ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election) ಭಾರೀ ಚರ್ಚೆಗೆ ಕಾರಣವಾಗಿದ್ದ ಧಾರವಾಡ (Dharwad) ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ (Congress) ಪಕ್ಷದ ಅಭ್ಯರ್ಥಿ ವಿನಯ್ ಕುಲಕರ್ಣಿ (Vinay Kulkarni) ಗೆಲುವು ಸಾಧಿಸಿದ್ದಾರೆ. ಎದುರಾಳಿ ಬಿಜೆಪಿ ಅಭ್ಯರ್ಥಿ ಅಮೃತ್ ಅಯ್ಯಪ್ಪ ದೇಸಾಯಿ ವಿರುದ್ಧ 18,114 ಮತಗಳ ಅಂತರದಲ್ಲಿ ಭರ್ಜರಿ ಗೆಲುವು ಪಡೆದುಕೊಂಡಿದ್ದಾರೆ. ವಿನಯ್ ಕುಲಕರ್ಣಿ ಅವರಿಗೆ 88,660 ಮತಗಳನ್ನು ಪಡೆದುಕೊಂಡಿದ್ದು, ಬಿಜೆಪಿ ಅಮೃತ್ ದೇಸಾಯಿ (Amrut Ayyappa Desai) 70,546 ಮತಗಳನ್ನು ಪಡೆದುಕೊಂಡಿದ್ದರು. ಜೆಡಿಎಸ್ನ ಮಂಜುನಾಥ ಹಗೇದಾರ ಕೇವಲ 914 ಮತಗಳನ್ನು ಪಡೆದುಕೊಂಡಿದ್ದಾರೆ.
ಧಾರವಾಡ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ ವಿನಯ್ ಕುಲಕರ್ಣಿ ಅವರು, ಕೋರ್ಟ್ ನಿರ್ಬಂಧ ವಿಧಿಸಿದ್ದ ಕಾರಣ ಚುನಾವಣೆಗೆ ನಾಮಪತ್ರ ಸಲ್ಲಿಕೆ ಹಾಗೂ ಪ್ರಚಾರಕ್ಕೂ ಹೋಗಲು ಸಾಧ್ಯವಾಗದೆ ಸಮಸ್ಯೆ ಎದುರಿಸಿದ್ದರು. ಆದರೆ ವಿನಯ್ ಕುಲಕರ್ಣಿ ಪರ ಕುಟುಂಬ ಸದಸ್ಯರು ಅವರ ಪ್ರಚಾರ ನಡೆಸಿದ್ದರು.
ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ 2615 ಅಭ್ಯರ್ಥಿಗಳು
ರಾಜ್ಯದ 37,777 ಸ್ಥಳದಲ್ಲಿ ಸ್ಥಾಪನೆಯಾಗಿದ್ದ 58,545 ಮತಗಟ್ಟೆಗಳಲ್ಲಿ ಮತದಾನ ನಡೆದಿತ್ತು. ಚುನಾವಣಾ ಅಖಾಡದಲ್ಲಿ 2615 ಅಭ್ಯರ್ಥಿಗಳು ರಾಜಕೀಯ ಭವಿಷ್ಯದ ಪರೀಕ್ಷೆ ಎದುರಿಸಿದ್ದಾರೆ. ಅಭ್ಯರ್ಥಿಗಳಲ್ಲಿ 2430 ಮಂದಿ ಪುರುಷರು, 184 ಮಂದಿ ಮಹಿಳಾ ಅಭ್ಯರ್ಥಿಗಳು ಹಾಗೂ ಓರ್ವ ತೃತೀಯ ಲಿಂಗಿ ಅಭ್ಯರ್ಥಿಗಳಿದ್ದಾರೆ.
ಇನ್ನು ಪಕ್ಷವಾರು ನೋಡುವುದಾದರೆ ಬಿಜೆಪಿಯಿಂದ 224, ಕಾಂಗ್ರೆಸ್ನಿಂದ 223, ಜೆಡಿಎಸ್ನಿಂದ 209 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಉಳಿದಂತೆ 918 ಮಂದಿ ಪಕ್ಷೇತರ ಅಭ್ಯರ್ಥಿಗಳಿದ್ದಾರೆ. ಇನ್ನು ಎಎಪಿಯಿಂದ 209, ಸಿಪಿಐಎಂನಿಂದ 4, ಬಿಎಸ್ಪಿಯಿಂದ 133 ಹಾಗೂ ಎನ್ಸಿಪಿಯಿಂದ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮತದಾನದ ಪ್ರಮಾಣ
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ದಾಖಲೆಯ ಮತದಾನವಾಗಿದ್ದು, ಶೇಕಡಾ 73.19 ರಷ್ಟು ಮತದಾನದೊಂದಿಗೆ ಸಾರ್ವಕಾಲಿಕ ದಾಖಲೆಯನ್ನು ನಿರ್ಮಾಣ ಮಾಡಿದೆ. ವಿಶೇಷ ಎಂದರೆ ಶೇಕಡಾ 85.56 ಮತದಾನದೊಂದಿಗೆ ಚಿಕ್ಕಬಳ್ಳಾಪುರ ಜಿಲ್ಲೆ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದು, ಬೆಂಗಳೂರು ದಕ್ಷಿಣದಲ್ಲಿ ಅತಿ ಕಡಿಮೆ ಅಂದರೆ ಶೇಕಡಾ 52.33 ರಷ್ಟು ಮತದಾನ ನಡೆದಿದೆ. ಇನ್ನು ರಾಜ್ಯದಲ್ಲಿರುವ 5.30 ಕೋಟಿ ಮತದಾರರಲ್ಲಿ 3.88 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ