ಬೆಂಗಳೂರು(ಡಿ. 05): ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಇಂದು ರಾಜಧಾನಿ ನಗರದಲ್ಲಿ ಪ್ರತಿಭಟನೆ ಕಾವು ಏರಿದೆ. ನಗರದ ವಿವಿಧೆಡೆ ಪ್ರತಿಭಟನೆಗಳಾಗಿವೆ. ಟೌನ್ ಹಾಲ್ನಲ್ಲಿ ಹಲವರು ಸೇರಿ ಪ್ರತಿಭಟನೆ ನಡೆಸಿದ್ದಾರೆ. ನಗರದಲ್ಲಿ ರ್ಯಾಲಿ, ಪ್ರತಿಭಟನೆಗಳಿಗೆ ಅವಕಾಶ ಇಲ್ಲದ್ದರಿಂದ ಟೌನ್ ಹಾಲ್ನಲ್ಲಿ ಪ್ರತಿಭಟನೆ ನಡೆಸಿದ ಕನ್ನಡಪರ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ಧಾರೆ. ಅನುಮತಿ ಇಲ್ಲ ಎಂದು ಗೊತ್ತಿದ್ದರೂ ಪೊಲೀಸರಿಂದ ಬಂಧನವಾಗುವ ಉದ್ದೇಶದಿಂದಲೇ ಪ್ರತಿಭಟನಾಕಾರರು ಟೌನ್ ಹಾಲ್ನತ್ತ ಬರುತ್ತಿದ್ದಾರೆ.
ಸಮಯ ಉರುಳುತ್ತಿರುವಂತೆಯೇ ವಿವಿಧ ವಾಹನಗಳಲ್ಲಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಟೌನ್ ಹಾಲ್ನತ್ತ ಸಾಗಿ ಬರುತ್ತಿದ್ಧಾರೆ. ಕೆಲ ಕಾಲ ಘೋಷಣೆಗಳನ್ನ ಕೂಗಲು ಅವಕಾಶ ಕೊಟ್ಟು ಪೊಲೀಸರು ಬಂಧಿಸುತ್ತಿದ್ಧಾರೆ. ಇಂದು ಬೆಳಗ್ಗೆಯಿಂದ ಈಗಾಗಲೇ ಕೆಲ ಗುಂಪುಗಳ ಬಂಧನವಾಗಿದೆ. ಇಂದು ದಿನವಿಡೀ ಇದೇ ರೀತಿ ಮಾಡಲು ಪೊಲೀಸರು ನಿರ್ಧರಿಸಿದ್ದಾರೆ.
ಇದೇ ವೇಳೆ, ಮೆರವಣಿಗೆಗಳಿಗೆ ಅನುಮತಿ ಇಲ್ಲ ಕಾರಣ ಪ್ರತಿಭಟನಾಕಾರರು ಅಲ್ಲಲ್ಲಿ ಗುಂಪುಗೂಡುತ್ತಿದ್ದಾರೆ. ಟೌನ್ ಹಾಲ್, ಮೈಸೂರು ಬ್ಯಾಂಕ್ ಸರ್ಕಲ್ ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ಪ್ರತಿಭಟನಾಕಾರರು ಸಣ್ಣ ಗುಂಪುಗಳಾಗಿ ಸೇರುತ್ತಿದ್ದಾರೆ. ಪೊಲೀಸರು ಕೂಡ ಪ್ರತಿಭಟನಾಕಾರರಿದ್ದಲ್ಲಿಗೇ ಹೋಗಿ ಬಂಧನ ಮಾಡುತ್ತಿದ್ಧಾರೆ.
ಇದನ್ನೂ ಓದಿ: Karnataka Bandh: ಕರ್ನಾಟಕ ಬಂದ್ಗೆ ಉತ್ತಮ ಸ್ಪಂದನೆ; ಟೈರ್ಗೆ ಬೆಂಕಿ, ಹೆದ್ದಾರಿ ತಡೆ, ಉರುಳು ಸೇವೆ
ಇದೇ ವೇಳೆ, ನಗರದ ಮಾರುಕಟ್ಟೆಗಳಲ್ಲಿ ಇಂದು ಬೆಳಗ್ಗೆ ಜನಜಂಗುಳಿ ಇದ್ದರೂ ಸಮಯ ಉರುಳಿದಂತೆ ನಗರ ಬಿಕೋ ಎನ್ನುತ್ತಿದೆ. ಮೆಜೆಸ್ಟಿಕ್ನಲ್ಲಿ ಜನರ ಉಪಸ್ಥಿತಿ ವಿರಳವಾಗುತ್ತಿದೆ. ಬಸ್ಗಳ ಸಂಖ್ಯೆಯೂ ಇಳಿಮುಖವಾಗುತ್ತಿದೆ. ಓಡಾಡುತ್ತಿರುವ ಕೆಲವೇ ಬಸ್ಗಳಲ್ಲೂ ಬೆರಳೆಣಿಕೆಯ ಪ್ರಯಾಣಿಕರಿದ್ದಾರೆ. ಬಸ್ ನಿಲ್ದಾಣಕ್ಕೆ ಬಂದು ಪ್ರಯಾಣಿಕರಿಲ್ಲದೆ ಬಸ್ಗಳು ಡಿಪೋಗೆ ವಾಪಸ್ ಹೋಗುತ್ತಿವೆ.
ಹೊಸೂರು ರಸ್ತೆಯಲ್ಲಿ ಬೆಳಗ್ಗೆ ವಾಹನ ಸಂಚಾರ ಹೆಚ್ಚಿತ್ತಾದರೂ ಒಂಬತ್ತು ಗಂಟೆಯ ಬಳಿಕ ಸಂಚಾರ ಇಳಿಮುಖವಾಗುತ್ತಿದೆ. ನೆಲಮಂಗಲ ರಸ್ತೆ ಇಂದು ಬೆಳಗ್ಗೆಯಿಂದಲೂ ವಿರಳ ಸಂಚಾರ ಇತ್ತು.
ಯಶವಂತಪುರದ ಜಾಮಿಯ ಮಸೀದಿ ರಸ್ತೆಯಲ್ಲಿ ತಳ್ಳುಗಾಡಿಗಳು ಸಾಲುಗಟ್ಟಿ ನ ಇಂತಿವೆ. ಪರಿಸ್ಥಿತಿ ನೋಡಿಕೊಂಡು ಮುಂದುವರಿಯಲು ವ್ಯಾಪಾರಿಗಳು ಕಾದುನೋಡುತ್ತಿದ್ದಾರೆ. ಸದಾ ಗಿಜಿಗುಡುವ ಈ ವ್ಯಾಪಾರ ಪ್ರದೇಶದಲ್ಲಿ ಮುಕ್ಕಾಲು ಪಾಲು ಅಂಗಡಿಗಳು ಬಂದ್ ಆಗಿವೆ.
ಇದನ್ನೂ ಓದಿ: Karnataka Bandh: ಕರ್ನಾಟಕ ಬಂದ್ - ಬೆಂಗಳೂರಿನಲ್ಲಿ ಇಂದು ಎಲ್ಲೆಲ್ಲಿ ನಡೆಯುತ್ತಿದೆ ಪ್ರತಿಭಟನೆ?
ಇದೇ ವೇಳೆ, ಇವತ್ತಿನ ಕರ್ನಾಟಕ ಬಂದ್ಗೆ ನೈತಿಕ ಬೆಂಬಲ ನೀಡಿರುವ ಪ್ರವೀಣ್ ಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆ ಇಂದು ಒಂದು ದಿನದ ಮಟ್ಟಿಗೆ ಸಾಂಕೇತಿಕವಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದೆ. ಈ ವೇಳೆ ಮಾತನಾಡಿದ ಪ್ರವೀಣ್ ಶೆಟ್ಟಿ, ತಮಗೆ ಯಡಿಯೂರಪ್ಪ ಬಗ್ಗೆ ತುಂಬಾ ಗೌರವ ಇದೆ. ಬೆಳಗಾವಿಯಲ್ಲಿ ಕನ್ನಡ ಹಬ್ಬ ಮಾಡುವ ಮೂಲಕ ಮಾದರಿಯಾಗಿದ್ದವರು. ಅವರು ಮರಾಠ ಅಭಿವೃದ್ಧಿ ನಿಗಮ ಮಾಡಿ ತಪ್ಪು ಮಾಡಿದ್ದಾರೆ. ನಾಳೆ ತೆಲುಗು, ತಮಿಳು, ಮಾರ್ವಾಡಿ ಅಭಿವೃದ್ಧಿ ನಿಗಮ ಕೇಳುತ್ತಾರೆ. ಬೆಂಗಳೂರಿನಲ್ಲಿ ಕನ್ನಡಿಗರ ಸ್ಥಿತಿ ಈಗ ದಯನೀಯವಾಗಿದೆ. ಹಲವು ಅನ್ಯಭಾಷಿಕರು ಕಾರ್ಪೊರೇಟರ್ಗಳಾಗಿ ಆಯ್ಕೆಯಾಗಿದ್ದಾರೆ. ಸರ್ಕಾರ ಮರಾಠ ಪ್ರಾಧಿಕಾರ ಹಿಂಪಡೆಯುವವರೆಗೂ ಕನ್ನಡಿಗರ ಹೋರಾಟವೂ ಮುಂದುವರಿಯುತ್ತದೆ ಎಂದು ಎಚ್ಚರಿಕೆ ನೀಡಿದ್ಧಾರೆ.
ಇನ್ನು, ನಾರಾಯಣಗೌಡ ಬಣದ ಕರವೇ ಸಂಘಟನೆಯಿಂದ ನಗರ ವಿವಿಧೆಡೆ ರ್ಯಾಲಿಗಳನ್ನ ನಡೆಸುತ್ತಿವೆ. ಅನುಮತಿ ಇಲ್ಲದಿದ್ದರೂ ಪ್ರತಿಭಟನೆ ಮುಂದುವರಿಸಲು ವೇದಿಕೆ ಕಾರ್ಯಕರ್ತರು ಅಣಿಯಾಗಿದ್ಧಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ