ಬೆಂಗಳೂರು(ಮಾ. 17): ಪ್ರಸಕ್ತ ಅಧಿವೇಶನದ ಹಿಂದಿನ ದಿನಗಳಿಗೆ ಹೋಲಿಸಿದರೆ ಇಂದು ಕಲಾಪ ತುಸು ಗಲಾಟೆ ಹೊರತುಪಡಿಸಿದರೆ ಬಹುತೇಕ ಸುಗಮವಾಗಿ ಸಾಗಿದೆ. ವಿಪಕ್ಷ ಸದಸ್ಯರು ಎಂದಿನಿಂದ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳುವುದನ್ನು ಮುಂದುವರಿಸಿದರು. ಜೆಡಿಎಸ್ ಪಕ್ಷದ ಶಿವಲಿಂಗೇಗೌಡ, ಕಾಂಗ್ರೆಸ್ ಪಕ್ಷದ ಪ್ರಿಯಾಂಕ್ ಖರ್ಗೆ ಅವರುಗಳು ಸರ್ಕಾರದ ಮೇಲೆ ಟೀಕಾ ಪ್ರಹಾರ ನಡೆಸಿದರು. ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ್ ಅವರೂ ಕೂಡ ಸರ್ಕಾರವನ್ನು ಟೀಕಿಸಲು ಹಿಂದೆ ಬೀಳಲಿಲ್ಲ. ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಪ್ರಿಯಾಂಕ್ ಖರ್ಗೆ ಮಾತನಾಡಿ, ಡಬಲ್ ಎಂಜಿನ್ ಸರ್ಕಾರ ಬಂದಾಗಿನಿಂದ ರಾಜ್ಯದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕದ ಒಂದೊಂದೇ ಯೋಜನೆಗಳನ್ನ ಸರ್ಕಾರ ಕೈಬಿಡುತ್ತಿದೆ. ಕಲಬುರ್ಗಿಗೆ ಟೆಕ್ಸ್ಟೈಲ್ ಪಾರ್ಕ್ ಮಂಜೂರಾಗಿತ್ತು. ಇದಕ್ಕೆ ಟೆಂಡರ್ ಕೂಡ ಮುಗಿದಿತ್ತು. ಆದರೆ, ಅದನ್ನ ವಾಪಸ್ ಪಡೆಯಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಆಕ್ಷೇಪಿಸಿದರು. ಇದಕ್ಕೆ ಉತ್ತರ ನೀಡಿದ ಜವಳಿ ಸಚಿವ ಶ್ರೀಮಂತ ಪಾಟೀಲ್, ಹೂಡಿಕೆ ಕೊರತೆಯ ಕಾರಣ ಕೊಟ್ಟರು.
ಕಲಬುರ್ಗಿಯಲ್ಲಿ ಜವಳಿ ಪಾರ್ಕ್ಗೆ 10 ಕೋಟಿ ರೂ ಹಣ ಎತ್ತಿಡಲಾಗಿತ್ತು. ಎರಡು ಕೋಟಿ ರೂ ಹಣವನ್ನೂ ಬಿಡುಗಡೆ ಮಾಡಲಾಗಿತ್ತು. ಅದರಲ್ಲಿದ್ದ 47 ಮಂದಿ ಹೂಡಿಕೆದಾರರು ಬಂಡವಾಳವನ್ನೇ ತರಲಿಲ್ಲ. 9 ವರ್ಷ ಕಾದ ಬಳಿಕ ಕೇಂದ್ರ ಸರ್ಕಾರ ಈ ಯೋಜನೆಯನ್ನು ವಾಪಸ್ ಪಡೆದಿದೆ. ಆದರೂ ತಾವು ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿಯವರನ್ನು ಭೇಟಿ ಮಾಡಿ ಯೋಜನೆ ಮುಂದುವರಿಸುವಂತೆ ಮನವಿ ಕೊಟ್ಟಿದ್ದೇವೆ. ಅವರಿಂದ ಇನ್ನೂ ಉತ್ತರ ಬಂದಿಲ್ಲ. ಈಗ ಜವಳಿಗೆ ಸಂಬಂಧಿಸಿ ಹಲವು ಯೋಜನೆ ತಂದಿದ್ದೇವೆ ಎಂದು ಶ್ರೀಮಂತ ಪಾಟೀಲ್ ತಿಳಿಸಿರು. ಆದರೆ, ಜವಳಿ ಸಚಿವರ ಉತ್ತರದಿಂದ ಪ್ರಿಯಾಂಕ್ ಖರ್ಗೆ ಸಮಾಧಾನಗೊಳ್ಳಲಿಲ್ಲ.
ನೇಕಾರರಿಗೆ ಪರಿಹಾರ ಕೊಡಲು ಆಗ್ರಹ:
ಕೊರೋನಾ ಸಂಕಷ್ಟದಲ್ಲಿ ಕೈಮಗ್ಗದ ನೇಕಾರರು ಬಹಳ ತೊಂದರೆಗೆ ಸಿಲುಕಿದ್ದಾರೆ. ನೇಕಾರರ ವಿಚಾರದಲ್ಲಿ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಕೊರೋನಾ ವೇಳೆ ಬೇರೆ ಬೇರೆ ವಲಯಗಳಲ್ಲಿ ಕೆಲಸ ಮಾಡಿದವರಿಗೆ ಪರಿಹಾರ ಕೊಡಲಾಗಿದೆ. ನೇಕಾರರಿಗೆ ಕೇವಲ ಎರಡು ಸಾವಿರ ಮಾತ್ರ ಕೊಟ್ಟಿದ್ದಾರೆ. ಈ ಮಲತಾಯಿ ಧೋರಣೆ ಬಿಟ್ಟು ನೇಕಾರರಿಗೆ ಇನ್ನೂ ಹೆಚ್ಚಿನ ಪರಿಹಾರ ಕೊಡಿ ಎಂದು ಸಿದ್ದು ಸವದಿ ಅವರು ಒತ್ತಾಯಿಸಿದರು. ನೇಕಾರರಿಗೆ 5 ಸಾವಿರ ರೂ ಪರಿಹಾರ ಕೊಡುವಂತೆ ಶಾಸಕ ವೆಂಕಟರಮಣಯ್ಯ ಕೂಡ ಆಗ್ರಹಿಸಿದರು. ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಮಾತನಾಡಿ, ಶಾಲೆಗಳಿಗೆ ಯೂನಿಫಾರಂ ಬಟ್ಟೆಯನ್ನ ನೇಕಾರರಿಂದ ಖರೀದಿಸಿ ಎಂದು ಬೇಡಿಕೆ ಇಟ್ಟರು.
ಇದಕ್ಕೆ ಉತ್ತರಿಸಿದ ಕೈಮಗ್ಗ ಮತ್ತು ಜವಳಿ ಸಚಿವ ಶ್ರೀಮಂತ ಪಾಟೀಲ ಅವರು ನೇಕಾರರಿಗೆ ಪುಷ್ಟಿ ನೀಡಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ನೇಕಾರರಿಗೆ ಒಂದು ಲಕ್ಷ ರೂವರೆಗಿನ ಸಾಲ ಮನ್ನಾ ಮಾಡಿದ್ದೇವೆ. ಸಂಕಷ್ಟದಲ್ಲಿರುವ ನೇಕಾರರಿಗೆ ಸಹಕಾರ ಸಂಘಗಳಿಂದ ಸಾಲ ಕೊಡಿಸುವ ಕೆಲಸ ಮಾಡಿದ್ದೇವೆ. ಪ್ರತೀ ವರ್ಷ ಎರಡು ಸಾವಿರ ರೂ ಪರಿಹಾರ ಕೊಡುತ್ತಿದ್ದು, ಅದು ಮುಂದುವರಿಯುತ್ತದೆ. ಆಶಾ ಕಾರ್ಯಕರ್ತೆಯರಿಗೆ ಆರು ಲಕ್ಷ ಸೀರೆಯನ್ನ ನೇಕಾರರಿಂದಲೇ ಖರೀದಿಸಲು ಪ್ರಸ್ತಾಪನೆ ಕಳುಹಿಸಲಾಗಿದೆ. ಶಾಲಾ ಸಮವಸ್ತ್ರವನ್ನು ನೇಕಾರರಿಂದ ಖರೀದಿಸಲು ಚಿಂತೆ ನಡೆದಿದೆ. ಆತ್ಮಹತ್ಯೆ ಮಾಡಿಕಂಡ ನೇಕಾರರ ಕುಟುಂಬಕ್ಕೆ ಎರಡು ಲಕ್ಷ ರೂ ಪರಿಹಾರ ಕೊಡಲಾಗುತ್ತಿದೆ ಎಂದು ಶ್ರೀಮಂತ ಪಾಟೀಲ್ ಉತ್ತರಿಸಿದರು.
ಶಿವಮೊಗ್ಗಕ್ಕೇ ಏಕೆ ಎಲ್ಲಾ ಎಂದು ಯತ್ನಾಳ ಆಕ್ಷೇಪ:
ಸಿಎಂ ಹಾಗೂ ಅವರ ಕುಟುಂಬದ ವಿರುದ್ಧ ಸದಾ ಹರಿಹಾಯುತ್ತಲೇ ಬಂದಿರುವ ಆಡಳಿತ ಪಕ್ಷದ ಸದಸ್ಯ ಬಸನಗೌಡ ಪಾಟೀಲ ಇವತ್ತೂ ಅದೇ ಕೆಲಸ ಮುಂದುವರಿಸಿದರು. ವಿಮಾನ ನಿಲ್ದಾಣ ವಿಚಾರದಲ್ಲಿ ಶಿವಮೊಗ್ಗಕ್ಕೆ ಆದ್ಯತೆ ಕೊಟ್ಟು ವಿಜಯಪುರಕ್ಕೆ ಅನ್ಯಾಯ ಮಾಡಲಾಗುತ್ತಿದೆ ಎಂದು ಯತ್ನಾಳ ಗುಟುರು ಹಾಕಿದರು. ವಿಮಾನ ನಿಲ್ದಾಣ ಯೋಜನಗೆ ಶಿವಮೊಗ್ಗಕ್ಕೆ 320 ಕೋಟಿ ಕೊಟ್ಟಿದ್ದಾರೆ. ವಿಜಯಪುರಕ್ಕೆ ಕೇವಲ 217 ಕೋಟಿ ರೂ ಕೊಟ್ಟಿದ್ದಾರೆ. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಕೊಟ್ಟಿದ್ದಾರೆ. ಈ ತಾರತಮ್ಯ ಸಾಲದು. ನಮಗೂ ಸಮಾನ ಅನುದಾನ ಬೇಕು ಎಂದು ಯತ್ನಾಳ ಅವರು ವಿಧಾನಸಭೆಯ ಪ್ರಶ್ನೋತ್ತರ ವೇಳೆ ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಮೂಲ ಸೌಕರ್ಯ ಸಚಿವ ಆನಂದ್ ಸಿಂಗ್, ಶಿವಮೊಗ್ಗವಷ್ಟೇ ಅಲ್ಲ ಎಲ್ಲಾ ಜಿಲ್ಲೆಗಳಿಗೂ ವಿಮಾನಗಳು ಬೇಕು. ಶಿವಮೊಗ್ಗ, ವಿಜಯಪುರ ಎಂದು ತಾರತಮ್ಯ ಮಾಡಿಲ್ಲ. ವಿಜಯಪುರದಲ್ಲಿ ತಾಂತ್ರಿಕ ಕಾರಣದಿಂದ ಯೋಜನೆ ಕಷ್ಟವಾಗುತ್ತಿದೆ. ಸಿಎಂ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಸಮಜಾಯಿಷಿ ನೀಡಿದರು.
ವಿಜಯಪುರದಲ್ಲಿ ಹೈಟೆನ್ಷನ್ ವೈರ್ ಇರುವುದರಿಂದ ವಿಮಾನ ನಿಲ್ದಾಣ ಯೋಜನೆಗೆ ತೊಡಕಾಗಿದೆ ಎಂಬುದು ಸರ್ಕಾರದ ವಾದ. ಆದರೆ, ಇದನ್ನ ಒಪ್ಪದ ಬಸನಗೌಡ ಪಾಟೀಲ ಯತ್ನಾಳ, ಹೈಟೆನ್ಷನ್ ವೈರ್ನ ಕಾರಣ ಕೊಡಬೇಡಿ. ಅದನ್ನ ಶಿಫ್ಟ್ ಮಾಡೋಕೆ 15-20 ಕೋಟಿ ಖರ್ಚಾಗಬಹುದು ಎಂದು ತರಾಟೆಗೆ ತೆಗೆದುಕೊಂಡರು.
ಎಲ್ಲವನ್ನೂ ಶಿವಮೊಗ್ಗಕ್ಕೇ ಕೊಡುತ್ತೀರಾ. ಇದರಲ್ಲಿ ಏನೋ ವಾಸನೆ ಬರುತ್ತಿದೆ. ಮುಖ್ಯಮಂತ್ರಿಗಳು ಶಿವಮೊಗ್ಗದ ಅಭಿವೃದ್ಧಿಗೆ ಮಾತ್ರ ಹೆಚ್ಚು ಒತ್ತು ಕೊಟ್ಟಿದ್ದಾರೆ. ಆದರೆ ಬೇರೆ ಜಿಲ್ಲೆಗಳನ್ನ ಮರೆಯುತ್ತಿದ್ದಾರೆ. ಶಿವಮೊಗ್ಗಕ್ಕೆ ಸಿಕ್ಕಷ್ಟು ಅನುದಾವವನ್ನು ವಿಜಯಪುರಕ್ಕೂ ಕೊಡಿ ಎಂದು ಯತ್ನಾಳ ಒತ್ತಾಯಿಸಿದರು.
ಇಸ್ರೇಲ್ ಮಾದರಿ ಕೃಷಿ ಯೋಜನೆಯ ಹಣ ಎಲ್ಲಿ ಹೋಯಿತು?
ಹಿಂದೆ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಇಸ್ರೇಲ್ ಮಾದರಿಯ ಕೃಷಿಗಾರಿಕೆ ಯೋಜನೆಗೆ 157 ಕೋಟಿ ರೂ ಹಣ ಎತ್ತಿ ಇಟ್ಟಿದ್ದರು. ಆ ಹಣ ಎಲ್ಲಿ ಹೋಯಿತು ಎಂದು ಇದೇ ವೇಳೆ ಜೆಡಿಎಸ್ ಸದಸ್ಯ ಶಿವಲಿಂಗೇಗೌಡ ಕೇಳಿದರು. ಇದಕ್ಕೆ ಉತ್ತರಿಸಿದ ಕೃಷಿ ಸಚಿವ ಬಿ.ಸಿ. ಪಾಟೀಲ, ತಮಗೂ ರೈತರ ಬಗ್ಗೆ ಕಾಳಜಿ ಇದೆ. ಸಿಎಂ ಜೊತೆ ಚರ್ಚಿಸಿ ಆ ಯೋಜನೆಯ ಹಣ ಎಲ್ಲಿ ಹೋಯಿತು ಎಂಬುದನ್ನು ತಿಳಿಸುತ್ತೇನೆ ಎಂದರು.
ಬಳಿಕ ಮತ್ತೊಬ್ಬ ಜೆಡಿಎಸ್ ಶಾಸಕ ಅನ್ನದಾನಿ ಮಾತನಾಡಿ, ಕುಮಾರಸ್ವಾಮಿ ಸಿಎಂ ಆಗಿದ್ದಾಗ ಮಳವಳ್ಳಿ ನೀರಾವರಿ ಯೋಜನೆಗೆ 200 ಕೋಟಿ ರೂ ಕೊಟ್ಟಿದ್ದರು. ಆ ಹಣ ಎಲ್ಲಿ ಹೋಯಿತು ಎಂದು ಪ್ರಶ್ನೆ ಹಾಕಿದರು. ನಂತರ, ಹಿಂದಿನ ಬಜೆಟ್ನಲ್ಲಿ ಘೋಷಣೆಯಾಗಿದ್ದ ಯೋಜನೆಗಳ ಹಣವನ್ನು ಈಗ ಕಡಿತ ಮಾಡಿರುವುದನ್ಜು ವಿರೋಧಿಸಿ ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಇದರಿಂದ ಕೋಪಗೊಂಡ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ನಿಮಗೆ ಹೇಳೋರು ಕೇಳೋರು ಇದ್ದಾರಾ? ಏನಿದು ಅಶಿಸ್ತು? ಸಾಮಾನ್ಯ ಪ್ರಜ್ಞೆ ಕೂಡ ನಿಮಗೆ ಇಲ್ಲವಲ್ಲ ಎಂದು ಜೆಡಿಎಸ್ ಸದಸ್ಯರನ್ನ ತರಾಟೆಗೆ ತೆಗೆದುಕೊಂಡರು.
ಇನ್ನು, ಮಾತೃಪೂರ್ಣ ಯೋಜನೆ ರದ್ದು ಮಾಡಲಾಗಿದೆ ಎಂದು ಕಾಂಗ್ರೆಸ್ ಶಾಸಕ ತುಕಾರಾಂ ಆಕ್ಷೇಪಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಒಂದೇ ರೀತಿಯ ಯೋಜನೆ ಇದ್ದರಿಂದ ಒಂದನ್ನ ಕೈಬಿಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸ್ಪಷ್ಟನೆ ನೀಡಿದರು.
ಮಾತೃಪೂರ್ಣ ಒಂದು ಉತ್ತಮ ಯೋಜನೆ. ಮನೆಮನೆಗೆ ಹೋಗಿ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿತ್ತು. ಆದರೆ, ಅ ಆಹಾರವನ್ನು ಮನೆಯವರೆಲ್ಲಾ ಉಪಯೋಗಿಸುತ್ತಿದ್ದರಿಂದ ಗರ್ಭಿಣಿಯರಿಗೆ ಸರಿಯಾಗಿ ಸಿಗುತ್ತಿರಲಿಲ್ಲ. ಆಗ ಅಂಗನವಾಡಿಯಿಂದಲೇ ಪೌಷ್ಠಿಕ ಆಹಾರ ಕೊಡುವ ಪ್ರಯತ್ನ ನಡೆದಿತ್ತು. ಕೋವಿಡ್ನಿಂದ ಈಗ ಮತ್ತೆ ಮನೆಮನೆಗೆ ಕೊಡಲಾಗುತ್ತಿದೆ ಎಂದು ಹೇಳಿದ ಲಕ್ಷ್ಮಣ ಸವದಿ, ಮಾತೃಶ್ರೀ, ಮಾತೃ ಬಂಧನ ಎರಡೂ ಒಂದೇ ಯೋಜನೆಯಾಗಿವೆ. ಮಾತೃ ಬಂಧನ ಕೇಂದ್ರದ ಯೋಜನೆಯಾದರೆ, ಮಾತೃಶ್ರೀ ಯೋಜನೆ ರಾಜ್ಯ ಸರ್ಕಾರದ್ದು. ಎರಡೂ ಒಂದೇ ಆಗಿರುವುದರಿಂದ ಒಂದನ್ನು ನಿಲ್ಲಿಸಲಾಗಿದೆ ಎಂದು ಉತ್ತರಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ