ನಿನ್ನೆಯಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಈಗಾಗಲೇ ಅನೇಕರು ಬಿ ಫಾರಂ ಸಲ್ಲಿಸಿದ್ದಾರೆ. ಈ ನಡುವೆ ಟಿಕೆಟ್ ವಂಚಿತರ ಬಂಡಾಯ ಮೂರತೂ ಪಕ್ಷಗಳಿಗೆ ತಲೆನೋವು ತರಿಸಿದೆ. ಹಾಗಾದ್ರೆ ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಹೇಗಿವೆ? ಈ ಕುರಿತಾದ ಕ್ಷಣ ಕ್ಷಣದ ಮಾಹಿತಿ ಲೈವ್ ಬ್ಲಾಗ್ನಲ್ಲಿ
ತೀವ್ರ ಕುತೂಹಲ ಕೆರಳಿಸಿದ್ದ ಹಾಸನ ಕ್ಷೇತ್ರದಲ್ಲಿ ಭವಾನಿ ರೇವಣ್ಣಗೆ ಟಿಕೆಟ್ ಕೈತಪ್ಪಿದೆ. ಎಚ್‌ಡಿಕೆ ಹೇಳಿದಂತೆ ಸ್ವರೂಪ್‌ಗೆ ಟಿಕೆಟ್ ಸಿಕ್ಕಿದೆ. ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಜೆಡಿಎಸ್ ಎರಡನೇ ಪಟ್ಟಿ ಘೋಷಣೆ ಮಾಡಿದ್ದಾರೆ.
ಬಿಜೆಪಿಯಿಂದ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ಜೆಡಿಎಸ್ ಸೇರ್ಪಡೆಗೆ ಸಿದ್ಧತೆ ನಡೆಸಿದ್ದಾರೆ. ಇಂದು ನೂರಾರು ಸಂಖ್ಯೆಯಲ್ಲಿ ಬೆಂಬಲಿಗರೊಂದಿಗೆ ಜೆಡಿಎಸ್ ಕಚೇರಿಗೆ ಆಗಮಿಸಿದ್ದು, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ. ಜೆಡಿಎಸ್ ಎರಡನೇ ಪಟ್ಟಿಯಲ್ಲಿ ಅವರಿಗೆ ಟಿಕೆಟ್ ಘೋಷಣೆ ಮಾಡುವ ಸಾಧ್ಯತೆ ಇದೆ.
ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಸಂಜೆ ವೇಳೆ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಹೂಗುಚ್ಛ ನೀಡಿ ಹುಟ್ಟುಹಬ್ಬದ ಶುಭಾಶಯ ಕೋರಿದ ಸವದಿ ಬಳಿಕ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಕೆ ಮಾಡಿದರು.
ಕೋಲಾರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ವಿಚಾರವಾಗಿ ನಾಳೆ ಕೋಲಾರ ಕಾಂಗ್ರೆಸ್ ಮುಖಂಡರ ಸಭೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಕರೆದಿದ್ದಾರೆ. ಬೆಂಗಳೂರಿನ ನಿವಾಸದಲ್ಲಿ ಮಧ್ಯಾಹ್ನ 1ಕ್ಕೆ ಸಿದ್ದರಾಮಯ್ಯ ಅವರ ಸಭೆ ಕರೆದಿದ್ದಾರೆ. ಈ ನಡುವೆ ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆಗೆ ಕೋಲಾರ ಕೈ ಮುಖಂಡರು ಹಾಗೂ ಶಾಸಕರು ಪಟ್ಟು ಹಿಡಿದಿದ್ದಾರೆ.
ಬಿಜೆಪಿ ಪಕ್ಷದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಇಂದು ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ವಿವಿಧ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ರಾಜೀನಾಮೆ ಪತ್ರವನ್ನು ಸವದಿ ಸಲ್ಲಿಕೆ ಮಾಡಿದ್ದಾರೆ.
ಅಸಮಾಧಾನಗೊಂಡಿದ್ದ ಸುಳ್ಯ ಶಾಸಕ ಅಂಗಾರರನ್ನು ಸಮಾಧಾನಪಡಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಪತ್ರಿಕಾಗೋಷ್ಠಿ ಮೂಲಕ ಸ್ಪಷ್ಟನೆ ನೀಡಿದ ಎಸ್. ಅಂಗಾರ ಪಕ್ಷದ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತೇನೆ. ನಾನು ಬೇಸರದಲ್ಲಿ ಮತ್ತು ಉದ್ವೇಗದಲ್ಲಿ ಈ ಹಿಂದೆ ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದೆ. ಆ ಮಾತನ್ನು ವಾಪಸ್ಸು ಪಡೆಯುತ್ತೇನೆ. ಮುಂದೆ ಪಕ್ಷದ ಅಭ್ಯರ್ಥಿಯ ಪರವಾಗಿ ಕೆಲಸ ಮಾಡಿ ಗೆಲ್ಲಿಸುವುದು ನನ್ನ ಗುರಿ ಎಂದಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ಗೆ ರಾಜೀನಾಮೆ ಪತ್ರ ಸಲ್ಲಿಸಿದ ಸವದಿ, ಪಕ್ಷದ ವಿವಿಧ ಹುದ್ದೆಗಳಿಗೂ ರಾಜೀನಾಮೆ.
ವರುಣಾದಿಂದಲೇ ನಾನು ಸ್ಪರ್ಧೆ ಮಾಡುತ್ತೇನೆ. ನನಗೆ ಒಂದೇ ಕ್ಷೇತ್ರ ಸಾಕು. ಎರಡು ಕಡೆ ನಾನು ಗಮನ ಕೇಂದ್ರೀಕರಿಸಲು ಸಾಧ್ಯವಿಲ್ಲ. ಅನೇಕ ಕ್ಷೇತ್ರಗಳಿಗೆ ಚುನಾವಣೆ ಪ್ರಚಾರಕ್ಕೆ ಹೋಗಬೇಕಾಗಿದೆ, ನನಗೆ ಕೋಲಾರ ಬೇಡ. ಕೋಲಾರಕ್ಕೆ ಕೊತ್ತನೂರು ಮಂಜುನಾಥ್ ಗೆ ಟಿಕೆಟ್ ಕೊಡಲು ಶಿಫಾರಸು ಮಾಡುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕೆಲ ಕ್ಷಣಗಳಲ್ಲಿ ಜೆಡಿಎಸ್ನ 50 ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ. ಜೆಡಿಎಸ್ ಕಚೇರಿಯಲ್ಲಿ ಜರುಗುತ್ತಿರುವ ಸೇರ್ಪಡೆ ಕಾರ್ಯಕ್ರಮ ನಂತರ ಹೆಚ್ ಡಿ ಕೆ, ರಾಜ್ಯಾಧ್ಯಕ್ಷ ಇಬ್ರಾಹಿಂ ಈ ಪಟ್ಟಿ ಬಿಡುಗಡೆಗೊಳಿಸಲಿದ್ದಾರೆ. ಈ ಮೊದಲು 90 ಕ್ಕೂ ಹೆಚ್ಚು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಇಂದಿನ ಪಟ್ಟಿಯಲ್ಲಿಹೊಸ ನಾಯಕರು ಸೇರಿದಂತೆ ಹಲವರ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ.
ಪ್ರಚಾರಕ್ಕೆ ತೆರಳಿದ್ದ ಹೊನ್ನಾಳಿ ಶಾಸಕ ರೇಣುಕಾಚಾರ್ಯಗೆ ಮಹಿಳೆಯೊಬ್ಬಳು ಕಿವಿಮಾತು ಹೇಳಿದ್ದಾರೆ. ರೇಣುಕಾಚಾರ್ಯ ಬಳಿ ಮಾತನಾಡಿದ ಮಹಿಳೆ ಹೆಣ್ಮಕ್ಕಳಿಗೆ ಸಾಕಷ್ಟು ಒಳ್ಳೇಯ ಕೆಲಸ ಮಾಡಿದ್ದೀರಿ, ಅದಕ್ಕೆ ನಿಮಗೆ ಹೊನ್ನಾಳಿ ಹುಲಿ ಅನ್ನೋದು ಸುಮ್ನೆ ಅನ್ನೋಕೆ ಆಗುತ್ತಾ? ಕೆಲಸ ಮಾಡೀದ್ದೀಯಾ ಮತ್ತೆ ಕೆಲಸ ಮಾಡೋ ಹಾಗೆ ಆಗಬೇಕು. ಹೆಣ್ಮಕ್ಕಳು ನಾವು ನಿಮಗೆ ಓಟ್ ಹಾಕ್ತೀವಿ ಗಂಡಮಕ್ಕಳು ಹಾಕಬೇಕಲ್ಲ ಎಂದಿದ್ದಾರೆ
ರಘು ಆಚಾರ್ ಕೊನೆಗೂ ಜೆಡಿಎಸ್ಗೆ ಸೇರ್ಪಡೆಯಾಗಿದ್ದಾರೆ. ನೂರಾರು ಬೆಂಬಲಿಗರೊಂದಿಗೆ ಜೆಡಿಎಸ್ಗೆ ಸೇರ್ಪಡೆಯಾದ ರಘು ಆಚಾರ್ರನ್ನು ಜೆಡಿಎಸ್ ಬಾವುಟ ನೀಡುವ ಮೂಲಕ ಕುಮಾರಸ್ವಾಮಿ ಸ್ವಾಗತಿಸಿದ್ದಾರೆ.
ಬಿಜೆಪಿ ನಡೆಯಿಂದ ಮುನಿಸಿಕೊಂಡಿರುವ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆ ಮಾತು ಜೋರಾಗಿದೆ. ಆದರೆ ಈ ನಡುವೆ ಸವದಿ ಕಾಂಗ್ರೆಸ್ ನಾಯಕರ ಮುಂದೆ ಡಿಮ್ಯಾಂಡ್ ಇಟ್ಟಿದ್ದಾರೆನ್ನಲಾಗಿದೆ. ಸವದಿ ತನ್ನ ಪುತ್ರ ರಾಜಕೀಯ ಭವಿಷ್ಯದ ಬಗ್ಗೆಯೂ ಪ್ರಸ್ತಾಪ ಮಾಡಿದ್ದು, ಪುತ್ರ ಸಚಿದಾನಂದ ಸವದಿಗೂ ಟಿಕೆಟ್ ನೀಡಲು ಪ್ರಸ್ತಾಪಿಸಿದ್ದಾರೆನ್ನಲಾಗಿದೆ. ಅಥಣಿಯಿಂದ ನನಗೆ ಅಥವಾ ಪುತ್ರನಿಗೆ ಟಿಕೆಟ್ ಕೊಡಬೇಕು, ಮುಂದೆ ಬೆಳಗಾವಿ ಅಥವಾ ಚಿಕ್ಕೋಡಿಯಲ್ಲಿ ಎಂಪಿ ಟೆಕೆಟ್ ಕೊಡಬೇಕು. ಈ ಬಗ್ಗೆ ಸ್ಥಳೀಯ ನಾಯಕರು, ಕಾರ್ಯಕರ್ತರ ಜೊತೆ ಮಾತುಕತೆ ನಡೆಸಬೇಕು ಎಂದಿದ್ದಾರೆನ್ನಲಾಗಿದೆ.
ಮಣಿಕಂಠ್ ರಾಠೋಡ್‌ಗೆ ಚಿತ್ತಾಪುರ ಬಿಜೆಪಿ ಟಿಕೆಟ್ ನೀಡಿದ್ದಕ್ಕೆ ಆಕ್ರೋಶ ಭುಗಿಲೆದ್ದಿದೆ. ಕಲಬುರಗಿಯಲ್ಲಿ ಮಾಜಿ ಶಾಸಕ ವಿಶ್ವನಾಥ್ ಪಾಟೀಲ್ ಹೆಬ್ಬಾಳ್ ಹೇಳಿಕೆ ನೀಡಿದ್ದು, ಮಣಿಕಂಠ್ ರಾಠೋಡ್‌ಗೆ ಯಾವ ಆಧಾರದ ಮೇಲೆ ಬಿಜೆಪಿ ಟಿಕೆಟ್ ನೀಡಲಾಗಿದೆ ಎನ್ನುವುದು ತಿಳಿಯುತ್ತಿಲ್ಲ ಎಂದಿದ್ದಾರೆ.
ಮಾಗಡಿ ಬಿಜೆಪಿ ಟಿಕೆಟ್ ಆಕಾಂಕ್ಷಿ ರಂಗಧಾಮಯ್ಯ ಭಾವುಕರಾಗಿದ್ದಾರೆ. ಟಿಕೆಟ್ ಕೈತಪ್ಪಿದ ಹಿನ್ನೆಲೆ ಬೇಸರ ವ್ಯಕ್ತಪಡಿಸಿದ ಬಿಜೆಪಿ ಟಿಕೆಟ್ ಆಕಾಂಕ್ಷಿ ಸಚಿವ ಅಶ್ವಥ್ ನಾರಾಯಣ್ ನಡೆಯ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ 9 ವರ್ಷಗಳಿಂದ ನಾನು ಪಕ್ಷಕ್ಕೆ ದುಡಿದಿದ್ದೇನೆ, ಈಗ ಯಾರೋ ಕಳೆದ ಎಂಟು ತಿಂಗಳಿಂದ ಬಂದವರಿಗೆ ಟಿಕೆಟ್ ನೀಡಿದ್ದಾರೆ. ನನಗೆ ಈಬಾರಿ ಟಿಕೆಟ್ ಕೈತಪ್ಪಿಸಲು ಹುನ್ನಾರ ನಡೆದಿದೆ. ನಮಗೆ ಸಾಕಷ್ಟು ನೋವಾಗಿದೆ. ಟಿಕೆಟ್ ಘೋಷಣೆ ಬಳಿಕವು ಯಾರೂ ನಮ್ಮನ್ನ ಸಂಪರ್ಕ ಮಾಡಿಲ್ಲ. ನಮ್ಮ ಕಾರ್ಯಕರ್ತರನ್ನೂ ಕರೆಯದೆ ನಾಮಿನೇಷನ್ ಮಾಡಿದ್ದಾರೆ ಎಂದು ದೂರಿದ್ದಾರೆ.
ಕಾಂಗ್ರೆಸ್ ನಾಯಕರು ನನ್ನ ಸಂಪರ್ಕ ಮಾಡಿದ್ದು ನಿಜ. ಬಿಜೆಪಿಯ ಹೈಕಮಾಂಡ್ ನಲ್ಲಿ ಟಿಕೆಟ್ ಬದಲಾವಣೆ ಬಗ್ಗೆ ಚರ್ಚೆ ನಡೆದಿದೆ. ಹೈಕಮಾಂಡ್ ನಿಂದ ಇಲ್ಲಿನ ಸ್ಥಿತಿ ತಿಳಿಯಲು ಇಬ್ಬರು ನಾಯಕರು ಬರುತ್ತಿದ್ದಾರೆ. ಯಾಕೆ ಟಿಕೆಟ್ ಕೈ ತಪ್ಪಿದೆ ಎಂಬುದು ನನಗೂ ಪ್ರಶ್ನೆಯಾಗಿದೆ. ಬೆಳಗಾವಿ ಒಮ್ಮೆಯೂ ಕಲ್ಲು ತೂರಾಟಕ್ಕೆ ಅವಕಾಶ ಕೊಟ್ಟಿಲ್ಲ. ಭ್ರಷ್ಟಾಚಾರ ಸಹ ನನ್ನ ಅವಧಿಯಲ್ಲಿ ಮಾಡಿಲ್ಲ. ಹೀಗಿದ್ದಾಗ ಯಾಕೆ ಟಿಕೆಟ್ ಕೈ ತಪ್ಪಿದೆ ಎಂಬುದು ಗೊತ್ತಿಲ್ಲ. ಎಲ್ಲಾ ಪಕ್ಷಗಳಿಂದ ನನನ್ನು ಸಂಪರ್ಕಿಸುವ ಯತ್ನ ನಡೆದಿದೆ. ಬಿಜೆಪಿ ಹೈಕಮಾಂಡ್ ಟಿಕೆಟ್ ಬದಲಾವಣೆ ಮಾಡೋ ನಿರೀಕ್ಷೆ ಇದೆ- ಶಾಸಕ ಅನಿಲ್ ಬೆನಕೆ
ಹಿರಿಯೂರು ಶಾಸಕಿ ಪೂರ್ಣಿಮಾ ಪರ ಪ್ರಚಾರ ಆರೋಪದಿಂದಾಗಿ ಐವರು ಪೊಲೀಸ್ ಪೇದೆಗಳ ವಿರುದ್ದ ಶಿಸ್ತು ಕ್ರಮಕ್ಕೆ ಡಿಸಿ ಸೂಚನೆ ನೀಡಿದ್ದಾರೆ. ಹಿರಿಯೂರು ಕಾಂಗ್ರೆಸ್ ಮುಖಂಡ ಈರಲಿಂಗೇಗೌಡ, ಖಾದಿ ರಮೇಶ್ 5 ಜನ ಪೊಲೀಸರ ವಿರುದ್ದ ಜಿಲ್ಲಾ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು. ಸದ್ಯ ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು ಸೂಚನೆ ಬೆನ್ನಲ್ಲೇ ಪೊಲೀಸ್ ಪೇದೆಗಳ ವರ್ಗಾವಣೆ ಮಾಡಲಾಗಿದೆ. ಹಿರಿಯೂರು ನಗರ ಠಾಣೆಯ ತಿಮ್ಮರಾಯಪ್ಪ, ಮುನೇಶ್, ಗ್ರಾಮೀಣ ಠಾಣೆಯ ತಿಮ್ಮೇಶ್, ಪಿರ್ದೋಜ್, ಶಿವಮೂರ್ತಿ ವರ್ಗಾವಣೆಯಾಗಿದ್ದಾರೆ.
ಬಿಜೆಪಿ ವಿರುದ್ಧ ತಿರುಗಿ ಬಿದ್ದಿರುವ ಓಲೀಕಾರ್ರನ್ನು ಓಲೈಸಲು ಖುದ್ದು ಬಿಎಸ್ವೈ ಮುಂದಾಗಿದ್ದಾರೆ. ಹೀಗಾಗಿ ಅವರನ್ನು ರಾತ್ರೋ ರಾತ್ರಿ ಬೆಂಗಳೂರಿಗೆ ಬರುವಂತೆ ಮಾಜಿ ಸಿಎಂ ಯಡಿಯೂರಪ್ಪ ಕರೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಓಲೇಕಾರ್ ಮಧ್ಯರಾತ್ರಿ ಬೆಂಗಳೂರಿನ ಬಿಎಸ್ವೈ ನಿವಾಸಕ್ಕೆ ತೆರಳಿದ್ದಾರೆ. ಟಿಕೆಟ್ ಸಿಗದಿರುವ ಹಿನ್ನೆಲೆ ಈಗಾಗಲೇ ಓಲೇಕಾರ್ ಈಗಾಗಲೇ ಬಿಜೆಪಿಗೆ ಗುಡ್ಬೈ ಹೇಳಿದ್ದಾರೆ.
ಸುಳ್ಯ ಕಾಂಗ್ರೆಸ್ ಮುಖಂಡೆಯಾಗಿರುವ ದಿವ್ಯಪ್ರಭಾ ಚಿಲ್ತಡ್ಕ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ದಿವ್ಯಪ್ರಭಾ ಇಂದು 12 ಗಂಟೆಗೆ ಬೆಂಗಳೂರಿನ ಜೆಡಿಎಸ್ ಕಛೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.
ದ್ಯಾಂಪುರದ ಸರ್ವೆ ನಂಬರ್ 225 ರಲ್ಲಿ ಸ್ಮಶಾನಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗಿತ್ತು. ಆದರೆ ವಿಷಯ ತಿಳಿದ ಜಮೀನು ಮಾಲೀಕರು ಆ ಭೂಮಿಯನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ್ದಾರೆ. ಆದರೀಗ ಈ ಸಮಸ್ಯೆ ಬಗೆಹರಿಸದಿದ್ದರೆ ಚುನಾವಣೆ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.