ಬೆಂಗಳೂರು: ಬಿಜೆಪಿಯ (BJP) ಭದ್ರಕೋಟೆಯಾಗಿದ್ದ ಕೊಡಗಿನಲ್ಲಿ (Kodagu) ಈ ಬಾರಿ ಅಚ್ಚರಿ ಎಂಬಂತೆ ಕಾಂಗ್ರೆಸ್ (Congress) ಮೇಲುಗೈ ಸಾಧಿಸಿದೆ. ಜಿಲ್ಲೆ ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ (BJP) ಕಳೆದ ಮೂರು ಬಾರಿ ಜಯ ಸಾಧಿಸಿತ್ತು. ಆದರೆ ಈ ಬಾರಿ ಕೊಡಗಿನ ಜನ ಕಾಂಗ್ರೆಸ್ಗೆ ಬೆಂಬಲ ಸೂಚಿಸಿದ್ದಾರೆ.
ಮಡಿಕೇರಿ ಕ್ಷೇತ್ರದಲ್ಲಿ ಅಪ್ಪಚ್ಚು ರಂಜನ್ ಅಧಿಪತ್ಯಕ್ಕೆ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿ ಗೆದ್ದಿರುವ ಎ ಮಂಜು ಅವರ ಮಗ ಡಾ. ಮಂಥರ್ ಗೌಡ ಅಂತ್ಯ ಹಾಡಿದ್ದಾರೆ. ಮಡಿಕೇರಿ ಕ್ಷೇತ್ರದಲ್ಲಿ ಅಪ್ಪಚ್ಚು ರಂಜನ್ 7ನೇ ಬಾರಿ ಚುನಾವಣಾ ಕಣದಲ್ಲಿದ್ದರು. ಅವರು 5 ಬಾರಿ ಶಾಸಕರಾಗಿದ್ದರು. ಆದರೆ ಆಡಳಿತ ವಿರೋಧಿ ಅಲೆಯಿಂದ ಕಾಂಗ್ರೆಸ್‌ನ ಯುವ ನಾಯಕ ಮಂಥರ್ ಗೌಡ 4,520 ಮತಗಳ ಅಂತರದಲ್ಲಿ ಗೆಲ್ಲುವ ಮೂಲಕ ಬಿಜೆಪಿ ಆದಿಪತ್ಯಕ್ಕೆ ಅಂತ್ಯವಾಡಿದರು.
ಮತ್ತೊಂದೆಡೆ ವಿರಾಜಪೇಟೆಯಲ್ಲಿ ಹ್ಯಾಟ್ರಿಕ್ ಗೆಲುವಿನ ಸರದಾರನಾಗಿದ್ದ ಕೆ.ಜಿ ಬೋಪಯ್ಯ ಅವರ ಗೆಲುವಿನ ನಾಗಾಲೋಟಕ್ಕೆ ಕಾಂಗ್ರೆಸ್‌ನ ಎ.ಎಸ್ ಪೊನ್ನಣ್ಣ ಬ್ರೇಕ್ ಹಾಕಿದ್ದಾರೆ. ವಕೀಲರಾದ ಪೊನ್ನಣ್ಣ 83791 ಮತ ಪಡೆದುಕೊಂಡರೆ, ಬೋಪಯ್ಯ 79500 ಮತಗಳನ್ನು ಪಡೆದು 4291 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ.
ಮಡಿಕೇರಿ ಅಷ್ಟೇ ಅಲ್ಲದೆ, ಕಾಂಗ್ರೆಸ್ ಚಾಮರಾಜನಗರದ 4 ಕ್ಷೇತ್ರಗಳಲ್ಲಿ 3, ಮಂಡ್ಯದ 7 ಕ್ಷೇತ್ರಗಳಲ್ಲಿ 5, ರಾಮನಗರದ 4 ಕ್ಷೇತ್ರಗಳಲ್ಲಿ 3, ಬಳ್ಳಾರಿಯ 5 ಕ್ಷೇತ್ರಗಳಲ್ಲಿ 5ರಲ್ಲೂ ಜಯ ಸಾಧಿಸಿದೆ.
ಒಟ್ಟಾರೆ 224 ಕ್ಷೇತ್ರಗಳಲ್ಲಿ ಕಾಂಗ್ರೆಸ್ 136 ಕ್ಷೇತ್ರಗಳಲ್ಲಿ ಭರ್ಜರಿ ಜಯ ಸಾಧಿಸಿದೆ. ಬಿಜೆಪಿ 64, ಜೆಡಿಎಸ್ 20 ಹಾಗೂ 4 ಪಕ್ಷೇತರರು ಗೆಲುವು ಸಾಧಿಸಿದ್ದಾರೆ.
ದಾಖಲೆಯ ಮತದಾನ
ಕರ್ನಾಟಕ ವಿಧಾನಸಭಾ ಚುನಾವಣೆ ಮೇ 10ರಂದು ನಡೆದಿತ್ತು. ರಾಜ್ಯದಲ್ಲಿ ಬರೋಬ್ಬರಿ 66 ವರ್ಷಗಳ ನಂತರ ಗರಿಷ್ಠ ಮತದಾನವಾಗಿತ್ತು. ಶೇಕಡಾ 72.81 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಆ ಮೂಲಕ ಮತದಾನದಲ್ಲಿ ಕರ್ನಾಟಕ ತನ್ನದೇ ಆದ ಹೊಸ ಐತಿಹಾಸಿಕ ದಾಖಲೆ ಸೃಷ್ಟಿಸಿದೆ.
ರಾಜ್ಯದ 224 ಕ್ಷೇತ್ರಗಳಲ್ಲಿ ಒಟ್ಟು 2600ಕ್ಕೂ ಹೆಚ್ಚು ಅಭ್ಯರ್ಥಿಗಳ ಭವಿಷ್ಯವನ್ನು 3 ಕೋಟಿಗೂ ಹೆಚ್ಚು ಮತದಾರರು ನಿರ್ಧರಿಸಿದ್ದಾರೆ. ರಾಜ್ಯದ 5,30,85,566 ಮತದಾರರ ಪೈಕಿ 3,88,51,807 ಮತದಾರರಿಂದ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ಒಟ್ಟು 1,96,58,398 ಪುರುಷ ಮತದಾರರಿಂದ ಹಕ್ಕು ಚಲಾಯಿಸಿದರೆ, 1,91,92,372 ಮಹಿಳಾ ಮತದಾರರಿಂದ ಮತದಾನ ಮಾಡಿದ್ದಾರೆ. ರಾಜ್ಯದಲ್ಲಿ ಒಟ್ಟು 1037 ಇತರೆ ಮತದಾರರಿಂದ ಹಕ್ಕು ಚಲಾಯಿಸಲಾಗಿದೆ.
ಹೆಚ್ಚು ಮತ್ತು ಕಡಿಮೆ ಮತದಾನ ನಡೆದಿದ್ದೆಲ್ಲಿ?
ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ರಾಜ್ಯದ ಅತಿ ಹೆಚ್ಚು ಮತದಾನವಾಗಿದೆ. ಅಲ್ಲಿ ಶೇ.90.93ರಷ್ಟು ಮತದಾನವಾಗಿದ್ದು, ಬೆಂಗಳೂರಿನ ಹೊರವಲಯದಲ್ಲಿರುವ ಹೊಸಕೋಟೆಯಲ್ಲಿ ಶೇ.90.9ರಷ್ಟು ಮತದಾನವಾಗಿದೆ. ಬೆಂಗಳೂರಿನ ಸರ್ ಸಿವಿ ರಾಮನ್ ಕ್ಷೇತ್ರದಲ್ಲಿ ಶೇಕಡಾ 42.1 ರಷ್ಟು ಮತದಾನವಾಗಿದ್ದು, ರಾಜ್ಯದಲ್ಲಿ ಅತ್ಯಂತ ಕಡಿಮೆ ಮತದಾನವಾದ ಕ್ಷೇತ್ರವಾಗಿದೆ.
ಈ ವರ್ಷವೂ ರಾಜಧಾನಿಯಲ್ಲಿ ಕಡಿಮೆ ಮತದಾನ
ಬೆಂಗಳೂರು ಕೇಂದ್ರ- ಶೇ.54.45, ಬೆಂಗಳೂರು ಉತ್ತರ ಶೇ.50.02, ಬೆಂಗಳೂರು ದಕ್ಷಿಣ-ಶೇ.51.15, ಬೆಂಗಳೂರು ನಗರ ಶೇ.53.71ರಷ್ಟು ಮತದಾನದ ಪ್ರಮಾಣ ದಾಖಲಾಗಿದೆ. ಈ ಮೂಲಕ ರಾಜ್ಯ ರಾಜಧಾನಿಯ ಮತದಾರರು ಈ ಚುನಾವಣೆಯಲ್ಲೂ ಕಡಿಮೆ ಮತದಾನ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ