Winter Assembly Session - ವಿಧಾನಮಂಡಲ ಅಧಿವೇಶನ ಮೊದಲ ದಿನ: ಸ್ವಪಕ್ಷೀಯರ ಮೇಲೆಯೇ ಹರಿಹಾಯ್ದ ಸ್ಪೀಕರ್

ರಾಜ್ಯದ ವಿಧಾನಮಂಡಲ ಚಳಿಗಾಲದ ಅಧಿವೇಶನದ ಮೊದಲ ದಿನದಲ್ಲಿ ಕೇವಲ 68 ಸದಸ್ಯರ ಹಾಜರಾತಿ ಇತ್ತು. ಕಲಾಪದಲ್ಲಿ ಕೇವಲ ಮೂವರು ಸಚಿವರು ಪಾಲ್ಗೊಂಡಿದ್ದರು. ಇದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನ ಕೆರಳಿಸಿತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು(ಡಿ. 07): ಈ ಬಾರಿಯ ಚಳಿಗಾಲದ ವಿಧಾನಮಂಡಲ ಅಧಿವೇಶನ ಇಂದು ಪ್ರಾರಂಭಗೊಂಡಿದೆ. ಬೆರಳೆಣಿಕೆಯ ಸದಸ್ಯರು ಮೊದಲ ದಿನದ ಅಧಿವೇಶನಕ್ಕೆ ಹಾಜರಾದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸದನ ಪ್ರಾರಂಭವಾಗಿ ಕೆಲವೇ ಹೊತ್ತಿನಲ್ಲಿ ಶಿವಮೊಗ್ಗಕ್ಕೆ ನಿರ್ಗಮಿಸಿದರು. ಕುಮಾರಸ್ವಾಮಿ ಸೇರಿದಂತೆ ಹಲವು ಸದಸ್ಯರು ಗೈರಾಗಿದ್ದರು. 9 ಸಚಿವರು ಸದನಕ್ಕೆ ಹಾಜರಾದರೂ ಕಲಾಪಕ್ಕೆ ಹಾಜರಾಗಿದ್ದು ಮೂರು ಸಚಿವರು ಮಾತ್ರ. ಇದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಅಸಮಾಧಾನಗೊಳಿಸಿತು. ಸದನದಲ್ಲಿ ಸ್ಪೀಕರ್ ಅವರು ಸ್ವಪಕ್ಷೀಯರೆಂದೂ ನೋಡದೆ ತರಾಟೆಗೆ ತೆಗೆದುಕೊಂಡಿದ್ದು ಗಮನ ಸೆಳೆಯಿತು. ಕಂದಾಯ ಸಚಿವ ಆರ್ ಅಶೋಕ್ ಮತ್ತು ಡಿಸಿಎಂ ಗೋವಿಂದ ಕಾರಜೋಳ ವಿರುದ್ಧ ಸ್ಪೀಕರ್ ಕಾಗೇರಿ ಕೋಪ ಪ್ರದರ್ಶನ ಮಾಡಿದರು. ಆರ್ ಅಶೋಕ್ ಮೇಲೆ ಸ್ಪೀಕರ್ ಅಷ್ಟೇ ಅಲ್ಲ ಸ್ವಪಕ್ಷೀಯರಿಂದಲೂ ಅಸಮಾಧಾನ ವ್ಯಕ್ತವಾಯಿತು.

ವಿಧಾನಸಭಾ ಕಲಾಪದ ವೇಳೆ ಪಹಣಿ ಎಂಟ್ರಿ ಸಾಫ್ಟ್​​ವೇರ್ ಕೆಟ್ಟುಹೋಗಿರುವ ವಿಚಾರವನ್ನು ಶೃಂಗೇರಿಯ ಕಾಂಗ್ರೆಸ್ ಶಾಸಕ ರಾಜೇಗೌಡ ಪ್ರಸ್ತಾಪಿಸಿ, ಒಂದು ವರ್ಷದಿಂದ ಸಾಫ್ಟ್​ವೇರ್ ಹಾಳಾಗಿದ್ದು ಯಾವಾ ಸರಿಯಾಗುತ್ತದೆ ಎಂದು ಪ್ರಶ್ನಿಸಿದರು. ಇದಕ್ಕೆ ಕಂದಾಯ ಸಚಿವ ಆರ್ ಅಶೋಕ್ ಶೀಘ್ರದಲ್ಲೇ ಸರಿಪಡಿಸುವ ಭರವಸೆ ನೀಡಿದರು. ಈ ಉತ್ತರಕ್ಕೆ ಸಭಾಧ್ಯಕ್ಷ ಕಾಗೇರಿ ಅಸಮಾಧಾನಗೊಂಡರು. ನಿಮ್ಮ ಅಧಿಕಾರಿಗಳು ಹೇಳಿದ್ದನ್ನು ಇಲ್ಲಿ ತಂದು ಓದಿದರೆ ಆಗಲ್ಲ. ನೀವು ಬಹಳಷ್ಟು ಅನುಭವ ಇರುವ ಸಚಿವ. ರೈತರು ತುಂಬಾ ಸಮಸ್ಯೆ ಅನುಭವಿಸುತ್ತಿದ್ಧಾರೆ. ಪ್ರೈವೇಟ್ ಏಜನ್ಸಿಯವರು ಸರ್ಕಾರದ ಮರ್ಯಾದೆ ಹಾಳು ಮಾಡಿಬಿಡುತ್ತಾರೆ ಎಂದು ಆರ್ ಅಶೋಕ್ ಮೇಲೆ ಸ್ಪೀಕರ್ ಹರಿಹಾಯ್ದರು.

ಬಿಜೆಪಿ ಸದಸ್ಯ ಅರಗ ಜ್ಞಾನೇಂದ್ರ ಅವರು ಕಂದಾಯ ಇಲಾಖೆ ಮತ್ತೊಂದು ವೈಫಲ್ಯದ ಬಗ್ಗೆ ಗಮನ ಸೆಳೆದರು. ಕಂದಾಯ ಗ್ರಾಮಗಳನ್ನ ಗುರುತಿಸಿ ಹಕ್ಕು ಪತ್ರ ಕೊಡುವಲ್ಲಿ ಇಲಾಖೆ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಬಹುತೇಕ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಕಂದಾಯ ಗ್ರಾಮಗಳಿಗೆ ಮಾನ್ಯತೆ ಕೊಡುತ್ತಿಲ್ಲ. ಇಂಥದ್ದೊಂದು ಕಾನೂನು ಇರುವುದೇ ಜಿಲ್ಲಾಧಿಕಾರಿಗಳಿಗೆ ಗೊತ್ತಿಲ್ಲ ಎಂದು ಅರಗ ಜ್ಞಾನೇಂದ್ರ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ವಿಜಯಪುರದ ವೈದ್ಯೆ ದಿವ್ಯಾ ಹಿರೊಳ್ಳಿ ಏಮ್ಸ್ ಪ್ರವೇಶ ಪರೀಕ್ಷೆಯಲ್ಲಿ ದೇಶಕ್ಕೇ ಮೊದಲ ಸ್ಥಾನ

ಅರಗ ಜ್ಞಾನೇಂದ್ರ ಅವರ ಮಾತಿಗೆ ಸಹಮತ ಸೂಚಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕೆಳ ಹಂತದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ಕೊಡಬೇಕು. ಅವರಿಂದ ಸಮರ್ಪಕ ವರದಿ ಪಡೆದುಕೊಂಡು ಮಾಹಿತಿ ಕೊಡಿ ಎಂದು ಕಂದಾಯ ಸಚಿವ ಆರ್ ಅಶೋಕ್ ಅವರಿಗೆ ಸ್ಪೀಕರ್ ಸೂಚನೆ ನೀಡಿದರು. ಇದಕ್ಕೆ ಅಶೋಕ್ ಒಪ್ಪಿಕೊಂಡರು.

ಡಿಸಿಎಂ ಕಾರಜೋಳಗೂ ಬಿಸಿ:

ದೇವನಹಳ್ಳಿ ಪಟ್ಟಣದಲ್ಲಿ ಸಮರ್ಪಕವಾದ ರಸ್ತೆ ಇಲ್ಲದ ವಿಚಾರವನ್ನು ಜೆಡಿಎಸ್ ಶಾಸಕ ನಿಸರ್ಗ ನಾರಾಯಣಸ್ವಾಮಿ ಪ್ರಸ್ತಾಪ ಮಾಡಿದರು. ಅದಕ್ಕೆ ಉತ್ತರವಾಗಿ ಲೋಕೋಪಯೋಗಿ ಸಚಿವರೂ ಆದ ಡಿಸಿಎ ಗೋವಿಂದ ಕಾರಜೋಳ, ಇಲಾಖೆಯಲ್ಲಿ ಹಣಕಾಸಿನ ಲಭ್ಯತೆ ಇಲ್ಲದಿರುವ ವಿಚಾರವನ್ನು ತಿಳಿಸಿದರು. ತಾವು ಪಟ್ಟಣದಲ್ಲಿನ ರಸ್ತೆ ನಿರ್ಮಾಣಕ್ಕೆ ಹಣ ನೀಡುತ್ತೇನೆ. ಆದರೆ, ಈಗ ಸಾಧ್ಯವಿಲ್ಲ ಎಂದು ಡಿಸಿಎಂ ಸಮಜಾಯಿಷಿ ನೀಡಿದರು. ಕಾರಜೋಳರ ಉತ್ತರ ಸ್ವತಃ ಸ್ಪೀಕರ್ ಅವರಿಗೆ ಸಮಾಧಾನ ತರಲಿಲ್ಲ. ಪಟ್ಟಣಗಳ ರಸ್ತೆ ನಿರ್ಮಾಣದ ಕೆಲಸ ಪುರಸಭೆ ಮಾಡೋದು ಕಷ್ಟ. ಅವರಿಗೆ ದೊಡ್ಡ ಮೊತ್ತದ ಹಣವನ್ನು ನೀವು ಕೊಡಲೇಬೇಕಾಗತ್ತದೆ. ಹಣ ಕೊಡದೇ ಪುರಸಭೆಯವರು ರಸ್ತೆ ನಿರ್ವಹಣ ಮಾಡುವುದು ಕಷ್ಟ ಎಂದು ಕಾಗೇರಿ ಕುಟುಕಿದರು. ಸ್ಪೀಕರ್ ಮಾತಿಗೆ ಸಹಮತ ವ್ಯಕ್ತಪಡಿಸಿದ ಡಿಸಿಎಂ ಕಾರಜೋಳ ಮುಂದಿನ ಬಾರಿ ಹಣದ ವ್ಯವಸ್ಥೆಗೆ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.

ಇಂದು ಬೆಳಗ್ಗೆ ಸದನದ ಆರಂಭದಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ರಾಮವಿಲಾಸ್ ಪಾಸ್ವಾನ್, ಜಸ್ವಂತ್ ಸಿಂಗ್, ವೈ. ನಾಗಪ್ಪ, ಕೆ ಮಲ್ಲಪ್ಪ, ಡಿಐ ಪಾಟೀಲ್, ರತನ್ ಕುಮಾರ್ ಕಟ್ಟೆಮಾರ್, ವಿಮರ್ಶಕ ಜಿ.ಎಸ್. ಅಮೂರ, ಪತ್ರಕರ್ತ ರವಿ ಬೆಳಗೆರೆ, ಸಹಕಾರಿ ಧುರೀಣ ವಿ.ಎಸ್. ಸೊಂದೆ ಸೇರಿದಂತೆ ಅಗಲಿದ ಗಣ್ಯರಿಗೆ ಸದನದಲ್ಲಿ ಗೌರವ ಸಲ್ಲಿಸಲಾಯಿತು. ಅದಾದ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಖಾಸಗಿ ಕಾರ್ಯಕ್ರಮದ ನಿಮಿತ್ತ ಶಿವಮೊಗ್ಗಕ್ಕೆ ತೆರಳಿದರು. ಮಧ್ಯಾಹ್ನದ ನಂತರ ಅವರು ಬೆಂಗಳೂರಿಗೆ ವಾಪಸ್ಸಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡೇ ಮಾಡ್ತೀವಿ; ಸಿದ್ದರಾಮಯ್ಯಗೆ ಸಚಿವ ಕೆಎಸ್​ ಈಶ್ವರಪ್ಪ ಸವಾಲು

ನಂತರ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಒತ್ತಾಯಿಸಿ ನಿಲುವಳಿ ಮಂಡನೆಗೆ ನೋಟೀಸ್ ಕೊಟ್ಟರು. ಪ್ರಶ್ನೋತರ ಕಲಾಪ ಮುಗಿದ ಬಳಿಕ ಮಧ್ಯಾಹ್ನದ ಮೇಲೆ ಈ ನಿಲುವಳಿ ಮೇಲೆ ಚರ್ಚೆಗೆ ಅವಕಾಶ ಕೊಡುವುದಾಗಿ ಸ್ಪೀಕರ್ ತಿಳಿಸಿದರು.

ಅಧಿವೇಶನ ಮೊಟಕಿಗೆ ಒತ್ತಾಯ: ಇದೇ 22ರಂದು ಗ್ರಾಮ ಪಂಚಾಯಿತಿ ಚುನಾವಣೆ ಇರುವುದರಿಂದ ಚಳಿಗಾಲದ ಅಧಿವೇಶನವನ್ನು ಆದಷ್ಟು ಬೇಗ ಮುಕ್ತಾಯಗೊಳಿಸುವಂತೆ ಶಾಸಕರು ಒತ್ತಡ ತಂದಿದ್ದಾರೆ. ಇದೇ 15ರವರೆಗೂ ನಿಗದಿಯಾಗಿರುವ ಅಧಿವೇಶನವನ್ನು ಡಿ. 11ಕ್ಕೆ ಅಂತ್ಯಗೊಳಿಸಬೇಕು ಎಂದು ವಿವಿಧ ಪಕ್ಷಗಳ ಶಾಸಕರು ಕೇಳಿಕೊಂಡಿದ್ಧಾರೆ. ಸಿಎಂ ನೇತೃತ್ವದಲ್ಲಿ ನಡೆಯಲಿರುವ ಸದನ ಸಲಹಾ ಸಮಿತಿ ಸಭೆಯಲ್ಲಿ ಈ ವಿಚಾರದ ಬಗ್ಗೆ ತೀರ್ಮಾನವಾಗಲಿದೆ.

ಇನ್ನು, ನಾಳೆ ಭಾರತ್ ಬಂದ್ ಇದ್ದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಬಂದ್​ಗೆ ಬೆಂಬಲ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ನಾಳೆ ವಿಪಕ್ಷಗಳ ಸದಸ್ಯರು ಅಧಿವೇಶನಕ್ಕೆ ಹಾಜರಾಗುವುದು ಅನುಮಾನ. ಜೆಡಿಎಸ್ ಪಕ್ಷದ ಶಿವಲಿಂಗೇ ಗೌಡ ಅವರು ನಾಳೆ ಅಧಿವೇಶನಕ್ಕೆ ಹಾಜರಾಗಬಾರದು ಎಂದು ವಿಪಕ್ಷಗಳ ಸದಸ್ಯರಿಗೆ ಮನವಿಯನ್ನೂ ಮಾಡಿದ್ಧಾರೆ.

ವರದಿ: ಕೃಷ್ಣ ಜಿ.ವಿ.
Published by:Vijayasarthy SN
First published: