Karnataka Assembly Elections 2023: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ಕಾವು ತಾರಕಕ್ಕೇರಿರುವ ಬೆನ್ನಲ್ಲೇ ಇಂದು ಬಿಜೆಪಿ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಬಿಡುಗಡೆ ಮಾಡಲಿದ್ದಾರೆ. ಇತ್ತ ಮಂಗಳೂರಿನಲ್ಲಿ ರಾಹುಲ್, ಶಾ ಬಳಿಕ ಇಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಕ್ಯಾಂಪೇನ್ ನಡೆಸಲಿದ್ದಾರೆ.
ಕಾಂಗ್ರೆಸ್ಗೆ ಮತ ಹಾಕಿ ಎಂದ ಎಸ್.ಎಲ್.ಭೋಜೇಗೌಡರಿಗೆ ಜೆಡಿಎಸ್ನದ್ದು ಅಧಿಕೃತ ಹೊಂದಾಣಿಕೆಯೋ, ರಾಜಕೀಯ ವ್ಯಭಿಚಾರವೋ ಅಂತಾ ಸಿ.ಟಿ.ರವಿ ತಿರುಗೇಟು ಕೊಟ್ಟಿದ್ದಾರೆ. ನಿಮ್ಮದು ಚುನಾವಣಾ ಪೂರ್ವ ಮೈತ್ರಿಯಾದರೆ ಘೋಷಣೆ ಮಾಡಿ, ಸಾಮರ್ಥ್ಯವಿದ್ದರೆ ಜಿಲ್ಲೆಯಲ್ಲಿ ಜೆಡಿಎಸ್ಗೆ ಮತ ಹಾಕಬೇಡಿ ಎಂದು ಹೇಳಿ. ತಿಮ್ಮಶೆಟ್ಟಿ ಮನೆಯನ್ನು ಏಕೆ ಹಾಳು ಮಾಡುತ್ತೀರಾ? ಆತ ಫ್ಲೆಕ್ಸ್ ಹಾಕೋಕೆ ಅಷ್ಟೆ ಸೀಮಿತಾನ. ಮನೆಹಾಳು ಮಾಡುವ ರಾಜಕಾರಣ ಎಷ್ಟು ದಿನ ನಡೆಯುತ್ತೆ ಅಂತಾ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಚುನಾವಣಾ ಕಣ ಮತ್ತಷ್ಟು ರಂಗೇರಿದೆ. ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್ ಪರ ಸಿನಿತಾರೆಯರು ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರ ನಗರದ 31ನೇ ವಾರ್ಡ್ ಇಂದಿರಾ ನಗರದಲ್ಲಿ ನಟ ನೆನಪಿರಲಿ ಪ್ರೇಮ್ ಪ್ರಚಾರ ಮಾಡಿದರು. ನೂರಾರು ಬಿಜೆಪಿ ಕಾರ್ಯಕರ್ತರೊಂದಿಗೆ ‘ಲವ್ಲಿ ಸ್ಟಾರ್’ ಪ್ರೇಮ್ ಮತಬೇಟೆ ನಡೆಸಿದರು.
ವಿಜಯಪುರದ ಬಸವನಬಾಗೇವಾಡಿ ಜೆಡಿಎಸ್ ಅಬ್ಬರದ ಪ್ರಚಾರ ನಡೆಸುತ್ತಿದೆ. ಮಾಜಿ ಸಿಎಂ ಕುಮಾರಸ್ವಾಮಿ ಹೆಲಿಪ್ಯಾಡ್ ನಿಂದ ಜೆಡಿಎಸ್ ಸಮಾವೇಶದ ವರೆಗೆ ಬೈಕ್ ರ್ಯಾಲಿ ನಡೆಸಿದ್ರು. ಬಸವನಬಾಗೇವಾಡಿ ಪಟ್ಟಣದ ಬಸವೇಶ್ವರ ದೇಗುಲಕ್ಕೆ ಭೇಟಿ ದರ್ಶನ ಪಡೆದ ನಂತ್ರ ಕುಮಾರಸ್ವಾಮಿ ಮನಗೂಳಿ ರಸ್ತೆಯಲ್ಲಿ ಸಮಾವೇಶ ನಡೆಸಿದರು.
ಬೆಳಗಾವಿಯ ಬೈಲಹೊಂಗಲ ತಾಲೂಕಿನ ನೇಸರ್ಗಿ ಗ್ರಾಮದಲ್ಲಿ ನಟ ಸುದೀಪ್ ಬಿಜೆಪಿ ಅಭ್ಯರ್ಥಿ ಮಹಾಂತೇಶ ದೊಡ್ಡಗೌಡರ ಪರ ರೋಡ್ ಶೋ ಮಾಡಿ ಮತಯಾಚಿಸಿದರು. ರೋಡ್ ಶೋ ವೇಳೆ ಸುದೀಪ್ ನೋಡಲು ಅಭಿಮಾನಿಗಳು ತಳ್ಳಾಟ ನೂಕಾಟ ನಡೆಸಿದರು.
ಮಂಡ್ಯದ ಮಳವಳ್ಳಿಯ ಬಿಜೆಪಿ ಅಭ್ಯರ್ಥಿ ಪರ ಸಂಸದೆ ಸುಮಲತಾ ಅಂಬರೀಶ್ ಭರ್ಜರಿ ಮತಯಾಚನೆ ನಡೆಸಿದ್ದಾರೆ. ವೇದಿಕೆಯ ಮೇಲೆ ಸುಮಲತಾ ನಾನು ಮಳವಳ್ಳಿಯ ಹುಚ್ಚೇಗೌಡರ ಸೊಸೆ ಎಂದು ಮತ್ತೊಮ್ಮೆ ತಮ್ಮ ಮಾವರನ್ನ ನೆನಪಿಸಿಕೊಂಡಿದ್ದಾರೆ.
ಚುನಾವಣಾ ಕಾವು ಜೋರಾಗುತ್ತಿದ್ದಂತೆ ಬಿಜೆಪಿ ನಾಯಕರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಗೃಹಸಚಿವ ಅಮಿತ್ ಶಾ ರಾಣೇಬೆನ್ನೂರಿಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದರು. ರೋಡ್ ಶೋ ವೇಳೆ ಶಾ ನೋಡಲು ಸಾವಿರಾರು ಕಾರ್ಯಕರ್ತರು ಮುಗಿಬಿದ್ದಿದ್ದು, ಬಸ್ಸ್ಟ್ಯಾಂಡ್ ಸರ್ಕಲ್ನಲ್ಲಿ ನೂಕು ನೂಗ್ಗಲು ನಡೆಯಿತು.
ಕಾಂಗ್ರೆಸ್ ನಲ್ಲಿಯೂ ನೀವು ಪ್ರಚಾರ ಮಾಡ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸುದೀಪ್, ಕಾಂಗ್ರೆಸ್ ನಲ್ಲಿಯೂ ಕೂಡ ನನಗೆ ಸ್ನೇಹಿತರಿದ್ದಾರೆ ಎಂದು ಹೇಳಿದ್ದಾರೆ. ಬೆಳಗಾವಿಯಲ್ಲಿ ಜಿಲ್ಲೆಯಲ್ಲಿ ಇವತ್ತು ಪ್ರಚಾರ ಮಾಡುತ್ತೇನೆ. ನಾನು ಬೊಮ್ಮಾಯಿಯವರ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ. ಈಗಾಗಲೇ ಸಾಕಷ್ಟು ಬಾರಿ ಈ ವಿಚಾರವನ್ನ ಹೇಳಿದ್ದೇನೆ ಎಂದು ನಟ ಕಿಚ್ಚ ಸುದೀಪ್ ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿ ಪರ ನಟ ಪ್ರಥಮ್ ಚುನಾವಣಾ ಪ್ರಚಾರ ಮಾಡಿದ್ದಾರೆ. ಬಿ.ಸುರೇಶ್ ಗೌಡ ಅವರು ಬಿಎಸ್‌ವೈ ಅವರ ಮಾನಸ ಪುತ್ರ. ಹೀಗಾಗಿ ನೀವು ಸುರೇಶ್ ಗೌಡರಿಗೆ ಹಾಕುವ ಮತ ಬಿಎಸ್‌ವೈಗೆ ಕೊಟ್ಟಂತೆ. ಸುರೇಶ್‌ಗೌಡ್ರು ರಾಜ್ಯ, ರಾಷ್ಟ್ರೀಯ ನಾಯಕರ ವಿಶ್ವಾಸಗಳಿಸಿರುವ ನಾಯಕರಾಗಿದ್ದಾರೆ. ಹಾಗಾಗಿ ಯಾರೂ ಮಿಸ್ ಮಾಡದೆ ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳಿ ಎಂದು ನಟ ಪ್ರಥಮ್ ಮನವಿ ಮಾಡಿದ್ದಾರೆ.
ಸಿದ್ದರಾಮಯ್ಯ ಅವರು ನಿನ್ನೆ ಭಾಷಣದ ವೇಳೆ ನೀಚ ಎಂಬ ಪದ ಬಳಸಿದ್ದಾರೆ. ಖರ್ಗೆ ಮೋದಿ ಅವರನ್ನ ವಿಷದ ಹಾವು ಅಂತಾರೆ. ಖರ್ಗೆ ಅಧ್ಯಕ್ಷರಾದ ಮೇಲೆ ಏನನ್ನೋ ಸಾಧಿಸುತ್ತೇನೆ ಅಂದು ಕೊಂಡಿದ್ರು. ಆದ್ರೆ ಏನನ್ನು ಸಾಧಿಸಲು ಆಗಿಲ್ಲ. ಹೀಗಾಗಿ ಕಾಂಗ್ರೆಸ್ ನಾಯಕರು ಹತಾಶರಾಗಿ ಹೀಗೆ ಮಾತನಾಡ್ತಾ ಇದ್ದಾರೆ ಎಂದು ಸಚಿವ ಬಿಸಿ ನಾಗೇಶ್ ಕಿಡಿಕಾರಿದ್ದಾರೆ.
ಮಂಡ್ಯ : ಕಾಂಗ್ರೆಸ್‌ನ ಉಚಿತ ಯೋಜನೆ ಕುರಿತು ಸಂಸದೆ ಸುಮಲತಾ ವ್ಯಂಗ್ಯವಾಡಿದ್ದಾರೆ. ಉಚಿತ ಯೋಜನೆ ಅಂತೀರಾ ಅದನ್ನ ಹೇಗೆ ಪೂರೈಸುತ್ತೀರಾ? ಸರ್ಕಾರಿ ನೌಕರರಿಗೆ ಹೇಗೆ ವೇತನ ನೀಡ್ತೀರಾ? ಮಳೆ ಬಂದು ಅತಿವೃಷ್ಠಿಯಾದ್ರೆ ಪರಿಹಾರ ಎಲ್ಲಿಂದ ತಂದು ಕೊಡ್ತಿರಾ? ಎಂದು ಕಾಂಗ್ರೆಸ್ ನಾಯಕರಿಗೆ ಮಂಡ್ಯದ ಮಳವಳ್ಳಿಯಲ್ಲಿ ಸಂಸದೆ ಸುಮಲತಾ ಅಂಬರೀಷ್ ಪ್ರಶ್ನಿಸಿದ್ದಾರೆ.
ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ನಟ ಸುದೀಪ್ ಅವರ ರೋಡ್ ಶೋ ರದ್ದುಗೊಂಡಿದೆ. ಮೊದಲು ಸುಳೇಭಾವಿಯಲ್ಲಿ ನಿಗದಿಯಾಗಿದ್ದ ರೋಡ್ ಶೋ, ಬಳಿಕ ತಾರಿಹಾಳ ಗ್ರಾಮದಲ್ಲಿ ಆಯೋಜಿಸಲಾಗಿತ್ತು. ಬಿಜೆಪಿ ಅಭ್ಯರ್ಥಿ ನಾಗೇಶ ಮನ್ನೊಳ್ಕರ್ ಪರ ಸುದೀಪ್ ಪ್ರಚಾರ ಮಾಡುವವರಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಸುದೀಪ್ ರೋ ಶೋ ರದ್ದುಗೊಂಡಿದೆ. ಇದಕ್ಕೆ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಬ್ಬಿಯಲ್ಲಿ ರೋಡ್ ಶೋ ಅಂತ್ಯಗೊಳಿಸಿ ಸಾವಿರಾರು ಕಾರ್ಯಕರ್ತರನ್ನುದ್ದೇಶಿಸಿ ಬಹರಿಂಗ ಭಾಷಣ ಮಾಡಿದರು. ಆ ಬಳಿಕ ಅಲ್ಲಿಂದ ಹೆಲಿಕಾಪ್ಟರ್‌ನತ್ತ ತೆರಳಿದ ಅಮಿತ್ ಶಾ, ಸ್ವಲ್ಪ ಸಮಯದ ಬಳಿಕ ತಿಪಟೂರಿನಲ್ಲಿ ಬಿಸಿ ನಾಗೇಶ್ ಪರ ಮತ ಯಾಚನೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಭೋಜೇಗೌಡನನ್ನ ಖರೀದಿ ಮಾಡುವ ಶಕ್ತಿ ಯಾರಿಗೂ ಇಲ್ಲ. ಸಿ.ಟಿ.ರವಿಗೂ ಇಲ್ಲ, ಅವರು ಮನಸ್ಸು ಮಾಡಿದ್ರೆ ಆಗಬಹುದು ಎಂದು ಚಿಕ್ಕಮಗಳೂರಿನಲ್ಲಿ ಎಂಎಲ್ ಸಿ ಎಸ್.ಎಲ್.ಭೋಜೇಗೌಡ ಹೇಳಿದ್ದಾರೆ. ಭೋಜೇಗೌಡ ಡೀಲ್ ಆಗಿದ್ದಾರೆ ಎಂಬ ಸಿಟಿ ರವಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಎಂಎಲ್‌ಸಿ ಭೋಜೇಗೌಡ, ಹೊರಬಂದಿರುವ ವಿಡಿಯೋಗಳು ನನ್ನದೆ, ನನ್ನ ಹೇಳಿಕೆಗೆ ನಾನು ಬದ್ಧ. ನಾನೇ ಭೋಜೇಗೌಡ, ಅದು ನನ್ನ ಹೇಳಿಕೆ, ಅದಕ್ಕೆ ನನ್ನ ಪಕ್ಷ ನನಗೆ ನೋಟೀಸ್ ಕೂಡ ನೀಡಿದೆ ಎಂದು ಹೇಳಿದರು.
ಸಚಿವ ಡಾ.ಕೆ ಸುಧಾಕರ್ ಪರ ನಟ ಪ್ರೇಮ್ ಅವರು ಪ್ರಚಾರ ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರದ ಇಂದಿರಾ ನಗರದಲ್ಲಿ ನಟ ಪ್ರೇಮ್ ಪ್ರಚಾರ ಮಾಡುತ್ತಿದ್ದು, ಇಂದಿರಾ ನಗರದ ಬೀದಿ ಬದಿಯ ಹೋಟೆಲ್‌ನಲ್ಲಿ ತಿಂಡಿ ತಿಂದು, ನಗರದ ಮನೆ ಮನೆಗೆ ಹೋಗಿ ಸುಧಾಕರ್ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಜನರಿಗೆ ತಿಳಿಸುತ್ತಿದ್ದಾರೆ. ಆ ಮೂಲಕ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಧಾಕರ್ ಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ.
ಬಿಜೆಪಿ ಕರ್ನಾಟಕ ಪ್ರಣಾಳಿಕೆ ಬಿಡುಗಡೆ ಮಾಡಲು ಇದೊಂದು ಸದಾವಕಾಶ ಸಿಕ್ಕಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ. ಇದರಲ್ಲಿರೋ ಪ್ರತೀ ಅಂಶ ಎ.ಸಿ ರೂಮಲ್ಲಿ ಕೂತು ಮಾಡಿಲ್ಲ. ಸಾವಿರ ಮನೆಗಳು, ವಿವಿಧ ವಲಯಗಳಿಂದ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಬಿಜೆಪಿ ಸರ್ಕಾರ ಅವಕಾಶವನ್ನ ಸದ್ಬಳಕೆ ಮಾಡಿಕೊಂಡಿದೆ. ಕೋವಿಡ್ ಸಂದರ್ಭದಲ್ಲಿ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಉತ್ತಮ ಸರ್ಕಾರ ಮಾಡಿದ್ದಾರೆ. ಸಿಕ್ಕ ಅವಕಾಶದಲ್ಲಿ ಜನ ಸೇವೆ ಮಾಡುವ ಉತ್ತಮ ಕೆಲಸ ಮಾಡಿದ್ದಾರೆ ಎಂದು ನಡ್ಡಾ ಹೇಳಿದ್ದಾರೆ.
ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಬಾದಾಮಿಯಲ್ಲಿ ರೋಡ್ ಶೋದಲ್ಲಿ ಭಾಗಿಯಾಗಿದ್ದಾರೆ. ಈಗ ತಾನೇ 12 ಗಂಟೆಗೆ ಅಂಬೇಡ್ಕರ್ ಸರ್ಕಲ್‌ನಿಂದ ರೋಡ್ ಶೋ ಆರಂಭವಾಗಿದ್ದು, ಡಾ ಬಿಆರ್ ಅಂಬೇಡ್ಕರ್ ಅವರ ಮೂರ್ತಿಗೆ ಹೂ ಮಾಲೆ ಹಾಕಿ ರೋಡ್ ಶೋ ಪ್ರಾರಂಭಿಸಿದ್ದಾರೆ. ಎಚ್‌ಡಿ ಕುಮಾರಸ್ವಾಮಿ ರೋಡ್‌ಶೋಗೆ ಬಾದಾಮಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹನುಮಂತ ಮಾವಿನಮರದ,ಬಾಗಲಕೋಟೆ ಅಭ್ಯರ್ಥಿ ಡಾ. ದೇವರಾಜ್ ಪಾಟೀಲ ಸೇರಿ ಹಲವರು ಸಾಥ್ ನೀಡಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ 150 ಸೀಟು ಗೆಲ್ಲುವ ಗುರಿ ಹೊಂದಿದ್ದೇವೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಪಕ್ಷದ ಪ್ರಣಾಳಿಕೆ ಬಿಡುಗಡೆ ವೇಳೆ ಮಾತನಾಡಿದ ಅವರು, ಈಗಾಗಲೇ ಪ್ರಣಾಳಿಕೆ ಬಗ್ಗೆ ಸಿಎಂ ಹೇಳಿದ್ದಾರೆ. ಇದನ್ನ ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತೇವೆ. ಕಾರ್ಯಕರ್ತರು ಜನರಿಗೆ ಇದನ್ನ ತಲುಪಿಸೋ ಕೆಲಸ ಮಾಡಬೇಕು. ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ ಅಷ್ಟೇ ಸತ್ಯ ನಾವು ಅಧಿಕಾರಕ್ಕೆ ಬರೋದು. ಜನ ಇದನ್ನ ಸ್ವೀಕರಿಸಬೇಕು. ಬಿಜೆಪಿ ಬೆಂಬಲಿಸಬೇಕು ಎಂದರು
https://t.co/TH6221eOZZ
ಬಿಜೆಪಿ ಬಿಡುಗಡೆ ಮಾಡಿರುವ ಪ್ರಜಾ ಪ್ರಣಾಳಿಕೆಯಲ್ಲಿ ಏನಿದೆ?#BJPManifesto #KarnatakaBJP #PrajaManifesto #Manifesto #JPNadda #BJP #KarnatakaElection2023 #AssemblyElection2023 #KarnatakaElections2023 #KannadaNews #KarnatakaAssemblyElection2023—
— News18 Kannada (@News18Kannada) May 1, 2023
ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾರರಿಗೆ ಭರವಸೆಗಳ ಮಹಾಪೂರ ಹೊಂದಿರುವ ಬಿಜೆಪಿ ಪಕ್ಷದ ಪ್ರಣಾಳಿಕೆಯನ್ನು ಬಿಜೆಪಿ ರಾಷ್ಟ್ರ ಘಟಕದ ಅಧ್ಯಕ್ಷ ಜೆಪಿ ನಡ್ಡಾ ಅವರು ಬಿಡುಗಡೆ ಮಾಡಿದರು. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಪ್ರಮುಖ ನಾಯಕೆರಲ್ಲ ಭಾಗಿಯಾಗಿದ್ದರು.