ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದೂ, ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದೆ. ಸ್ವತಂತ್ರ ಪಕ್ಷವಾಗಿ ಬಹುಮತಕ್ಕೂ ಹೆಚ್ಚಿನ ಸ್ಥಾನಗಳನ್ನು ಗೆದ್ದು ಬೀಗಿದೆ. ಈ ಕುರಿತು ಫಲಿತಾಂಶದ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಕ್ತ ಮಾಡ್ತೀವಿ, ರಾಜ್ಯದಲ್ಲಿ ಕಾಂಗ್ರೆಸ್ ಬಾಗಿಲು ಮುಚ್ಚಿದೆ ಎಂದು ಹೇಳುತ್ತಿದ್ದರು. ಆದರೆ ಇಂದು ಅವರೇ ರಾಜ್ಯದಿಂದ ಮುಕ್ತರಾಗಿದ್ದಾರೆ. ಕರ್ನಾಟಕದಲ್ಲಿ ಮಾತ್ರವಲ್ಲ, ದಕ್ಷಿಣ ಭಾರತದಿಂದಲೇ ಮುಕ್ತವಾಗಿದ್ದಾರೆ. ಇದು ಬಿಜೆಪಿಯ ದುರಹಂಕಾರದ ಮಾತುಗಳಿಗೆ ಜನರು ತೀರ್ಪು ನೀಡಿದ್ದಾರೆ. ಕಾಂಗ್ರೆಸ್ 35 ವರ್ಷಗಳಲ್ಲೇ ದೊಡ್ಡ ಲೀಡ್ ನೀಡಿದ್ದಾರೆ. ನಮ್ಮೆಲ್ಲರ ಒಗ್ಗಟ್ಟಿನ ಪ್ರಯತ್ನದಿಂದ ಬಂದಿರುವ ಜಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗ್ಯಾರಂಟಿ ಯೋಜನೆಗಳನ್ನ ಉಳಿಸಿಕೊಳ್ಳಲು ಸಲಹೆ
ಜನರಿಗೆ ಭರವಸೆ ನೀಡಿರುವ ಗ್ಯಾರಂಟಿ ಯೋಜನೆಗಳನ್ನು ಮೊದಲ ಕ್ಯಾಬಿನೇಟ್ ನಲ್ಲೇ ಈಡೇರಿಸುವಂತೆ ಹಿರಿಯ ನಾಯಕ ಖರ್ಗೆ ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ. ರಾಜ್ಯದ ಜನರು ಸಂವಿಧಾನದ ರಕ್ಷಣೆಗೆ ಮತ ನೀಡಿದ್ದಾರೆ. ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಿ. ಇದು ಒಳ್ಳೆಯ ಸಮಯ, ನಾವು ಇದನ್ನು ಉಳಿಸಿಕೊಳ್ಳಬೇಕು, ರಾಜ್ಯದಲ್ಲಿ ಪಕ್ಷ ಗಟ್ಟಿಯಾಗಿ ನೆಲೆಯೂರಬೇಕು ಎಂದು ಖರ್ಗೆ ರಾಜ್ಯ ನಾಯಕರಿಗೆ ಸೂಚಿಸಿದರು.
ಕಾಂಗ್ರೆಸ್ ಗೆಲುವಿಗೆ ಕಾರಣಗಳು
ರಾಜ್ಯದಲ್ಲಿ ಮೇಕೆದಾಟು, ಭಾರತ್ ಜೋಡೋ ಪಾದಯಾತ್ರೆಯೇ ನಮ್ಮ ಗೆಲುವಿಗೆ ಕಾರಣ. ಎಲ್ಲೆಲ್ಲಿ ಪಾದಯಾತ್ರೆ ಮಾಡಿದ್ದೇವೋ, ಅಲ್ಲೆಲ್ಲಾ ನಾವು ಗೆದ್ದಿದ್ದೇವೆ. ಬಿಜೆಪಿಯವರು ಮೋದಿ ಮುಖ ನೋಡಿ ಮತ ಕೊಡಿ ಅಂದಿದ್ದರು. ಆದರೆ ಜನರು ಎಷ್ಟು ಸಾರಿ ಮೋದಿ ಮುಖ ನೋಡಿ ಮತ ನೀಡುತ್ತಾರೆ. ಅವರಿಗೆ ನೋಡಿ ನೋಡಿ ಸಾಕಾಗಿದೆ.
ಅಲ್ಲದೆ ಮೋದಿ ಅವರನ್ನ ನೋಡಿ ಕನ್ನಡಿಗರಿಗೆ ವಾಂತಿ ಆಗಿದೆ ಎಂದು ಬಿಜೆಪಿಯ ಕಾಲೆಳೆದರು.
ಯುದ್ದವನ್ನು ಗೆದ್ದಿದ್ದೇವೆ
ಚುನಾವಣೆ ಶುರುವಾದಾಗ ನಮ್ಮ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ಗೆ ನೋಟಿಸ್ ನೀಡಿದ್ದಾರೆ. ವಿಚಾರಣೆ ಬನ್ನಿ ಅಂತಾರೆ, ಮಾನಸಿಕವಾಗಿ ಹಿಂಸೆ ಕೊಟ್ಟಿದ್ದಾರೆ.
ಆದರೆ ಜನರು ಎಲ್ಲದಕ್ಕೂ ಉತ್ತರ ಕೊಟ್ಟಿದ್ದಾರೆ. ಮೆಜಾರಿಟಿ ಬರುತ್ತೋ ಇಲ್ವೋ ಅಂತಾ ಅನುಮಾನ ಪಟ್ಟಿದ್ದರು. ಆದರೆ ಜನರು ಬಹುಮತದ ಸರ್ಕಾರ ಕೊಟ್ಟಿದ್ದಾರೆ.
ಇವಾಗ ಎಲ್ಲಾ ಗ್ಯಾರಂಟಿಗಳನ್ನ ಜಾರಿಗೆ ತರುವತ್ತಾ ಗಮನ ಹರಿಸುತ್ತೇವೆ ಎಂದರು.
ನಾವು ಈಗ ಯುದ್ಧವನ್ನ ಗೆದ್ದಿದ್ದೇವೆ. ಮುಂದೆ ನಮಗೆ ಕಷ್ಟದ ದಿನಗಳು ಬರಲಿವೆ. 2024 ರ ಚುನಾವಣೆಗೆ ಎಲ್ಲರೂ ದುಡಿಯಬೇಕಿದೆ. ವೋಟ್ ಕೊಟ್ಟವರಿಗೆ, ಕೊಡದವರಿಗೂ ಎಲ್ಲರಿಗೂ ಒಳ್ಳೆಯದಾಗಲಿ. ಮುಂದೆ ಸಾಕಷ್ಟು ಚುನಾವಣೆಯಲ್ಲಿಯೂ ನಾವು ಯುದ್ಧ ಮಾಡಬೇಕಿದೆ ಎಂದರು.
ಗ್ಯಾರಂಟಿ ಯೋಜನೆಗಳು
ಭಾಗ್ಯಜ್ಯೋತಿ ಯೋಜನೆಯಲ್ಲಿ ರಾಜ್ಯದಲ್ಲಿ ಪ್ರತಿ ಮನೆಗೂ 200 ಯೂನಿಟ್‌ನಷ್ಟು ಉಚಿತವಾಗಿ ವಿದ್ಯುತ್ ನೀಡಲಾಗುವುದು ಎಂದು ತಿಳಿಸಿದೆ.
ಗೃಹಲಕ್ಷ್ಮೀ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಪ್ರತಿ ತಿಂಗಳು ಎರಡು ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುವುದು ಎಂದು ತಿಳಿಸಿದೆ.
ಬಿಪಿಎಲ್ ಕುಟುಂಬಗಳಿಗೆ ಪ್ರತಿ ತಿಂಗಳು ತಲಾ ಒಬ್ಬ ವ್ಯಕ್ತಿಗೆ 10 ಕೆ.ಜಿ ಅನ್ನಭಾಗ್ಯ ಅಕ್ಕಿ ನೀಡಲಾಗುವುದಾಗಿ ಘೋಷಣೆ ಮಾಡಿದೆ.
ಯುವ ನಿಧಿ ಯೋಜನೆಯಲ್ಲಿ ಪದವೀಧರ ನಿರುದ್ಯೋಗ ಯುವಜನರಿಗೆ ಪ್ರತಿ ತಿಂಗಳು ಮೂರು ಸಾವಿರ ಭತ್ಯೆ, ಡಿಪ್ಲೊಮೋ ಮುಗಿಸಿದವರಿಗೆ ಒಂದೂವರೆ ಸಾವಿರ ರೂಪಾಯಿ ಭತ್ಯೆ ನೀಡುವುದಾಗಿ ಭರವಸೆ ನೀಡಿದೆ. ಸದ್ಯ ಮುಂದುವರೆದು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ