ಬೆಂಗಳೂರು: ರಾಜ್ಯದಲ್ಲಿ ಇಂದೂ ಡೆಡ್ಲಿ ವೈರಸ್ ಕೊರೋನಾ ತನ್ನ ಕಬಂಧಬಾಹುವನ್ನು ಹಿಗ್ಗಿಸಿಕೊಂಡಿದೆ. ಇಂದು ಒಂದೇ ದಿನ ರಾಜ್ಯಾದ್ಯಂತ 8,778 ಮಂದಿಗೆ ಸೋಂಕು ತಗುಲಿದೆ. ಆ ಮೂಲಕ ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ 10,83,647ಕ್ಕೆ ಏರಿಕೆಯಾಗಿದೆ. 24 ಗಂಟೆಗಳ ಅವಧಿಯಲ್ಲಿ 67 ಮಂದಿ ಕೊರೋನಾ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. ಈವರೆಗೆ ರಾಜ್ಯದಲ್ಲಿ ವೈರಸ್ನಿಂದ 13,008 ಮಂದಿ ಹಸುನೀಗಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಕೊರೋನಾಸುರನ ಅಬ್ಬರ..!
ರಾಜಧಾನಿ ಬೆಂಗಳೂರಿನಲ್ಲಿ ಇಂದು 5,500 ಮಂದಿಯ ಕೋವಿಡ್ ರಿಪೋರ್ಟ್ ಪಾಸಿಟಿವ್ ಬಂದಿದೆ. ಸೋಂಕಿನಿಂದ 55 ಮಂದಿ ಮೃತಪಟ್ಟಿದ್ದಾರೆ. ಈ ವರ್ಷದಲ್ಲಿ ಮೊದಲ ಬಾರಿಗೆ ಯುಗಾದಿ ಹಬ್ಬದ ದಿನವಾದ ಇಂದೇ ಬೆಂಗಳೂರಿನಲ್ಲಿ ಕೋವಿಡ್ ಸಾವಿನ ಸಂಖ್ಯೆ 50ರ ಗಡಿ ದಾಟಿರುವುದು ಆತಂಕವನ್ನು ಹೆಚ್ಚಿಸಿದೆ. ಬೆಂಗಳೂರಿನಲ್ಲಿ ಒಟ್ಟು ಕೊರೋನಾ ಕೇಸ್ಗಳ ಸಂಖ್ಯೆ 4,93,868ಕ್ಕೆ ಏರಿಯಾಗಿದ್ದರೆ, ಸಾವಿನ ಸಂಖ್ಯೆ 4,910ನ್ನು ತಲುಪಿದೆ. ಬೆಂಗಳೂರಿನಲ್ಲಿಂದು 4,415 ಮಂದಿ ಗುಣಮುಖರಾಗಿದ್ದು, ಸಕ್ರಿಯ ಕೇಸ್ಗಳ ಸಂಖ್ಯೆ 57,575 ಇದೆ.
ಜಿಲ್ಲೆಗಳಲ್ಲಿ ಸೋಂಕಿನ ಆರ್ಭಟ..!
ಇನ್ನು ಸೋಂಕಿನಿಂದ ಇಂದು ಕಲಬುರಗಿಯಲ್ಲಿ ನಾಲ್ವರು ಮೃತಪಟ್ಟಿದ್ದರೆ, ಮೈಸೂರಿನಲ್ಲಿ ಇಬ್ಬರು, ಬೆಳಗಾವಿ, ಧಾರವಾಡ, ಹಾವೇರಿ, ವಿಜಯಪುರದಲ್ಲಿ ತಲಾ ಒಬ್ಬರು ಕೊನೆಯುಸಿರೆಳೆದಿದ್ದಾರೆ. ಬೆಂಗಳೂರು ನಗರದ ನಂತರದಲ್ಲಿ ಇಂದು ಅತಿ ಹೆಚ್ಚು ಕೇಸ್ ಮೈಸೂರಿನಲ್ಲಿ 492, ತುಮಕೂರು ಜಿಲ್ಲೆಯಲ್ಲಿ 350, ಕಲಬುರಗಿಯಲ್ಲಿ 290, ಬೀದರ್ನಲ್ಲಿ 198, ಬಳ್ಳಾರಿಯಲ್ಲಿ 168, ಹಾಸನದಲ್ಲಿ 150, ದಕ್ಷಿಣ ಕನ್ನಡದಲ್ಲಿ 142, ಧಾರವಾಡದಲ್ಲಿ 132, ಮಂಡ್ಯದಲ್ಲಿ 114, ಚಿಕ್ಕಬಳ್ಳಾಪುರದಲ್ಲಿ 114, ವಿಜಯಪುರದಲ್ಲಿ 105 ಪ್ರಕರಣಗಳು ದಾಖಲಾಗಿವೆ. ಉಳಿದ ಜಿಲ್ಲೆಗಳಲ್ಲಿ ಇಂದು 100ಕ್ಕೂ ಕಡಿಮೆ ಪಾಸಿಟಿವ್ ಕೇಸ್ಗಳು ಪತ್ತೆಯಾಗಿವೆ.
ರಾಜ್ಯಾದ್ಯಂತ ಇಂದು 6,079 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಈವರೆಗೆ ರಾಜ್ಯದಲ್ಲಿ 9,92,003 ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಆದರೆ ತೀವ್ರ ನಿಗಾ ಘಟಕದಲ್ಲಿ (ICU) 474 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರು ನಗರವೊಂದರಲ್ಲಿ 172 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನು ಇಂದು ಮಧ್ಯಾಹ್ನ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ದೇಶದಲ್ಲಿ ಶೇ. 89.51ರಷ್ಟು ಕೋವಿಡ್ ಸೋಂಕಿತರು ಗುಣಮುಖರಾಗಿದ್ದು, ಶೇ. 1.25ರಷ್ಟು ಜನರು ಸಾವನ್ನಪ್ಪಿದ್ದಾರೆ. ಸದ್ಯ ದೇಶದಲ್ಲಿ 9.24ರಷ್ಟು ಕೋವಿಡ್ ಪ್ರಕರಣಗಳಿದ್ದು, ಈ ಹಿಂದಿನಗಿಂತಲೂ ಹೆಚ್ಚಿಗೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು. ಜೊತೆಗೆ ದೇಶದಲ್ಲಿ ಕೋವಿಡ್ ವ್ಯಾಕ್ಸಿನ್ ಕೊರತೆ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು. ಇಲ್ಲಿಯವರೆಗೆ 2,01,22,960 ಡೋಸ್ ವ್ಯಾಕ್ಸಿನ್ ನೀಡಲಾಗಿದ್ದು, ಇದರಲ್ಲಿ ಖರ್ಚು ಆಗಿದ್ದು 1,67,20,000 ಡೋಸ್ ಮಾತ್ರ ಎಂದು ಭೂಷಣ್ ತಿಳಿಸಿದ್ದಾರೆ.
ವರದಿ: ಕಾವ್ಯಾ ವಿ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ