ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಈ ಒಳ್ಳೆಯ ಬಜೆಟ್ ಬಗ್ಗೆ ಒಂದೊಳ್ಳೆಯ ಮಾತಾಡಲಿಲ್ಲ, ಸಮತೋಲನ ಚಿಂತನೆಯಿಂದ ಬಜೆಟ್ ನೋಡಿ. ವಾಸ್ತವಿಕ ಅಂಶದ ಬಗ್ಗೆ ಹೇಳುತ್ತಾರೆ ಅನ್ಕೊಂಡಿದ್ದೆ. ಆದರೆ ಸಿದ್ದರಾಮಯ್ಯ ಹಾಗೆ ಹೇಳಲಿಲ್ಲ, ಇದು ನನಗೆ ನೋವು ತಂದಿದೆ. ಬಜೆಟ್‌ನಲ್ಲಿ ದೂರಗಾಮಿ ಆಲೋಚನೆ ಇದೆ. ಆರ್ಥಿಕ ಅಭಿವೃದ್ಧಿ, ಆರ್ಥಿಕ ಉತ್ತೇಜನಾ ಕ್ರಮಗಳಿವೆ ಅಂತ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಸದನದಲ್ಲಿ ಕೊನೆಯ ಭಾಷಣ ಎಂದು ಬಿಎಸ್ವೈ ಭಾವುಕ
ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಮಾಜಿ ಸಿಎಂ ಬಿಎಸ್ವೈ ಅವರು, ಸಿಎಂ ಬೊಮ್ಮಾಯಿ ಬಜೆಟ್ ಸ್ವಾಗತಿಸುತ್ತೇನೆ. ಉತ್ತಮ ಆಯವ್ಯಯ ಮಂಡಿಸಿದ್ದಾರೆ. ಕೇವಲ ರಾಜಕೀಯಕ್ಕಾಗಿ ಮಾತನಾಡಬಾರದು, ಯಾರು ಎಷ್ಟು ಬೇಕಾದರೂ ಮಾತನಾಡಬಹುದು. ಕೋವಿಡ್, ಅತಿವೃಷ್ಠಿಯಿಂದ ಸಂಕಷ್ಟ ಅನುಭವಿಸಿದ್ದೇವೆ. ಅದನ್ನ ಗಮನದಲ್ಲಿಟ್ಟುಕೊಂಡೆ ಆಯವ್ಯಯ ಮಂಡಿಸಿದ್ದೇವೆ.
ನಾನು 7 ಬಾರಿ ಬಜೆಟ್ ಮಂಡಿಸಿದವನು. ರಾಜ್ಯದ ಹಣಕಾಸು ಹೇಗಿರಬೇಕು., ಸಂಪನ್ಮೂಲ ಕ್ರೋಢೀಕರಣ ಹೇಗಿರಬೇಕು. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಆಯವ್ಯಯವನ್ನು ಮಂಡಿಸಬೇಕಾಗುತ್ತದೆ. ಅದನ್ನ ಗಮನಿಸಿ ಉತ್ತಮ ಬಜೆಟ್ ಮಂಡಿಸಲಾಗಿದೆ. ರಾಜ್ಯದ ಅರ್ಥಿಕ ಪರಿಸ್ಥಿತಿ ಉತ್ತಮ ಇಡಲಾಗಿದೆ ಎಂದು ವಿವರಿಸಿದರು.
ಇದನ್ನೂ ಓದಿ: CT Ravi: ಮಾಂಸ ತಿಂದು ದೇಗುಲಕ್ಕೆ ಹೋಗಿದ್ರಾ? ಸಿ ಟಿ ರವಿ ಫಸ್ಟ್ ರಿಯಾಕ್ಷನ್, ಹೇಳಿದ್ದೇನು ಗೊತ್ತಾ?
ಭ್ರಮನಿರಸನ ಆಗುವ ಪರಿಸ್ಥಿತಿ ಬರುತ್ತದೆ
ಸಿದ್ದರಾಮಯ್ಯ ಈ ಒಳ್ಳೆಯ ಬಜೆಟ್ ಬಗ್ಗೆ ಕೆಲವಾದರೂ ಒಳ್ಳೆಯ ಮಾತಾಡಲಿಲ್ಲ. ಸಮತೋಲನ ಚಿಂತನೆಯಿಂದ ಬಜೆಟ್ ನೋಡಿ ವಾಸ್ತವಿಕ ಅಂಶದ ಬಗ್ಗೆ ಹೇಳುತ್ತಾರೆ ಎಂದುಕೊಂಡಿದ್ದೆ. ಆದರೆ ಸಿದ್ದರಾಮಯ್ಯ ಹಾಗೆ ಹೇಳಲಿಲ್ಲ, ಇದು ನನಗೆ ನೋವು ತಂದಿದೆ. ಬಜೆಟ್‌ನಲ್ಲಿ ದೂರಗಾಮಿ ಆಲೋಚನೆ ಇದೆ. ಆರ್ಥಿಕ ಅಭಿವೃದ್ಧಿ, ಆರ್ಥಿಕ ಉತ್ತೇಜನಾ ಕ್ರಮಗಳಿವೆ ಎಂದರು.
ವಿಶಾಲ ಮನೋಭಾವದಿಂದ ಈ ಬಜೆಟ್ ನ್ನು ವಿರೋಧ ಪಕ್ಷದ ನಾಯಕರು ಒಪ್ಪಿಕೊಳ್ಳಬೇಕಿತ್ತು. ಕೇವಲ ವಿರೋಧಕ್ಕೆ ಆಡುವ ಮಾತುಗಳಿಂದ ಈ ರಾಜ್ಯದ ಜನರು ಧೃತಿಗೆಡುವುದಿಲ್ಲ. ಆರ್ ಎಸ್ ಎಸ್ ವಿಚಾರಗಳನ್ನು ಟೀಕೆ ಮಾಡಿದರೆ ನಾಯಕರು ಆಗಬೇಕು ಅಂತ ಕೆಲವರು ಮಾತನಾಡುತ್ತಾರೆ. ಅಂತವರಿಗೆ ಸದ್ಯದಲ್ಲೇ ಭ್ರಮನಿರಸನ ಆಗುವ ಪರಿಸ್ಥಿತಿ ಬರುತ್ತದೆ ಎಂದು ಟಾಂಗ್ ನೀಡಿದರು.
ನಾನು ಪ್ರಧಾನಿಗಳಿಗೆ ಋಣಿಯಾಗಿರುತ್ತೇನೆ
ಬಿಜೆಪಿ ಯಡಿಯೂರಪ್ಪರನ್ನು ಕಡೆಗಣಿಸಿದೆ ಎಂತೆಲ್ಲ ಟೀಕೆ ಟಿಪ್ಪಣಿ ಗಳನ್ನು ಮಾಡುತ್ತಿದ್ದಾರೆ. ಯಡಿಯೂರಪ್ಪಗೆ ಕೊಟ್ಟ ಗೌರವ ಸ್ಥಾನಮಾನಕ್ಕೆ ನಾನು ಪ್ರಧಾನಿಗಳಿಗೆ ಋಣಿಯಾಗಿರುತ್ತೇನೆ. ಪ್ರಧಾನಿ ಮೋದಿ ನನ್ನನ್ನು ಗೌರವದಿಂದ ನಡೆಸಿಕೊಂಡಿದ್ದಾರೆ. ಪಕ್ಷ ಅವಕಾಶ ಮಾಡಿಕೊಟ್ಟಿದ್ದರಿಂದ ನಾನು ನಾಲ್ಕು ಬಾರಿ ಸಿಎಂ ಆಗಿದ್ದೇನೆ. ನನಗೆ ಸಿಕ್ಕ ಅವಕಾಶ ಬೇರೆ ಯಾರಿಗೂ ಸಿಕ್ಕಿಲ್ಲ. ಯಡಿಯೂರಪ್ಪ ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ. ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ ಅಷ್ಟೇ ಸತ್ಯ ಮುಂದೆ ಬಿಜೆಪಿ ಸರ್ಕಾರ ಬರೋದು ಅಷ್ಟೇ ಸತ್ಯ.
ನಾಡಿದ್ದಿಂದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರವಾಸ ಮಾಡುತ್ತೇನೆ. ಅಧಿವೇಶನ ಮುಗಿದ ಬಳಿಕ ಬಿಜೆಪಿ ಯಾವ ರೀತಿ ಪರಿವರ್ತನೆ ಆಗುತ್ತೆ ಅಂತಾ ಆ ಕಡೆ ಇರುವವರು ನೋಡಿವಿರಂತೆ. ಬಿಜೆಪಿ ಯವರು ಯಾವುದೇ ಸಂಕೋಚ ಪಡುವ ಅವಶ್ಯಕತೆ ಇಲ್ಲ. ಬಜೆಟ್ ನಲ್ಲಿ ಕೊಟ್ಟ ಸವಲತ್ತು ಗಳ ಬಗ್ಗೆ ಜನರ ಮನವರಿಕೆ ಮಾಡಿಕೊಡಿ. ಹಿಂದೆಂದೂ ಯಾರು ಕೊಟ್ಟಿರದ ಸವಲತ್ತನ್ನು ಬಿಜೆಪಿ ಕೊಟ್ಟಿದೆ. ನೂರಕ್ಕೆ ನೂರರಷ್ಟು ಬಿಜೆಪಿ ಅಧಿಕಾರಕ್ಕೆ ಬರುವುದು ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯಗೆ ಒಂದು ಪ್ರಶ್ನೆ ಕೇಳುತ್ತೇನೆ
ಸಿದ್ದರಾಮಯ್ಯ ಅವರು ಗೆದ್ದು ಬಂತ ಕ್ಷೇತ್ರದಿಂದ ಮತ್ತೆ ನಿಂತುಕೊಳ್ಳಲ್ಲ ಅಂತಿದ್ದಾರೆ. ಯಾಕೆ ನೀವು ಆ ಕ್ಷೇತ್ರ ಅಭಿವೃದ್ಧಿ ಮಾಡಿಲ್ವಾ? ಯಾಕೆ ನಿಮಗೆ ಸೋಲುವ ಭಯವೇ? ನೀವು ಮಾಡಿರುವ ಕೆಲಸಕ್ಕೆ ಅಲ್ಲೆ ಬಂದು ಸ್ಪರ್ಧೆ ಮಾಡಿ ಗೆದ್ದು ಬರಬೇಕು. ಅದು ಬಿಟ್ಡು ಎಲ್ಲೋ ಓಡಿ ಹೋಗಿ ನಿಂತು ಕೊಳ್ಳಬೇಡಿ ಎಂದು ಬಜೆಟ್ ಮೇಲಿನ ಚರ್ಚೆ ವೇಳೆಯೇ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರು.
ಅಲ್ಲದೆ, ಯಾವ ಬಾದಾಮಿ ಕ್ಷೇತ್ರದಿಂದ ನಿಂತು ಗೆದ್ದಿದ್ದಾರೋ, ಅಲ್ಲೇ ಬಂದು ಸ್ಪರ್ಧೆ ಮಾಡಬೇಕು. ಅವರಿಗೆ ಆತ್ಮವಿಶ್ವಾಸ ಇಲ್ಲದೆ ಇರುವುದರಿಂದ ಕ್ಷೇತ್ರ ಹುಡುಕಾಟ ನಡೆಸುತ್ತಿದ್ದಾರೆ. ಸಿದ್ದರಾಮಯ್ಯನವರೇ ನೀವು ಗೆದ್ದ ಕ್ಷೇತ್ರದಲ್ಲಿ ಮತ್ತೆ ಚುನಾವಣೆಗೆ ನಿಲ್ಲಲು ಧೈರ್ಯ ಇಲ್ಲ ಅಂತಾದರೆ ಜನ ಹೇಗೆ ನಿಮ್ಮನ್ನು ನಂಬುತ್ತಾರೆ? ನೀವು ಗೆದ್ದ ಕ್ಷೇತ್ರದಲ್ಲೇ ಮತ್ತೆ ಸ್ಫರ್ಧೆ ಮಾಡಿದರೆ ಜನರ ಋಣ ತೀರಿಸಿದಂತಾಗುತ್ತದೆ ಎಂದು ಸಿದ್ದರಾಮಯ್ಯ ಅವರಿಗೆ ಕಿವಿಮಾತು ಹೇಳುತ್ತೇನೆ.
ಯಾಕೆ ಕೊನೆ ಚುನಾವಣೆ ಅಂತೀರಾ?
ದೇವರು ಶಕ್ತಿ ಕೊಟ್ಟರೆ ಈ ಚುನಾವಣೆ ಅಲ್ಲ, ಮುಂದಿನ ಚುನಾವಣೆಯಲ್ಲೂ ಪಕ್ಷ ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇನೆ. ಈ ಅಧಿವೇಶನ ನನಗೆ ಲಾಸ್ಟ್, ಮತ್ತೆ ಅಧಿವೇಶನಕ್ಕೆ ಬರಲ್ಲ, ಯಾಕೆಂದರೆ ಈ ಚುನಾವಣಾ ಲಾಸ್ಟ್ ಅಂತಾ ಹೇಳಿದ್ದೇನೆ. ಇದೊಂದು ವಿದಾಯದ ಭಾಷಣ. ನಾನು ಮತ್ತೆ ಸದನಕ್ಕೆ ಬರಲ್ಲ, ಕೊನೆಯ ಅಧಿವೇಶನ ಎಂದು ಹೇಳಿದರು.
ಈ ವೇಳೆ ವಿರೋಧ ಪಕ್ಷದ ಸದಸ್ಯರಾದ ಶಿವಲಿಂಗೇಗೌಡ, ಪ್ರಿಯಾಂಕಾ ಖರ್ಗೆ ಅವರು, ನೀವು ಮತ್ತೆ ಎಲೆಕ್ಸನ್ ಗೆ ನಿಲ್ಲಬೇಕು. ಯಾಕೆ ಕೊನೆ ಚುನಾವಣೆ ಅಂತೀರಾ? ಯಾಕೆ ನಿಮ್ಮ ಹೈಕಮಾಂಡ್ ನಿಮ್ಮನ್ನು ಎಲೆಕ್ಸನ್ ನಿಲ್ಲೋಕೆ ಬಿಡಲ್ವಾ ಎಂದು ಕಾಲೆಳೆದರು. ಇದೇ ವೇಳೆ ಇವತ್ತೇ ಯಾಕೆ ಕೊನೆಯ ದಿನ ಅಂತೀರಿ, ಮತ್ತೆ ಮಾತಾಡಲು ನಿಮಗೆ ಅವಕಾಶ ಮಾಡಿಕೊಡುತ್ತೇವೆ ನಾಳೆಯೂ ಬನ್ನಿ ಎಂದು ಸ್ಪೀಕರ್ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ