Karnataka Results:136+2 ಸೀಟಲ್ಲ, 136+1 ಸೀಟು ಕಣಯ್ಯಾ! ಹಿಂಗ್ಯಾಕೆ ಅಂದ್ರು ಸಿದ್ದರಾಮಯ್ಯ?

ಕಾಂಗ್ರೆಸ್ ನಾಯಕರ ಸುದ್ದಿಗೋಷ್ಠಿ

ಕಾಂಗ್ರೆಸ್ ನಾಯಕರ ಸುದ್ದಿಗೋಷ್ಠಿ

ಜನ ನಮ್ಮ ಮೇಲೆ ವಿಶ್ವಾಸ ಇಟ್ಟು ಆಶೀರ್ವಾದ ಮಾಡಿದ್ದಾರೆ, ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ರಾಜ್ಯದ ಜನರು ಬದಲಾವಣೆ ಬಯಸುತ್ತಿದ್ದರು. ಆದ್ದರಿಂದಲೇ ಕಾಂಗ್ರೆಸ್ (Congress)​ ಪರ ಗಾಳಿ ಬಿಸಿ ನಾವು 136+1 ಸ್ಥಾನವನ್ನು ಪಡೆದುಕೊಂಡಿದ್ದೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮ್ಯಯ ಅವರು ನಮಗೆ 136+1 ಬಂದಿದೆ ಎಂದಿದ್ದರು, ಈ ವೇಳೆ ವ್ಯಕ್ತಿಯೊಬ್ಬರು 136+2 ಎಂದು ಹೇಳಿದ್ದರು. ಆದರೆ ಇದನ್ನು ತಿರಸ್ಕರಿಸಿದ ಸಿದ್ದು, ಆ ರೀತಿ ಹೇಳುವುದು ಸರಿ ಅಲ್ಲ, ನಾವು ದರ್ಶನ್ ಪುಟ್ಟಣ್ಣಯ್ಯ (Darshan Puttannaiah) ಅವರಿಗೆ ಬೆಂಬಲ ನೀಡಿದ್ದೇವು, ಅವರು ಗೆಲುವು ಪಡೆದಿದ್ದಾರೆ. ನಾವು ಮಂಡ್ಯದಲ್ಲಿ (Mandya) 7ಕ್ಕೆ 6 ಸ್ಥಾನದಲ್ಲಿ ಗೆಲುವು ಪಡೆದಿದ್ದೇವೆ. ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಎಲ್ಲಾ ಜಾತಿ, ಧರ್ಮದ (Religion) ಮತಗಳು ಬಂದಿದೆ. ನಮ್ಮ ಪಕ್ಷ ಜಾತ್ಯಾತೀತ ಪಕ್ಷ ಆಗಿದೆ ಎಂದು ತಿಳಿಸಿದರು.


ಅಧಿಕಾರ ಮಜಾ ಮಾಡಲು ಅಲ್ಲ, ಜನಪರ ಆಡಳಿತ ನೀಡಲು


ಡಿ.ಕೆ ಶಿವಕುಮಾರ್‌ ಹಾಗೂ ಸುರ್ಜೇವಾಲ ಅವರು ಹೇಳಿದಂತೆ ಇದು ಕಾಂಗ್ರೆಸ್‌ ಪಕ್ಷದ ಗೆಲುವು ಮಾತ್ರವಲ್ಲ, 7 ಕೋಟಿ ಕನ್ನಡಿಗರ ಗೆಲುವು. ಬಿಜೆಪಿಯವರು ಎಂದೂ ಜನರ ಆಶೀರ್ವಾದ ಪಡೆದುಕೊಂಡು ಅಧಿಕಾರಕ್ಕೆ ಬಂದವರಲ್ಲ, ಆಪರೇಷನ್‌ ಕಮಲದ ಮೂಲಕ ಅಧಿಕಾರ ಹಿಡಿದವರು. ರಾಜ್ಯದಲ್ಲಿ ಯಾವಾಗೆಲ್ಲ ಅತಂತ್ರ ವಿಧಾನಸಭೆ ಆಗಿದೆ ಆ ಎಲ್ಲಾ ಕಾಲದಲ್ಲೂ ಸುಭದ್ರ ಸರ್ಕಾರ ಕೊಡಲು ಸಾಧ್ಯವಾಗಿಲ್ಲ.


ಇದನ್ನೂ ಓದಿ: ಕರ್ನಾಟಕ ಚುನಾವಣಾ ಫಲಿತಾಂಶ 2023 LIVE: ಸಿಎಂ ಕುರ್ಚಿ ಯಾರಿಗೆ? ಖರ್ಗೆ ನಿವಾಸದಲ್ಲಿ ಡಿಕೆಶಿ ಬ್ರದರ್ಸ್ ಮೀಟಿಂಗ್


ಅದು 2004, 2008, 2018 ಇರಬಹುದು. ಸಮ್ಮಿಶ್ರ ಸರ್ಕಾರ ಮಾಡಿದರೆ, ಒಂದೇ ಅವಧಿಯಲ್ಲಿ ಒಬ್ಬ ಮುಖ್ಯಮಂತ್ರಿಗಿಂತ ಹೆಚ್ಚು ಮುಖ್ಯಮಂತ್ರಿಗಳು ಬದಲಾಗುತ್ತಾ ಹೋದರೆ, ಒಂದಕ್ಕಿಂತ ಹೆಚ್ಚು ಪಕ್ಷಗಳು ಸೇರಿ ಸರ್ಕಾರ ರಚನೆ ಮಾಡಿದರೆ ಸುಭದ್ರ ಸರ್ಕಾರ ಕೊಡಲು ಸಾಧ್ಯವೇ ಇಲ್ಲ. ಎಲ್ಲಿ ಸುಭದ್ರ ಸರ್ಕಾರ ಇರುವುದಿಲ್ಲವೋ ಅಲ್ಲಿ ಜನಪರ ಆಡಳಿತ ಇರಲು, ರಾಜ್ಯದ ಅಭಿವೃದ್ಧಿ ಆಗಲು ಸಾಧ್ಯವಿಲ್ಲ. ಅಧಿಕಾರ ಮಜಾ ಮಾಡಲು ಅಲ್ಲ, ಜನಪರ ಆಡಳಿತ ನೀಡಲು ಎಂದು ಹೇಳಿದರು.
2013ರಲ್ಲಿ ನಮಗೆ ಸ್ಪಷ್ಟ ಬಹುಮತ ಸಿಕ್ಕಿದ್ದರಿಂದ ಉತ್ತಮ ಆಡಳಿತ ನೀಡಿ, ಜನರಿಗೆ ಕೊಟ್ಟ ಎಲ್ಲ ಭರವಸೆಗಳನ್ನು ಈಡೇರಿಸಿದ್ದೆವು. ಜನರಿಗೆ ನಮ್ಮ ಆಡಳಿತದ ಬಗ್ಗೆ ಒಂದು ರೀತಿ ಗೌರವ ಇತ್ತು. ಬಿಜೆಪಿ ಅಥವಾ ಕುಮಾರಸ್ವಾಮಿ ಯಾವಗೆಲ್ಲ ಇದ್ದರು ಆಗ ಸುಭದ್ರ ಸರ್ಕಾರವಾಗಲೀ, ಅಭಿವೃದ್ಧಿ ಆಗಲಿ ಸಾಧ್ಯವಾಗಿರಲಿಲ್ಲ. ಜನ ಈ ಬಾರಿ ಒಂದೇ ಪಕ್ಷಕ್ಕೆ ಬಹುಮತ ನೀಡಬೇಕು ಎಂದು ಬಯಸಿ ಕಾಂಗ್ರೆಸ್‌ ಗೆ ಇನ್ನೊಂದು ಅವಕಾಶ ನೀಡಿದ್ದಾರೆ.


ಜನರು ನೀಡಿರುವ ಈ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಜನರ ನಿರೀಕ್ಷೆಗೆ ತಕ್ಕದಾಗಿ ಕೆಲಸ ಮಾಡಬೇಕು, ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸುವ ಕೆಲಸ ಮಾಡಬೇಕು. ಬಿಜೆಪಿಯವರು ಕರ್ನಾಟಕ ರಾಜ್ಯಕ್ಕೆ ಕಳಂಕ ತಂದಿದ್ದಾರೆ. ಅವರ ಭ್ರಷ್ಟಾಚಾರ, ದುರಾಡಳಿತ, ನಿಷ್ಕ್ರಿಯತೆಗಳಿಂದ ಜನ ರೋಸಿ ಹೋಗಿ ಬದಲಾವಣೆ ಬಯಸಿದ್ದರು. ಇದರಿಂದಾಗಿ ಕಾಂಗ್ರೆಸ್‌ ಪರವಾದ ಗಾಳಿ ಬೀಸಲು ಆರಂಭವಾಗಿತ್ತು.


ನಾವು 136 + 1 ಗೆದ್ದಿದ್ದೇವೆ. ಸರ್ವೋದಯ ಪಕ್ಷದ ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯ ಅವರಿಗೆ ನಾವು ಬೆಂಬಲ ನೀಡಿದ್ದೆವು ಹಾಗಾಗಿ ಅವರು ಗೆದ್ದಿದ್ದಾರೆ. ಮಂಡ್ಯದಲ್ಲಿ 7ಕ್ಕೆ 6 ಸ್ಥಾನಗಳನ್ನು ನಾವು ಗೆದ್ದಿದ್ದೇವೆ. ಈ ಬಾರಿ ಕಾಂಗ್ರೆಸ್‌ ಪಕ್ಷಕ್ಕೆ ಎಲ್ಲ ಜಾತಿ, ಧರ್ಮಗಳ ಜನರ ಮತಗಳು ಬಂದಿದೆ. ಕಾಂಗ್ರೆಸ್‌ ಪಕ್ಷ ಒಂದು ಜಾತ್ಯಾತೀತ ಪಕ್ಷ ಎಂಬುದು ಇದರಿಂದ ಸಾಬೀತಾಗಿದೆ. ಈಗ ಜನರು ನಮಗೆ ನೀಡಿರುವ ಈ 5 ವರ್ಷದ ಅವಕಾಶವನ್ನು ಜನಪರವಾಗಿ ಆಡಳಿತ ನೀಡಿ ಸದುಪಯೋಗ ಮಾಡಿಕೊಳ್ಳಬೇಕಾಗಿದೆ.


53 ಲಕ್ಷ ಕೋಟಿ ಇದ್ದ ದೇಶದ ಸಾಲ ಇಂದು 155 ಲಕ್ಷ ಕೋಟಿ ಆಗಿದೆ


ಈಗಾಗಲೇ ನಾವು ಏನು 5 ಗ್ಯಾರೆಂಟಿಗಳನ್ನು ನೀಡಿದ್ದೇವೆ ಅದನ್ನು ಮೊದಲ ಸಂಪುಟ ಸಭೆಯಲ್ಲೇ ಆದೇಶ ಹೊರಡಿಸಿ ಜಾರಿಗೆ ಕೊಡುತ್ತೇವೆ. ನರೇಂದ್ರ ಮೋದಿ ಅವರು ಈ ಗ್ಯಾರೆಂಟಿಗಳನ್ನು ಜಾರಿ ಮಾಡಲು ಆಗಲ್ಲ, ರಾಜ್ಯ ದಿವಾಳಿಯಾಗುತ್ತದೆ ಎಂದಿದ್ದರು. ಸಾಲ ಮಾಡಿ ದೇಶವನ್ನು ದಿವಾಳಿ ಮಾಡಿರುವುದು ಮೋದಿ ಅವರೇ. ರಾಜ್ಯವನ್ನು ಕೂಡ ದಿವಾಳಿ ಮಾಡಿರುವುದು ಬಿಜೆಪಿಯವರು.


53 ಲಕ್ಷ ಕೋಟಿ ಇದ್ದ ದೇಶದ ಸಾಲ ಇಂದು 155 ಲಕ್ಷ ಕೋಟಿ ಆಗಿದೆ. ರಾಜ್ಯದ ಮೇಲಿದ್ದ ಸಾಲ 2 ಲಕ್ಷದ 42 ಸಾವಿರ ಕೋಟಿ ಇಂದು 5 ಲಕ್ಷದ 64 ಸಾವಿರ ಕೋಟಿ ಆಗಿದೆ. ಸಾಲ ಮಾಡಿ ದೇಶವನ್ನು ಮತ್ತು ರಾಜ್ಯವನ್ನು ದಿವಾಳಿ ಮಾಡಿದವರು ಯಾರು ಮೋದಿಜೀ? ಇದಕ್ಕೆ ನಾನು ನರೇಂದ್ರ ಮೋದಿ ಅವರು ನೂರು ಬಾರಿ ರಾಜ್ಯಕ್ಕೆ ಬಂದರೂ ಏನು ಉಪಯೋಗ ಆಗಲ್ಲ ಎಂದು ಹೇಳಿದ್ದೆ. ಅವರು ಸುಳ್ಳು ಹೇಳಿ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ನಾಡಿನ ಮಹಿಳೆಯರು, ರೈತರು, ಬಡವರ ಹೀಗೆ ಇಲ್ಲಿನ ಜನರಿಗೆ ಸಂಬಂಧಿಸಿದ ವಿಚಾರಗಳನ್ನು ಬಿಟ್ಟು ಬೇರೆ ವಿಚಾರಗಳನ್ನು ಮಾತನಾಡಿದರೆ ಯಾರು ಕೇಳುತ್ತಾರೆ?


ಕಾಂಗ್ರೆಸ್ ನಾಯಕರ ಸುದ್ದಿಗೋಷ್ಠಿ


ಜನ ನಮ್ಮ ಮೇಲೆ ವಿಶ್ವಾಸ ಇಟ್ಟು ಆಶೀರ್ವಾದ ಮಾಡಿದ್ದಾರೆ, ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಈ ಸಂದರ್ಭದಲ್ಲಿ ತಿಳಿಸುತ್ತೇನೆ. ಈ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ವೇಣುಗೋಪಾಲ್‌ ಮತ್ತು ಸುರ್ಜೆವಾಲಾ ಅವರು ಕಾರ್ಯತಂತ್ರ ರೂಪಿಸುವುದು, ಪ್ರಚಾರ ಮಾಡುವುದು, ಕೆಲವೊಮ್ಮೆ ಬಿಜೆಪಿಯವರ ಜೊತೆ ಜಗಳವನ್ನು ಮಾಡಿದ್ದಾರೆ. ಇವರೆಲ್ಲರಿಗೂ ವಿಶೇಷವಾಗಿ ಧನ್ಯವಾದ ತಿಳಿಸಲು ಬಯಸುತ್ತೇನೆ.

top videos
    First published: