ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣಾ (Karnataka Election Results) ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ (Congress) ನಿರೀಕ್ಷೆಗೂ ಮೀರಿ ಗೆಲುವು ಸಾಧಿಸಿದೆ. 224 ಕ್ಷೇತ್ರಗಳಲ್ಲಿ 135 ಸ್ಥಾನಗಳಿಗೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ವಿಶೇಷವೆಂದರೆ ಕರ್ನಾಟಕದಲ್ಲಿ (Karnataka) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನೇತೃತ್ದಲ್ಲಿ ಕಳೆದ ವರ್ಷ ನಡೆದಿದ್ದ ಭಾರತ್ ಜೋಡೋ ಯಾತ್ರೆ (Bharat Jodo Yatra) ಸಾಗಿದ್ದ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ದಿಗ್ವಿಜಯ ಸಾಧಿಸಿದೆ.
ದಕ್ಷಿಣದ 7 ಜಿಲ್ಲೆಗಳಲ್ಲಿ ಕಾಂಗ್ರೆಸ್ ಜಯಬೇರಿ
ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆ ಚಾಮರಾಜನಗರ ಜಿಲ್ಲೆಯಿಂದ ಆರಂಭವಾಗಿತ್ತು. ನಂತರ ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಪಾದಯಾತ್ರೆ ನಡೆದಿತ್ತು. ಈ 7 ಜಿಲ್ಲೆಗಳಲ್ಲಿ ಒಟ್ಟು 51 ಕ್ಷೇತ್ರಗಳಿದ್ದು ಇದರಲ್ಲಿ ಕಾಂಗ್ರೆಸ್ 36 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.
51 ಕ್ಷೇತ್ರಗಳಲ್ಲಿ 36ರಲ್ಲಿ ಜಯ
ಚಾಮರಾಜನಗರದ 4 ಕ್ಷೇತ್ರಗಳಲ್ಲಿ 3 , ಮೈಸೂರಿನ 11 ಕ್ಷೇತ್ರಗಳಲ್ಲಿ 8, ಮಂಡ್ಯದ 7 ಕ್ಷೇತ್ರಗಳಲ್ಲಿ 5, ಚಿತ್ರದುರ್ಗದ 6ರಲ್ಲಿ 5, ಬಳ್ಳಾರಿಯ 5 ಕ್ಷೇತ್ರಗಳಲ್ಲಿ 5ರಲ್ಲೂ ಕಾಂಗ್ರೆಸ್ ಜಯ ಸಾಧಿಸಿದೆ. ರಾಯಚೂರಿನಲ್ಲಿ 7ರಲ್ಲಿ 4ರಲ್ಲಿ ಜಯ ಸಾಧಿಸಿದೆ.
ಇದನ್ನೂ ಓದಿ: Siddaramaiah: ನಾನು ಹೇಳಿದ್ದೇ ನಿಜವಾಯ್ತು ಎಂದ ಸಿದ್ದರಾಮಯ್ಯ! ಫಲಿತಾಂಶದ ಬಗ್ಗೆ ಸಿದ್ದು ಮಾತು
ಕರ್ನಾಟಕ ವಿಧಾನಸಭಾ ಚುನಾವಣೆ ಮೇ 10ರಂದು ನಡೆದಿತ್ತು. ರಾಜ್ಯದಲ್ಲಿ ಬರೋಬ್ಬರಿ 66 ವರ್ಷಗಳ ನಂತರ ಗರಿಷ್ಠ ಮತದಾನವಾಗಿತ್ತು. ಶೇಕಡಾ 72.81 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಆ ಮೂಲಕ ಮತದಾನದಲ್ಲಿ ಕರ್ನಾಟಕ ತನ್ನದೇ ಆದ ಹೊಸ ಐತಿಹಾಸಿಕ ದಾಖಲೆ ಸೃಷ್ಟಿಸಿತ್ತು.
ರಾಜ್ಯದ 224 ಕ್ಷೇತ್ರಗಳಲ್ಲಿ ಒಟ್ಟು 2600ಕ್ಕೂ ಹೆಚ್ಚು ಅಭ್ಯರ್ಥಿಗಳ ಭವಿಷ್ಯವನ್ನು 3 ಕೋಟಿಗೂ ಹೆಚ್ಚು ಮತದಾರರು ನಿರ್ಧರಿಸಿದ್ದಾರೆ. ರಾಜ್ಯದ 5,30,85,566 ಮತದಾರರ ಪೈಕಿ 3,88,51,807 ಮತದಾರರಿಂದ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ಒಟ್ಟು 1,96,58,398 ಪುರುಷ ಮತದಾರರಿಂದ ಹಕ್ಕು ಚಲಾಯಿಸಿದರೆ, 1,91,92,372 ಮಹಿಳಾ ಮತದಾರರಿಂದ ಮತದಾನ ಮಾಡಿದ್ದಾರೆ. ರಾಜ್ಯದಲ್ಲಿ ಒಟ್ಟು 1037 ಇತರೆ ಮತದಾರರಿಂದ ಹಕ್ಕು ಚಲಾಯಿಸಲಾಗಿದೆ.
ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ರಾಜ್ಯದ ಅತಿ ಹೆಚ್ಚು ಮತದಾನವಾಗಿದೆ. ಅಲ್ಲಿ ಶೇ.90.93ರಷ್ಟು ಮತದಾನವಾಗಿದ್ದು, ಬೆಂಗಳೂರಿನ ಹೊರವಲಯದಲ್ಲಿರುವ ಹೊಸಕೋಟೆಯಲ್ಲಿ ಶೇ.90.9ರಷ್ಟು ಮತದಾನವಾಗಿದೆ. ಬೆಂಗಳೂರಿನ ಸರ್ ಸಿವಿ ರಾಮನ್ ಕ್ಷೇತ್ರದಲ್ಲಿ ಶೇಕಡಾ 42.1 ರಷ್ಟು ಮತದಾನವಾಗಿದ್ದು, ರಾಜ್ಯದಲ್ಲಿ ಅತ್ಯಂತ ಕಡಿಮೆ ಮತದಾನವಾದ ಕ್ಷೇತ್ರವಾಗಿದೆ.
ಈ ವರ್ಷವೂ ರಾಜಧಾನಿಯಲ್ಲಿ ಕಡಿಮೆ ಮತದಾನ
ಬೆಂಗಳೂರು ಕೇಂದ್ರ- ಶೇ.54.45, ಬೆಂಗಳೂರು ಉತ್ತರ ಶೇ.50.02, ಬೆಂಗಳೂರು ದಕ್ಷಿಣ-ಶೇ.51.15, ಬೆಂಗಳೂರು ನಗರ ಶೇ.53.71ರಷ್ಟು ಮತದಾನದ ಪ್ರಮಾಣ ದಾಖಲಾಗಿದೆ. ಈ ಮೂಲಕ ರಾಜ್ಯ ರಾಜಧಾನಿಯ ಮತದಾರರು ಈ ಚುನಾವಣೆಯಲ್ಲೂ ಕಡಿಮೆ ಮತದಾನ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ