ಕಲಬುರ್ಗಿ(ಡಿ.05): ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕರೆ ನೀಡಿರುವ ಕರ್ನಾಟಕ ಬಂದ್ ಗೆ ಕಲಬುರ್ಗಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕರ್ನಾಟಕ ಬಂದ್ ಬೆಂಬಲಿಸಿ ಪ್ರತಿಭಟನೆ ಮಾಡುತ್ತಿದ್ದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರನ್ನು ಕಲಬುರ್ಗಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಹೈದರಾಬಾದ್ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪ್ರತಿಭಟನೆ ಮಾಡಲಾಯಿತು. ಉರುಳು ಸೇವೆ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಈ ವೇಳೆ ಮುಖ್ಯಮಂತ್ರಿಗಳ ಶವಯಾತ್ರೆಗೆ ಪೊಲೀಸರು ಅವಕಾಶ ನೀಡದಿದ್ದಾಗ, ಸಿಎಂ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆಯಲು ಯತ್ನಿಸಲಾಯಿತು. ಸಿಎಂ ಭಾವಚಿತ್ರ ವಶಪಡಿಸಿಕೊಂಡ ಪೊಲೀಸರು ಇಪ್ಪತ್ತಕ್ಕೂ ಹೆಚ್ಚು ಮುಖಂಡರನ್ನು ಬಂಧಿಸಿದರು. ಪೊಲೀಸರ ಕ್ರಮಕ್ಕೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದೆವು. ಸಿಎಂ ಶವಯಾತ್ರೆಗೆ ಅವಕಾಶ ನೀಡದೆ ಪೊಲೀಸರು ನಮ್ಮನ್ನು ಬಂಧಿಸಿದ್ದಾರೆ. ಆದರೆ ಮರಾಠಾ ಅಭಿವೃದ್ಧಿ ನಿಗಮ ರದ್ದುಗೊಳಿಸೋವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಹೈ.ಕ. ಕನ್ನಡಪರ ಸಂಘಟನೆಗಳ ಒಕ್ಕೂಟದ ಮುಖಂಡ ಸಚಿನ್ ಫರತಾಬಾದ್ ಎಚ್ಚರಿಸಿದ್ದಾರೆ.
ಕರವೇ ಕಾರ್ಯಕರ್ತರ ಬಂಧನ
ಕರ್ನಾಟಕ ಬಂದ್ ಬೆಂಬಲಿಸಿ ಕಲಬುರ್ಗಿಯಲ್ಲಿ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಮರಾಠಾ ಅಬಿವೃದ್ಧಿ ನಿಗಮ ರದ್ದುಗೊಳಿಸುವಂತೆ ಆಗ್ರಹಿಸಿ ಕರವೇ ನಾರಾಯಣಗೌಡ ಬಣದ ನೇತೃತ್ವದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಭಟನೆ ಮಾಡಲಾಯಿತು.
Karnataka Bandh LIVE: ಬೆಂಗಳೂರಿನ ಹಲವೆಡೆ ಶುರುವಾದ ಮಳೆ; ಮಳೆಯ ಮಧ್ಯೆಯೂ ಮುಂದುವರೆದ ಪ್ರತಿಭಟನೆ
ಈ ವೇಳೆ ಮುಖ್ಯಮಂತ್ರಿಗಳ ಅಣಕು ಶವಯಾತ್ರೆಗೆ ಯತ್ನಿಸಿದರು. ಸಿಎಂ ಪ್ರತಿಕೃತಿ ವಶಪಡಿಸಿಕೊಂಡ ಪೊಲೀಸರು, 50 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿದ್ದಾರೆ. ರಾಜ್ಯ ಸರ್ಕಾರ ಮತ್ತು ಸಿಎಂ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರನ್ನು ಬಂಧಿಸಿ ಪೊಲೀಸರು ಬಸ್ ನಲ್ಲಿ ಕರೆದೊಯ್ದರು.
ಬಂದ್ಗೆ ನೀರಸ ಪ್ರತಿಕ್ರಿಯೆ
ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಕಲಬುರ್ಗಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಿಗ್ಗೆಯಿಂದಲೇ ಸಾರಿಗೆ ಬಸ್ ಸಂಚಾರ ಸೇರಿದಂತೆ ಎಲ್ಲ ರೀತಿಯ ವಾಹನ ಸಂಚಾರ ಎಂದಿನಂತಿದೆ. ತರಕಾರಿ ಮಾರುಕಟ್ಟೆಯಲ್ಲಿಯೂ ಬಂದ್ ಬಸಿ ಕಾಣಿಸಿಲ್ಲ. ಕಣ್ಣಿ ಮಾರುಕಟ್ಟೆ, ಸೂಪರ್ ಮಾರುಕಟ್ಟೆ ಮತ್ತಿತರ ಕಡೆ ವಹಿವಾಟು ಎಂದಿನಂತೆ ನಡೆದಿದೆ. ಎಪಿಎಂಸಿಯಲ್ಲಿಯೂ ವಹಿವಾಟು ಎಂದಿನಂತೆ ಮುಂದುವರೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ