Karnataka Assembly: ತಮಿಳುನಾಡು ಸರ್ಕಾರಕ್ಕೆ ಕೌಂಟರ್ ಕೊಡಲು ಸಿಎಂ ಬೊಮ್ಮಾಯಿ ರೆಡಿ, ನಾಳೆಯೇ 'ಮೇಕೆದಾಟು' ನಿರ್ಣಯ ಮಂಡನೆ

ಮೇಕೆದಾಟು ಯೋಜನೆ ಬಗ್ಗೆ ನಾಳೆ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ಸಿಎಂ ಬಸವರಾಜ್​ ಬೊಮ್ಮಾಯಿ

ಸಿಎಂ ಬಸವರಾಜ್​ ಬೊಮ್ಮಾಯಿ

  • Share this:
ಬೆಂಗಳೂರು (ಮಾ.22): ಮೇಕೆದಾಟು (Mekedatu) ಯೋಜನೆ ವಿರೋಧಿಸಿ ತಮಿಳುನಾಡು (Tamil Nadu) ವಿಧಾನಸಭೆಯಲ್ಲಿ‌ ಅಂಗೀಕರಿಸಿದ ನಿರ್ಣಯ ಖಂಡಿಸಿ ಪ್ರತಿ ನಿರ್ಣಯ ಮಾಡಲು ರಾಜ್ಯ ಸರ್ಕಾರ (State Government) ರೆಡಿಯಾಗಿದೆ. ನಾಳೆ ವಿಧಾನಸಭೆಯಲ್ಲಿ (Assembly) ನಿರ್ಣಯ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಘೋಷಣೆ ಮಾಡಿದ್ದಾರೆ. ಇಂದು ಸಂಜೆ ಕಾನೂನು ತಜ್ಞರ ಜೊತೆ ಚರ್ಚೆ ಮಾಡ್ತೀನಿ, ಯಾವುದಕ್ಕೂ ತಡ ಮಾಡಲ್ಲ. ಆದಷ್ಟು ಬೇಗ ಆಗಬೇಕು. ಈ ಯೋಜನೆಯನ್ನು ನಾವೇ ಮಾಡೇ ಮಾಡ್ತೀವಿ ಅಂತ ಸಿಎಂ ಬಸವರಾಜ್​ ಬೊಮ್ಮಾಯಿ ಹೇಳಿದ್ದಾರೆ. ಮೇಕೆದಾಟು ಯೋಜನೆ ವಿರುದ್ದ ನಿರ್ಣಯ ತಂದಿದ್ದ ತಮಿಳುನಾಡು ಸರ್ಕಾರಕ್ಕೆ ರಾಜ್ಯ ಸರ್ಕಾರ ಕೌಂಟರ್ ಕೊಡಲು ಸಿದ್ಧವಾಗಿದೆ.

ನಾಳೆಯೇ ವಿಧಾನಸಭೆಯಲ್ಲಿ ನಿರ್ಣಯ ಮಂಡನೆ

ತಮಿಳುನಾಡು ಸರ್ಕಾರ ತನ್ನ ವಿಧಾನಸಭೆಯಲ್ಲಿ ಕೈಗೊಂಡ ನಿರ್ಣಯದ ವಿಚಾರವಾಗಿ ಕರ್ನಾಟಕ ವಿಧಾನಸಭೆ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಎಚ್. ಕೆ. ಪಾಟೀಲ್ ಶೂನ್ಯ ವೇಳೆಯಲ್ಲಿ ವಿಚಾರ ಪ್ರಸ್ತಾಪ ಮಾಡಿದರು. ಈ ವಿಚಾರವಾಗಿ ನಡೆದ ಚರ್ಚೆಯ ಬಳಿಕ ಉತ್ತರ ‌ನೀಡಿದ ಸಿಎಂ ಬೊಮ್ಮಾಯಿ,‌ ಈ ನಿಟ್ಟಿನಲ್ಲಿ ನಾಳೆ ನಿರ್ಣಯ ತರುತ್ತೇವೆ. ವಿಳಂಬ ಮಾಡುವುದು ಸರಿಯಲ್ಲ ಎಂದು ಘೋಷಣೆ ಮಾಡಿದರು.

ಯೋಜನೆಗೆ ಅಡ್ಡಗಾಲು ಹಾಕ್ತಿದೆ ತಮಿಳುನಾಡು

ಮೇಕೆದಾಟು ಕುಡಿಯುವ ನೀರು ಹಾಗೂ ವಿದ್ಯುತ್ ಉತ್ಪಾದನೆಗಾಗಿ ರೂಪಿಸಿರುವ ಯೋಜನೆ. ಯೋಜನೆಯಿಂದ ತಮಿಳುನಾಡಿಗೆ ಯಾವುದೇ‌ ಸಮಸ್ಯೆ ಇಲ್ಲ. ತಮಿಳುನಾಡಿಗೆ ಹೋಗುವ ಹೆಚ್ಚುವರಿ ನೀರನ್ನ ಬಳಕೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಇಷ್ಟಾದರೂ ಯೋಜನೆಗೆ ಅಡ್ಡಗಾಲು ಹಾಕುವ ಪ್ರಯತ್ನ ನಡೆಯುತ್ತಿದೆ ಎಂಬ ವಿಚಾರವನ್ನು ಸಿಎಂ ಬೊಮ್ಮಾಯಿ ಸದನದ ಗಮನಕ್ಕೆ ತಂದರು.

ನಮ್ಮ ನೀರಿನ ಹಕ್ಕು ಪಡೆಯಲು ನಾವು ಸಿದ್ಧ

ಹೊಗೇನಕಲ್ ಎರಡನೇ‌ ಹಂತದ ಯೋಜನೆ ಕೈಗೆತ್ತಿಕೊಳ್ಳುವ ಮಾತನ್ನು‌ ತಮಿಳುನಾಡು ಸರ್ಕಾರ ಹೇಳುತ್ತಿದೆ.‌ ಇದು ನಮ್ಮ ನೀರಿನ‌ ಹಕ್ಕಿನ ಮೇಲೆ ಹೊಡೆತ. ಅದಕ್ಕಾಗಿ ನಾವು ವಿರೋಧ ಮಾಡಿದ್ದೇವೆ, ಮುಂದೆಯೂ ಮಾಡುತ್ತೇವೆ. ನಾವು ಕಾವೇರಿ ನೀರನ್ನು ಬಳಕೆ ಮಾಡುವ ಎಲ್ಲ ಸಂದರ್ಭದಲ್ಲಿ ತಮಿಳುನಾಡಿನಿಂದ ಅಡ್ಡಿಯಾಗುತ್ತಿದೆ. ನಮ್ಮ ನೀರಿನ ಹಕ್ಕು ಪಡೆದುಕೊಳ್ಳಲು ನಾವು ಪರಿತಪಿಸುವುದು ರಾಜ್ಯದ ಹಿತ ದೃಷ್ಟಿಯಿಂದ ಸರಿಯಲ್ಲ ಎಂದು ಬೊಮ್ಮಾಯಿ ಹೇಳಿದ್ದಾರೆ.

ಇದನ್ನೂ ಓದಿ: Mysore University: ಬಡತನದಲ್ಲಿ ಅರಳಿದ ‘ಚಿನ್ನದ‘ ಪ್ರತಿಭೆ, ಗಾರೆ ಕೆಲಸ ಮಾಡಿಕೊಂಡು ಓದಿದ ವಿದ್ಯಾರ್ಥಿಗೆ 14 ಗೋಲ್ಡ್ ಮೆಡಲ್

ಪರಿಸರ ಇಲಾಖೆಯ ಅನುಮತಿ ಸಿಗಬೇಕು

ಈ ವಿಚಾರವನ್ನು ಪ್ರಬಲವಾಗಿ ತೆಗೆದುಕೊಂಡು‌ ಹೋಗುತ್ತೇವೆ. ಕೇಂದ್ರಕ್ಕೂ ಒತ್ತಾಯ ಮಾಡುತ್ತೇವೆ. ನಮಗೆ ಡಿಪಿಆರ್ ಹಾಗೂ ಪರಿಸರ ಇಲಾಖೆಯ ಅನುಮತಿ ಸಿಗಬೇಕು. ಅದರಲ್ಲಿ ಎರಡು ಮಾತಿಲ್ಲ. ತಮಿಳುನಾಡಿನವರು ನದಿ ಪಾತ್ರದ ತಳ ಭಾಗದಲ್ಲಿ ಯೋಜನೆ ಮಾಡುತ್ತಿದ್ದಾರೆ. ಅದಕ್ಕೆ ನೀರಿನ ಹಂಚಿಕೆ ಇಲ್ಲ. ಈ ಬಗ್ಗೆ ತಾಂತ್ರಿಕ ಮಾಹಿತಿಯನ್ನು ಪಡೆದುಕೊಳ್ಳುತ್ತೇವೆ ಎಂದ ಸಿಎಂ ಅವರು, ತಮಿಳುನಾಡು ನಿರ್ಣಯ‌ ಕಾನೂನು ಬಾಹಿರ. ನಮ್ಮ ಹಕ್ಕಿನ ಮೇಲೆ ಗದಾ ಪ್ರಹಾರ ಹಾಗೂ ಒಕ್ಕೂಟ ವ್ಯವಸ್ಥೆ ವಿರುದ್ಧವಾಗಿದೆ ಎಂದರು.

ವಿಳಂಬ ಮಾಡುವುದು ಸರಿಯಲ್ಲ

ನಮ್ಮ ನಿಲುವು ಈ ಬಗ್ಗೆ ಸ್ಪಷ್ಟವಾಗಿದೆ. ಬುಧವಾರ ನಿರ್ಣಯ ತರುತ್ತೇವೆ, ವಿಳಂಬ ಮಾಡುವುದು ಸರಿಯಲ್ಲ. ಕಾನೂನು ಸಲಹೆಗಾರರ ಜೊತೆ ಸಂಜೆ ಈ ಬಗ್ಗೆ ಚರ್ಚೆ ನಡೆಸುತ್ತೇನೆ. ಅವರ ಸಲಹೆ ಪಡೆದು ನಾಳೇ ಸದನದ ಮುಂದೆ ಸ್ಪಷ್ಟವಾದ ನಿಲುವವನ್ನು ನಾವು ಹೇಳುತ್ತೇವೆ. ಯೋಜನೆ ಕಾರ್ಯಗತಗೊಳಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತೇವೆ. ಮೇಕೆದಾಟು ವಿಚಾರವಾಗಿ ನಮ್ಮ ನಿಲುವು ಸ್ಪಷ್ಟ. ಯೋಜನೆಯನ್ನು ನಾವು ಮಾಡೇ ತೀರುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: Mekedatu Project: ಕ್ಯಾತೆ ತೆಗೆಯಲು ತಮಿಳುನಾಡಿನಿಂದ ಕಾನೂನು ಬಾಹಿರ ನಿರ್ಣಯ: ಸಿದ್ದರಾಮಯ್ಯ

ಇನ್ನೊಂದು ರಾಜ್ಯ ಅನುಮತಿ ಕೇಳೋದು ಸರಿಯಲ್ಲ

ತಮಿಳುನಾಡು ಏನು ಯೋಜನೆ ಮಾಡ್ತಿದೆ, ಈ ಯೋಜನೆಗಳಿಗೆ ಅಲೋಕೇಶನ್ ಇಲ್ಲ, ನಾಳೆಯೇ ನಾವು ನಿರ್ಣಯ ಮಂಡನೆ ಮಾಡುತ್ತೇವೆ. ಇನ್ನು ಗೋವಿಂದ ಕಾರಜೋಳ ಅವರಿಗೆ ಅನಾರೋಗ್ಯವಿದೆ, ಇಲ್ಲವಾದರೆ ಇಂದೇ ದೆಹಲಿಗೆ ಹೋಗ್ತಿದ್ರು. ನಾನು ಈ ಅಸೆಂಬ್ಲಿ ಮುಗಿಯುತ್ತಿದ್ದಂತೆ ದೆಹಲಿಗೆ ಹೋಗ್ತೇನೆ, ನಾವು ಇನ್ನೊಂದು ರಾಜ್ಯ ಅನುಮತಿ ಕೇಳೋದು ಸರಿಯಲ್ಲ, ತೆಲುಗು ಗಂಗಾ ಯೋಜನೆಗೆ 15 ಟಿಎಂಸಿ ನೀರು ಕೊಟ್ವಿ. ನಮ್ಮ ಯೋಜನೆಗೆ ಅಡ್ಡಗಾಲು ಹಾಕ್ತಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.
Published by:Pavana HS
First published: