HOME » NEWS » State » KARNATAKA BANDH BENGALURU POLICE COMMISSIONER KAMAL PANT REACTION ON KARNATAKA BANDH IN BANGALORE SCT

Karnataka Bandh: ಶನಿವಾರ ಕರ್ನಾಟಕ ಬಂದ್; ಭದ್ರತೆಗೆ ಬೆಂಗಳೂರಿನಲ್ಲಿ15 ಸಾವಿರ ಪೊಲೀಸರ ನಿಯೋಜನೆ

Karnataka Bandh: ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಾಳೆ 15 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇದುವರೆಗೂ ಬೆಂಗಳೂರಿನಲ್ಲಿ ಕರ್ನಾಟಕ ಬಂದ್​ಗೆ ಯಾರೂ ನಮ್ಮ ಬಳಿ ಅನುಮತಿ ಕೇಳಿಲ್ಲ, ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.

news18-kannada
Updated:December 4, 2020, 1:37 PM IST
Karnataka Bandh: ಶನಿವಾರ ಕರ್ನಾಟಕ ಬಂದ್; ಭದ್ರತೆಗೆ ಬೆಂಗಳೂರಿನಲ್ಲಿ15 ಸಾವಿರ ಪೊಲೀಸರ ನಿಯೋಜನೆ
ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್
  • Share this:
ಬೆಂಗಳೂರು (ಡಿ. 4): ಮರಾಠ ಅಭಿವೃದ್ಧಿ ನಿಗಮವನ್ನು ರಚಿಸುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ನಾಳೆ (ಡಿ.5) ಕರ್ನಾಟಕ ಬಂದ್​ಗೆ ಕರೆ ನೀಡಿವೆ. ಕರ್ನಾಟಕ ಬಂದ್​ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಈ ಬಂದ್​ಗೆ 50ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ತೆಗೆದುಕೊಂಡಿರುವ ಮುನ್ನೆಚ್ಚರಿಕಾ ಕ್ರಮಗಳು ಮತ್ತು ಭದ್ರತಾ ವ್ಯವಸ್ಥೆ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ನಾಳೆ ಯಾವುದೇ ಅಹಿತಕರ ಘಟನೆ ನಡೆಯಬಾರದು. ಹೀಗಾಗಿ, 15 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ನಾಳೆ ಬೆಳಗ್ಗೆಯಿಂದ ಪೊಲೀಸರು ಎಲ್ಲಾ ಕಡೆ ಗಸ್ತು ತಿರುಗಲಿದ್ದಾರೆ. 5 ಜನ ಅಡಿಷನ್ ಸಿಪಿಗಳು, ಡಿಸಿಪಿಗಳು, ಎಸಿಪಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಲಿದೆ. ಇದುವರೆಗೂ ಬೆಂಗಳೂರಿನಲ್ಲಿ ಕರ್ನಾಟಕ ಬಂದ್​ಗೆ ಯಾರೂ ನಮ್ಮ ಬಳಿ ಅನುಮತಿ ಕೇಳಿಲ್ಲ, ನಾವೂ ಕೊಟ್ಟಿಲ್ಲ ಎಂದು ಕಮಲ್ ಪಂತ್ ತಿಳಿಸಿದ್ದಾರೆ.

ಇದನ್ನೂ ಓದಿ: ಹೌದು, ನಾನು ನಿಯತ್ತಿನ ನಾಯಿ; ವಾಟಾಳ್​ ನಾಗರಾಜ್​ಗೆ ರೇಣುಕಾಚಾರ್ಯ ತಿರುಗೇಟು

ಕರ್ನಾಟಕ ಬಂದ್​ ಹಿನ್ನೆಲೆಯಲ್ಲಿ 35 ಕೆಎಸ್​ಆರ್​ಪಿ, 32 ಸಿಎಆರ್​ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ನಾಳೆ ಯಾವುದೇ ರ್ಯಾಲಿಗೂ ಅವಕಾಶ ನೀಡುವುದಿಲ್ಲ. ಕರ್ನಾಟಕ ಬಂದ್​ಗೆ ಬಿಎಂಟಿಸಿ, ಕೆಎಸ್​ಆರ್​ಟಿಸಿ ಬೆಂಬಲ ಸೂಚಿಸಿಲ್ಲ. ಹೀಗಾಗಿ, ಆ ಬಸ್​ಗಳನ್ನು ತಡೆಯುವ ಹಾಗೆ ಇಲ್ಲ. ಕೆಎಸ್​ಆರ್​ಟಿಸಿ ಮತ್ತು ಬಿಎಂಟಿಸಿ ಬಸ್​ಗಳು ಮಾಮೂಲಿನಂತೆ ಸಂಚರಿಸಲಿವೆ ಎಂದಿದ್ದಾರೆ.



ನಾಳೆ‌ ಕರ್ನಾಟಕ ಬಂದ್ ಹಿನ್ನೆಲೆ ಆಯಾ ವಿಭಾಗದ ಡಿಸಿಪಿಗಳಿಗೆ ಬಂದ್​ನ‌ ನಿರ್ವಹಣೆಯ ಹೊಣೆ ವಹಿಸಲಾಗಿದೆ. 300 ಪೊಲೀಸ್ ವ್ಯಾನ್​ಗಳು ನಗರದಾದ್ಯಂತ ವಿಶೇಷ ಗಸ್ತು ನಡೆಸಲಿದೆ. ಯಾರೂ ಕೂಡ ಭಯ ಪಡುವ ಅಗತ್ಯ ಇಲ್ಲ. ಜನರು ಎಂದಿನಂತೆ ತಮ್ಮ ಚಟುವಟಿಕೆಗಳನ್ನು ಮಾಡಿಕೊಳ್ಳಬೇಕು. ಯಾರು ಕೂಡ ಪ್ರತಿಭಟನೆಗೆ ಹಾಗೂ ಮೆರವಣಿಗೆಗೆ ಅನುಮತಿ ಕೋರಿಲ್ಲ. ಅಹಿತಕರ ಘಟನೆ ನಡೆದರೆ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹಿಂಸೆ ರೂಪ ತಾಳಿದರೆ ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.

(ವರದಿ: ಗಂಗಾಧರ್, ಆಶಿಕ್ ಮುಲ್ಕಿ)
Published by: Sushma Chakre
First published: December 4, 2020, 1:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories