿರಾಜಮಾನಳಾದ ಶಿರಸಿ ಮಾರಿಕಾಂಬೆ
ಇನ್ನೊಂದು ಪುರಾಣದ ಕಥೆಯ ಪ್ರಕಾರ ಅನ್ಯಜಾತಿಯ ಯುವಕನೊಬ್ಬ (ಮಹಿಷಾಸುರ) ವೇದಾಭ್ಯಾಸ ಮಾಡುವ ಆಸೆಯಿಂದ ಸುಳ್ಳು ಹೇಳಿ ಮದುವೆಯಾಗಿ ನಂತರ ಮಾಂಸ ತಿನ್ನುವಾಗ ಸಿಕ್ಕಿಬಿದ್ದು, ಪತ್ನಿಯ ಕೈಯಿಂದಲೇ ಕೊಲೆಯಾದ ಕಥೆಯೂ ಇದೆ. ಹೀಗಾಗಿ ಜಾತ್ರೆ ಪ್ರಾರಂಭ ಆಗುವ ಮೊದಲು ದೇವಿ ಮಾರಿಕಾಂಬೆಗೆ ರಕ್ತದ ತಿಲಕವನ್ನು ಇಡಲಾಗುತ್ತದೆ. ಆದರೆ ಮೊದಲು ಮಾರಿ ಕೋಣವನ್ನು ಬಲಿ ನೀಡಲಾಗುತ್ತಿತ್ತು. ನಂತರ ಗಾಂಧೀಜಿ ಒಮ್ಮೆ ಶಿರಸಿಗೆ ಭೇಟಿ ನೀಡಿದಾಗ ದೇವಾಲಯಯದಲ್ಲಿ ಪ್ರಾಣಿ ವಧೆ ಮಾಡುವುದರಿಂದ ಒಳ ಪ್ರವೇಶಿಸಲು ನಿರಾಕರಿಸಿದರು. ಅಂದಿನಿಂದ ಕೋಣದ ಬಲಿಯನ್ನು ನಿಲ್ಲಿಸಲಾಗಿದೆ. ಅದರ ಬದಲು ಕೇವಲ ರಕ್ತದ ತಿಲಕವನ್ನು ಇಡಲಾಗುತ್ತದೆ.
ಮಾರಿಕಾಂಬಾ ಜಾತ್ರಾ ಆಚರಣೆ:
ಮಾರಿಕಾಂಬಾ ದೇವಿಯ 7 ಅಡಿ ವಿಗ್ರಹಕ್ಕೆ ಅಲಂಕಾರ ಸಮೇತ ಮದುವೆ ಮಾಡಿ ರಥದ ಮೇಲೆ ಬಿಡಕಿ ಬೈಲಿಗೆ ತರಲಾಗುತ್ತದೆ. ಇನ್ನು, ವಜ್ರ, ನವರತ್ನ ಖಚಿತ ಸ್ವರ್ಣರತ್ನ, ಚಿನ್ನಾಭರಣಗಳಿಂದ ಅಲಂಕೃತಳಾದ ದೇವಿಗೆ 8 ಕೈಗಳಿಂದ ಕೂಡಿರುತ್ತದೆ. ಬಿಡಕಿ ಬೈಲಿನಲ್ಲಿರುವ ದೇವಿ ಪ್ರತಿಷ್ಠಾಪಿತ ಜಾಗಕ್ಕೆ ಮಾರಿ ಚಪ್ಪರ ಎಂದು ಕರೆಯಲಾಗುತ್ತದೆ. ಇನ್ನು, 9 ದಿನದ ನಂತರ ಚಪ್ಪರಕ್ಕೆ ಬೆಂಕಿ ಹಾಕಲಾಗುತ್ತದೆ.
ಇದನ್ನೂ ಓದಿ: Viral Photos: ಶಿರಸಿ ಮಾರಿಕಾಂಬಾ ಜಾತ್ರೆಯಲ್ಲಿ ಪುನೀತ್ ರಾಜ್ಕುಮಾರ್ ಪ್ರತ್ಯಕ್ಷ! ನೀವೇ ಫೋಟೋ ನೋಡಿ
ಚಪ್ಪರ ಸುಡಲು ಕಾರಣ:
ಮಹಿಷಾಸುರ ಸುಳ್ಳು ಹೇಳಿ ಆಕೆಯನ್ನು ವಿವಾಹವಾಗುತ್ತಾನೆ. ಇದನ್ನು ತಿಳಿದ ಆಕೆ, ಮಹಿಷಾಸುರನನ್ನು ವಧಿಸಲು ಸಿದ್ಧಳಾಗಿದ್ದನ್ನು ತಿಳಿದ ಆತ ಕೋಣದ ದೇಹದ ಒಳಗೆ ಸೇರಿಕೊಳ್ಳುತ್ತಾನೆ. ಇದನ್ನು ತಿಳಿದ ಕೋಣನ ಕುತ್ತಿಗೆಯನ್ನು ಕಡಿದು ದೇವಿ ಮಾರಿಕಾಂಬೆ ಮಹಿಷಾಸುರನ ಮರ್ಧನ ಮಾಡುತ್ತಾಳೆ. ಇದರ ಸಾಂಕೇತಿಕ ಆಚರಣೆಯಾಗಿ ಪ್ರತಿ 2 ವರ್ಷಕ್ಕೊಮ್ಮೆ ಮಾರಿಕಾಂಬಾ ಜಾತ್ರೆ ನಡೆಯುತ್ತದೆ.
ಜಾತ್ರೆ ಮುಗಿದು 10 ದಿನ ಊರಿನವರಿಗೆ ಸೂತಕ:
ಜಾತ್ರಾ ಮಹೋತ್ಸವ ಮುಗಿದ 10 ದಿನಗಳವರೆಗೆ ಇಡೀ ಊರಿನವರಿಗೆ ಸೂತಕವಿದ್ದಂತೆ ಎಂಬ ನಂಬಿಕೆ ಇದೆ. ಹೀಗಾಗಿ ಈ ಸಂದರ್ಭದಲ್ಲಿ ಊರಿನಲ್ಲಿ ಎಲ್ಲಿಯೂ ಯಾವುದೇ ರಿಈತಿಯ ಶುಭ ಕಾರ್ಯವೂ ಜರುಗುವುದಿಲ್ಲ. ಅಲ್ಲದೇ ಜಾತ್ರೆ ಮುಗಿದು 40 ದಿನಗಳ ವರೆಗೆ ದೇವಾಲಯದ ಬಾಗಿಲನ್ನು ಹಾಕಿರಲಾಗುತ್ತದೆ. ಈ ವೇಳೆ ದೇವಿಯ ವಿಗ್ರಹವನ್ನು ಧಾರ್ಮಿಕ ವಿಧಿ ವಿಧಾನಗಳ ಮೂಲಕ ನೀರಿನಲ್ಲಿ ಮುಳುಗಿಸಿಡಲಾಗುತ್ತದೆ. 40 ದಿನಗಳ ಬಳಿಕ ಸೂತಕ ಕಳೆದ ಮೇಲೆ ಮತ್ತೆ ಮಾರಿಕಾಂಬಾ ವಿಗ್ರಹವನ್ನು ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾಪನೆ ಮಾಡಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ