ವಿಜಯಪುರದಲ್ಲಿ ಶಾಂತಿಯುತ ಬಂದ್; ಎಂದಿನಂತಿರುವ ಜನರ ಓಡಾಟ, ಜಿಲ್ಲಾದ್ಯಂತ ಪೊಲೀಸ್ ಬಂದೋಬಸ್ತ್​

ವಿಜಯಪುರ ಜಿಲ್ಲಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, 65 ಜನ ಹಿರಿಯ ಪೊಲೀಸ್ ಅಧಿಕಾರಿಗಳು, 1100 ಜನ ಪೊಲೀಸರು, 6 ಡಿಎಆರ್, 1 ಐ ಆರ್ ಬಿ ತುಕಡಿಗಳ ನಿಯೋಜನೆ ಮಾಡಲಾಗಿದೆ

news18-kannada
Updated:September 28, 2020, 1:30 PM IST
ವಿಜಯಪುರದಲ್ಲಿ ಶಾಂತಿಯುತ ಬಂದ್; ಎಂದಿನಂತಿರುವ ಜನರ ಓಡಾಟ, ಜಿಲ್ಲಾದ್ಯಂತ ಪೊಲೀಸ್ ಬಂದೋಬಸ್ತ್​
ವಿಜಯಪುರ
  • Share this:
ವಿಜಯಪುರ(ಸೆ. 28): ಎಪಿಎಂಸಿ ಮತ್ತು ಭೂ ಸುಧಾರಣೆ ಕಾಯಿದೆ ವಿರೋಧಿಸಿ ಹಾಗೂ ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರೆ ನೀಡಲಾಗಿರುವ ಕರ್ನಾಟಕ ಬಂದ್ ವಿಜಯಪುರ ಜಿಲ್ಲೆಯಲ್ಲಿ ಶಾಂತಿಯುತವಾಗಿ ಮುಂದುವರೆದಿದೆ. ಬೆಳಿಗ್ಗೆಯಿಂದಲೇ ವಿಜಯಪುರ ನಗರದಲ್ಲಿ ಜನಜೀವನ ಎಂದಿನಂತೆ ಸಾಗಿದ್ದು, ಬಸ್ ಗಳ ಓಡಾಟ ಮಾಮೂಲಾಗಿದೆ. ಆಟೋಗಳೂ ಎಂದಿನಂತೆ ಸಂಚರಿಸುತ್ತಿದ್ದು, ಜನರೂ ತಮ್ಮ ದೈನಂದಿನ ಕಾರ್ಯಗಳಿಗೆ ತೆರಳುತ್ತಿದ್ದಾರೆ. ವಿಜಯಪುರ ಕೇಂದ್ರ ಮತ್ತು ಸ್ಯಾಟಲೈಟ್ ಬಸ್ ನಿಲ್ದಾಣಗಳ ಮೂಲಕ ವಿಜಯಪುರ ಜಿಲ್ಲೆಯಲ್ಲಿ ಮತ್ತು ರಾಜ್ಯದ ಇತರ ಭಾಗಗಳಿಗೆ ಬಸ್ಸುಗಳ ಸಂಚಾರ ಎಂದಿನಂತೆ ಸಾಗಿದೆ.  ಸಾರಿಗೆ ಇಲಾಖೆ ನೌಕರರು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದು, ಬಂದ್ ನಿಂದ ದೂರ ಉಳಿದಿದ್ದಾರೆ.  ವಿಜಯಪುರ ನಗರದಲ್ಲಿ ಸಿಟಿ ಬಸ್ ಸಂಚಾರವೂ ದಿನ ನಿತ್ಯದಂತೆ ಮುಂದುವರೆದಿದೆ. ಹೋಟೆಲ್​​​ಗಳು ಮತ್ತು ರಸ್ತೆ ಬದಿಯ ಚಹಾ ಅಂಗಡಿಗಳು ತೆರೆದಿವೆ.  ವಿಜಯಪುರ ನಗರದ ಅಲ್ಲಲ್ಲಿ ನಾನಾ ಮಾರುಕಟ್ಟೆಗಳಲ್ಲಿ ಕೆಲವು ವ್ಯಾಪಾರಿಗಳು ತಮ್ಮ ಅಂಗಡಿ-ಮುಂಗಟ್ಟುಗಳನ್ನುತೆರೆದಿದ್ದು ಎಂದಿನಂತೆ ವ್ಯವಹಾರ ಮುಂದುವರೆಸಿದ್ದಾರೆ.

ಈ ಮಧ್ಯೆ ಕರ್ನಾಟಕ ಬಂದ್ ಗೆ ವಿಜಯಪುರ ಎಪಿಎಂಸಿ ವರ್ತಕರು ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.  ಈ ಹಿನ್ನೆಲೆಯಲ್ಲಿ ವಿಜಯಪುರ ಎಪಿಎಂಸಿಯಲ್ಲಿ ಎಲ್ಲ ಅಂಗಡಿ-ಮುಂಗಟ್ಟುಗಳು, ತರಕಾರಿ ಮಾರುಕಟ್ಟೆ ಹಾಗೂ ಅಡತ್ ಅಂಗಡಿಗಳು ಬಂದ್ ಆಗಿದೆ.  ಎಪಿಎಂಸಿ ಮಾರುಕಟ್ಟೆ ಜನರಿಲ್ಲದೆ ಬಿಕೋ ಎನ್ನುತ್ತಿದೆ. ಈ ಮಧ್ಯೆ ಕರ್ನಾಟಕ ಬಂದ್ ಯಶಸ್ವಿಗೊಳಿಸಲು ನಾನಾ ಸಂಘಟನೆಗಳು ಸಮನ್ವಯ ಸಮಿತಿ ರಚಿಸಿಕೊಂಡಿವೆ.  ವಿಜಯಪುರ ಜಿಲ್ಲೆಯ ಎಲ್ಲ ರೈತ, ಕೃಷಿ ಕಾರ್ಮಿಕರ ಸಂಘಟನೆಗಳನ್ನೊಳಗೊಂಡಿರುವ ಸಮಿತಿ ರಚನೆಯಾಗಿದ್ದು, ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ(ಎಐಕೆಎಸ್ ಸಿಸಿ) ಯ ನೇತೃತ್ವದಡಿ ಪ್ರತಿಭಟನೆಗೆ ಸಜ್ಜಾಗಿದ್ದಾರೆ.

ಇಂದು ಕ್ರಾಂತಿಕಾರಿ ಭಗತ್ ಸಿಂಗ್ ಅವರ​​ 113ನೇ ಜನ್ಮದಿನ

ಈ ಸಮಿತಿಯಲ್ಲಿ ವಿಜಯ.ಪುರ ಜಿಲ್ಲೆಯ ನಾನಾ ಹೋರಾಟಪರ, ವ್ಯಾಪಾರಸ್ಥರ, ಕಾರ್ಮಿಕರ, ದಲಿತರ, ವಾಹನ ಚಾಲಕರ, ಮಹಿಳೆಯರ, ಯುವಜನರ, ವಿದ್ಯಾರ್ಥಿಗಳ, ಪ್ರಗತಿಪರ, ಕನ್ನಡಪರ ಸಂಘ ಸಂಸ್ಥೆಗಳು ಇವೆ.  ಶ್ರೀ.ಸಿದ್ದೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿಗಳ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದು ಎಸ್ ಯು ಸಿ ಐ ಮುಖಂಡ ಬಾಳು ಜೇವೂರ ಮಾಹಿತಿ ನೀಡಿದ್ದಾರೆ.

ಮತ್ತೊಂದೆಡೆ ಕರ್ನಾಟಕ ಬಂದ್ ಕರೆ ಹಿನ್ನೆಲೆಯಲ್ಲಿ ವಿಜಯಪುರ ಎಸ್ಪಿ ಅನುಪಮ ಅಗ್ರವಾಲ ಸಾಕಷ್ಟು ಮುಂಜಾಗೃತೆ ಕ್ರಮಗಳನ್ನು ಕೈಗೊಂಡಿದ್ದಾರೆ.  ಹೈಕೋರ್ಟ್ ಆದೇಶದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಯಾರೂ ಶಾಂತಿ ಭಂಗ ಮಾಡುವಂತಿಲ್ಲ.  ಸರಕಾರಿ ಆಸ್ತಿಪಾಸ್ತಿಗೆ ಹಾನಿಯುಂಟು ಮಾಡಿದರೆ ಅಂಥ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.  ಬಲವಂತದಿಂದ ಅಂಗಡಿ-ಮುಂಗಟ್ಟು ಮುಚ್ಚಿಸುವಂತಿಲ್ಲ.  ಹೆದ್ದಾರೆ ಮತ್ತು ರಸ್ತೆ ತಡೆಗೆ ಅವಕಾಶ ಇಲ್ಲ.  ರಾಜ್ಯ ಸಾರಿಗೆ ಮತ್ತು ಇತರ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿಜಯಪುರ ಜಿಲ್ಲಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, 65 ಜನ ಹಿರಿಯ ಪೊಲೀಸ್ ಅಧಿಕಾರಿಗಳು, 1100 ಜನ ಪೊಲೀಸರು, 6 ಡಿಎಆರ್, 1 ಐ ಆರ್ ಬಿ ತುಕಡಿಗಳ ನಿಯೋಜನೆ ಮಾಡಲಾಗಿದೆ ಎಂದು ವಿಜಯಪುರ ಎಸ್ಪಿ ಅನುಪಮ ಅಗ್ರವಾಲ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಮತ್ತೊಂದೆಡೆ ಬಂದ್ ಕುರಿತು ಪ್ರತಿಕ್ರಿಯೆ ನೀಡಿರುವ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ, ಇಂದು ನಡೆಯಬೇಕಿದ್ದ ಡಿಪ್ಲೊಮಾ ಥಿಯರಿ ಪರೀಕ್ಷೆಗಳು ಮುಂದೂಡಲಾಗಿದೆ.  ಎಲ್ಲ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.  ಸರಕಾರಿ ಸಾರಿಗೆ ಮತ್ತು ಖಾಸಗಿ ಅಟೋಗಳು ಎಂದಿನಂತೆ ಓಡಾಡಲಿವೆ.  ಎಲ್ಲಾ ತಾಲೂಕು ದಂಡಾಧಿಕಾರಿಗಳು ಕಡ್ಡಾಯವಾಗಿ ಕೇಂದ್ರಸ್ಥಾನದಲ್ಲಿರುವಂತೆ ಸೂಚನೆ ನೀಡಲಾಗಿದೆ.  ಈ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಸೂಚಿಸಲಾಗಿದೆ.  ಅಲ್ಲದೇ, ವಿಜಯಪುರ ಜಿಲ್ಲಾದ್ಯಂತ ಪೊಲೀಸ ಬಂದೊಬಸ್ತ ಕೈ ಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಈ ಮಧ್ಯೆ, ಇಂದು ನಡೆಯಬೇಕಿದ್ದ ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿವಿ ಸ್ನಾತಕ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.  ಇಂದು ನಡೆಯಬೇಕಿದ್ದ ಎಲ್ಲಾ ಸ್ನಾತಕ ಪದವಿ ಪರೀಕ್ಷೆ ಮುಂದೂಡಿಕೆ ಮಾಡಲಾಗಿದ್ದು, ಅ. 1 ರಂದು ಎಲ್ಲ ಸ್ನಾತಕ ಪದವಿ ಪರೀಕ್ಷೆ ಆಯೋಜನೆ ಮಾಡಲಾಗಿದೆ.  ಅಲ್ಲದೇ, ಅ. 1 ರಂದು ಆರಂಭವಾಗಬೇಕಿದ್ದ 2 ಮತ್ತು 4ನೇ ಸೆಮಿಸ್ಟರ್ ರಿಪೀಟರ್ ಪರೀಕ್ಷೆ ಅ. 3ರಿಂದ ಆರಂಭವಾಗಲಿವೆ ಎಂದು ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ. ಪಿ. ಜಿ. ತಡಸದ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
Published by: Latha CG
First published: September 28, 2020, 1:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading