Karnataka Bandh – ಕರ್ನಾಟಕ ಬಂದ್​ಗೆ ಓಗೊಟ್ಟ ಹಲವು ಜಿಲ್ಲೆಗಳು; ರೈತರ ಹೋರಾಟಕ್ಕೆ ಬೆಂಬಲ

ಸರ್ಕಾರದ ಕೃಷಿ ನೀತಿ ವಿರೋಧಿಸಿ ರೈತ ಸಂಘಟನೆಗಳು ಕರೆಕೊಟ್ಟಿರುವ ಕರ್ನಾಟಕ ಬಂದ್​ಗೆ ಬೆಳಗಿನ ಜಾವ ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. 10 ಗಂಟೆಯ ನಂತರ ಬಂದ್ ಬಿಸಿ ಹೆಚ್ಚಾಗುವ ನಿರೀಕ್ಷೆ ಇದೆ.

news18-kannada
Updated:September 28, 2020, 8:36 AM IST
Karnataka Bandh – ಕರ್ನಾಟಕ ಬಂದ್​ಗೆ ಓಗೊಟ್ಟ ಹಲವು ಜಿಲ್ಲೆಗಳು; ರೈತರ ಹೋರಾಟಕ್ಕೆ ಬೆಂಬಲ
ಕೋಲಾರದಲ್ಲಿ ಕತ್ತೆಗಳ ಮೆರವಣಿಗೆ
  • Share this:
ಬೆಂಗಳೂರು(ಸೆ. 28): ಕೃಷಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿರುವ ಮಸೂದೆಗಳನ್ನ ವಿರೋಧಿಸಿ ಕರ್ನಾಟಕ ಬಂದ್ ನಡೆಯುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬಂದ್ ಬಿಸಿ ಹೆಚ್ಚೂಕಡಿಮೆ ತಟ್ಟಿದೆ. ರೈತರು, ದಲಿತರು ಮತ್ತು ಕಾರ್ಮಿಕರು ಒಟ್ಟುಗೂಡಿ ಕರೆ ನೀಡಿರುವ ಈ ಬಂದ್​ಗೆ ಕರ್ನಾಟಕ ರಕ್ಷಣಾ ವೇದಿಕೆ ಮೊದಲಾದ ಅನೇಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿರುವುದರಿಂದ ಬಂದ್ ತೀವ್ರತೆ ಹೆಚ್ಚಿದೆ. ರಾಜ್ಯಾದ್ಯಂತ ಇಂದು ಬೆಳಗೆ ಕೆಲವೆಡೆ ಪ್ರತಿಭಟನೆಗಳು ನಡೆದರೆ ಹಲವೆಡೆ ಬೆಳಗ್ಗೆ 10 ಗಂಟೆಯ ನಂತರ ತೀವ್ರ ಸ್ವರೂಪ ಪಡೆದುಕೊಳ್ಳುವ ನಿರೀಕ್ಷೆ ಇದೆ. ಬೆಂಗಳೂರಿನಲ್ಲಿ ವಿವಿಧೆಡೆ ಪ್ರತಿಭಟನಾ ಮೆರವಣಿಗೆಗಳು ನಡೆಯಲಿವೆ.

ದಾವಣಗೆರೆಯಲ್ಲಿ ಬಂದ್ ಬಿಸಿ ತೀವ್ರವಾಗಿತ್ತು. ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆಗಳ ಸದಸ್ಯರು ದಾವಣಗೆರೆಯ ಗುಂಡಿ ಸರ್ಕಲ್ ಬಳಿಯ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಸುವ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರು ಇಲ್ಲಿನ ಎಪಿಎಂಸಿಯನ್ನು ಬಲವಂತವಾಗಿ ಬಂದ್ ಮಾಡಿಸಿದರು.

ಕೋಲಾರದಲ್ಲಿ ರೈತ ಸಂಘದ ಕಾರ್ಯಕರ್ತರು ಕತ್ತೆಗಳ ಮೆರವಣಿಗೆ ಮಾಡಿದರು. ಕತ್ತೆಗಳಿಗೆ ಸಿಎಂ ಯಡಿಯೂರಪ್ಪ ಹಾಗೂ ಪ್ರಧಾನಿ ಮೋದಿ ಅವರ ಭಾವಚಿತ್ರದ ಮುಖವಾಡ ಹಾಕಿ ಅಣಕು ಪ್ರದರ್ಶನ ಮಾಡಿ ಆಕ್ರೋಶ ಹೊರಹಾಕಿದರು. ನಗರದ ಪ್ರಮುಖ ರಸ್ತೆಗಳಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನಾ ಜಾಥಾ ನಡೆಸಿದರು. ಹೊಸ ಬಸ್ ನಿಲ್ದಾಣದಲ್ಲಿ ರಸ್ತೆ ಮಧ್ಯೆ ಕಟ್ಟಿಗೆಗಳನ್ನಿಟ್ಟು ಬೆಂಕಿ ಹಚ್ಚಿ ಸಿಟ್ಟು ತೋರ್ಪಡಿಸಿದರು.

ಇದನ್ನೂ ಓದಿ: ಮುಖ್ಯಮಂತ್ರಿ, ಸಚಿವರ ನಿವಾಸಗಳಿಗೆ ಸೂಕ್ತ ಬಂದೋಬಸ್ತ್ ಕಲ್ಪಿಸಲು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚನೆ

ಗದಗ್​ನಲ್ಲಿ ರಸ್ತೆಗಳಲ್ಲಿ ಪ್ರತಿಭಟನಾಕಾರರಿಂದ ಟೈರ್​ಗೆ ಬೆಂಕಿ ಹಚ್ಚುವ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿರು. ಚಿತ್ರದುರ್ಗದಲ್ಲಿ ಸಂಚರಿಸುತ್ತಿದ್ದ ಬಸ್​ಗಳನ್ನ ತಡೆಯುವ ಪ್ರಯತ್ನ ಆಯಿತು. ಚಿಕ್ಕಮಗಳೂರಿನಲ್ಲಿ ಬಂದ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಲ್ಲಿಯ ಅಂಗಡಿ-ಮುಂಗಟ್ಟುಗಳು ಬಹುತೇಕ ಬಾಗಿಲು ಹಾಕಿವೆ. ಆಟೋಗಳ ಸಂಚಾರವೂ ಸ್ಥಗಿತಗೊಂಡಿತ್ತು.

ಮೈಸೂರಿನಲ್ಲಿ ರೈತರು ತಲೆ ಮೇಲೆ ಕಲ್ಲು ಚಪ್ಪಡಿ, ಹೆಗಲಿಗೆ ಗುದ್ದಲಿ ಪಿಕಾಸಿ ಇಟ್ಟುಕೊಂಡು ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರಿಗೆ ತೆರಳುವ ಬಸ್ಸುಗಳನ್ನ ತಡೆದು ಆಕ್ರೋಶ ಹೊರಹಾಕಿದ್ದಾರೆ. ಇಲ್ಲಿ ರಾಜ್ಯ ರೈತ ಸಂಘ, ಹಸಿರು ಸೇನೆ, ಸಿಐಟಿಯು, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಸಂಘಟನೆ ಸದಸ್ಯರಿಂದ ಪ್ರತಿಭಟನೆ ನಡೆಸಲಾಗುತ್ತಿದೆ.

ಇದನ್ನೂ ಓದಿ: Karnataka Bandh: ಇಂದು ಕರ್ನಾಟಕ ಬಂದ್​; ಭಾರೀ ಬೆಂಬಲ ನಿರೀಕ್ಷೆ: ಏನಿರುತ್ತೆ, ಏನಿರಲ್ಲ?; ಇಲ್ಲಿದೆ ವಿವರಚಾಮರಾಜನಗರದಲ್ಲಿ ಪ್ರತಿಭಟನಾಕಾರರು ಟೈರ್​ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಬೆಂಕಿ ನಂದಿಸಲು ಹೋದ ಪೊಲೀಸರ ಮೇಲೆ ರೈತರು ಹರಿಹಾಯ್ದರು. ರಾಜಕೀಯ ಪಕ್ಷಗಳು ಪ್ರತಿಭಟನೆ ಮಾಡುವಾಗ ನೀವು ಬೆಂಕಿ ನಂದಿಸಲು ಯತ್ನಿಸಿದ್ದೀರಾ? ನಾವು ಯಾವುದೇ ಆಸ್ತಿಪಾಸ್ತಿಗೆ ಬೆಂಕಿ ಹಚ್ಚಿಲ್ಲ, ಬಸ್​ಗಳಿಗೆ ಬೆಂಕಿ ಹಚ್ಚಿಲ್ಲ. ಬಂದ್ ಮಾಡುವಂತೆ ಯಾರನ್ನೂ ಒತ್ತಾಯ ಮಾಡುತ್ತಿಲ್ಲ. ಆದರೂ ಯಾಕೆ ನಿಮಗೆ ರೈತರ ಮೇಲೆ ಸಿಟ್ಟು ಎಂದು ಪ್ರತಿಭಟನಾಕಾರರು ಪೊಲೀಸರನ್ನು ಪ್ರಶ್ನಿಸಿದರು.

ಬೆಳಗಾವಿಯಲ್ಲಿ ಬಸ್ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಇದು ಬಿಟ್ಟರೆ ಇಲ್ಲಿ ಜನಜೀವನ ಸಜಜವಾಗಿದೆ. ಬೀದರ್​ನಲ್ಲೂ ಬೆಳಗ್ಗೆ ಬಂದ್​ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂಗಡಿ-ಮುಂಗಟ್ಟುಗಳು ಎಂದಿನಂತೆ ತೆರೆದಿವೆ. ಬಸ್ ಸಂಚಾರ ಇದ್ದರೂ ಪ್ರಯಾಣಿಕರು ವಿರಳವಾಗಿದ್ದಾರೆ. ಮಂಡ್ಯದಲ್ಲೂ ಬೆಳಗಿನ ಜಾವ ಬಂದ್​ಗೆ ಜನರಿಂದ ಸ್ಪಂದನೆ ಸಿಗಲಿಲ್ಲ. ಜನಸಂಚಾರ, ವಾಹನ ಸಂಚಾರ ಎಂದಿನಂತೆಯೇ ಇದೆ. ಮುನ್ನೆಚ್ಚರಿಕೆ ಕ್ರಮವಾಗಿ ಮಂಡ್ಯದ ಸಂಜಯ್ ಸರ್ಕಲ್​ನಲ್ಲಿ 300ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜಿಸಲಾಗಿದೆ. ಕರಾವಳಿ ಭಾಗದ ದಕ್ಷಿಣಕನ್ನಡ, ಉತ್ತರಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಜನರು ಬಂದ್​ಗೆ ನೈತಿಕ ಬೆಂಬಲ ನೀಡಿದ್ದಾರೆ. ಇಲ್ಲಿಯ ಜನಜೀವನ ಎಂದಿನಂತೆಯೇ ಇದೆ. ಶಿವಮೊಗ್ಗದಲ್ಲೂ ಜನಜೀವನ ಎಂದಿನಂತೆ ಇದೆ. ವಿಜಯಪುರದಲ್ಲಿ ಬಸ್ಸುಗಳ ಸಂಚಾರ ಮಾಮೂಲಿಯಾಗಿಯೇ ಇದೆ.
Published by: Vijayasarthy SN
First published: September 28, 2020, 8:14 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading