Siddaramaiah- ತನ್ನ ಬಳಿ ಮೊಬೈಲ್ ಯಾಕಿಲ್ಲವೆಂದು ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ; ಸದನದ ಸ್ವಾರಸ್ಯಗಳು

1980 ಮತ್ತು 1991ರಲ್ಲಿ ಸಂಸತ್ಗೆ ಹೋಗಲು ಪ್ರಯತ್ನಿಸಿದ್ದೆ. ಆದರೆ, ಎರಡೂ ಬಾರಿಯೂ ಜನರು ನನ್ನನ್ನು ಗೆಲ್ಲಿಸಲಿಲ್ಲ. ಈಗ ದೆಹಲಿಗೆ ಹೋಗುವ ಆಸೆ ಬಿಟ್ಟಿದ್ದೇನೆ ಎಂದು ವಿಧಾನಸಭೆ ಅಧಿವೇಶನದ ವೇಳೆ ಸಿದ್ದರಾಮಯ್ಯ ಹೇಳಿದ್ಧಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ

ವಿಪಕ್ಷ ನಾಯಕ ಸಿದ್ದರಾಮಯ್ಯ

  • Share this:
ಬೆಂಗಳೂರು, ಸೆ. 15: ವಿಪಕ್ಷ ನಾಯಕ ಸಿದ್ದರಾಮಯ್ಯ (Opposition Party Leader Siddaramaiah) ಅವರು ಸದನದಲ್ಲಿ ಮಾತನಾಡಲು ಆರಂಭಿಸಿದರೆ ಒಂದೋ ಆಡಳಿತ ಪಕ್ಷದವರಿಗೆ ನಡುಕವಾಗುತ್ತದೆ, ಇಲ್ಲ ಇಡೀ ಸದನ ನಗೆಗಡಲಲ್ಲಿ ತೇಲುವ ಹಾಸ್ಯಭರಿತ ಮಾತುಗಳು ಹರಿದಾಡುತ್ತವೆ. ಇವತ್ತು ಬೆಲೆ ಏರಿಕೆ (Price Rise Issue) ಕುರಿತು ಕಾಂಗ್ರೆಸ್ ಮಂಡಿಸಿದ ನಿಲುವಳಿ ಮೇಲೆ ನಡೆದ ಚರ್ಚೆಯಲ್ಲಿ ಸಿದ್ದರಾಮಯ್ಯ ಅವರ ಮಾತುಗಳು ಹೈಲೈಟ್ ಎನಿಸಿದವು. ಗಹನವಾದ ಚರ್ಚೆ ಮೂಲಕ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳುವುದರ ಜೊತೆಗೆ ಕೆಲ ಸ್ವಾರಸ್ಯಕರ ಸಂಗತಿ ಬಗ್ಗೆಯೂ ಮಾತನಾಡಿ ವಾತಾವರಣ ಹಗುರಗೊಳಿಸುವಲ್ಲಿಯೂ ಯಶಸ್ವಿಯಾದರು. ಸಿದ್ದರಾಮಯ್ಯ ತಮ್ಮ ಬಳಿ ಮೊಬೈಲ್ ಇಟ್ಟುಕೊಳ್ಳದೇ ಇರೋದಕ್ಕೆ (Siddaramaiah not using mobile phone) ಏನು ಕಾರಣ ಎಂಬುದನ್ನು ಬಿಚ್ಚಿಟ್ಟರು. ತಾನು ಸುಳ್ಳು ಹೇಳಿಯೇ ಇಲ್ಲ ಎನ್ನುವಂತಿಲ್ಲ ಎಂದು ಹೇಳಿ ತಾನೂ ಸುಳ್ಳುಗಳನ್ನ ಹೇಳಿದ್ದಿರಬಹುದು ಎಂದು ತಪ್ಪೊಪ್ಪಿಕೊಂಡ ಪ್ರಸಂಗವೂ ನಡೆಯಿತು. ಅವರ ಮೆಚ್ಚಿನ ಜನಾರ್ದನ ಹೋಟೆಲ್​ನ ದೋಸೆ ವಿಚಾರವೂ ಬಂದು ಹೋಯಿತು.

ಮೊಬೈಲ್ ಯಾಕಿಲ್ಲ?: ಸಿದ್ದರಾಮಯ್ಯ ಮೊಬೈಲ್ ಇಟ್ಟುಕೊಂಡಿಲ್ಲದ ವಿಚಾರ ಸದನದಲ್ಲಿ ಪ್ರತಿಧ್ವನಿಸಿತು. ನೀವು ಯಾಕೆ ಮೊಬೈಲ್ ಇಟ್ಟುಕೊಂಡಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಸಿದ್ದರಾಮಯ್ಯರನ್ನ ಕೇಳಿಯೇ ಬಿಟ್ಟರು. ಇದಕ್ಕೆ ಉತ್ತರಿಸಿದ ವಿಪಕ್ಷ ನಾಯಕ, ಕೆಲವರಿಗೆ ಮೊಬೈಲ್ ಮೇಲೆ ಬಹಳ ಅಟ್ಯಾಚ್ಮೆಂಟ್ ಇದೆ. ನಾನಂತೂ ಮೊಬೈಲ್​ನಿಂದ ದೂರವೇ. ನನಗೆ ಮೊಬೈಲ್ ನ್ಯೂಸೆನ್ಸ್ ಆಗಿ ಹೋಗಿತ್ತು. ರಾತ್ರಿ ಹೊತ್ತೆಲ್ಲಾ ಫೋನ್ ಕರೆಗಳು ಬರುತ್ತಿದ್ದವು. ಅದ್ಕಕೆ ನಾನು ಮೊಬೈಲ್ ಫೋನ್ ಇಟ್ಟುಕೊಂಡಿಲ್ಲ. ಸಿಎಂ ಆದಾಗ ಐದು ವರ್ಷವೂ ನಾನು ಮೊಬೈಲ್ ಇಟ್ಟುಕೊಂಡಿರಲಿಲ್ಲ ಎಂದು ತಮ್ಮ ಹೇಳಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಪ್ರಿಯಾಂಕ್ ಖರ್ಗೆ, ಪೆಗಾಸಸ್ (ಮೊಬೈಲ್​ನಿಂದ ಮಾಹಿತಿ ಕದಿಯುವ ತಂತ್ರಾಂಶ) ಕಾರಣದಿಂದ ಮೊಬೈಲ್ ಇಟ್ಟುಕೊಂಡಿಲ್ಲ ಎಂದು ಸಿದ್ದರಾಮಯ್ಯ ಮಾತಿಗೆ ಧ್ವನಿಗೂಡಿಸಿದರು. ನಂತರ ಮಾತು ಮುಂದುವರಿಸಿದ ಸಿದ್ದರಾಮಯ್ಯ, ಮೊಬೈಲ್ ಇಲ್ಲದೇ ಇರುವುದನ್ನು ನೀವು ಟ್ರೈ ಮಾಡಿ ಎಂದು ಸಿಎಂ ಬೊಮ್ಮಾಯಿಗೆ ಸಲಹೆಯನ್ನೂ ನೀಡಿದರು.

ಸಿದ್ದರಾಮಯ್ಯರನ್ನು ದೆಹಲಿಗೆ ಕಳಿಸುವ ಮತ್ತು ಸುಳ್ಳು ಹೇಳುವ ವಿಚಾರ:

ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿಚಾರವಾಗಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಸಿದ್ದರಾಮಯ್ಯ ಸಂಸದರಾಗಬೇಕು ಎಂದು ಸಚಿವ ಮಾಧು ಸ್ವಾಮಿ ನೀಡಿದ ಸಲಹೆ ಕೆಲ ಹೊತ್ತು ಸ್ವಾರಸ್ಯಕರ ಮಾತುಗಳಿಗೆ ಕಾರಣವಾಯಿತು. ನೀವು ಸಿದ್ದರಾಮಯ್ಯ ಅವರನ್ನ ಪಾರ್ಲಿಮೆಂಟ್​ಗೆ ಕಳುಹಿಸುವ ಉದ್ದೇಶ ಇಟ್ಟುಕೊಂಡಿದ್ದೀರಿ ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಶ್ನೆ ಮಾಡಿದರು ಆಗ ಅಶೋಕ್ ಮಧ್ಯಪ್ರವೇಶಿಸಿ, ಸಿದ್ದರಾಮಯ್ಯ ಇಲ್ಲಿಯೇ ಇರಬೇಕು ಎಂದರು. ಸ್ಪೀಕರ್ ಪ್ರಶ್ನೆಗೆ ಉತ್ತರಿಸಿದ ಮಾಧು ಸ್ವಾಮಿ, ಸಿದ್ದರಾಮಯ್ಯ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದರು. ಕರ್ನಾಟಕದ ಕಹಳೆಯನ್ನು ದಿಲ್ಲಿಯಲ್ಲಿ ಊದಬೇಕು ಎಂದು ಹೇಳಿದರು.

ಇದನ್ನು ಓದಿ: Karnataka Assembly: ಸದನದಲ್ಲಿ ಬೆಲೆ ಏರಿಕೆಗೆ ಇಡ್ಲಿ, ದೋಸೆ ಉದಾಹರಣೆ; ಗೃಹ ಸಚಿವರಿಗೆ ಹೋಂ ವರ್ಕ್​ ಕೊಟ್ಟ ಸಿದ್ದರಾಮಯ್ಯ

ಇದಕ್ಕೆ ಈಶ್ವರಪ್ಪ ಅವರ ಅಭಿಪ್ರಾಯ ಏನೋ ಎಂದು ಸ್ಪೀಕರ್ ಕಾಗೇರಿ ಕೇಳಿದರು. ಅವರನ್ನ ಕೇಳಬೇಡಿ, ಅವರು ಇಲ್ಲೂ ಬೇಡ ಅಲ್ಲೂ ಬೇಡ ಎನ್ನುತ್ತಾರೆ ಎಂದು ಸಿದ್ದರಾಮಯ್ಯ ಕಿಚಾಯಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ನಿಮ್ಮ ಹೃದಯ ಮುಟ್ಟಿಕೊಂಡು ಹೇಳಿ ನಾನು ಆ ರೀತಿ ಹೇಳುತ್ತೀನಾ ಎಂದು ಕೇಳಿದರು. “ಇಲ್ಲ, ಈಶ್ವರಪ್ಪ ಆಂತರಿಕವಾಗಿ ಹೇಳಲ್ಲ, ಆದರೆ, ಬಹಿರಂಗವಾಗಿ ಹೇಳುತ್ತಾರೆ” ಎಂದು ಸಿದ್ದರಾಮಯ್ಯ ಹಾಸ್ಯ ಮಾಡಿದರು. ಇದಕ್ಕೆ ಅಷ್ಟೇ ಹಗುರವಾಗಿ ಪ್ರತಿಕ್ರಿಯಿಸಿದ ಈಶ್ವರಪ್ಪ, ಇದೊಂದು ನಿಜ ಹೇಳಿದ್ರೀ ಎಂದು ಹೇಳಿದರು. ರಾಜಕಾರಣಿ ಆದ ಮೇಲೆ ಕೆಲವು ಬಾರಿ ಸುಳ್ಳು ಹೇಳುವ ಅನಿವಾರ್ಯತೆ ಬರುತ್ತದೆ. ಕೆಲವೊಮ್ಮೆ ನಾನೂ ಸುಳ್ಳು ಹೇಳಿರಬಹುದು. ಸುಳ್ಳು ಹೇಳಿಯೇ ಇಲ್ಲ ಎನ್ನೋದು ಆತ್ಮವಂಚನೆ ಆಗುತ್ತದೆ ಎಂದು ಸಿದ್ದರಾಮಯ್ಯ ಪ್ರಾಮಾಣಿಕತೆ ತೋರಿದರು. ಈ ಸ್ವಾರಸ್ಯಕರ ಚರ್ಚೆಗೆ ಕಾರಣವಾದ ದೆಹಲಿಗೆ ಹೋಗುವ ವಿಚಾರಕ್ಕೆ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ, ತಾನು 1980 ಮತ್ತು 1991ರಲ್ಲಿ ಎರಡು ಬಾರಿ ಸಂಸದರಾಗಲು ಪ್ರಯತ್ನ ಮಾಡಿದೆ. ಎರಡೂ ಬಾರಿಯೂ ಸೋತುಬಿಟ್ಟೆ. ಆವತ್ತಿಗೆ ನಾನು ದೆಹಲಿಗೆ ಹೋಗುವ ಉದ್ದೇಶ ಹೊಂದಿದ್ದೆ. ಈಗ ಅದಿಲ್ಲ. ಇಲ್ಲೇ ಇನ್ನೂ ಒಂದು ಚುನಾವಣೆ ಎದುರಿಸಬಹುದು ಅಷ್ಟೇ ಎಂದು ಸ್ಪಷ್ಟಪಡಿಸಿದರು.

ಜನಾರ್ದನ ಹೋಟೆಲ್ ದೋಸೆ:

ಹೋಟೆಲ್ ವಿಚಾರ ಬಂದರೆ ಸಿದ್ದರಾಮಯ್ಯ ಅವರು ಜನಾರ್ದನ ಹೋಟೆಲ್ ಅನ್ನು ಸಾಮಾನ್ಯವಾಗಿ ಪ್ರಸ್ತಾಪಿಸುತ್ತಾರೆ. ಶಿವಾನಂದ ಸರ್ಕಲ್ ಬಳಿ ಇರುವ ಜನಾರ್ದನ ಹೋಟೆಲ್​ನ ದೋಸೆ ಸಿದ್ದರಾಮಯ್ಯಗೆ ಅಚ್ಚುಮೆಚ್ಚು. ಪೆಟ್ರೋಲ್ ಬೆಲೆ ಏರಿಕೆ ವಿಚಾರದ ಬಗ್ಗೆ ಚರ್ಚೆಯ ವೇಳೆ ಈ ಹೋಟೆಲ್​ನ ದೋಸೆ ವಿಚಾರವನ್ನ ಪ್ರಸ್ತಾಪಿಸಿದರು. ಪೆಟ್ರೋಲ್ ಡೀಸೆ ಬೆಲೆ ಏರಿಕೆಯಿಂದ ಎಲ್ಲಾ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಎರಡು ಇಡ್ಲಿ ವಡೆಗೆ 39 ರೂಪಾಯಿ ಕೊಡಬೇಕು. ಬರೀ ಇಡ್ಲಿ ವಡೆಗೆ ಇಷ್ಟು ಬೆಲೆ ಹೆಚ್ಚಾಗಿದೆ. ಮಸಾಲೆ ದೋಸೆ 50 ಆಗಿರಬೇಕಲ್ಲವಾ? ನಾನು ಜನಾರ್ದನ ಹೋಟೆಲ್​ಗೆ ದೋಸೆ ತಿನ್ನಲು ಹೋಗುತ್ತಿದ್ದೆ. ಒಂದು ದೋಸೆ ಬೆಲೆ 100 ರೂ ಆಯಿತು. ಆಗಿನಿಂದ ಅಲ್ಲಿಗೆ ಹೋಗುವುದನ್ನು ನಿಲ್ಲಿಸಿದ್ದೇನೆ. ಯಾಕೆ ಜಾಸ್ತಿ ಆಯಿತು? ಅಡುಗೆ ಎಣ್ಣೆ ಬೆಲೆ ಹೆಚ್ಚಾದ್ದರಿಂದ ತಿಂಡಿಗಳ ದರ ಹೆಚ್ಚಾಗಿದೆ. ಬೆಲೆ ಜಾಸ್ತಿ ಆದ್ದರಿಂದ ನಾನು ಹೋಟೆಲ್​ಗೆ ಹೋಗುವುದು ಕಡಿಮೆ ಆಗಿದೆ ಎಂದು ಬೆಲೆ ಏರಿಕೆ ಬಿಸಿ ಬಗ್ಗೆ ಸಿದ್ದರಾಮಯ್ಯ ಮಾರ್ಮಿಕವಾಗಿ ತಿಳಿಸಿದರು.
Published by:Vijayasarthy SN
First published: