ಸರ್ಕಾರದ ರೈತ ವಿರೋಧಿ ನೀತಿ ನೋಡ್ತಿದ್ರೆ, ಬ್ರಿಟಿಷರ ಆಡಳಿತ ನೆನಪಾಗ್ತಿದೆ; ನಟ ಚೇತನ್

ನಾವು ಯಾರಿಗೆ ಮತ ಹಾಕಿ ಕಳುಹಿಸಿದ್ದೇವೆಯೋ ಅವರೇ ಪ್ರಜಾಪ್ರಭುತ್ವದ ವಿರುದ್ಧ ಹೋಗುತ್ತಿದ್ದಾರೆ. ಮಸೂದೆಗಳ ಬಗ್ಗೆ ರೈತರ ಜೊತೆ ನೇರವಾಗಿ ಚರ್ಚೆ ಮಾಡದೇ ಕಾಯ್ದೆ ಮಾಡಲು ಹೊರಟಿದ್ದಾರೆ. ರೈತರ ಧ್ವನಿಯನ್ನು ಕಡೆಗಣಿಸಿದ್ದಾರೆ ಎಂದು ನೇರವಾಗಿ ಆರೋಪ ಮಾಡಿದ್ದಾರೆ ನಟ ಚೇತನ್.

ನಟ ಚೇತನ್

ನಟ ಚೇತನ್

 • Share this:
  ಬೆಂಗಳೂರು(ಸೆ.28): ನೂತನ ಭೂ ಸುಧಾರಣೆ ಕಾಯ್ದೆ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಂದು ರೈತ ಸಂಘಟನೆಗಳು ಸೇರಿದಂತೆ ಅನೇಕ ಸಂಘಟನೆಗಳು ಕರ್ನಾಟಕ ಬಂದ್​ಗೆ ಕರೆ ನೀಡಿವೆ. ಅಂತೆಯೇ ರಾಜ್ಯಾದ್ಯಂತ ಅನ್ನದಾತರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ರೈತರ ಈ ಹೋರಾಟಕ್ಕೆ ಸ್ಯಾಂಡಲ್​ವುಡ್ ನಟ-ನಟಿಯರೂ ಸಹ ಬೆಂಬಲಿಸಿದ್ದಾರೆ. ಸದಾ ಅನ್ನದಾತರ ಪರ ನಿಲ್ಲುವ ನಟ ಚೇತನ್ ಇಂದು ಸಹ ರೈತರಿಗೆ ದನಿಯಾಗಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಚೇತನ್ ಕೂಡ ಭಾಗಿಯಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತ ವಿರೋಧಿ ಕೃಷಿ ಮಸೂದೆ ಜಾರಿಗೆ ತರುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

  ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ದಲಿತ ಸಂಘಟನೆಗಳು, ಸರ್ಕಾರದ ಕಾಯ್ದೆಗಳ ವಿರುದ್ಧದ ಹೋರಾಟದಲ್ಲಿ ಒಟ್ಟಾಗಿ ಸೇರಿಕೊಂಡಿದ್ದಾರೆ. ನಾವು ಯಾರಿಗೆ ಮತ ಹಾಕಿ ಕಳುಹಿಸಿದ್ದೇವೆಯೋ ಅವರೇ ಪ್ರಜಾಪ್ರಭುತ್ವದ ವಿರುದ್ಧ ಹೋಗುತ್ತಿದ್ದಾರೆ. ಮಸೂದೆಗಳ ಬಗ್ಗೆ ರೈತರ ಜೊತೆ ನೇರವಾಗಿ ಚರ್ಚೆ ಮಾಡದೇ ಕಾಯ್ದೆ ಮಾಡಲು ಹೊರಟಿದ್ದಾರೆ. ರೈತರ ಧ್ವನಿಯನ್ನು ಕಡೆಗಣಿಸಿದ್ದಾರೆ ಎಂದು ನೇರವಾಗಿ ಆರೋಪ ಮಾಡಿದ್ದಾರೆ ನಟ ಚೇತನ್.

  ರೈತರಿಗೆ ಅನ್ಯಾಯ ಆಗುವುದಿಲ್ಲ; ರೈತರ ದಾರಿ ತಪ್ಪಿಸದಿರಿ: ರೈತ ಸಂಘಟನೆಗಳಿಗೆ ಯಡಿಯೂರಪ್ಪ ಮನವಿ

  ರೈತರ ಕೆಲಸವನ್ನು ಸಮಾಜ ಸೇವೆ ಎಂದು ನಾವು ಪರಿಗಣಿಸಬೇಕು. ಎಲ್ಲರಿಗೂ ಅನ್ನ ಹಾಕುತ್ತಿರುವ ಅವರನ್ನು ನೋಡಿಕೊಳ್ಳುವುದು ಸರ್ಕಾರದ ಕೆಲಸ. ಆದರೆ ಈ ಸರ್ಕಾರಗಳು ಕಾರ್ಪೋರೇಟ್ ಕಂಪನಿಗಳಿಗೆ ಅನ್ನದಾತರನ್ನು ನೀಡುತ್ತಿವೆ. ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದು ಯಾರೂ ಬೇಕಾದರೂ ಭೂಮಿ ಕೊಂಡುಕೊಳ್ಳಬಹುದು ಎಂಬ ನಿಯಮ ಜಾರಿ ಮಾಡಿದೆ. ಇದರಿಂದ ಕೃಷಿ ಚಟುವಟಿಕೆಗಳು ಕ್ರಮೇಣ ಕಡಿಮೆಯಾಗುತ್ತವೆ. ರೈತರ ಆದಾಯ ಕುಂಠಿತವಾಗುತ್ತದೆ. ಸಾಲ ಹೆಚ್ಚಾಗಿ, ರೈತರು ಆತ್ಮಹತ್ಯೆಯ ಹಾದಿ ಹಿಡಿಯುತ್ತಾರೆ ಎಂದು ಚೇತನ್ ಕಳವಳ ವ್ಯಕ್ತಪಡಿಸಿದ್ದಾರೆ.

  ಈ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಡಳಿತ ನೋಡುತ್ತಿದ್ದರೆ ಹಿಂದೆ ಬ್ರಿಟಿಷರ ಆಡಳಿತ ನೆನಪಿಗೆ ಬರುತ್ತದೆ. ಬ್ರಿಟಿಷರು ನಮ್ಮ ದೇಶಕ್ಕೆ ಬಂದು ನಮ್ಮನ್ನೇ ಗುಲಾಮರನ್ನಾಗಿ ಮಾಡಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. ರೈತರನ್ನು ದಬ್ಬಾಳಿಕೆ ಮಾಡಿ ದುಡ್ಡು ಮಾಡಿಕೊಳ್ಳುತ್ತಿದ್ದರು. ಇದೆಲ್ಲವನ್ನ ನೋಡುತ್ತಿದ್ದರೆ ಪರಕೀಯರ ಆಡಳಿತ ನೆನಪಾಗುತ್ತಿದೆ ಎಂದರು.
  Published by:Latha CG
  First published: