ಬೆಂಗಳೂರು: ಮೇ 10 ರ ಕರ್ನಾಟಕ ವಿಧಾನಸಭಾ ಚುನಾವಣೆಯು (Karnataka Election 2023) ಜನಪ್ರತಿನಿಧಿಗಳಿಗೆ (Leaders) ದೊಡ್ಡ ಅಗ್ನಿಪರೀಕ್ಷೆಯಾಗಿದೆ. ಮತದಾರರನ್ನು ಓಲೈಸಲು ಅಭ್ಯರ್ಥಿಗಳು (Election Candidates) ಸಾಕಷ್ಟು ಕಸರತ್ತು ನಡೆಸುತ್ತಿದ್ದು ಹಾಗೂ ಸಾಕಷ್ಟು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಪಕ್ಷಕ್ಕೆ (Political Party) ಮತ ಹಾಕುವಂತೆ ಮನವೊಲಿಸುವ ಕಾರ್ಯ ನಡೆಸುತ್ತಿದ್ದಾರೆ. ಈಗಿನ ಜನರು (Voters) ಪಕ್ಷ ನೋಡಿ ಮತ ಹಾಕುತ್ತಿಲ್ಲ ಬದಲಿಗೆ ವ್ಯಕ್ತಿ ನೋಡಿ ಮತ ಹಾಕುತ್ತಿದ್ದಾರೆ ಹಾಗೂ ತಮ್ಮ ನಾಯಕ ತಮಗಾಗಿ ಎಷ್ಟು ಕೆಲಸ ಮಾಡಬಹುದು? ಈವರೆಗೆ ಅವರು ಮಾಡಿರುವ ಜನ ಪರ ಕೆಲಸಗಳನ್ನು ಪರಿಗಣಿಸಿ ತಮ್ಮ ನಾಯಕಮನ್ನು ಆಯ್ಕೆ ಮಾಡುತ್ತಿದ್ದಾರೆ.
ಶಾಮನೂರು ಮಲ್ಲಿಕಾರ್ಜುನ್ ಅವರ ಕಿರುಪರಿಚಯ
ಒಟ್ಟಿನಲ್ಲಿ ಅಭ್ಯರ್ಥಿಗಳಿಗೆ ಈ ಚುನಾವಣೆಯು ಅಗ್ನಿಪರೀಕ್ಷೆ ಎಂದೆನಿಸಿದ್ದು ಯಾರನ್ನು ಆಯ್ಕೆ ಮಾಡಬೇಕು ಎಂಬ ಚುಕ್ಕಾಣಿ ಇದೀಗ ಶ್ರೀಸಾಮಾನ್ಯರ ಕೈಯಲ್ಲಿದೆ. ಇಂದಿನ ಲೇಖನದಲ್ಲಿ ಕಾಂಗ್ರೆಸ್ ಪಕ್ಷದ ದಾವಣಗೆರೆ ಉತ್ತರ ಕ್ಷೇತ್ರದ (Davanagere North Constituency) ಮಾಜಿ ಶಾಸಕರಾದ ಶಾಮನೂರು ಮಲ್ಲಿಕಾರ್ಜುನ್ (Shamanur Mallikarjun) ಅವರ ಪರಿಚಯ ಮಾಡಿಕೊಳ್ಳೋಣ.
ಸೆಪ್ಟೆಂಬರ್ 1967, 22 ರಂದು ಜನಿಸಿದ ಶಾಮನೂರು ಮಲ್ಲಿಕಾರ್ಜುನ್ ಅವರು ಕಾಂಗ್ರೆಸ್‌ನ ಸದಸ್ಯರಾಗಿದ್ದಾರೆ. ಇವರು ಕೈಗಾರಿಕೋದ್ಯಮಿ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ (Shamanur Shivashankarappa) ಅವರ ಪುತ್ರ.
55 ರ ಹರೆಯದ ಶಾಮನೂರು ಮಲ್ಲಿಕಾರ್ಜುನ್ ಚುನಾವಣೆಯ ಭರ್ಜರಿ ಪ್ರಚಾರದಲ್ಲಿ ನಿರತರಾಗಿದ್ದು, ತಮ್ಮನ್ನು ಗೆಲ್ಲಿಸಿಕೊಡಿ ಎಂದು ಮತದಾರರಲ್ಲಿ ವಿನಂತಿಸಿಕೊಳ್ಳುತ್ತಿದ್ದಾರೆ.
ಬಿ.ಕಾಂ. ಪದವೀಧರ ಶಾಮನೂರು ಮಲ್ಲಿಕಾರ್ಜುನ್
ಹಾಗೂ ತಾನು ಗೆದ್ದು ಬಂದರೆ ಜನಪರ ಕಾರ್ಯಗಳನ್ನು ಮಾಡುವುದಾಗಿ ಆಶ್ವಾಸನೆ ನೀಡಿದ್ದಾರೆ. ಬಿ.ಕಾಂ. ಪದವೀಧರರಾಗಿರುವ ಶಾಮನೂರು ಮಲ್ಲಿಕಾರ್ಜುನ್ ಅವರ ದಾವಣಗೆರೆ ಮೈಸೂರು ವಿಶ್ವವಿದ್ಯಾನಿಲಯ ಏಪ್ರಿಲ್ 1990 ರಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ್ದಾರೆ. ಅವರು ದಾವಣಗೆರೆಯ ಎಸ್‌ಎಸ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷರಾಗಿದ್ದಾರೆ.
ರಾಜಕೀಯ ಪ್ರಯಾಣ
ಶಾಮನೂರು ಮಲ್ಲಿಕಾರ್ಜುನ್ ಅವರು ಕರ್ನಾಟಕ ವಿಧಾನಸಭೆಯಲ್ಲಿ ದಾವಣಗೆರೆ ಉತ್ತರವನ್ನು ಪ್ರತಿನಿಧಿಸುವ ವಿಧಾನಸಭೆಯ ಮಾಜಿ ಸದಸ್ಯರಾಗಿದ್ದಾರೆ. ಮಲ್ಲಿಕಾರ್ಜುನ್ ಅವರು ಕರ್ನಾಟಕ ಸರ್ಕಾರದ ಮಾಜಿ ಯುವಜನ ಕಲ್ಯಾಣ ಮತ್ತು ಕ್ರೀಡಾ ಸಚಿವರಾಗಿದ್ದರು.
ಶಾಮನೂರು ಮಲ್ಲಿಕಾರ್ಜುನ್ ಅವರು ಮೇ 2013 ರಿಂದ 2018 ಕಾಂಗ್ರೆಸ್ ಶಾಸಕರಾಗಿದ್ದರು. ಇದಕ್ಕೆ ಹಿಂದೆ ಸಹ ಮಲ್ಲಿಕಾರ್ಜುನ್ ಚುನಾವಣೆಗೆ ನಿಂತಿದ್ದು ಜಿ.ಎಂ.ಸಿದ್ದೇಶ್ವರ್ ವಿರುದ್ಧ ಸತತ ಸೋಲನುಭವಿಸಿದ್ದರು. ಆದರೆ ಈ ಬಾರಿ ಪಕ್ಷದ ಒತ್ತಾಯದ ಮೇರೆಗೆ ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಮತದಾರರಿಗೆ ಉಡುಗೊರೆಗಳನ್ನು ಹಂಚಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಶಾಸಕ ಶಾಮನೂರು ಮಲ್ಲಿಕಾರ್ಜುನ್ ವಿರುದ್ಧ ಕರ್ನಾಟಕ ಪೊಲೀಸರು ಗುರುವಾರ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ.
ದಿನಾಂಕ 28.03.2023 ರ ಎಫ್‌ಐಆರ್ ವರದಿಯ ಪ್ರಕಾರ, ಮಂಗಳವಾರ ರಾತ್ರಿ 8:45 ರ ಸುಮಾರಿಗೆ ದಾವಣಗೆರೆ ಜಿಲ್ಲೆಯ ಕೆಟಿಜೆ ನಗರ ಪೊಲೀಸ್ ಠಾಣೆಗೆ ಈ ಅಪರಾಧದ ಆರೋಪಿಗಳಿಗೆ ಸಂಬಂಧಿಸಿದ ಮಾಹಿತಿ ಲಭಿಸಿದೆ.
ಶಾಮನೂರು ಮಲ್ಲಿಕಾರ್ಜುನ್ ಅವರು ಆಸ್ತಿಪಾಸ್ತಿ ವಿವರ
ಗುರುವಾರ ನಾಮಪತ್ರ ಸಲ್ಲಿಸಿದ 55 ವರ್ಷದ ಎಸ್.ಎಸ್. ಮಲ್ಲಿಕಾರ್ಜುನ್ ಅಫಿಡವಿಟ್‌ನಲ್ಲಿ 152.27 ಕೋಟಿ ರೂ. ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದಾರೆ. ಇದರಲ್ಲಿ 81.93 ಕೋಟಿ ರೂ. ಚರಾಸ್ತಿ, 70.78 ಕೋಟಿ ರೂ. ಸ್ಥಿರಾಸ್ತಿ ಸೇರಿದ್ದು, 23. 60 ಕೋಟಿ ರೂ. ಸಾಲ ಹೊಂದಿರುವುದಾಗಿ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.
ಚರಾಸ್ತಿಯಲ್ಲಿ ಬ್ಯಾಂಕ್‌ನಲ್ಲಿ 1.56 ಕೋಟಿ ಠೇವಣಿ, ಬಾಂಡ್, ಷೇರು ಹಾಗೂ ಮ್ಯೂಚುವಲ್ ಫಂಡ್‌ಗಳಲ್ಲಿ 54.40 ಕೋಟಿ ರೂ. ಹೂಡಿಕೆ, ಅಂಚೆ ಮತ್ತು ವಿಮೆ ಕಂಪನಿಗಳ ಯೋಜನೆಗಳಲ್ಲಿ 4.15 ಕೋಟಿ ರೂ. ಹೂಡಿಕೆ ಮಾಡಿರುವುದಾಗಿ ಮಲ್ಲಿಕಾರ್ಜುನ್ ಹೇಳಿಕೊಂಡಿದ್ದಾರೆ. 6.41 ಕೋಟಿ ರೂ. ಸಾಲವನ್ನು ಬೇರೆಯವರಿಗೆ ನೀಡಿರುವುದಾಗಿಯೂ ಅವರು ತಿಳಿಸಿದ್ದಾರೆ.
15.35 ಕೋಟಿ ರೂ. ಮೌಲ್ಯದ ವಜ್ರ, ಚಿನ್ನ, ಬೆಳ್ಳಿಯ ಆಭರಣಗಳೂ ತಮ್ಮ ಬಳಿ ಇರುವುದಾಗಿ ತಿಳಿಸಿರುವ ಮಲ್ಲಿಕಾರ್ಜುನ್, ಇದರಲ್ಲಿ 16.54 ಕೆ.ಜಿ ಚಿನ್ನ, 6.28 ಕ್ವಿಂಟಾಲ್ ಬೆಳ್ಳಿ ಹಾಗೂ ವಜ್ರ ಸೇರಿ ಇತರ ಬೆಲೆಬಾಳುವ ವಸ್ತುಗಳು ಇವೆ ಎಂದು ಹೇಳಿದ್ದಾರೆ. ಪತ್ನಿ ಬಳಿ 1 ಕೋಟಿ ರೂ. ಮೌಲ್ಯದ ಆಭರಣಗಳಿದ್ದು ಇದರಲ್ಲಿ 3.19 ಕೆಜಿ ಚಿನ್ನ ಇರುವುದಾಗಿ ಮಾಹಿತಿ ನೀಡಿದ್ದಾರೆ.
ಪತ್ನಿ ಬಳಿ 1 ಕೋಟಿಗೂ ಅಧಿಕ ಮೌಲ್ಯದ ಚಿನ್ನ
ಪತ್ನಿ ಬಳಿ 11.20 ಲಕ್ಷ ರೂ. ಬ್ಯಾಂಕ್ ಠೇವಣಿ, 2.65 ಕೋಟಿ ರೂ. ಬಾಂಡ್-ಷೇರು ರೂಪದಲ್ಲಿ ಹೂಡಿಕೆ, 2.02 ಕೋಟಿ ರೂ. ಕೈ ಸಾಲ ನೀಡಿರುವುದು, 1 ಕೋಟಿ ರೂ. ಮೌಲ್ಯದ ಚಿನ್ನ ಸೇರಿ 5.88 ಕೋಟಿ ರೂ. ಮೌಲ್ಯದ ಚರಾಸ್ತಿ ಇರುವುದಾಗಿ ತಿಳಿಸಿದ್ದಾರೆ.
7.56 ಕೋಟಿ ರೂ. ಮೌಲ್ಯದ 226.3 ಎಕರೆ ಕೃಷಿ ಭೂಮಿ, 53.04 ಕೋಟಿ ರೂ. ಮೌಲ್ಯದ 22,14,055.84 ಚದರ ಅಡಿ ಕೃಷಿಯೇತರ ಭೂಮಿ, 9.75 ಕೋಟಿ ರೂ. ಮೌಲ್ಯದ ವಾಣಿಜ್ಯ ಕಟ್ಟಡ, 9.20 ಕೋಟಿ ರೂ. ಮೌಲ್ಯದ 28,900 ಚದರ ಅಡಿ ವಸತಿ ಕಟ್ಟಡ ಇದೆ ಎಂದು ಘೋಷಿಸಿಕೊಂಡಿದ್ದಾರೆ.
ಹೀಗೆ ಒಟ್ಟು 70.77 ಕೋಟಿ ರೂ. ಸ್ಥಿರಾಸ್ತಿ ಘೋಷಿಸಿಕೊಂಡಿದ್ದಾರೆ. ಇನ್ನು ಪತ್ನಿ ಬಳಿ 47.11 ಎಕರೆ ಕೃಷಿ ಭೂಮಿ ಸೇರಿ 30.61 ಕೋಟಿ ರೂ. ಸ್ಥಿರಾಸ್ತಿ ಇದೆ ಎಂದು ವಿವರ ನೀಡಿದ್ದಾರೆ.
23.60 ಕೋಟಿ ರೂ. ಕೈ ಸಾಲವನ್ನು ತಾವು ಹೊಂದಿರುವುದಾಗಿ ಎಸ್.ಎಸ್. ಮಲ್ಲಿಕಾರ್ಜುನ್ ಅಫಿಡವಿಟ್‌ನಲ್ಲಿ ವಿವರ ನೀಡಿದ್ದು, ಪತ್ನಿಗೆ 97 ಲಕ್ಷ ರೂ. ಸಾಲವಿರುವುದಾಗಿ ತಿಳಿಸಿದ್ದಾರೆ.
ಉದ್ಯಮ, ವೇತನ ಹಾಗೂ ಬಾಡಿಗೆ ತಮ್ಮ ಆದಾಯದ ಮೂಲ ಎಂಬುದಾಗಿಯೂ ಅಫಿಡಟವಿಟ್‌ನಲ್ಲಿ ಮಲ್ಲಿಕಾರ್ಜುನ್ ಮಾಹಿತಿ ನೀಡಿದ್ದಾರೆ. ಇನ್ನು 2021-22ರಲ್ಲಿ ಪತ್ನಿಗೆ 7.84 ಲಕ್ಷ ರೂ. ಆದಾಯ ಇದ್ದುದಾಗಿಯೂ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ