ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಕರ್ನಾಟಕ ಬಂದ್​​: ಆನೇಕಲ್​​ನಲ್ಲಿ ನೀರಸ ಪ್ರತಿಕ್ರಿಯೆ

ಒಟ್ನಲ್ಲಿ ಇಂದು ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್​​ಗೆ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆನೇಕಲ್ ಸೇರಿದಂತೆ ಕೆಲವು ಕಡೆ ಪ್ರತಿಭಟನೆ ಕಾವು ತಟ್ಟಿದ್ದು, ಸರ್ಕಾರದ ಸರೋಜಿನಿ ಮಹಿಷಿ ವರದಿ ಜಾರಿ ಮಾಡುತ್ತಾ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕ ಬಂದ್​​ಗೆ ಆನೇಕಲ್​​ ನೀರಸ ಪ್ರತಿಕ್ರಿಯೆ

ಕರ್ನಾಟಕ ಬಂದ್​​ಗೆ ಆನೇಕಲ್​​ ನೀರಸ ಪ್ರತಿಕ್ರಿಯೆ

 • Share this:
  ಆನೇಕಲ್​​​(ಫೆ.13): ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಲು ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಕನ್ನಡ ಪರ ಸಂಘನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್​​ಗೆ ಆನೇಕಲ್​​ನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಂದು ಬೆಳಗ್ಗೆಯೇ ಕೆಲವು ಕಡೆ ಟೈರ್​ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿರುವುದು ಹೊರತುಪಡಿಸಿ ಬಹುತೇಕ ಎಂದಿನಂತೆ ಜನಜೀವನ ವ್ಯಪಾರ ವಹಿವಾಟು ಮುಂದುವರಿದಿತ್ತು.

  ಸರೋಜಿನಿ ಮಹಿಷಿ ವರದಿ ಜಾರಿಗೆ ಕರೆ ನೀಡಿದ್ದ ಕರ್ನಾಟಕ ಬಂದ್ ಪರಿಣಾಮ ಬೆಳ್ಳಂಬೆಳಗ್ಗೆ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ರಸ್ತೆಯೊಂದರಲ್ಲಿ ದಲಿತಪರ ಸಂಘಟನೆಗಳ ಕಾರ್ಯಕರ್ತರು ಟೈರ್​​ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಹೆಬ್ಬಗೋಡಿ ಪೊಲೀಸರು ಟೈರ್​​ಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಬಳಿಕ ಬೆಳಗ್ಗೆ 9 ಗಂಟೆ ಸುಮಾರಿಗೆ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ರಸ್ತೆಯಲ್ಲಿಯೇ ಕುಳಿತು ಉಪಹಾರ ಸೇವಿಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಬೆಂಗಳೂರು ಸುತ್ತಮುತ್ತಲಿನ ಬಹುತೇಕ ಕಾರ್ಖಾನೆ, ಕಂಪೆನಿಗಳಲ್ಲಿ ಹೊರಗಿನವರೇ ಹೆಚ್ಚು ಉದ್ಯೋಗದಲ್ಲಿದ್ದಾರೆ. ಕನ್ನಡಿಗರು ಹೊರಗಿನವರಾಗಿದ್ದಾರೆ ಎಂದು ಕರ್ನಾಟಕ ರಿಪಬ್ಲಿಕನ್ ಸೇನೆ ರಾಜ್ಯಾಧ್ಯಕ್ಷ ಜಿಗಣಿ ಶಂಕರ್ ಬೇಸರ ವ್ಯಕ್ತಪಡಿಸಿದ್ದಾರೆ.

  ಇನ್ನು, ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳು ಹೋರಾಟ ನಡೆಸುತ್ತಿವೆ. ಆದರೆ, ಸರ್ಕಾರ ಮಾತ್ರ ಕಿವುಡಾಗಿತ್ತು. ಕರ್ನಾಟಕ ಬಂದ್ ಕರೆ ನೀಡುತ್ತಿದ್ದಂತೆ ಸಿಎಂ ಯಡಿಯೂರಪ್ಪ ಸಂದಾನದ ಮಾತುಗಳನ್ನಾಡಿದ್ದಾರೆ. ಹಾಗಾಗಿ ಇಂದು ಪ್ರತಿಭಟನೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಸರೋಜಿನಿ ಮಹಿಷಿ ವರದಿ ಜಾರಿ ಬಗ್ಗೆ ಕ್ರಮ‌ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಕನ್ನಡಪರ ಹೋರಾಟಗಾರ ನಟರಾಜ್ ಎಚ್ಚರಿಸಿದ್ದಾರೆ.

  ಇದನ್ನೂ ಓದಿ: ಚಂಡೀಗಢ: ಭಾರತೀಯ ಸೇನಾ ಪಡೆಯ ಚೇತಕ್ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

  ಈ ಬೆನ್ನಲ್ಲೇ ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಕರ್ನಾಟಕ ಬಂದ್ ಕರೆ ವಿಚಾರವಾಗಿ ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಪ್ರತಿಕ್ರಿಯಿಸಿದ್ದರು. ಸರೋಜಿನಿ ಮಹಿಷಿ ವರದಿಯಲ್ಲಿ ಸುಮಾರು 58 ಶಿಪಾರಸ್ಸುಗಳನ್ನು ಸರ್ಕಾರಕ್ಕೆ ನೀಡಲಾಗಿತ್ತು. ಅವುಗಳಲ್ಲಿ 45 ಶಿಪಾರಸ್ಸುಗಳನ್ನು ಒಪ್ಪಿ, 43 ಶಿಪಾರಸ್ಸುಗಳನ್ನು ಹಿಂದಿನ ಸರ್ಕಾರಗಳು ಜಾರಿ ಮಾಡಿವೆ. ಕೇವಲ 2 ಶಿಪಾರಸ್ಸುಗಳು ಮಾತ್ರ ಜಾರಿಯಾಗಿಲ್ಲ. ಅವುಗಳನ್ನು ಜಾರಿಗೆ ತರಲು ಸರ್ಕಾರದ ಸಹಮತ ಇದೆ. ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ತರಲು ನಮ್ಮ ತಕರಾರು ಇಲ್ಲ. ಆದರೆ ಗೋವಾ, ಮಹಾರಾಷ್ಟ್ರ ಸೇರಿದಂತೆ ದೇಶ ವಿದೇಶಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಕನ್ನಡಿಗರು ಉದ್ಯೋಗದಲ್ಲಿದ್ದಾರೆ. ನಾವು ಯೋಚನೆ ಮಾಡಿದ ರೀತಿಯಲ್ಲಿ ಅಲ್ಲಿನ ಸರ್ಕಾರಗಳು ಮಾಡಿದರೆ ಹೇಗೆ ಎಂದರು ಸಚಿವರು. ಹಾಗೆಯೇ ಕನ್ನಡಿಗರು ಉದ್ಯೋಗ ಕಳೆದುಕೊಳ್ಳುವುದರ ಜೊತೆಗೆ ಪಡೆದುಕೊಂಡಿದ್ದಾರೆ. ಇಂತಹ ಸತ್ಯ ಸಂಗತಿಗಳನ್ನು ಹೇಳಿದರೆ ಕನ್ನಡ ವಿರೋಧಿ ಎನ್ನುವ ಕಳಂಕ ಬರುವ ಅಪಾಯವಿದೆ. ಕನ್ನಡಿಗರೇ ಇರುವ ಹಳ್ಳಿಗಳಲ್ಲಿ ಸರ್ಕಾರಿ ಶಾಲೆ ಬಾಗಿಲು ಬಂದಾಗುತ್ತಿವೆ. ನಮ್ಮ ಮಕ್ಕಳೇ ಕನ್ನಡ ಮಾಧ್ಯಮದಲ್ಲಿ ಓದಲು ತಯಾರಿಲ್ಲ. ಹಾಗಾಗಿ ಸರೋಜಿನಿ ಮಹಿಷಿ ವರದಿ ಬಗ್ಗೆ ಕೂಲಂಕುಷವಾಗಿ ಚರ್ಚಿಸಬೇಕಿದೆ ಎಂದು ಸಿ ಟಿ ರವಿ ತಿಳಿಸಿದ್ದಾರೆ.

  ಒಟ್ನಲ್ಲಿ ಇಂದು ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್​​ಗೆ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆನೇಕಲ್ ಸೇರಿದಂತೆ ಕೆಲವು ಕಡೆ ಪ್ರತಿಭಟನೆ ಕಾವು ತಟ್ಟಿದ್ದು, ಸರ್ಕಾರದ ಸರೋಜಿನಿ ಮಹಿಷಿ ವರದಿ ಜಾರಿ ಮಾಡುತ್ತಾ ಎಂಬುದನ್ನು ಕಾದುನೋಡಬೇಕಿದೆ.

  (ವರದಿ : ಆದೂರು ಚಂದ್ರು)
  First published: