Karnataka Assembly Election: ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯವಾಗಿದ್ದು, ಚುನಾವಣೆ ಪ್ರಚಾರ ಅಬ್ಬರ ಹೆಚ್ಚಾಗಲಿದೆ.
ಬಳ್ಳಾರಿ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಮುನ್ನಾಬಾಯಿ ಅವರು ಜನಾರ್ದನ ರೆಡ್ಡಿ ಅವರ ಕೆಆರ್ ಪಿಪಿ ಸೇರ್ಪಡೆಯಾಗಿದ್ದಾರೆ. ಬಳ್ಳಾರಿ ನಗರ ಕೆಆರ್ ಪಿಪಿ ಅಭ್ಯರ್ಥಿ ಲಕ್ಷ್ಮೀ ಅರುಣಾ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಜೆಡಿಎಸ್ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಬಂಡಾಯ ಬಂದಿದ್ದ ಅನಿಲ್ ಲಾಡ್ ಅವರಿಗೆ ಜೆಡಿಎಸ್ ಟಿಕೆಟ್ ನೀಡಿತ್ತು. ಇದರಿಂದ ಮನನೊಂದ ಮುನ್ನಾಬಾಯಿ ಅವರು, ಅಪಾರ ಬೆಂಬಲಿಗರೊಂದಿಗೆ ಕೆಆರ್ ಪಿಪಿ ಸೇರ್ಪಡೆಯಾಗಿದ್ದಾರೆ.
ಮಾಲೂರು ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯ್ ಕುಮಾರ್ಗೆ ಬಿಜೆಪಿ ಗಾಳ ಹಾಕಲಾಗಿದೆ ಅಂತೆ. ಈ ಬಗ್ಗೆ ವಿಜಯ್ ಕುಮಾರ್ ಜೊತೆ ಸಚಿವ ಕೆ. ಸುಧಾಕರ್ ಮಾತುಕತೆ ನಡೆಸಿದ್ದು, ನಿಗಮ ಮಂಡಳಿ ಆಫರ್ ನೀಡಲಾಗಿದೆಯಂತೆ. ಮಾಲೂರು ಕಣದಿಂದ ಹಿಂದೆ ಸರಿಯುವಂತೆ ಸೂಚಿಸಲಾಗಿದೆಯಂತೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಜಯ್ಕುಮಾರ್ ನಾಮಿನೇಷನ್ ವಾಪಸ್ ಹಿಂಪಡೆಯಲ್ಲ ಎಂದಿದ್ದಾರೆ.
ಶಿಕಾರಿಪುರದ ಕಾಂಗ್ರೆಸ್ ಮುಖಂಡ ಶಾಂತವೀರಪ್ಪ ಕಾಂಗ್ರೆಸ್ಗೆ ಗುಡ್ಬೈ ಹೇಳಿದ್ದಾರೆ. ಇದಾದ ಬಳಿಕ ಮಾತನಾಡಿದ ಶಾಂತವೀರಪ್ಪ ಯಡಿಯೂರಪ್ಪನಿಂದಾಗಿ 2 ಬಾರಿ ನನಗೆ ಅನ್ಯಾಯವಾಗಿದೆ. ಸಿದ್ದರಾಮಯ್ಯ ಜೊತೆ ಯಡಿಯೂರಪ್ಪ ಮ್ಯಾಚ್ ಫಿಕ್ಸಿಂಗ್ ಮಾಡಿದ್ದಾರೆ. ಜೀತದಾಳುಗಳನ್ನಾಗಿ ಮಾಡಿಕೊಂಡು ರಾಜಕೀಯ ಮಾಡಿದ್ದಾರೆಂದು ಆರೋಪ ಮಾಡಿದ್ದಾರೆ.
ಮಳೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಇಂದು ದೇವನಹಳ್ಳಿ ಬಳಿಯ ವಿಜಯಪುರ ಪಟ್ಟಣದಲ್ಲಿ ನಡೆಯ ಬೇಕಿದ್ದ ಅಮಿತ್ ಶಾ ರೋಡ್ ಶೋ ರದ್ದಾಗಿದೆ. ಅಮಿತ್ ಶಾ ಏರ್ಪೋಟ್ ನಿಂದ ಬೆಂಗಳೂರಿಗೆ ತೆರಳುವ ನಿರೀಕ್ಷೆ ಇದ್ದು, ಈಗಾಗಲೇ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿರುವ ಅಮಿತ್ ಶಾ, ಸಿಎಮ ಬೊಮ್ಮಾಯಿ ಹಾಗೂ ಸಚಿವ ಡಾ ಕೆ ಸುಧಾಕರ್ ಅವರೊಂದಿಗೆ ವಿಐಪಿ ಲಾಂಜ್ನಲ್ಲಿ ಕಾಯುತ್ತಿದ್ದಾರೆ.
ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಪ್ರಶಾಂತ್ ಸಲ್ಲಿಕೆ ಮಾಡಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ ಜಾಮೀನು ನೀಡಿ ಆದೇಶ ನೀಡಿದೆ. ಮನೆಯಲ್ಲಿ 8 ಕೋಟಿ ರೂಪಾಯಿ ಪತ್ತೆಯಾದ ಪ್ರಕರಣದ ಸಂಬಂಧ ಪ್ರಶಾಂತ್ ಮಾಡಾಳ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧನ ಮಾಡಿದ್ದರು.
ರಾಮನಗರದ ಕನಕಪುರದಲ್ಲಿ ಸ್ಪರ್ಧಿಸುತ್ತಿರುವ ಆರ್.ಅಶೋಕ್, ದೇಗುಲ ಮಠಕ್ಕೆ ಭೇಟಿ ನೀಡಿದ್ದಾರೆ. ಸಚಿವ ಆರ್.ಅಶೋಕ್ ಮಠದಲ್ಲಿ ಪೂಜೆ ಸಲ್ಲಿಸಿದ್ದರು. ಬಳಿಕ ಮಾತಾಡಿದ ಅವರು, ಕನಕಪುರದಲ್ಲಿ ಯಾರೇ ಅಭ್ಯರ್ಥಿ ಆದರೂ ನಾನು ಚುನಾವಣೆಗೆ ಎದರಿಸಲು ಸಿದ್ಧನಿದ್ದೇನೆ. ಕಾಂಗ್ರೆಸ್ನಲ್ಲಿ ಹಲವರು ಸಿಎಂ ರೇಸ್ನಲ್ಲಿದ್ದಾರೆ. ಸಿದ್ದರಾಮಯ್ಯ, ಎಂ.ಬಿ ಪಾಟೀಲ್, ಪರಮೇಶ್ವರ್ ಇದ್ದಾರೆ. ಡಿಕೆ ಶಿವಕುಮಾರ್ ಮಾತ್ರ ಯಾಕೆ ಭಯ ಪಡ್ತಾರೆ ಎಂದು ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಧಾರವಾಡ ಪ್ರವೇಶಕ್ಕೆ ಅನುಮತಿ ಕೋರಿ ಮಾಜಿ ಸಚಿವ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿ ಸಲ್ಲಿಸಿದ್ದರು. ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿದೆ. ವಿನಯ್ ಕುಲಕರ್ಣಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.
ಚಿತ್ತಾಪುರ ಬಿಜೆಪಿ ಅಭ್ಯರ್ಥಿಗೂ ನಾಮಪತ್ರ ತಿರಸ್ಕಾರದ ಭಯ ಕಾಡ್ತಿದೆ. ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ನಾಮಪತ್ರ ತಿರಸ್ಕೃತಗೊಳ್ಳುವ ಭಯ ಇರೋದರಿಂದ ಅವರ ಪತ್ನಿ ಭಾರತಿ ಮಣಿಕಂಠ ರಾಠೋಡ್ ಕೂಡಾ ನಾಮಿನೇಷನ್ ಮಾಡಿದ್ದಾರೆ. ನಿನ್ನೆ ಸಂಜೆ ಚಿತ್ತಾಪುರ ತಹಶೀಲ್ದಾರ್ ಕಚೇರಿಯಲ್ಲಿ ಭಾರತಿ ನಾಮಪತ್ರ ಸಲ್ಲಿಸಿದ್ದಾರೆ. ಮಣಿಕಾಂತ್ ರಾಥೋಡ್ ಮೇಲೆ 40ಕೂ ಹೆಚ್ಚು ಪ್ರಕರಣ ಇವೆ. ಆದ್ರಿಂದ ನಾಮಪತ್ರ ತಿರಸ್ಕಾರದ ಭೀತಿ ಎದುರಾಗಿದೆ.
ಚಾಮರಾಜಪೇಟೆಯ ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಆಹಮದ್ ನಾಮಪತ್ರ ತಿರಸ್ಕರಿಸುವಂತೆ ಚುನಾವಣಾಧಿಕಾರಿಗಳಿಗೆ ಬಿಜೆಪಿ ಮನವಿ ಮಾಡಿಕೊಂಡಿದೆ. ನಾಮಪತ್ರ ಸಲ್ಲಿಕೆಯ ವಿವರದಲ್ಲಿ ಒಂದು ಕಾಲಂ ಖಾಲಿ ಬಿಡಲಾಗಿದೆ. ಲೋಕಾಯುಕ್ತಕ್ಕೆ ಮಾಹಿತಿ ಸಲ್ಲಿಸುವ ವೇಳೆ ತನ್ನ ಅವಲಂಬಿತರ ಹೆಸರಿನಲ್ಲಿ ತಾಯಿ ಹೆಸರು ಸೇರಿಸಿದ್ದಾರೆ. ಆದ್ರೆ ನಾಮಪತ್ರದಲ್ಲಿ ಮಾತ್ರ ತಾಯಿ ಹೆಸರನ್ನು ಪ್ರಸ್ತಾಪಿಸಿಲ್ಲ. ಹೀಗಾಗಿ ಸುಪ್ರೀಂ ಕೋರ್ಟ್ ಆದೇಶ ವನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ನಾಮಪತ್ರ ತಿರಸ್ಕರಿಸುವಂತೆ ಚಾಮರಾಜಪೇಟೆಯ ನವಭಾರತ ಸೇನಾ ಪಾರ್ಟಿಯ ವಿಧಾನಸಭಾ ಅಭ್ಯರ್ಥಿ ರುಕ್ಮಂಗ ಎಂನವರು ದೂರು ಸಲ್ಲಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಲ್ಲಿಸಿದ್ದ ನಾಲ್ಕು ನಾಮಪತ್ರಗಳು ಸ್ವೀಕೃತವಾಗಿವೆ. ಚುನಾವಣಾ ಆಯೋಗ ನಾಮಪತ್ರ ಅಂಗೀಕರಿಸಿದ್ದು, ಡಿಕೆ ಶಿವಕುಮಾರ್ ಸ್ಪರ್ಧೆಗೆ ಯಾವುದೇ ಅಡ್ಡಿ ಇಲ್ಲ
ಯಡಿಯೂರಪ್ಪ ಅವರ ರಟ್ಟೆ ಇನ್ನೂ ಗಟ್ಟಿ ಇದೆ . ಯಡಿಯೂರಪ್ಪ ಇವತ್ತು ರಾಜ್ಯದ ಮುಖ್ಯಮಂತ್ರಿ ಅಲ್ಲ ಪಕ್ಷದ ರಾಜ್ಯಾಧ್ಯಕ್ಷರೂ ಅಲ್ಲ. ಆದರೂ ಸಹ 81 ನೇ ವಯಸ್ಸಿನಲ್ಲು ಸಹ ಅವರ ರಟ್ಟೆ ಇನ್ನೂ ಗಟ್ಟಿ ಇದೆ. ಅವರು ಸುಮ್ಮನೆ ಕೂರುವ ಜಾಯಮಾನದವರಲ್ಲ. ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ತನಕ ಯಡಿಯೂರಪ್ಪ ವಿರಮಿಸುವುದಿಲ್ಲ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ.
ತಪ್ಪಿದ್ದರೆ ನಾಮಪತ್ರ ತಿರಸ್ಕೃತ ಆಗುತ್ತೆ. ಅದಕ್ಕೆ ಯಾಕೆ ಡಿಕೆ ಶಿವಕುಮಾರ್ ಭಯ ಪಡ್ತಾರೆ. ನಮ್ಮ ಪಕ್ಷದ ಲೀಗಲ್ ಸೆಲ್ ಅವರು ಕನಕಪುರಕ್ಕೆ ಬಂದಿದ್ದಾರೆ. ವ್ಯತ್ಯಾಸ ಇದ್ದರೆ ಅಲ್ಲೇ ಅಬ್ಜೆಕ್ಷನ್ ಮಾಡ್ತಾರೆ. ಕನಕಪುರ ಕ್ಷೇತ್ರದ ಚುನಾವಣೆಯನ್ನು ಹೈಕಮಾಂಡ್ ನೋಡಕೊಳ್ಳುತ್ತಿದೆ. ಇಲ್ಲಿ ಯಾವ ರೀತಿ ಪ್ರಚಾರ ಮಾಡಬೇಕು ಅನ್ನೋದನ್ನು ಕೂಡ ಹೈಕಮಾಂಡ್ ನಿರ್ಧಾರ ಮಾಡುತ್ತದೆಕನಕಪುರದಲ್ಲಿ ಯಾರೇ ಅಭ್ಯರ್ಥಿ ಆದರೂ ಕೂಡ ನಾನು ಎದುರಿಸುತ್ತೇನೆ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಮೈಸೂರು ಚುನಾವಣಾ ಅಖಾಡಕ್ಕೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಎಂಟ್ರಿ ಕೊಟ್ಟಿದ್ದಾರೆ. ಖಾಸಗಿ ಹೋಟೆಲ್ನಲ್ಲಿ ಆಯೋಜನೆ ಮಾಡಲಾಗಿರುವ ಮೈಸೂರು ವಿಭಾಗದ ಕಾರ್ಯಕರ್ತರ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ.
ಬೆಳಕು ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಗಮನಿಸಿ. ರಾಜ್ಯಕ್ಕೆ ಒಳ್ಳೆಯದಾಗಲಿದೆ ನೀವೆಲ್ಲರೂ ಮುಕ್ತ ಕಂಠದಿಂದ ಪಕ್ಷಕ್ಕೆ ಬನ್ನಿ. ಬೇಜಾರು ಮಾಡಿಕೊಳ್ಳದೆ ಎಲ್ಲರೂ ಪಕ್ಷಕ್ಕೆ ಬನ್ನಿ. ಪಕ್ಷ ಎಲ್ಲರಿಗೂ ಮುಕ್ತ ಅವಕಾಶ ನೀಡಲಿದೆ ಬಿಜೆಪಿ, ಜೆಡಿಎಸ್ ಕಾರ್ಯಕರ್ತರನ್ನು ಡಿಕೆ ಶಿವಕುಮಾರ್ ಆಹ್ವಾನಿಸಿದರು.
ಇವತ್ತು ಬೆಳಗ್ಗೆ ಪ್ರಧಾನಿ ಮೋದಿ ಕರೆ ಮಾಡಿದ್ದರು. ಮೋದಿಯವರ ಕರೆ ಅಂದಾಗ ನನಗೆ ಆಶ್ಚರ್ಯವಾಯ್ತು. ಹಿರಿಯರ ಸೂಚನೆ ಪ್ರಕಾರ ನಿವೃತ್ತಿ ಪತ್ರ ಬರೆದಿದ್ದೆ. ಈ ಹಿನ್ನೆಲೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಶೆಟ್ಟರ್ ಪಕ್ಷ ಬಿಡುವಾಗ ಅವರಿಗೆ ಪತ್ರ ಬರೆದಿದ್ದೆ. ನನ್ನ ನಿರ್ಧಾರ ನನಗೆ ವಿಶೇಷ ಅನಿಸಿಲ್ಲ. ಪ್ರಧಾನಿ ಮೋದಿ ಪ್ರಶಂಸೆ ಬಿಜೆಪಿ ಸಂಸ್ಕಾರ. ಟಿಕೆಟ್ ಸಿಗೋದಿಲ್ಲ ಅಂತ ಬೇಸರ ಮಾಡುವುದು ಸರಿಯಲ್ಲ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಗಡಿ ಜಿಲ್ಲೆ ಬೀದರ್‌ಗೆ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಆಗಮಿಸಲಿದ್ದಾರೆ. ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಜಿಲ್ಲೆಯ ಪ್ರಮುಖ ಸ್ವಾಮೀಜಿಗಳ ಜೊತೆ ಸಭೆ ನಡೆಸಲಿದ್ದಾರೆ. ಆರು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ತಗಳನ್ನಾದರೂ ಗೆಲ್ಲಲೇಬೆಕೆಂದು ಬಿಜೆಪಿ ಪಣತೊಟ್ಟಿದೆ.
ನಾಮಪತ್ರ ತಿರಸ್ಕೃತ ಆತಂಕದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬೆಳಗ್ಗೆ 10.30ಕ್ಕೆ ಸುದ್ಗಿಗೋಷ್ಠಿ ಕರೆದಿದ್ದಾರೆ. 500 ಕ್ಕೂ ಹೆಚ್ಚು ಬಿಜೆಪಿಯವರಿಂದ ಡಿಕೆಶಿಯ ಆಸ್ತಿ ಪ್ರಮಾಣ ಪತ್ರಗಳ ಡೌನ್ ಲೋಡ್ ಮಾಡಲಾಗಿದೆ ಎನ್ನಲಾಗಿದೆ. ಈ ಹಿನ್ನೆಲೆ ಸುದ್ದಿಗೋಷ್ಠಿ ಕರೆದಿದ್ದಾರೆ ಎನ್ನಲಾಗಿದೆ.
ಮಾಜಿ ಸಚಿವ ಈಶ್ವರಪ್ಪ ಅವರಿಗೆ ಕರೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಕುಶಲೋಪಚಾರಿ ವಿಚಾರಿಸಿದ್ದಾರೆ. ಈ ವೇಳೆ ಪಕ್ಷ, ಸಂಘಟನೆ ಸದಾ ನಿಮ್ಮೊಂದಿಗೆ ಇದೆ ಎಂದು ಈಶ್ವರಪ್ಪ ಹೇಳಿದ್ದಾರಂತೆ. ಶಿವಮೊಗ್ಗ ವಿಧಾನಸಭಾ ಚುನಾವಣೆಯ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.