ಕೊಡಗು(ಡಿ.05): ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿರುವುದನ್ನ ವಿರೋಧಿಸಿ ಕನ್ನಡಪರ ಸಂಘಟನೆಗಳು ನೀಡಿರುವ ಕರ್ನಾಟಕ ಬಂದ್ ಭಾಗವಾಗಿ ಕೊಡಗಿನ ಗಡಿಭಾಗ ಕುಶಾಲನಗರದಲ್ಲಿ ರಕ್ಷಣಾ ವೇದಿಕೆ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದರು. ಕುಶಾಲನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಸಾಗಿದ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣದ ನೂರಾರು ಕಾರ್ಯಕರ್ತರು ಬಳಿಕ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಜಮಾಯಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಎಂಇಎಸ್ ಅನ್ನು ಮೆಚ್ಚಿಸಲು ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸುವುದು ಕನ್ನಡಿಗರಿಗೆ ಮಾಡುವ ಮೋಸ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಕನ್ನಡ ಪರ ಸಂಘಟನೆಗಳ ಬಗ್ಗೆ ಕೀಳಾಗಿ ಮಾತನಾಡುವ ಶಾಸಕ ತನ್ನ ಯೋಗ್ಯತೆ ಏನು ಎಂದು ಮೊದಲು ತಿಳಿದುಕೊಳ್ಳಲಿ. ಜೈಲಿಗೆ ಹೋಗಿ ಬಂದಿರುವವರೆಲ್ಲಾ ಕನ್ನಡ ಪರ ಸಂಘಟನೆಗಳ ಬಗ್ಗೆ ಮಾತನಾಡುತ್ತಾರೆ. ಅವರು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಕಪಿಯ ರೀತಿ ಹಾರುವುದು ಗೊತ್ತಿದೆ. ತಾಕ್ಕತ್ತಿದ್ದರೆ, ಆ ಶಾಸಕ ಕೊಡಗಿಗೆ ಬರಲಿ. ಸಂಬಾಜಿ ಪಾಟೀಲ್ ಗೆ ಮಸಿ ಬಳಿದ ಕೆಲಸವನ್ನು ಮಾಡಿ ತೋರಿಸುತ್ತೇವೆ ಎಂದು ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.
Karnataka Bandh LIVE: ಬೆಂಗಳೂರಿನಲ್ಲಿ ಕಡಿಮೆಯಾದ ಬಂದ್ ಬಿಸಿ; ರಸ್ತೆಗಿಳಿದ ವಾಹನಗಳು
ಬೆಳಿಗ್ಗೆಯಿಂದ ಮಡಿಕೇರಿ ಸೋಮವಾರಪೇಟೆ ವಿರಾಜಪೇಟೆ ಸೇರಿದಂತೆ ಕೊಡಗು ಜಿಲ್ಲೆಯ ಪ್ರಮುಖ ನಗರ ಪಟ್ಟಣಗಳಲ್ಲಿ ಬಂದ್‍ನ ಯಾವುದೇ ಬಿಸಿ ತಟ್ಟಲಿಲ್ಲ. ಎಲ್ಲೆಡೆ ಆಟೋ ಚಾಲಕರು ಕರ್ನಾಟಕ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದರೆ, ಕೊಡಗಿನಲ್ಲಿ ಮಾತ್ರ ಆಟೋ ಚಾಲಕರು ಸಹ ಬೆಂಬಲ ವ್ಯಕ್ತಪಡಿಸಲಿಲ್ಲ. ಇನ್ನು ಕೆಎಸ್ ಆರ್ ಟಿಸಿ ಬಸ್ ಮತ್ತು ಖಾಸಗಿ ಬಸ್ ಗಳ ಸಂಚಾರ ಕೂಡ ಕೊಡಗಿನಲ್ಲಿ ಎಂದಿನಂತೆ ಇತ್ತು. ವ್ಯಾಪಾರ ವಹಿವಾಟುಗಳು ಎಂದಿನಂತೆ ನಡೆದವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ