ನೆರೆ ಪರಿಹಾರ ಕುರಿತ ಚರ್ಚೆಗೆ ಸದನದಲ್ಲಿ ಸಿಗದ ಅವಕಾಶ; ಕಾಗದ ಪತ್ರಗಳಿಗೆ ಇರುವ ಬೆಲೆ ಸಂತ್ರಸ್ತರಿಗಿಲ್ಲವೇ?

Karnataka Vidhan Sabha Winter Session: ಕೇವಲ ಮೂರು ದಿನಗಳ ಕಾಲ ಸದನವನ್ನು ಕರೆದಿರುವುದು ಒಂದು ಕಡೆಯಾದರೆ, ಸದನದ ಮೊದಲಾರ್ಧ ಕಲಾಪದಲ್ಲಿ ಪ್ರವಾಹ ಕುರಿತ ಚರ್ಚೆಗೆ ಅವಕಾಶವೇ ಸಿಕ್ಕಿಲ್ಲ. ಇದರಿಂದ ಸಹಜವಾಗಿ ಜನರಲ್ಲಿ ಬೇಸರ ಮೂಡಿದೆ.

Sharath Sharma Kalagaru | news18-kannada
Updated:October 10, 2019, 2:09 PM IST
ನೆರೆ ಪರಿಹಾರ ಕುರಿತ ಚರ್ಚೆಗೆ ಸದನದಲ್ಲಿ ಸಿಗದ ಅವಕಾಶ; ಕಾಗದ ಪತ್ರಗಳಿಗೆ ಇರುವ ಬೆಲೆ ಸಂತ್ರಸ್ತರಿಗಿಲ್ಲವೇ?
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು: ಬೆಳಗಾವಿಯಲ್ಲಿ ನಡೆಯಬೇಕಿದ್ದ ಚಳಿಗಾಲದ ಅಧಿವೇಶನ ಈ ಬಾರಿ ಬೆಂಗಳೂರಿನಲ್ಲೇ ನಡೆಯುತ್ತಿದೆ. ಸಾಮಾನ್ಯವಾಗಿ ಚಳಿಗಾಲದ ಅಧಿವೇಶನ ಕನಿಷ್ಠ ಹತ್ತು ದಿನಗಳ ಕಾಲ ಈ ಹಿಂದೆ ನಡೆಯುತ್ತಿತ್ತು. ಆದರೆ ಈ ಬಾರಿ ಕೇವಲ ಮೂರು ದಿನಗಳಿಗೆ ಅಧಿವೇಶನವನ್ನು ಸೀಮಿತಗೊಳಿಸಲಾಗಿದೆ. ಈ ಬಗ್ಗೆ ಪ್ರತಿಪಕ್ಷಗಳು ಸದನದ ಆರಂಭಕ್ಕೂ ಮುನ್ನವೇ ಕೆಂಡ ಕಾರಿದ್ದವು. ಸದನ ಆರಂಭವಾದ ನಂತರ ಆರೂವರೆ ವರ್ಷಗಳ ನಂತರ ಮತ್ತೆ ವಿರೋಧ ಪಕ್ಷದ ನಾಯಕ ಸ್ಥಾನ ಅಲಂಕರಿಸಿರುವ ಸಿದ್ದರಾಮಯ್ಯ ಆರ್ಭಟಿಸಲು ಆರಂಭಿಸಿದರು. ಸದನದಲ್ಲಿ ಚರ್ಚೆಗಿಂತ ಗದ್ದಲವೇ ಹೆಚ್ಚಾಗಿತ್ತು. ಮಧ್ಯಾಹ್ನದವರೆಗೂ ಸದನದಲ್ಲಿ ನಡೆದ ಚರ್ಚೆಯ ಸಾರಾಂಶ ಇಲ್ಲಿದೆ. 

ಎಂದಿನಂತೆ ಸದನ ಆರಂಭವಾದ ನಂತರ ಸ್ಪೀಕರ್​, ಮುಖ್ಯಮಂತ್ರಿ, ವಿರೋಧ ಪಕ್ಷ ನಾಯಕ, ಹಿರಿಯ ಶಾಸಕರು ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದರು. ಹಿರಿಯ ನ್ಯಾಯವಾದಿ, ಮಾಜಿ ಕೇಂದ್ರ ಸಚಿವ ರಾಮ್​ ಜೇಠ್ಮಲಾನಿ, ಫೈರ್​ ಬ್ರಾಂಡ್​ ರಾಜಕಾರಣಿ ಎಂದೇ ಕರೆಸಿಕೊಂಡ ಎ.ಕೆ. ಸುಬ್ಬಯ್ಯ, ಮಾಜಿ ಕೇಂದ್ರ ಸಚಿವ ಅರುಣ್​ ಜೇಟ್ಲಿ, ಸುಷ್ಮಾ ಸ್ವರಾಜ್​ ಸೇರಿದಂತೆ ಅಗಲಿದ ಹಲವು ಗಣ್ಯರಿಗೆ ಸಂತಾಪ ಸೂಚಿಸಲಾಯಿತು.

ಅದಾದ ಬೆನ್ನಲ್ಲೇ ಸದನದ ಕಾರ್ಯಕಲಾಪ ಆರಂಭಿಸಲು ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದರು. ಜತೆಗೆ ಸದನದ ಅಜೆಂಡಾದಲ್ಲಿ ನಮೂದಿಸಿದಂತೆ ಚಳಿಗಾಲದ ಬಜೆಟ್​ಗೆ ಸಂಬಂಧಿಸಿದ ಕಾಗದ ಪತ್ರಗಳನ್ನು ಆಯಾ ಸಚಿವರು ಸದನದ ಮುಂದಿಡುವಂತೆ ಸೂಚನೆ ನೀಡಿದರು. ಆದರೆ ಇದಕ್ಕೂ ಮುನ್ನ ಪ್ರವಾಹ ಪರಿಹಾರ ಮತ್ತು ರಾಜ್ಯದ ಪರಿಸ್ಥಿತಿಯ ಸಂಬಂಧ ಚರ್ಚೆ ನಡೆಸಲು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ವಿಷಯ ಮಂಡನೆಗೆ ಮುಂದಾದರು. ಆದರೆ ಇದಕ್ಕೆ ಸ್ಪೀಕರ್​ ಅವಕಾಶ ನೀಡಲಿಲ್ಲ.

ಸದನದ ಅಜೆಂಡಾದಲ್ಲಿ ನಮೂದನೆಯಾದಂತೆ ಚರ್ಚೆ ನಡೆಯಲಿ, ಮೊದಲು ಕಾಗದ ಪತ್ರಗಳ ವಿಲೇವಾರಿಯಾಗಲಿ ಎಂದು ಸ್ಪೀಕರ್​ ಹೇಳಿದರು. ಇದರಿಂದ ಸಿದ್ದರಾಮಯ್ಯ ಮತ್ತಷ್ಟು ಸಿಟ್ಟಿಗೆದ್ದರು. "ಶತಮಾನದ ಮಳೆಗೆ ಇಡೀ ರಾಜ್ಯ ತತ್ತರಿಸಿದೆ. ಅರ್ಧ ರಾಜ್ಯದ ಜನ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಇಂತಾ ಸ್ಥಿತಿಯಲ್ಲಿ ನಿಮಗೆ ಕಾಗದ ಪತ್ರಗಳ ವಿಲೇವಾರಿ ಮುಖ್ಯವಾ? ರಾಜ್ಯದ ಜನರ ಸಂಕಷ್ಟಕ್ಕೆ ಸಂಬಂಧಿಸಿದ ಚರ್ಚೆಗೆ ಮೊದಲು ಅವಕಾಶ ಮಾಡಿಕೊಡಬೇಕು," ಎಂದು ಸಿದ್ದರಾಮಯ್ಯ ಗುಡುಗಿದರು.

ಮೊದಲೇ ಮಾಧ್ಯಮ ನಿರ್ಬಂಧ ಹೇರಿರುವ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿಯವರು ವಿರೋಧ ಪಕ್ಷಗಳ ಮನವಿಗೆ ಸ್ಪಂದಿಸುವ ಯಾವುದೇ ಲಕ್ಷಣಗಳೂ ಕಾಣಲಿಲ್ಲ. ವಿರೋಧ ಪಕ್ಷಗಳ ನಾಯಕರ ವಿರೋಧದ ನಡುವೆಯೂ ಸಚಿವರುಗಳಿಗೆ ಬಜೆಟ್​ ಪತ್ರಗಳನ್ನು ಸದನದ ಮುಂದೆ ಮಂಡಿಸುವಂತೆ ಸ್ಪೀಕರ್​ ಸೂಚಿಸಿದರು.

ಇದರಿಂದ ವಿರೋಧ ಪಕ್ಷಗಳ ನಾಯಕರು ಇನ್ನಷ್ಟು ಕೋಪಗೊಂಡರಲ್ಲದೇ, ಸ್ಪೀಕರ್​ ಸ್ವಜನಪಕ್ಷಪಾತ ಮಾಡುತ್ತಿದ್ದಾರೆ. ಸದನದ ನಿಯಮಾವಳಿಗಳನ್ನು ಗಾಳಿಗೆ ತೂರಿ ಬಿಜೆಪಿ ಪಕ್ಷಕ್ಕೆ ಸಹಕಾರಿಯಾಗುವಂತೆ ಕಲಾಪ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಮುಂದುವರೆದ ಕಾಂಗ್ರೆಸ್​, ಜೆಡಿಎಸ್​ ನಾಯಕರು, ಸ್ಪೀಕರ್​ ಪ್ರಜಾಪ್ರಭುತ್ವವನ್ನು ಗಾಳಿಗೆ ತೂರುತ್ತಿದ್ದಾರೆ ಎಂದು ಜರೆದರು. "ಸದನದಲ್ಲಿ ವಿರೋಧ ಪಕ್ಷಗಳ ಧ್ವನಿಯನ್ನು ಹತ್ತಿಕ್ಕುವುದಾದರೆ ಅಥವಾ ಮನ್ನಣೆಯನ್ನೇ ನೀಡದಿದ್ದರೆ ವಿರೋಧ ಪಕ್ಷ ಯಾಕೆ ಬೇಕು?" ಎಂದು ಪ್ರಶ್ನಿಸಿದರು. ಆದರೆ ಈ ಯಾವ ಆರೋಪಗಳೂ ಸ್ಪೀಕರ್​ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಸಚಿವರು ಅವರ ಪಾಡಿಗೆ ಪತ್ರಗಳನ್ನು ಮಂಡಿಸಿದರು.

ಸಂತ್ರಸ್ತರ ಗೋಳಿಗಿಂತ ಕಾಗದ ವಿಲೇವಾರಿಯೇ ಮುಖ್ಯವಾ?:ಇಂದಿನ ಕಲಾಪವನ್ನು ಗಮನಿಸಿದ ಜನರಿಗೆ ಈ ರೀತಿಯ ಅಭಿಪ್ರಾಯ ಮೂಡಿರುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಶತಮಾನದ ಮಳೆಗೆ ರಾಜ್ಯದ ಅರ್ಧ ಪಾಲಿ ಜಿಲ್ಲೆಗಳಿಗೆ ಅಕ್ಷರಷಃ ನರಳುತ್ತಿದೆ. ಲಕ್ಷಾಂತರ ಜನ ಇನ್ನೂ ಗಂಜಿ ಕೇಂದ್ರಗಳಲ್ಲೇ ಬೀಡುಬಿಟ್ಟಿದ್ದಾರೆ. ಮನೆಗಳನ್ನು ಕಳೆದುಕೊಂಡು ಕಣ್ಣೀರಿನಲ್ಲಿ ಬದುಕು ದೂಡುತ್ತಿದ್ದಾರೆ. ರಾಜ್ಯದಿಂದ ಆಯ್ಕೆಯಾದ 25 ಸಂಸದರು ಕೇಂದ್ರದ ಮೇಲೆ ಒತ್ತಡ ಹೇರುವ ಯಾವುದೇ ನಿದರ್ಶನಗಳೂ ನಮ್ಮ ಮುಂದಿಲ್ಲ. ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿದೆ, ಎಲ್ಲಿಂದ ಪರಿಹಾರ ನೀಡಬೇಕು ಎಂಬ ಮಾತುಗಳು ಸ್ವತಃ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರಿಂದಲೇ ಬಂದಿದೆ.

ಇದನ್ನೂ ಓದಿ: Live: ಸದನ ಮುಂದೂಡಿಕೆ; ಎರಡು ಗಂಟೆಗೆ ಮತ್ತೆ ಕಲಾಪ ಆರಂಭ

ರಾಜ್ಯದ ಪರಿಸ್ಥಿತಿ ಹೀಗಿರುವಾಗ ಕೇವಲ ಮೂರು ದಿನಗಳ ಕಾಲ ಸದನವನ್ನು ಕರೆದಿರುವುದು ಒಂದು ಕಡೆಯಾದರೆ, ಸದನದ ಮೊದಲಾರ್ಧ ಕಲಾಪದಲ್ಲಿ ಪ್ರವಾಹ ಕುರಿತ ಚರ್ಚೆಗೆ ಅವಕಾಶವೇ ಸಿಕ್ಕಿಲ್ಲ. ಇದರಿಂದ ಸಹಜವಾಗಿ ಜನರಲ್ಲಿ ಬೇಸರ ಮೂಡಿದೆ. ಸದನದ ನಿಯಮಾವಳಿಯೇ ಹೇಳುವಂತೆ ಜನಸಾಮಾನ್ಯರ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆ ಅನಿವಾರ್ಯವಾದ ಸಂದರ್ಭದಲ್ಲಿ ಅಜೆಂಡಾದಲ್ಲಿ ನಮೂದಿಸಿದ ರೀತಿಯಲ್ಲೇ ಹಂತಹಂತವಾಗಿ ಚರ್ಚೆ ಮಾಡಬೇಕು ಎಂಬ ಅಂಶವಿಲ್ಲ. ಹೀಗಿರುವಾಗ ರಾಜ್ಯದ ಜನರ ಸಮಸ್ಯೆಯ ಕುರಿತು ಚರ್ಚೆಗೆ ಅವಕಾಶ ಕೊಡದ ಸ್ಪೀಕರ್​ ಕಾಗೇರಿಯವರ ಕುರಿತು ವ್ಯಾಪಕ ಖಂಡನೆ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: LIVE: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು

ಜತೆಗೆ ವಿರೋಧ ಪಕ್ಷಗಳೂ ಕೂಡ ಈ ಬಗ್ಗೆ ಗಂಭೀರವಾದ ಆರೋಪಗಳನ್ನು ಮಾಡಿವೆ. ಮಧ್ಯಾಹ್ನದ ನಂತರದ ಕಲಾಪದಲ್ಲಾದರೂ ನೆರೆ ಸಂಬಂಧ ಚರ್ಚೆಗೆ ಸದನದಲ್ಲಿ ವೇದಿಕೆ ಸಿಗಲಿದೆಯಾ ಎಂಬ ಕುತೂಹಲ ಜನರಲ್ಲಿ ಮೂಡಿದೆ.
First published: October 10, 2019, 1:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading