Karnataka Assembly Election 2023: ಚುನಾವಣೆ ಘೋಷಣೆಯಾದಾಗಿನಿಂದ ಇಡೀ ರಾಷ್ಟ್ರದ ಚಿತ್ತ ಕರ್ನಾಟಕದತ್ತ ನೆಟ್ಟಿದೆ. ಮುಂದಿನ ಲೋಕಸಭಾ ಚುನಾವಣೆಗೆ ನಾಂದಿ ಹಾಡಲಿದೆ ಎನ್ನಲಾಗುತ್ತಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಎಲ್ಲರನ್ನೂ ಕುತೂಹಲದಿಂದ ರಾಜ್ಯದಂತೆ ನೋಡುವಂತೆ ಮಾಡಿದೆ. ಹೀಗಾಗಿ ರಾಜ್ಯದಲ್ಲಿ ಪ್ರತಿದಿನ ನಡೆಯುವ ರಾಜಕೀಯ ಘಟನಾವಳಿಗಳ ಸಂಕ್ಷಿಪ್ತ ವಿವರವನ್ನು ನ್ಯೂಸ್ 18 ಕನ್ನಡ ಓದುಗರಿಗೆ ಇಲ್ಲಿ ಕೊಡಲಾಗಿದೆ
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ಮಾಡುವ ವಿಚಾರವಾಗಿ ಬ್ರಹ್ಮಾವರ ತಾಲೂಕು ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಆಂಜನೇಯ ದೇವಳ ಮುಂಭಾಗ ಹನುಮಾನ್ ಚಾಲೀಸ್ ಪಠಣ ಮಾಡಿದರು. ಬಜರಂಗ ದಳ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರು ಕಾಂಗ್ರೆಸ್ ಪ್ರಣಾಳಿಕೆ ವಿರೋಧಿಸಿ ಹನುಮಾನ್ ಚಾಲೀಸ್ ಪಠಣ ಮಾಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಪತ್ನಿ ಅಮರೇಶ್ವರಿ ಚಿಂಚನಸೂರ್ ಕಣ್ಣೀರು ಹಾಕುತ್ತಾ ಪತಿ ಪರ ಪ್ರಚಾರ ಮಾಡಿದ್ದಾರೆ. ಖರ್ಗೆ ಅವರು ಮಂಗಳ ಸೂತ್ರ ಉಳಿಸಿದ್ದಾರೆ. ಸೆರಗೊಡ್ಡಿ ಮತ ಭೀಕ್ಷೆ ಕೇಳುತ್ತಿದ್ದೇನೆ ಎಂದು ಗುರುಮಠಕಲ್ ನಲ್ಲಿ ಹಮ್ಮಿಕೊಂಡ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅಮರೇಶ್ವರಿ ಚಿಂಚನಸೂರ್ ಮಾತನಾಡಿದರು.
ಐತಿಹಾಸಿಕ ಪುರಾಣ ಪ್ರಸಿದ್ಧ ಹೊನ್ನಾವರದ ವಿಘ್ನ ನಿವಾರಕ ಇಡುಗುಂಜಿ ಗಣಪತಿ ದೇವಾಲಯಕ್ಕೆ ತೆರಳಿ ಪೂಜೆ ಡಿಕೆ ಶಿವಕುಮಾರ್ ಪೂಜೆ ಸಲ್ಲಿಸಿದ್ದಾರೆ. ತನ್ನ ಆಪ್ತರೊಂದಿಗೆ ಇಡುಗುಂಜಿಗೆ ತೆರಳಿದ ಡಿಕೆಶಿ, ಪೂಜೆ ನಂತರ ರಾಮತೀರ್ಥ ಹೆಲಿಪಾಡ್ ಗೆ ತೆರಳಿ ರಾಣೀಬೆನ್ನೂರಿಗೆ ಪ್ರಯಾಣ ಬೆಳೆಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಡಿಕೆಶಿ ಪೂಜೆ ಸಲ್ಲಿಸಿದ್ದಾರೆ.
2023 ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ವಿಶೇಷ ಚುನಾವಣಾ ಅಂಚೆ ಲಕೋಟೆ ಹಾಗೂ ಚುನಾವಣಾ ಆ್ಯಪ್ ಬಿಡುಗಡೆ ಮಾಡಲಾಗಿದೆ. ಇದೇ ವೇಳೆ ಗಾಯಕ ವಿಜಯ್ ಪ್ರಕಾಶ್ ಹಾಡಿದ, ನಾಗೇಂದ್ರ ಪ್ರಸಾದ್ ರಚನೆಯ ಚುನಾವಣಾ ಜಾಗೃತಿ ಹಾಡು ಬಿಡುಗಡೆ ಮಾಡಲಾಗಿದೆ. ಮುಖ್ಯ ಚುನಾವಣಾಧಿಕಾರಿ ಕಚೇರಿಯಲ್ಲಿ ಕಾರ್ಯಕ್ರಮ ನಡೆಸಲಾಗಿದ್ದು, ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್, ಸಾಹಿತಿ ನಾಗೇಂದ್ರ ಪ್ರಸಾದ್ ಅವರು ಅಂಚೆ ಲಕೋಟೆ ಬಿಡುಗಡೆ ಮಾಡಿದ್ದಾರೆ.
ಕನಕಪುರದಲ್ಲಿ ಬಿಜೆಪಿಗೆ ಬೂತ್ ಏಜೆಂಟ್ ಇಲ್ಲ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರವಾಗಿ ತಿರುಗೇಟು ನೀಡಿರುವ ಆರ್ ಅಶೋಕ್, ಹಿಂದೆ ಸಾಕಷ್ಟು ಉದಾಹರಣೆಗಳು ಇದೆ. ಕನಕಪುರ ಡಿಕೆ ಶಿವಕುಮಾರ್ ಅವರ ಕಪಿ ಮುಷ್ಠಿಯಲ್ಲಿದೆ. ಆದ್ದರಿಂದ ಜನರು ಹೊರಗಡೆ ಬರಲು ತೀರ್ಮಾನ ಮಾಡಿದ್ದಾರೆ. ಎಲ್ಲಾ ಬೂತ್ ಗಳಲ್ಲೂ ಕೂಡ ನಮ್ಮ ಏಜೆಂಟ್ ಗಳು ಇರ್ತಾರೆ. ಕಾಂಗ್ರೆಸ್ ನ ಮತಗಳು ಕೂಡ ಬಿಜೆಪಿಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಏಕಾಂಗಿಯಾಗಿ 123 ಗುರಿ ಇಟ್ಟುಕೊಂಡು ಹೊರಟಿದ್ದೇನೆ. ನಿತ್ಯ ಏಳೆಂಟು ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಿದ್ದು, ಯಾವುದೇ ಭಾಗಕ್ಕೆ ಹೋದರೂ ಜೆಡಿಎಸ್ ಬೆಂಬಲಿಸುವ ವಾತಾವರಣ ಇದೆ. ನನ್ನ 123 ಗುರಿ ತಲುಪಿಸಲು ಜನ ತೀರ್ಮಾನ ಮಾಡಿದ್ದಾರೆ. ರಾಜ್ಯದ ಜವಾಬ್ದಾರಿ ಮೋದಿ ತೆಗೆದುಕೊಂಡಿದ್ದಾರೆ ಬರಲೇಬೇಕಲ್ವಾ. ಮೋದಿ ಆಗಮನವನ್ನು ಸ್ವಾಗತಿಸುತ್ತೇನೆ ಎಂದು ಹೊಸದುರ್ಗದಲ್ಲಿ ಎಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ 2 ದಿನ ಮೋದಿ ರೋಡ್ ಶೋ ನಡೆಯಲಿದ್ದು, ಶನಿವಾರದ ಜೊತೆಗೆ ಭಾನುವಾರವೂ ರೋಡ್ ಶೋ ನಿಗದಿಯಾಗಿದೆ. ಶನಿವಾರ ಬೆಳಿಗ್ಗೆ ನಿಗದಿಯಂತೆ ಮೋದಿ ರೋಡ್ ಶೋ ಆರಂಭವಾಗಲಿದ್ದು, ಶನಿವಾರ ಸಂಜೆಯಿದ್ದ ರೋಡ್ ಶೋ ಭಾನುವಾರಕ್ಕೆ ಶಿಫ್ಟ್ ಆಗಿದೆ. ಬೆಂಗಳೂರಿನಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಬಿಜೆಪಿ ಪ್ಲ್ಯಾನ್ ಮಾಡಿದೆ.
ಬಿಜೆಪಿ ಅಭ್ಯರ್ಥಿ ಶಶಿಕಲಾ ಜೊಲ್ಲೆ ಪರವಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಚಾರ ಮಾಡಿದ್ದಾರೆ. ಮೂರನೇ ಬಾರಿಗೆ ಗೆಲುವಿನ ವಿಶ್ವಾಸದಲ್ಲಿ ಇರುವ ನಿಪ್ಪಾಣಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಸಚಿವೆ ಶಶಿಕಲಾ ಜೊಲ್ಲೆ ಪರವಾಗಿ ನಿತಿನ್ ಗಡ್ಕರಿ ಭರ್ಜರಿ ಪ್ರಚಾರ ಮಾಡಿದರು.
ಇಂದು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕೋಡಿಮಠಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ ಅವರು ಕೋಡಿಮಠ ಶ್ರೀಗಳ ಜೊತೆಯಲ್ಲಿ ಪ್ರತ್ಯೇಕವಾಗಿ ಚರ್ಚೆ ನಡೆಸಿದರು. ಈ ವೇಳೆ ಕೋಡಿಮಠದ ಶ್ರೀಗಳು ಈ ಬಾರಿ ಬಹುಮತದ ಸರ್ಕಾರ ರಚನೆ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ. ಶ್ರೀಗಳ ಭೇಟಿ ಬಳಿಕ ಸಿದ್ದರಾಮಯ್ಯನವರು ಸಂತೋಷದಿಂದಲೇ ಮಠದಿಂದ ಹೊರಗೆ ಬಂದರು ಎಂದು ತಿಳಿದು ಬಂದಿದೆ.
https://t.co/30EwD8onET
ಯುವ ಜನರಿಗೆ ಸ್ಪೂರ್ತಿ ತುಂಬುವ ಕೆಲಸವನ್ನು ಬಜರಂಗದಳ ಮಾಡುತ್ತಿದೆ#CongressManifesto #KSEshwarappa #BajrangDal #KarnatakaElection2023 #AssemblyElection2023 #KarnatakaElections2023 #KannadaNews #KarnatakaAssemblyElection2023— News18 Kannada (@News18Kannada) May 4, 2023
ವರುಣಾದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪರ ಹಲವು ನಟ ನಟಿಯರು ಪ್ರಚಾರ ಕಾರ್ಯ ನಡೆಸಿದ್ದಾರೆ. ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಇಂದು ಸಿದ್ದರಾಮಯ್ಯ ಪರ ಪ್ರಚಾರ ಮಾಡಲಿದ್ದಾರೆ. ಇತ್ತೀಚೆಗೆ ನಟ ದುನಿಯಾ ವಿಜಯ್ ಸಿದ್ದರಾಮಯ್ಯ ಪರ ಚುನಾವಣಾ ಪ್ರಚಾರ ಮಾಡೋದಾಗಿ ಹೇಳಿದ್ದರು. ಇದಕ್ಕೂ ಮೊದಲು ನಟಿಯರಾದ ಉಮಾಶ್ರೀ, ರಮ್ಯಾ, ನಟ ಸಾಧುಕೋಕಿಲ ಆಗಮಿಸಿದ್ದರು. ಇದೀಗ ಸ್ಯಾಂಡಲ್‌ವುಡ್ ನಟಿ ನಿಶ್ವಿಕಾ ನಾಯ್ಡು ಕೂಡ ಮಾಜಿ ಸಿಎಂ ಪರ ಬ್ಯಾಟ್ ಬೀಸಿದ್ದಾರೆ. ವರುಣಾ ಕ್ಷೇತ್ರದ ರಾಂಪುರದಲ್ಲಿ ನಡೆದ ರೋಡ್‌ಶೋನಲ್ಲಿ ಸಿದ್ದರಾಮಯ್ಯ ಜೊತೆ ನಿಶ್ವಿಕಾ ನಾಯ್ಡು ಕೂಡ ಪ್ರಚಾರ ನಡೆಸಿದರು. ಸಿದ್ದರಾಮಯ್ಯಗೆ ಮತ ನೀಡುವಂತೆ ಜನರಲ್ಲಿ ಮನವಿ ಮಾಡಿದರು.
ರಾಯಚೂರಿನಲ್ಲಿ ನಟ ಸುದೀಪ್‌ರನ್ನು ನೋಡಲು ಬಂದವರಿಗೆ ಪೊಲೀಸರು ಲಾಠಿಯೇಟು ಕೊಟ್ಟು ಓಡಿಸಿದ ಘಟನೆ ನಡೆದಿದೆ. ಸುದೀಪ್ ಹೆಲಿಪ್ಯಾಡ್‌ನಲ್ಲಿ ಹೆಲಿಕಾಪ್ಟರ್‌ನಲ್ಲಿ ಬಂದು ಇಳಿಯುತ್ತಿದ್ದಂತೆ ಜನರು ನಟನತ್ತ ಓಡೋಡಿ ಬಂದಿದ್ದಾರೆ. ಈ ವೇಳೆ ನೂಕು ನುಗ್ಗಲು ತಪ್ಪಿಸಲು ಪೊಲೀಸರು ಲಾಠಿ ಬೀಸಿ ಎಲ್ಲರನ್ನು ಓಡಿಸಿದ್ದಾರೆ. ಈ ವೇಳೆ ನೂರಾರು ಜನ ಎದ್ನೋ ಬಿದ್ನೋ ಎಂದು ಸಿಕ್ಕಸಿಕ್ಕಲ್ಲಿ ಓಡಿದರು.
ಬಿಜೆಪಿ ಪಕ್ಷದ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಸ್ಯಾಂಡಲ್‌ವುಡ್ ನಟ ಸುದೀಪ್ ಅವರು ಇಂದು ರಾಯಚೂರಿನಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶೇಷ ಹೆಲಿಕಾಪ್ಟರ್ ಮೂಲಕ ರಾಯಚೂರಿನ ದೇವದುರ್ಗಕ್ಕೆ ಎಂಟ್ರಿ ಕೊಟ್ಟ ನಟ ಸುದೀಪ್‌ರನ್ನು ನೋಡಲು ದೇವದುರ್ಗ ಹೆಲಿಪ್ಯಾಡ್ ಬಳಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದಾರೆ.
ಮತದಾನದ ಮಹತ್ವ ಸಾರಿದ ಅಜ್ಜಿ!#KarnatakaElections2023 #Raichur #Loval18 #ViralNews #Voting #KannadaNews
— News18 Kannada (@News18Kannada) May 4, 2023
ಉಡುಪಿ: ಮನೆಯಿಂದ ಮತದಾನ ಮಾಡಿದ್ದ ವ್ಯಕ್ತಿಯೊಬ್ಬರು ಚುನಾವಣಾ ಫಲಿತಾಂಶಕ್ಕೂ ಮೊದಲೇ ಸಾವನ್ನಪ್ಪಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ. ಮೃತರನ್ನು ನಿವೃತ್ತ ಶಿಕ್ಷಕ ಗುರುರಾಜ್ ಭಟ್ (94) ಎಂದು ಗುರುತಿಸಲಾಗಿದ್ದು, ಇವರು ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಲಾಡಿ ನಿವಾಸಿಯಾಗಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ವಿಧಾನಸಭಾ ಚುನಾವಣೆಗಾಗಿ ಮನೆಯಲ್ಲಿ ಮತ ಚಲಾಯಿಸಿದ್ದರು.
ಕೆಎಸ್ ಈಶ್ವರಪ್ಪ ಕಾಂಗ್ರೆಸ್ ಪ್ರಣಾಳಿಕೆಯನ್ನು ಸುಟ್ಟಿರುವುದಕ್ಕೆ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕಲ್ಬುರ್ಗಿಯಲ್ಲಿ ಮಾತನಾಡಿದ ಅವರು, ಭಜರಂಗ ದಳ ಬ್ಯಾನ್ ಪ್ರಣಾಳಿಕೆ ಬಗ್ಗೆ ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷ ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸುರ್ಜೆವಾಲಾ ಇದಕ್ಕೆ ಉತ್ತರ ಕೊಡ್ತಾರೆ. ಆದರೆ ಈಶ್ವರಪ್ಪ ಪ್ರಣಾಳಿಕೆ ಸುಟ್ಟಿದ್ದು ಸರಿಯಲ್ಲ. ನಿಮಗೆ ಇಷ್ಟ ಆಗಲಿ ಆಗದೇ ಇರಲಿ ಸುಡುವುದು ಸರಿಯಲ್ಲ. ಈಶ್ವರಪ್ಪ ಅವರು, ನಮ್ಮ ಪಕ್ಷ ಜನರಿಗೆ ಕೊಟ್ಟಿರುವ ಗ್ಯಾರೆಂಟಿ ಸುಟ್ಟಂತೆ. ಈ ಮೂಲಕ ಈಶ್ವರಪ್ಪ ಜನತೆಗೆ ಅವಮಾನ ಮಾಡಿದ್ದಾರೆ. ಈಶ್ವರಪ್ಪ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದಂತೆ ಆಗಿದೆ ಎಂದು ಹೇಳಿದರು.
ಬಿಎಸ್‌ಪಿ ಪಕ್ಷದಿಂದ ಗೆದ್ದು ಬಿಜೆಪಿ ಸೇರಿರುವ ಕೊಳ್ಳೇಗಾಲ ಶಾಸಕ ಎನ್.ಮಹೇಶ್‌ಗೆ ಚುನಾವಣಾ ಪ್ರಚಾರದ ವೇಳೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಮೊನ್ನೆಯಷ್ಟೆ ಉಮ್ಮತ್ತೂರು ಗ್ರಾಮದಲ್ಲೂ ಬಸವಣ್ಣ ಫೋಟೋಗೆ ಹಾರ ಹಾಕಿ ಅಂಬೇಡ್ಕರ್ ಫೋಟೋ ನಿರ್ಲಕ್ಷ್ಯ ಮಾಡಿದ್ದಕ್ಕೆ ಗ್ರಾಮಸ್ಥರು ತಡೆದು ಪ್ರಶ್ನಿಸಿದ್ದರು. ಇದೀಗ ಮಸಣಾಪುರ ಗ್ರಾಮದಲ್ಲಿಯೂ ‘ಗೋ ಬ್ಯಾಕ್ ಎನ್ ಮಹೇಶ್’ ಪ್ರತಿರೋಧ ವ್ಯಕ್ತವಾಗುತ್ತಿದ್ದು, ಐದು ವರ್ಷದಿಂದ ಗ್ರಾಮಕ್ಕೆ ಭೇಟಿ ಕೊಡದ ನೀವು ಈಗ್ಯಾಕೆ ಬಂದಿದ್ದೀರಿ ಎಂದು ಗ್ರಾಮಸ್ಥರು ಕ್ಲಾಸ್ ತೆಗೆದುಕೊಂಡಿದ್ದಾರೆ. ಚುನಾವಣೆಗೂ ಮುನ್ನವೇ ಎನ್ ಮಹೇಶ್ ವಿರುದ್ಧ ಕ್ಷೇತ್ರದಲ್ಲಿ ವಿರೋಧ ವ್ಯಕ್ತವಾಗಿತ್ತು, ಇದೀಗ ಹೋದಲ್ಲಿ ಬಂದಲ್ಲಿ ನಾನಾ ಕಾರಣಗಳಿಗೆ ಮತದಾರರು ಬಿಸಿ ಮುಟ್ಟಿಸುತ್ತಿದ್ದಾರೆ.