Assembly Session - ಅಧಿವೇಶನದ ಎರಡನೇ ದಿನವೂ ಕಲಾಪಕ್ಕೆ ಅಡ್ಡಿ; ‘ಅಯ್ಯಯ್ಯೋ ಅನ್ಯಾಯ’ ಎಂದು ಕೈ ಪ್ರತಿಭಟನೆ

ಭದ್ರಾವತಿ ಕಾಂಗ್ರೆಸ್ ಶಾಸಕ ಸಂಗಮೇಶ್ ಅವರನ್ನು ಅಮಾನತುಗೊಳಿಸಿದ ಸ್ಪೀಕರ್ ಕ್ರಮವನ್ನು ಆಕ್ಷೇಪಿಸಿ ಕಾಂಗ್ರೆಸ್ ಪಕ್ಷದ ಸದಸ್ಯರು ವಿಧಾನಸಭೆ ಅಧಿವೇಶನದ ಎರಡನೇ ದಿನವೂ ಪ್ರತಿಭಟನೆ ನಡೆಸಿ ಕಲಾಪವನ್ನು ಅಡ್ಡಿಪಡಿಸಿದ್ಧಾರೆ.

ಸಂಗಮೇಶ್ ಜೊತೆ ಸಿದ್ದರಾಮಯ್ಯ

ಸಂಗಮೇಶ್ ಜೊತೆ ಸಿದ್ದರಾಮಯ್ಯ

 • Share this:
  ಬೆಂಗಳೂರು(ಮಾ. 05): ನಿನ್ನೆ ಒನ್ ನೇಷನ್ ಒನ್ ಎಲೆಕ್ಷನ್ ವಿಚಾರದ ಚರ್ಚೆಯನ್ನು ವಿರೋಧಿಸಿ ಬಜೆಟ್ ಅಧಿವೇಶನದ ಮೊದಲ ದಿನದ ಕಲಾಪವನ್ನು ಅಡ್ಡಿಪಡಿಸಿದ್ದ ಕಾಂಗ್ರೆಸ್ ಪಕ್ಷದ ಸದಸ್ಯರು ಇಂದು ಎರಡನೇ ದಿನದಂದು ಸಂಗಮೇಶ್ ವಿಚಾರವನ್ನ ಮುಂದಿಟ್ಟುಕೊಂಡು ಕಲಾಪಕ್ಕೆ ಅಡ್ಡಿ ಮಾಡಿದರು. ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಅವರನ್ನ ನಿನ್ನೆ ಅಮಾನತು ಮಾಡಿದ ಸ್ಪೀಕರ್ ಕ್ರಮವನ್ನು ವಿರೋಧಿಸಿ ಇಂದು ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಸಂಗಮೇಶ್ ಅವರನ್ನ ಅಮಾನತುಗೊಳಿಸಿದ ಕ್ರಮವನ್ನು ಹಿಂಪಡೆಯುವವರೆಗೂ ಕಲಾಪದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪ್ರತಿಭಟನೆ ಮುಂದುವರಿಸಿದ ಕಾಂಗ್ರೆಸ್ ಸದಸ್ಯರು ‘ಅಯ್ಯಯ್ಯೋ ಅನ್ಯಾಯ’ ಘೋಷಣೆ ಕೂಗಿದರು. ಪ್ರತಿಭಟನೆ ನಿಲ್ಲಿಸಿ ಕಲಾಪಕ್ಕೆ ದಾರಿ ಮಾಡಿಕೊಡಬೇಕೆಂದು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಹಿರಿಯ ನಾಯಕರನ್ನ ಮನವೊಲಿಸುವ ಸ್ಪೀಕರ್ ಪ್ರಯತ್ನ ವಿಫಲವಾಯಿತು. ಸಂಗಮೇಶ್ ಅವರ ಅಮಾನತು ಆದೇಶ ವಾಪಸ್ ಪಡೆಯಬೇಕೆಂದು ತಮ್ಮ ಆಗ್ರಹವನ್ನು ಸಿದ್ದರಾಮಯ್ಯ ಆದಿಯಾಗಿ ಕೈ ಸದಸ್ಯರು ಮುಂದುವರಿಸಿದರು. ಗಲಾಟೆ ಕಾರಣ ಎರಡು ಬಾರಿ ಸ್ಪೀಕರ್ ಸದನವನ್ನ ಮುಂದೂಡಬೇಕಾಯಿತು.

  ಒಂದು ಹಂತದಲ್ಲಿ ಕಾಂಗ್ರೆಸ್ ಪ್ರತಿಭಟನೆಯ ಮಧ್ಯೆಯೂ ಬಿಜೆಪಿ ಸದಸ್ಯರು ಒಂದು ರಾಷ್ಟ್ರ ಒಂದು ಚುನಾವಣೆ ವಿಚಾರವಾಗಿ ಚರ್ಚೆಗೆ ಪ್ರಯತ್ನ ಮಾಡಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಮಾತನಾಡಲು ಯತ್ನಿಸುತ್ತಿರುವಂತೆಯೇ ಕಾಂಗ್ರೆಸ್ ಸದಸ್ಯರು ಜೋರಾಗಿ ಘೋಷಣೆಗಳನ್ನ ಕೂಗುತ್ತಾ ಅಡ್ಡಿಪಡಿಸಿದರು. ಯಡಿಯೂರಪ್ಪ ವಿರುದ್ಧ ಈ ಹಿಂದೆ ಗುಡುಗುತ್ತಾ ಬಂದಿರುವ ಬಿಜೆಪಿ ಸದಸ್ಯ ಬಸನಗೌಡ ಯತ್ನಾಳ ಅವರು ಸಂಗಮೇಶ್ ವಿಚಾರದಲ್ಲಿ ಸ್ಪೀಕರ್ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡರು. ಸಂಗಮೇಶ್ ಅವರನ್ನ ಅಮಾನತುಗೊಳಿಸುವ ಆದೇಶವನ್ನ ಹಿಂಪಡೆಯಬಾರದು ಎಂದು ಯತ್ನಾಳ ಆಗ್ರಹಿಸಿದರು. ಸಿಎಂ ಯಡಿಯೂರಪ್ಪ ಕೂಡ ಕಾಂಗ್ರೆಸ್ ಸದಸ್ಯರ ಧೋರಣೆಯನ್ನ ಬಲವಾಗಿ ಟೀಕಿಸಿದರು.

  ಇದನ್ನೂ ಓದಿ: ಅಡ್ವಾಣಿ ಮನೆಯಲ್ಲೂ ತಿಂಡಿ ತಿಂದಿದ್ದೆ, ದೇವೇಗೌಡರ ಜೊತೆಯೂ ಚೆನ್ನಾಗಿದ್ದೇನೆ; ಸಿ.ಎಂ ಇಬ್ರಾಹಿಂ ಸ್ಪಷ್ಟನೆ

  ಕಾಂಗ್ರೆಸ್​ನವರ ನಡೆ ಒಳ್ಳೆಯ ಪದ್ಧತಿ ಅಲ್ಲ. ಒಂದು ದೇಶ ಒಂದು ಚುನಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಬೇರೆ ಸದಸ್ಯರಿಗೆ ಚರ್ಚೆಯಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಬೇಕು. ಪ್ರಜಾಪ್ರಭುತ್ವದಲ್ಲಿ ಏನು ವಿರೋಧ ಇದೆ ಅದನ್ನು ಮಾತನಾಡಿ. ನಿನ್ನೆ ಸದನದಲ್ಲಿ ಸಂಗಮೇಶ್ ಅವರು ಬೇಜವಾಬ್ದಾರಿಯುತವಾಗಿ ಮತ್ತು ಅಸಭ್ಯವಾಗಿ ವರ್ತಿಸಿದ್ದಾರೆ. ಸದನದ ಪಾವಿತ್ರ್ಯತೆ ಹಾಳು ಮಾಡಿರುವವರನ್ನ ಸಮರ್ಥನೆ ಮಾಡಿಕೊಳ್ಳುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಗುಡುಗಿದರು. ಆದರೆ, ಸ್ಪೀಕರ್ ಮನವಿಯನ್ನು ಸಿದ್ದರಾಮಯ್ಯ ಗಣನೆಗೆ ತೆಗೆದುಕೊಳ್ಳಲಿಲ್ಲ.

  ಇನ್ನು, ಸದನದ ಆರಂಭಕ್ಕೂ ಮುನ್ನ ಭದ್ರಾವತಿ ಶಾಸಕ ಸಂಗಮೇಶ್ ಅವರನ್ನ ಸದನದ ಒಳಗೆ ಕರೆತರುವ ವಿಫಲ ಪ್ರಯತ್ನ ಕೂಡ ನಡೆದಿತ್ತು. ಸ್ಪೀಕರ್ ಆದೇಶವಿದ್ದರಿಂದ ವಿಧಾನಸಭೆಯ ಮಾರ್ಷಲ್​ಗಳು ಸಂಗಮೇಶ್ ಅವರನ್ನ ಒಳಗೆ ಬಿಡಲು ಸುತಾರಾಂ ಒಪ್ಪಲಿಲ್ಲ. ಸಿದ್ದರಾಮಯ್ಯ ಮಾಡಿಕೊಂಡ ಮನವಿಗೂ ಮಾರ್ಷಲ್​ಗಳು ಸ್ಪಂದಿಸಲಿಲ್ಲ. ಸಂಗಮೇಶ್ ಅವರು ಲಾಂಜ್​ನಲ್ಲಿದ್ದುಕೊಂಡೇ ಟಿವಿ ಮೂಲದ ಸದನದೊಳಗಿನ ದೃಶ್ಯಗಳನ್ನ ವೀಕ್ಷಿಸಬೇಕಾಯಿತು.

  ಇದನ್ನೂ ಓದಿ: Udupi: 10 ಸಾವಿರ ಉಚಿತ ಹೆರಿಗೆ ಮಾಡಿಸಿದ ಉಡುಪಿಯ ಕೂಸಮ್ಮ ಶಂಭು ಶೆಟ್ಟಿ ಆಸ್ಪತ್ರೆ!

  ಸಂಗಮೇಶ್ ಅವರು ತಮ್ಮ ಕುಟುಂಬದವರ ವಿರುದ್ಧ ಸುಳ್ಳು ಕೇಸ್​ಗಳನ್ನ ಹಾಕಿಸಿ ರಾಜಕೀಯವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿ ನಿನ್ನೆ ಸದನದ ಒಳಗೆ ತಮ್ಮ ಶರ್ಟ್ ಕಳಚಿ ಪ್ರತಿಭಟನೆ ವ್ಯಕ್ತಪಡಿಸಿದ್ದರು. ಈ ಘಟನೆಯನ್ನು ಸ್ಪೀಕರ್ ಕಾಗೇರಿ ಗಂಭೀರವಾಗಿ ಪರಿಗಣಿಸಿ ಸಂಗಮೇಶ್ ಅವರನ್ನ ಒಂದು ವಾರ ಕಾಲ ಸದನದ ಕಲಾಪದಿಂದ ನಿಷೇಧಿಸಿದ್ದರು. ಈ ಬಗ್ಗೆ ಇಂದು ಪ್ರತಿಕ್ರಿಯಿಸಿದ ಸಚಿವ ಬೊಮ್ಮಾಯಿ, ತನಗೆ ಸಂಗಮೇಶ್ ಅವರು ಸದನದಲ್ಲಿ ನೋಟೀಸ್ ಕೊಟ್ಟಿದ್ದರು. ಅದನ್ನು ಚರ್ಚೆ ಮಾಡಲು ಅವಕಾಶ ಇತ್ತು. ಅದು ಬಿಟ್ಟು ಅವರು ಶರ್ಟ್ ಕಳಚಿ ಅಸಭ್ಯವಾಗಿ ವರ್ತಿಸಿದ್ದು ಸರಿಯಲ್ಲ. ಕಾಂಗ್ರೆಸ್ ಸದಸ್ಯರು ಇದನ್ನು ಸಮರ್ಥನೆ ಮಾಡುತ್ತಿರುವುದೂ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆದರೆ,

  ಇಷ್ಟೆಲ್ಲಾ ಗಲಾಟೆಗಳ ಮಧ್ಯೆ ಜೆಡಿಎಸ್ ಸದಸ್ಯರು ನಿನ್ನೆಯಂತೆಯೇ ಇಂದೂ ಸಹ ತಟಸ್ಥವಾಗಿದ್ದರು. ಮತ್ತೊಂದು ಕುತೂಹಲವೆಂದರೆ ಜಾರಕಿಹೊಳಿ ಕುಟುಂಬದ ಮೂವರು ಸಹೋದರರು ಎರಡನೇ ದಿನದ ಕಲಾಪಕ್ಕೂ ಗೈರಾಗಿದ್ದರು. ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರು ಇಂದು ಸದನಕ್ಕೆ ಬರಲಿಲ್ಲ. ಇದೇ ವೇಳೆ, ಕಾಂಗ್ರೆಸ್ ಸದಸ್ಯರು ಸಂಗಮೇಶ್ ವಿಚಾರವನ್ನು ಇಟ್ಟುಕೊಂಡು ಶಿವಮೊಗ್ಗದಲ್ಲಿ ಬೃಹತ್ ಹೋರಾಟ ನಡೆಸುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ. ಸಂಗಮೇಶ್ ಮತ್ತವರ ಕುಟುಂಬದ ಮೇಲೆ ದಾಖಲಾಗಿರುವ ಸುಳ್ಳು ಪ್ರಕರಣಗಳನ್ನ ಹಿಂಪಡೆಯದಿದ್ದರೆ ಶಿವಮೊಗ್ಗದ ಎಸ್​ಪಿ ಕಚೇರಿ ಮುಂದೆ ಧರಣಿ ಮಾಡುತ್ತೇವೆ ಎಂದು ಕೈ ಸದಸ್ಯರು ವಾರ್ನಿಂಗ್ ನೀಡಿದ್ಧಾರೆ.
  Published by:Vijayasarthy SN
  First published: