ಮಾನವೀಯತೆ ಮೆರೆದ ಚಿಕ್ಕೋಡಿ ಪೊಲೀಸರು; ಪ್ರತಿಭಟನಾಕಾರರಿಗೆ ನೀರು, ಮಾಸ್ಕ್, ಸ್ಯಾನಿಟೈಸರ್ ವಿತರಣೆ

ಪೊಲೀಸರು ಎಷ್ಟೇ ಎಚ್ಚರಿಕೆ ನೀಡಿದರೂ ಚಿಕ್ಕೋಡಿಯಲ್ಲಿ ಮಾತ್ರ ಪ್ರತಿಭಟನಾಕಾರರು ಮಾಸ್ಕ ಧರಿಸದೆ ಪ್ರತಿಭಟನೆಗೆ ಆಗಮಿಸಿದ್ದರು. ಅಂತಹ ರೈತರಿಗೆ ಚಿಕ್ಕೋಡಿ ಪಿ.ಎಸ್.ಐ. ರಾಕೇಶ್ ಬಗಲಿ ತಮ್ಮ ಸ್ವಂತ ಖರ್ಚಿನಿಂದಲೆ ನೀರು, ಮಾಸ್ಕ್ ಹಾಗೂ ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ನೀಡಿದರು.

ಚಿಕ್ಕೋಡಿಯಲ್ಲಿ ಪ್ರತಿಭಟನಾಕಾರರಿಗೆ ನೀರು, ಮಾಸ್ಕ್ ವಿತರಿಸುತ್ತಿರುವ ಪೊಲೀಸರು

ಚಿಕ್ಕೋಡಿಯಲ್ಲಿ ಪ್ರತಿಭಟನಾಕಾರರಿಗೆ ನೀರು, ಮಾಸ್ಕ್ ವಿತರಿಸುತ್ತಿರುವ ಪೊಲೀಸರು

  • Share this:
ಚಿಕ್ಕೋಡಿ (ಸೆ. 28): ಭೂ ಸುಧಾರಣಾ ಹಾಗೂ ಎಪಿಎಂಸಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ಕರೆದಿರುವ ಕರ್ನಾಟಕ ಬಂದ್​ಗೆ ಚಿಕ್ಕೋಡಿ ಜಿಲ್ಲೆಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲೆಯಾದ್ಯಂತ ರೈತ ಸಂಘಟನೆಗಳು ಬಂದ್​ಗೆ ಕರೆ ನೀಡಿದ್ದವು. ಆದರೆ, ಚಿಕ್ಕೋಡಿ, ರಾಯಭಾಗ, ಅಥಣಿ ತಾಲೂಕಿನಲ್ಲಿ ಯಾವುದೇ ಬಂದ್​ನ ಬಿಸಿ ಮಾತ್ರ ಮುಟ್ಟಲಿಲ್ಲ. ಎಂದಿನಂತೆ ಅಂಗಡಿ- ಮುಂಗಟ್ಟುಗಳು ತೆರೆದಿದ್ದವು. ವ್ಯಾಪಾರ- ವಹಿವಾಟು ಎಂದಿನಂತೆ ನಡೆದಿದ್ದು, ಸಾರಿಗೆ ವ್ಯವಸ್ಥೆ ಕೂಡ ಎಂದಿನಂತೆ ನಡೆದಿದೆ. ಇನ್ನು ರೈತ ಸಂಘಟನೆ ಹಾಗೂ ಕನ್ನಡಪರ ಸಂಘಟನೆಗಳು ರಸ್ತೆಗಿಳಿದು ಪ್ರತಿಭಟನೆ ನಡೆದಿದ್ದಾರೆ. ಚಿಕ್ಕೋಡಿಯಲ್ಲಿ ಬಿಕೆ ಕಾಲೇಜಿನ ಮುಂದೆ ಜಮಾವಣೆಗೊಂಡ ರೈತರು ಮೆರವಣಿಗೆ ನಡೆಸಿ, ಬಳಿಕ ನಗರದ ಬಸವ ವೃತ್ತದಲ್ಲಿ ಪ್ರತಿಭಟನೆ ಅಂತ್ಯಗೊಳಿಸಿ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದರು.

ಇನ್ನು ಅಥಣಿ, ಹುಕ್ಕೇರಿ ಹಾಗೂ ರಾಯಭಾಗ ತಾಲೂಕಿನಲ್ಲೂ ಯಾವುದೇ ಬಂದ್ ಬಿಸಿ ಮಾತ್ರ ತಟ್ಟಲಿಲ್ಲ. ಬದಲಿಗೆ ರೈತ ಸಂಘಟನೆಗಳು ಸಾಂಕೇತಿಕ ಪ್ರತಿಭಟನೆ ನಡೆಸಿ ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಿದ್ದಾರೆ.

ಇಂದಿನ ಪ್ರತಿಭಟನೆ ಹಿನ್ನೆಲೆಯಲ್ಲಿ ನಿನ್ನೆಯೇ ಎಲ್ಲಾ ಸಂಘಟನೆಗಳ ಮುಖಂಡರನ್ನು ಕರೆಸಿ, ಪ್ರತಿಭಟನೆ ಇರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಕಡ್ಡಾಯ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರತಿಭಟನೆ ನಡೆಸಬೇಕು. ಇಲ್ಲವಾದಲ್ಲಿ ಡಿಸಾಸ್ಟರ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನ ಪೊಲೀಸ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ನೀಡಿದ ಪರಿಣಾಮ ಸಾಕಷ್ಟು ಪ್ರತಿಭಟನಾಕಾರರು ಪ್ರತಿಭಟನೆಯಿಂದ ದೂರವೇ ಉಳಿದಿದ್ದರು.

ಮಾಸ್ಕ್, ನೀರು ಕೊಟ್ಟು ಮಾನವೀಯತೆ ಮೆರೆದ ಪೊಲೀಸರು:
ಪೊಲೀಸರು ಎಷ್ಟೇ ಎಚ್ಚರಿಕೆ ನೀಡಿದರೂ ಚಿಕ್ಕೋಡಿಯಲ್ಲಿ ಮಾತ್ರ ಪ್ರತಿಭಟನಾಕಾರರು ಮಾಸ್ಕ ಧರಿಸದೆ ಪ್ರತಿಭಟನೆಗೆ ಆಗಮಿಸಿದ್ದರು. ಅಂತಹ ರೈತರಿಗೆ ಚಿಕ್ಕೋಡಿ ಪಿ.ಎಸ್.ಐ. ರಾಕೇಶ್ ಬಗಲಿ ತಮ್ಮ ಸ್ವಂತ ಖರ್ಚಿನಿಂದಲೆ ನೀರು, ಮಾಸ್ಕ್ ಹಾಗೂ ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ನೀಡಿ ಸಾಮಾಜಿಕ ಅಂತರ ಕಾಪಾಡಿಕೊಂಡು ಪ್ರತಿಭಟನೆ ನಡೆಸುವಂತೆ ಮನವಿಯನ್ನು ಮಾಡಿದರು. ಪಿ.ಎಸ್.ಐ ತೋರಿದ ಮಾನವೀಯತೆಗೆ ಪ್ರತಿಭಟನಾಕಾರರು ಮೆಚ್ಚುಗೆ ವ್ಯಕ್ತಪಡಿಸಿದರು.

ಒಟ್ಟಿನಲ್ಲಿ ಇಂದು ಕರೆದಿದ್ದ ಬಂದ್ ಮಾತ್ರ ಯಶಸ್ವಿಯಾಗಿಲ್ಲ. ಕೇವಲ ಪ್ರತಿಭಟನೆಗೆ ಸೀಮಿತವಾದ ಬಂದ್ ಅರ್ಧ ಗಂಟೆಯಲ್ಲೆ ಕೊನೆಗೊಂಡು ಎಂದಿನಂತೆ ಜನಜೀವನ ಸಾಗಿದೆ.
Published by:Sushma Chakre
First published: