ವಿಧಾನಮಂಡಲ ಅಧಿವೇಶನ ಪ್ರಾರಂಭ; ರಾಜ್ಯಪಾಲರ ಭಾಷಣದ ಹೈಲೈಟ್ಸ್

ರಾಜ್ಯ ವಿಧಾನ ಮಂಡಲ ಅಧಿವೇಶನ ಇಂದು ಪ್ರಾರಂಭವಾಗಿದ್ದು ಒಂದು ವಾರ ಕಾಲ ಫೆ. 5ರವರೆಗೆ ನಡೆಯಲಿದೆ. ಅಧಿವೇಶನದಲ್ಲಿ ಭಾಷಣ ಮಾಡಿದ ರಾಜ್ಯಪಾಲರು ರಾಜ್ಯ ಸರ್ಕಾರದ ಸಾಧನೆ, ಯೋಜನೆಗಳ ಮಾಹಿತಿ ನೀಡಿದ್ಧಾರೆ.

ಸಾಂದರ್ಭಿಕ ಚಿತ್ರ (ರಾಜ್ಯ ಅಧಿವೇಶನ).

ಸಾಂದರ್ಭಿಕ ಚಿತ್ರ (ರಾಜ್ಯ ಅಧಿವೇಶನ).

  • Share this:
ಬೆಂಗಳೂರು(ಜ. 28): ಇಂದಿನಿಂದ ಏಳು ದಿನಗಳ ಕಾಲ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಅಧಿವೇಶನ ಪ್ರಾರಂಭವಾಯಿತು. ಫೆ. 5ರವರೆಗೆ ನಡೆಯುವ ಈ ಅಧಿವೇಶನದಲ್ಲಿ ತೀವ್ರ ರಾಜಕೀಯ ಜಟಾಪಟಿ ನಡೆಯುವುದು ನಿಶ್ಚಿತವಾಗಿದೆ. ಈ ಮಧ್ಯೆ 11 ಮಸೂದೆಗಳು ಮಂಡನೆಗೆ ಸಿದ್ಧವಾಗಿವೆ. ಇವುಗಳ ಪೈಕಿ 2-3 ಮಸೂದೆಗಳ ಸುಗ್ರೀವಾಜ್ಞೆ ಕೂಡ ಆಗಲಿದೆ. ವಿಧಾನಪರಿಷತ್​ನಲ್ಲಿ ಸಭಾಪತಿ ಸ್ಥಾನಕ್ಕಾಗಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮಧ್ಯೆ ಒಪ್ಪಂದ ಆಗಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಅಧಿವೇಶನದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ನಡೆಯುವ ಸಾಧ್ಯತೆಯೇ ಹೆಚ್ಚು.

ಸಭಾಪತಿ ಸ್ಥಾನವನ್ನು ಜೆಡಿಎಸ್​ಗೆ ಬಿಜೆಪಿ ಬಿಟ್ಟುಕೊಟ್ಟಿದೆ. ಬಸವರಾಜ ಹೊರಟ್ಟಿ ಅವರು ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್​ನಿಂದ ಈ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಹೊರಟ್ಟಿ ಅವರು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಉಪಸಭಾಪತಿ ಸ್ಥಾನಕ್ಕೆ ಎಂ.ಕೆ. ಪ್ರಾಣೇಶ್ ಅವರು ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಸಂಖ್ಯೆ ಇಲ್ಲದಿದ್ದರೂ ಉಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷ ಕೆ.ಸಿ. ಕೊಂಡಯ್ಯ ಅವರನ್ನ ಕಣಕ್ಕಿಳಿಸಿದೆ. ಬಿಜೆಪಿ ಪಕ್ಷದ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ ನೀಡುತ್ತಿರುವುದು ಜಗಜ್ಜಾಹೀರಾಗಲೀ ಎಂಬುದು ಕೊಂಡಯ್ಯ ಅವರನ್ನ ಕಣಕ್ಕಿಳಿಸುತ್ತಿರುವುದರ ಹಿಂದಿನ ತಂತ್ರ ಎಂದು ಬಣ್ಣಿಸಲಾಗುತ್ತಿದೆ.

ಇದನ್ನೂ ಓದಿ: ಜೆಡಿಎಸ್​​ಗೆ ಮೇಲ್ಮನೆ ಸಭಾಪತಿ ಸ್ಥಾನ; ಉಪಸಭಾಪತಿ ಸ್ಥಾನಕ್ಕೆ ಬಿಜೆಪಿ, ಕಾಂಗ್ರೆಸ್ ಸ್ಪರ್ಧೆ

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಇಂದು ವಿಧಾನಮಂಡಲ ಅಧಿವೇಶನವನ್ನು ರಾಜ್ಯಪಾಲ ವಜುಭಾಯ್ ವಾಲಾ ಉದ್ಘಾಟನೆ ಮಾಡಿ ನಂತರ ಭಾಷಣ ಮಾಡಿದರು. ರಾಜ್ಯ ಸರ್ಕಾರದ ವಿವಿಧ ಯೋಜನೆ, ಸಾಧನೆಗಳ ವಿವರ ಬಿಚ್ಚಿಟ್ಟರು. ಅವರ ಭಾಷಣದ ಮುಖ್ಯಾಂಶಗಳು ಈ ಕೆಳಕಂಡಂತಿವೆ:

* ನನ್ನ ಸರ್ಕಾರವು, ರಾಜ್ಯದಲ್ಲಿ ಎಲ್ಲಾ ಇಲಾಖೆಗಳಿಗೆ ಸಂಬಂಧಿಸಿದಂತೆ, ಸಮಗ್ರ ಹಣಕಾಸು ನಿರ್ವಹಣೆ ವ್ಯವಸ್ಥೆ ಅಡಿಯಲ್ಲಿ ನಾಗರೀಕರು ಸರ್ಕಾರಕ್ಕೆ ಆನ್ ಲೈನ್ ಮೂಲಕ ತೆರಿಗೆ ಪಾವತಿಸಬಹುದಾಗಿದೆ.

* ಸಮಗ್ರ ಹಣಕಾಸು ನಿರ್ವಹಣೆ ವ್ಯವಸ್ಥೆ ಅಡಿಯಲ್ಲಿ ನಾಗರಿಕರು ಸರ್ಕಾರಕ್ಕೆ ಆನ್​ಲೈನ್ ಮೂಲಕವೇ ತೆರಿಗೆ ಪಾವತಿಸಲು ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲೂ ರಾಜ್ಯದಲ್ಲಿ ತೆರಿಗೆ ಸಂಗ್ರಹ ಉತ್ತಮವಾಗಿದೆ. ವಾಣಿಜ್ಯ ತೆರಿಗೆಗಳ ಇಲಾಖೆ 30,467 ಕೋಟಿ ರೂ ತೆರಿಗೆ ಸಂಗ್ರಹಿಸಿದೆ. ಅಬಕಾರಿ ಇಲಾಖೆ 16.788 ಕೋಟಿ ರೂ ರಾಜಸ್ವ ಸಂಗ್ರಹಿಸಿದೆ. ಇದರಿಂದ ರಾಜ್ಯದ ಅಭಿವೃದ್ಧಿ ಕಾಮಗಾರಿಗಳು ಸುಗಮವಾಗಿ ಮುಂದುವರೆಸಲು ಅನುಕೂಲವಾಗಿದೆ.

* 9,22,605 ಪ್ರವಾಹ ಪೀಡಿತ ರೈತರ ಅಕೌಂಟ್​ಗಳಿಗೆ 710 ಕೋಟಿ ರೂ ಸಹಾಯ ಧನ ನೀಡಲಾಗಿದೆ.

* ಮೂಲಭೂತ ಸೌಕರ್ಯಗಳ ದುರಸ್ತಿ ಕಾರ್ಯಗಳಿಗೆ 423 ಕೋಟಿ ಬಿಡುಗಡೆ

* ಒಟ್ಟಾರೆ ಪ್ರವಾಹ ಪರಿಹಾರಕ್ಕಾಗಿ 1,345 ಕೋಟಿ‌ ರೂ ಬಿಡುಗಡೆ

* ಪೊಲೀಸ್ ಗೃಹ -2025 ಯೋಜನೆ ಅಡಿ ಮುಂದಿನ 5 ವರ್ಷಗಳಲ್ಲಿ 2,000 ಕೋಟಿ ರೂ ವೆಚ್ಚದಲ್ಲಿ 10,000 ಪೊಲೀಸ್ ವಸತಿ ಗೃಹ ನಿರ್ಮಿಸಲು ಅನುಮೋದನೆ

* ಸಂತ್ರಸ್ತರ ಕರೆಗಳಿಗೆ ತುರ್ತು ಪ್ರತಿಸ್ಪಂದನೆ ನೀಡಲು 80 ಕೋಟಿ ರೂಪಾಯಿ ವೆಚ್ಚದ ಸೆಂಟ್ರಲ್ ಕಮಾಂಡ್ ಸೆಂಟರ್ ನಿರ್ಮಾಣಕ್ಕೆ ಅನುಮೋದನೆ

* ಮಾದಕ ವಸ್ತುಗಳ ವಿರುದ್ಧ ಸರ್ಕಾರ ಯುದ್ಧ ಘೋಷಿಸಿದೆ

ಇದನ್ನೂ ಓದಿ: ಖಾಸಗಿ ಶಾಲೆಗಳ ಶುಲ್ಕ ನಿಗದಿ ವಿಚಾರ; ಜ. 31ರಂದು ಪ್ರತಿಭಟನೆಗೆ ಪೋಷಕರ ನಿರ್ಧಾರ

* ಅನೈತಿಕ ವ್ಯವಹಾರ ಮತ್ತು ಮಾದಕ ವಸ್ತುಗಳ ಸಾಗಣೆ, ಮತ್ತು ಸೇವನೆಯನ್ನು ತಡೆಯುವುದಕ್ಕಾಗಿ ಹಾಗು ನಿಯಂತ್ರಿಸುವುದಕ್ಕಾಗಿ ಎಲ್ಲಾ ಕಾನೂನು ಜಾರಿ ಏಜೆನ್ಸಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸುತ್ತಿವೆ

* ಒಟ್ಡು 4066 ಪ್ರಕರಣಗಳು, ದಾಖಲಾಗಿದ್ದು, 34 ಕೋಟಿ ರೂ ಮೊತ್ತದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ

* ಕರ್ನಾಟಕ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯು 1567 ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ

* 2051 ಜನರನ್ನು ಹಾಗೂ 482 ಕೋಟಿ ರೂಪಾಯಿ ಬೆಲೆ ಬಾಳುವ ಸಾರ್ವಜನಿಕ ಹಾಗೂ ಖಾಸಗಿ ಸ್ವತ್ತುಗಳನ್ನು ರಕ್ಚಿಸಿದೆ

* 25 ಕೋಟಿ ರೂಪಾಯಿ ವೆಚ್ಚದ 90 ಮೀಟರ್ ಎತ್ತರದ ಏರಿಯಲ್ ಲ್ಯಾಡರ್ ಪ್ಲಾಟ್​ಫಾರ್ಮ್ ಖರೀದಿಗೆ ಅನುಮೋದನೆ

* ವಿಪತ್ತು ನಿರ್ವಹಣೆ ಮತ್ತು ರಕ್ಷಣಾ ಕಾರ್ಯಚರಣೆಗಳಿಗಾಗಿ ಅತ್ಯಾಧುನಿಕ ರಕ್ಷಣಾ ಸಾಧನ ಸಲಕರೆಗಾಗಿ ಸರ್ಕಾರವು 30 ಕೋಟಿ ರೂಪಾಯಿ ಮಂಜೂರು ಮಾಡಿದೆ

* 25 ಕೋಟಿ ರೂ ವೆಚ್ಚದಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪಿಸಲು ನಿರ್ಧಾರ

* ಎಸ್ ನಿಜಲಿಂಗಪ್ಪನರವ ಜನ್ಮಸ್ಥಳ ಅಭಿವೃದ್ಧಿಗೆ ಯೋಜನೆ

ವರದಿ: ಕೃಷ್ಣ ಜಿ.ವಿ. 
Published by:Vijayasarthy SN
First published: