news18-kannada Updated:January 27, 2021, 4:59 PM IST
ಸಾಂದರ್ಭಿಕ ಚಿತ್ರ (ರಾಜ್ಯ ಅಧಿವೇಶನ).
ಬೆಂಗಳೂರು (ಜ. 27): ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನ ನಾಳೆಯಿಂದ ಅಂದರೆ ಜ. 28ರಿಂದ ಪ್ರಾರಂಭವಾಗಲಿದೆ. ಫೆ. 5ರವರೆಗೆ ಏಳು ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಈ ಬಾರಿ 11 ವಿಧೇಯಕಗಳು ಮಂಡನೆಯಾಗಲಿದೆ ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು. ಅಧಿವೇಶನ ಹಿನ್ನಲೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಅಧಿವೇಶನಕ್ಕೆ ಎಲ್ಲ ಸಿದ್ದತೆಗಳು ಪೂರ್ಣಗೊಂಡಿವೆ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವಂತೆ ರಾಜ್ಯಪಾಲರರಾದ ವಾಜೂಭಾಯಿ ಅವರನ್ನು ಆಹ್ವಾನಿಸಲಾಗಿದೆ. ನಾಳೆ ರಾಜ್ಯಪಾಲರ ಭಾಷಣ ಗಳಿಕ ಸಂತಾಪ ಸೂಚನೆ ಮಾಡಲಾಗುವುದು. ನಂತರ ಕಲಾಪವನ್ನು ಮುಂದೂಡಲಾಗುತ್ತದೆ. ಶುಕ್ರವಾರದಿಂದ ಪ್ರಶ್ನೋತ್ತರ ಕಲಾಪ ನಡೆಯಲಿದೆ.
ಈ ಬಾರಿ ಅಧಿವೇಶನದಲ್ಲಿ 11 ಮಸೂದೆಗಳು ಮಂಡನೆಯಾಗುತ್ತವೆ. ಗೋ ಹತ್ಯೆ ನಿಷೇಧ ವಿಧೇಯಕ ಇನ್ನೂ ವಿಧಾನ ಪರಿಷತ್ ನಲ್ಲಿ ಅಂಗೀಕಾರವಾಗುವುದು ಬಾಕಿ ಇದೆ. ಮೂರು ವಿಶ್ವವಿದ್ಯಾಲಯ ಗಳ ವಿಧೇಯಕ ಹಾಗು ಮೂರು ಸುಗ್ರೀವಾಜ್ಞೆ ಗಳ ವಿಧೇಯಕಗಳಿವೆ. ಯಾವುದೇ ಮಸೂದೆಗಳಿದ್ದರೂ ಸರ್ಕಾರ ಮುಂಚಿತವಾಗಿಯೇ ಸಚಿವಾಲಯಕ್ಕೆ ಕಳುಹಿಸಿಕೊಡಬೇಕು. ಇದರಿಂದ ಸದಸ್ಯರಿಗೆ ಚರ್ಚೆಗೆ ಸಿದ್ದವಾಗಿ ಬರಲು ಅವಕಾಶವಾಗುತ್ತದೆ ಎಂದರು.
ಇದೇ ವೇಳೆ ಈ ಅಧಿವೇಶನದ ಸಂದರ್ಭದಲ್ಲೇ ಒಂದು ದಿನ ಒಂದು ದೇಶ ಒಂದು ಚುನಾವಣೆ ವಿಷಯ ಚರ್ಚೆಯಾಗಲಿದೆ. ಶೀಘ್ರದಲ್ಲೇ ಅದಕ್ಕೆ ದಿನಾಂಕ ನಿಗದಿ ಪಡಿಸಲಾಗುತ್ತದೆ ಎಂದು ತಿಳಿಸಿದರು.
ಇದನ್ನು ಓದಿ: ಅಕ್ರಮ ಕಲ್ಲುಗಣಿಗಾರಿಕೆ ನಡೆಸಿದ್ರೆ ಎಫ್ಐಆರ್; ಕಠಿಣ ಕ್ರಮಕ್ಕೆ ಮುಂದಾದ ಯಾದಗಿರಿ ಜಿಲ್ಲಾಧಿಕಾರಿ
ಈ ಬಾರಿಯೂ ಅಧಿವೇಶನಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ಅಧಿವೇಶನದಲ್ಲಿ ಇದ್ದ ನಿರ್ಬಂಧ, ವ್ಯವಸ್ಥೆಗಳು ಮುಂದುವರಿಯುತ್ತದೆ. ಅನಾರೋಗ್ಯ ಇರುವವರು ಸದನಕ್ಕೆ ಹಾಜರಾಗದೇ ಇರುವುದು ಒಳ್ಳೆಯದು. ಲಕ್ಷಣಗಳು ಇದ್ದವರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲೂ ವ್ಯವಸ್ಥೆ ಮಾಡಲಾಗಿದೆ. ಆದರೆ ಆರ್ ಟಿಪಿಸಿಆರ್ ಟೆಸ್ಟ್ ಕಡ್ಡಾಯವೇನಲ್ಲ.
ಈ ಬಾರಿ ಅಧಿವೇಶನದಲ್ಲಿ ವಿದ್ಯುತ್, ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ, ಅತಿವೃಷ್ಟಿ ಪರಿಹಾರ ವಿಳಂಬ ಮೊದಲಾದ ವಿಚಾರಗಳು ಅಧಿವೇಶನದಲ್ಲಿ ಪ್ರಮುಖವಾಗಿ ಪ್ರಸ್ತಾಪವಾಗಲಿವೆ. ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯು ಉಭಯ ಸದನಗಳಲ್ಲಿ ಪ್ರತಿಧ್ವನಿಸುವ ಸಾಧ್ಯತೆ ಹೆಚ್ಚಾಗಿದೆ. ಅಧಿವೇಶನದ ದಿನಗಳಂದು ವಿಧಾನಸೌಧ ಕಟ್ಟಡದ ಸುತ್ತಲೂ ಎರಡು ಕಿ.ಮೀ.ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.
Published by:
Seema R
First published:
January 27, 2021, 4:14 PM IST