ಚುನಾವಣೆಗೂ ಆಟೋ ರಿಕ್ಷಾಗಳಿಗೂ ಅವಿನಾಭ ಸಂಬಂಧ. 'ಮರೆಯದಿರಿ ನಮ್ಮ ಮತಬಾಂಧವರೇ' ಎನ್ನುತ್ತಲೇ ಆಟೋಗಳು ಎಲ್ಲರ ಚಿತ್ತ (Karnataka Assembly Elections 2023) ಸೆಳೆಯುತ್ತವೆ. ಅಲ್ಲದೇ ಚುನಾವಣೆಯ ಸಮಯದಲ್ಲಿ ಬ್ಯಾನರ್ ಕಟ್ಟಿ, ಮೈಕ್ ಹಿಡಿದು ಪ್ರಚಾರ ಮಾಡಲು ಆಟೋಗಳೇ ಬೇಕು. ಆದ್ರೆ ಈ ಬಾರಿ ಸ್ವಲ್ಪ ಅಪ್ಡೇಟೆಡ್ ಪ್ರಚಾರ ಶುರುವಾಗಿದೆ. ಆಟೋಗಳಲ್ಲಿ ಸ್ವಯಂ ರಾಜಕಾರಣಿಗಳೇ ರೈಡ್ (Auto Ride) ಶುರು ಮಾಡಿದ್ದಾರೆ. ಆ ಮೂಲಕ ಆಟೋ ಚಾಲಕರನ್ನು ಮತಬ್ಯಾಂಕ್ಗಳನ್ನಾಗಿ ಮಾಡುವ ರಾಜಕೀಯ ಸ್ಟ್ರಾಟರ್ಜಿ ನಡೆಸುತ್ತಿದ್ದಾರೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಬಿಜೆಪಿ ಭರವಸೆ
ಈಗಾಗಲೇ 3 ಪ್ರಬಲ ಪಕ್ಷಗಳು ಭರವಸೆಯ ಮಹಾಪೂರವನ್ನೇ ಹರಿಸಿವೆ. ಆಡಳಿತರೂಢ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ರೈತ ವಿದ್ಯಾ ನಿಧಿ ಯೋಜನೆಯಲ್ಲಿ ಆಟೋ ಚಾಲಕರ ಮಕ್ಕಳನ್ನು ಸೇರಿಸುವುದಾಗಿ ಭರವಸೆ ನೀಡಿದೆ. ಜೊತೆಗೆ ಆಟೋಚಾಲಕರ ಮಕ್ಕಳಿಗೆ ಶೈಕ್ಷಣಿಕ ಸಹಾಯ ಮಾಡುವುದಾಗಿಯೂ ಘೋಷಿಸಿದೆ.
ಜೆಡಿಎಸ್ ಆಶ್ವಾಸನೆ
ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಆಟೋ ಚಾಲಕರಿಗೆ ತಿಂಗಳಿಗೆ 2 ಸಾವಿರ ರೂ ಸಹಾಯಧನ ನೀಡುತ್ತೇವೆ ಎಂದು ಘೋಷಿಸಿದೆ.
ಕಾಂಗ್ರೆಸ್ ಆಟೋ ರೈಡ್
ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ ಶಿವಕುಮಾರ್ ಅವರು ಆಟೋ ಚಾಲಕರ ಸಮವಸ್ತ್ರ ತೊಟ್ಟು ಆಟೋ ಚಲಾಯಿಸಿ ಚಾಲಕರಾಗಿದ್ದರು. ಅಲ್ಲದೇ, ಆಟೋ ಚಾಲಕರ ಜೊತೆಗೆ ಮಾತನಾಡಿ ಅವರ ಕಷ್ಟ- ಸುಖಗಳನ್ನು ಆಲಿಸಿದ್ದಾರೆ. ಆಟೋ ಚಾಲಕರು ಪ್ರಯಾಣಿಕರ ಸಾರಥಿ ಎಂದರು. ಆ ಮೂಲಕ ಭಾವನಾತ್ಮಕವಾಗಿ ಕಾಂಗ್ರೆಸ್ ಆಟೋಚಾಲಕರ ಮನಸ್ಸು ಗೆಲ್ಲುವ ಪ್ರಯತ್ನ ನಡೆಸಿದೆ.
ಆಟೋ ಚಾಲಕರ ಕುರಿತು ರಾಜಕೀಯ ನಾಯಕರು ಹೇಳೋದು ಹೀಗೆ
ಆಟೋ ಚಾಲಕರಿಗೆ ಸಾಕಷ್ಟು ಸಮಸ್ಯೆಗಳಿವೆ. ಪೊಲೀಸ್, ಸಾರಿಗೆ ಇಲಾಖೆ ಅಧಿಕಾರಿಗಳ ಕಾಟ, ಪೆಟ್ರೋಲ್, ಡೀಸೆಲ್ ದರ ಏರಿಕೆಯ ನಡುವೆ ಅವರ ಬದುಕೇ ಕಷ್ಟವಾಗಿದೆ ಎನ್ನುತ್ತಾರೆ ಎಚ್.ಡಿ ಕುಮಾರಸ್ವಾಮಿ.
ಆಟೋಚಾಲರಿಗೆ ಜಾತಿ, ಧರ್ಮದ ಹಂಗಿಲ್ಲ. ಜನರ ಸುರಕ್ಷತೆ , ಜನರ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಇಂಧನ ಏರಿಕೆಯ ಹೊಡೆತದ ನಡುವೆಯೂ ಅವರು ತಮ್ಮ ಕೆಲಸವನ್ನು ಬಹಳ ಪ್ರೀತಿಸುತ್ತಾರೆ ಎಂದರು ಡಿ.ಕೆ ಶಿವಕುಮಾರ್.
ಆಟೋಚಾಲಕರ ಸಮಸ್ಯೆ ಬಗೆಹರಿಯಬೇಕು. ಜೊತೆಗೆ ಅವರಿಗೆ ಭರವಸೆಗಳನ್ನು ನೀಡುವುದು ನಾಯಕರ ಕರ್ತವ್ಯ. ಆದರೆ ಅದನ್ನು ಪಕ್ಷಗಳು ಈಡೇರಿಸಬೇಕು ಎನ್ನುವುದು ಕರ್ನಾಟಕ ಆಟೋ ಚಾಲಕರ ಸಂಘ ಒಕ್ಕೂಟಗಳ ಮುಖ್ಯಸ್ಥ ರಾಘವೇಂದ್ರ ಅವರ ಮಾತಾಗಿದೆ.
ರಾಜಕೀಯ ವಿಶ್ಲೇಷಕರು ಏನಂತಾರೆ?
ಫೆಬ್ರವರಿಯಲ್ಲಿ 2023 ರ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 7 ಲಕ್ಷ 70 ಸಾವಿರ ಆಟೋಗಳಿವೆ. ಇದರಲ್ಲಿ 6 ಲಕ್ಷ ಕಾರ್ಯನಿರತ ಆಟೋಗಳಿವೆ. ಇನ್ನೂ ಬೆಂಗಳೂರಿನಲ್ಲಿ 3 ಲಕ್ಷ ಆಟೋಗಳು ಇದ್ದು, 2 ಲಕ್ಷದ 20 ಸಾವಿರ ಆಟೋಗಳು ಚಲಾವಣೆಯಲ್ಲಿವೆ. ಈ ಆಟೋಗಳಿಗೆ ಬೆಂಗಳೂರಿನಲ್ಲಿ 8 ಲಕ್ಷ ಚಾಲಕರಿದ್ದಾರೆ.
ಇದನ್ನೂ ಓದಿ: AB Malaka Reddy: ತನಗೂ ಇಲ್ಲ, ಮಗಳಿಗೂ ಕಾಂಗ್ರೆಸ್ ಟಿಕೆಟ್ ಇಲ್ಲ; ಕಮಲ ಬಿಟ್ಟು ಕಂಗಾಲಾದ ಮಾಲಕರೆಡ್ಡಿ!
ಕೆಲವರು ವಿಭಿನ್ನ ಶಿಫ್ಟ್ನಲ್ಲಿ ಕೆಲಸ ಮಾಡುವುದರಿಂದ ಇದರ ಸಂಖ್ಯೆ ಇನ್ನೂ ಹೆಚ್ಚಿದೆ. ಇವರೆಲ್ಲರೂ ಈ ಚುನಾವಣೆಯಲ್ಲಿ ಮತ ಬ್ಯಾಂಕ್ಗಳು ಎನ್ನುವುದು ರಾಜಕೀಯ ವಿಶ್ಲೇಷಕರ ಅನಿಸಿಕೆ. ಇನ್ನೂ ಈ ಚಾಲಕರ ಕುಟುಂಬಸ್ಥರು ಸೇರಿದರೆ ಮತಬ್ಯಾಂಕ್ ಸಂಖ್ಯೆ ಏರುತ್ತದೆ.
ಮೌತ್ ಪಬ್ಲಿಸಿಟಿ
ಅಲ್ಲದೇ, ಆಟೋ ಚಾಲಕರು ಮಾತಿನಲ್ಲಿ ಚತುರರು. ಪ್ರಯಾಣಿಕರೊಟ್ಟಿಗೆ ರಾಜಕೀಯ ವಿಷಯವನ್ನು ಚರ್ಚಿಸುತ್ತಾರೆ. ಇದು ಅದ್ಭುತ ಪ್ರಚಾರವಾಗುತ್ತದೆ ಎನ್ನುವ ಸ್ಟ್ರಾಟರ್ಜಿಯೂ ಇದೆ. ಇದಿಷ್ಟೇ ಅಲ್ಲದೇ, ಆಟೋಗೆ ಸಂಬಂಧಿಸಿದ ಇನ್ನಿತರ ಕೆಲಸಗಳನ್ನು ಮಾಡುವ ಪೇಂಟರ್, ಮೆಕ್ಯಾನಿಕ್, ಟಿಂಕರಿಂಗ್ ಮಾಡುವವರ ಸಂಖ್ಯೆ ಸೇರಿದರೆ ವೋಟ್ಬ್ಯಾಂಕ್ ಇನ್ನೂ ಹೆಚ್ಚಾಗುತ್ತದೆ.
ಇದನ್ನೂ ಓದಿ: Kichcha Sudeep: ಕಿಚ್ಚನ ಪ್ರಚಾರಕ್ಕೆ ಬಿಜೆಪಿ ಬಿಗ್ ಪ್ಲಾನ್, ಇತ್ತ ನಟ ಸುದೀಪ್ಗೆ ಶಾಕ್ ಕೊಟ್ಟ ಜೆಡಿಎಸ್!
ಆಟೋ ಚಾಲಕರ ಸಮಸ್ಯೆ, ಹೋರಾಟ, ಪ್ರತಿಭಟನೆಗೆ ಬಾರದ ನಾಯಕರು ಈಗ ಕೊಂಚ ಹೆಚ್ಚೇ ಪ್ರೀತಿ ತೋರುತ್ತಿರುವಂತೆ ಕಾಣುತ್ತಿದೆ. ಆದರೆ ಆಟೋ ಚಾಲಕರು ಹೃದಯವಂತರೂ ಹೌದು, ಅಷ್ಟೇ ಬುದ್ಧಿವಂತರೂ ಹೌದು. ಅವರನ್ನು ಏಮಾರಿಸುವುದು ಸಾಧ್ಯವೇ? ಎನ್ನುವುದು ಶ್ರೀಸಾಮಾನ್ಯನ ಅನಿಸಿಕೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ