Karnataka Assembly Session: ವಿಧಾನಸಭಾ ಅಧಿವೇಶನ; ಕಂದಾಯ ಸಚಿವ ಆರ್​. ಅಶೋಕ್ ವಿರುದ್ಧ ಬಿಜೆಪಿ ಶಾಸಕರಿಂದಲೇ ಅಸಮಾಧಾನ

Karnataka Assembly Session Highlights: ಕಂದಾಯ ಗ್ರಾಮಗಳನ್ನು ಗುರುತಿಸಿ ಆದೇಶ ಕೊಡುವಲ್ಲಿ ಇಲಾಖೆ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಬಹುತೇಕ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕಂದಾಯ ಗ್ರಾಮಗಳಿಗೆ ಮಾನ್ಯತೆ ಕೊಡುತ್ತಿಲ್ಲ ಎಂದು ಆರ್​. ಅಶೋಕ್ ವಿರುದ್ಧ ತೀರ್ಥಹಳ್ಳಿಯ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಆರೋಪಿಸಿದರು. ಅದಕ್ಕೆ ಸ್ಪೀಕರ್ ಕಾಗೇರಿ ಕೂಡ ಧ್ವನಿಗೂಡಿಸಿದರು.

ಸಚಿವ ಆರ್. ಅಶೋಕ್

ಸಚಿವ ಆರ್. ಅಶೋಕ್

  • Share this:
ಬೆಂಗಳೂರು (ಡಿ. 7): ಇಂದಿನಿಂದ ರಾಜ್ಯ ವಿಧಾನಸಭಾ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಕಾಂಗ್ರೆಸ್, ಜೆಡಿಎಸ್ ಶಾಸಕರು ಆಡಳಿತ ಪಕ್ಷದ ಸಚಿವರ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಇಂದು ಸದನದಲ್ಲಿ ವಿಪಕ್ಷದ ಶಾಸಕರು ಕಂದಾಯ ಸಚಿವ ಆರ್. ಅಶೋಕ್ ಕಾರ್ಯವೈಖರಿ ವಿರುದ್ಧ ಆಕ್ರೋಶ ಹೊರಹಾಕಿದಾಗ ಬಿಜೆಪಿಯ ಯಾವ ಸಚಿವ, ಶಾಸಕರೂ ಅವರ ಬೆಂಬಲಕ್ಕೆ ಬರಲಿಲ್ಲ. ಜೊತೆಗೆ, ಆಡಳಿತ ಪಕ್ಷದವರು ಕೂಡ ಆರ್​. ಅಶೋಕ್ ವಿರುದ್ಧ ಅಸಮಾಧಾನ ಹೊರಹಾಕಿದ ಘಟನೆ ಸದನದಲ್ಲಿ ನಡೆಯಿತು.

ಕಂದಾಯ ಗ್ರಾಮಗಳನ್ನು ಗುರುತಿಸಿ ಹಕ್ಕು ಪತ್ರ ನೀಡುವಲ್ಲಿ ವಿಫಲವಾಗಿರುವ ವಿಚಾರವಾಗಿ ಆಡಳಿತ ಪಕ್ಷದ ಶಾಸಕರೇ ಸದನದಲ್ಲಿ ಕಂದಾಯ ಸಚಿವ ಆರ್​. ಅಶೋಕ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕಂದಾಯ ಇಲಾಖೆಯ ಕಾರ್ಯವೈಖರಿಗೆ ಆಡಳಿತ ಪಕ್ಷದ ಶಾಸಕರು ಬೇಸರ ಹೊರ ಹಾಕಿದರು. ಕಂದಾಯ ಗ್ರಾಮಗಳನ್ನು ಗುರುತಿಸಿ ಆದೇಶ ಕೊಡುವಲ್ಲಿ ಇಲಾಖೆ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಬಹುತೇಕ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕಂದಾಯ ಗ್ರಾಮಗಳಿಗೆ ಮಾನ್ಯತೆ ಕೊಡುತ್ತಿಲ್ಲ. ಇಂತಹ ಕಾನೂನು ಇರೋದೇ ಜಿಲ್ಲಾಧಿಕಾರಿಗಳಿಗೆ ಗೊತ್ತಿಲ್ಲ ಎಂದು ತೀರ್ಥಹಳ್ಳಿಯ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಆರೋಪಿಸಿದರು.

ಇದನ್ನೂ ಓದಿ: ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡೇ ಮಾಡ್ತೀವಿ; ಸಿದ್ದರಾಮಯ್ಯಗೆ ಸಚಿವ ಕೆಎಸ್​ ಈಶ್ವರಪ್ಪ ಸವಾಲು

ಈ ವೇಳೆ ಆರಗ ಜ್ಞಾನೇಂದ್ರ ಅವರ ಪರವಾಗಿ ನಿಂತ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕೆಳ ಹಂತದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ಕೊಡಬೇಕು. ಅವರಿಂದ ಸಮರ್ಪಕ ವರದಿ ಪಡೆದುಕೊಂಡು ಮಾಹಿತಿ ಕೊಡಿ ಎಂದು ಕಂದಾಯ ಸಚಿವ ಆರ್​. ಅಶೋಕ್ ಅವರಿಗೆ ಸೂಚನೆ ಕೊಟ್ಟರು. ಕಂದಾಯ ಗ್ರಾಮಗಳನ್ನು ಗುರುತಿಸಿ ಹಕ್ಕುಪತ್ರ ಕೊಡುವಲ್ಲಿ ವಿಫಲವಾದ ಬಗ್ಗೆ ಸ್ಪೀಕರ್ ಸೂಚನೆಯನ್ನು ಪಾಲಿಸುವುದಾಗಿ ಕಂದಾಯ ಸಚಿವ ಅಶೋಕ್ ಭರವಸೆ ನೀಡಿದರು.

ವಿಧಾನಸಭಾ ಕಲಾಪದ ವೇಳೆ, ಪಹಣಿ ಎಂಟ್ರಿ ಸಾಫ್ಟ್​ವೇರ್‌ ಕಳೆದ ಒಂದು ವರ್ಷದಿಂದ ಹಾಳಾಗಿದೆ ಸರಿ ಆಗೋದು ಯಾವಾಗ ಎಂದು ಶೃಂಗೇರಿ ಶಾಸಕ ರಾಜೇಗೌಡ ಪ್ರಶ್ನೆ ಕೇಳಿದರು. ಅದಕ್ಕೆ ಉತ್ತರಿಸಿದ ಕಂದಾಯ ಸಚಿವ ಆರ್. ಅಶೋಕ್ ಆದಷ್ಟು ಬೇಗ ಸರಿಪಡಿಸುವ ಭರವಸೆ ನೀಡಿದರು. ಆದರೆ, ಆರ್​. ಅಶೋಕ್ ಉತ್ತರಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದರು. ನಿಮ್ಮ ಅಧಿಕಾರಿಗಳು ಹೇಳಿದ್ದನ್ನು ಇಲ್ಲಿ ತಂದು ಓದಿದರೆ ಆಗುವುದಿಲ್ಲ. ನೀವು ಬಹಳಷ್ಟು ಅನುಭವ ಇರುವ ಸಚಿವ. ರೈತರು ತುಂಬಾ ಸಮಸ್ಯೆ ಅನುಭವಿಸುತ್ತಿದ್ದಾರೆ. ಪ್ರೈವೇಟ್ ಏಜೆನ್ಸಿಯವರು ಸರ್ಕಾರದ ಮರ್ಯಾದೆ ಹಾಳು ಮಾಡಿ ಬಿಡುತ್ತಾರೆ ಎಂದು ಕಂದಾಯ ಸಚಿವರ ಮೇಲೆ ಸ್ಪೀಕರ್ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಜೊತೆಗೂಡಿ ಮಲೆನಾಡು ಭಾಗದ ಶಾಸಕರು ಕೂಡ ಸಚಿವ ಆರ್​. ಅಶೋಕ್ ವಿರುದ್ಧ ವಾಗ್ದಾಳಿ ನಡೆಸಿದರು. ಈ ಬಾರಿಯೂ ಉಳಿದ ಸಚಿವರು ಆರ್. ಅಶೋಕ್ ನೆರವಿಗೆ ಬರಲಿಲ್ಲ.

ವಿಧಾನಸಭಾ ಕಲಾಪದಲ್ಲಿ 9 ಸಚಿವರ ಪೈಕಿ 3 ಸಚಿವರು ಮಾತ್ರ ಇಂದು ಹಾಜರಿದ್ದರು. ಸಚಿವರ ಗೈರು ಹಾಜರಾತಿ ಬಗ್ಗೆ ಸ್ಪೀಕರ್ ಕಾಗೇರಿ ಪ್ರಸ್ತಾಪ ಮಾಡಿದರು. ಸದನದಲ್ಲಿ ಕೇವಲ ಮೂರೇ ಸಚಿವರು ಇದ್ದಾರೆ ಎಂದು ಸಚಿವರ ಗೈರಿಗೆ ಸ್ಪೀಕರ್ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದರು.
Published by:Sushma Chakre
First published: