ಬೆಳಗಾವಿ: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾಸಭಾ ಚುನಾವಣೆಗಾಗಿ (Karnataka Election 2023) ಚುನಾವಣಾ ಕಣ ಸಿದ್ಧಗೊಂಡಿದೆ. ಎಲ್ಲಾ ಪಕ್ಷಗಳ ಅಭ್ಯರ್ಥಿಗಳು (Election Candidate) ನಾ ಮುಂದು ತಾ ಮುಂದು ಎಂದು ಮತದಾರರನ್ನು ಓಲೈಸುತ್ತಿದ್ದು ಭರ್ಜರಿ ಆಶ್ವಾಸನೆಗಳನ್ನು ನೀಡಿ ಅವರನ್ನು ತಮ್ಮ ಪಕ್ಷದತ್ತ ಸೆಳೆದುಕೊಳ್ಳುತ್ತಿದ್ದಾರೆ. ಈ ಹಿಂದೆ ನಿಗದಿಯಾದಂತೆ ಮೇ 10 ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದ್ದು ಮೇ 13 ರಂದು ಮತಎಣಿಕೆ ಹಾಗೂ ಫಲಿತಾಂಶವನ್ನು ಪ್ರಟಿಸಲಾಗುತ್ತದೆ ಎಂದು ಚುನಾವಣಾ ಸಂಸ್ಥೆ ತಿಳಿಸಿದೆ.
ಅಭ್ಯರ್ಥಿ, ಪಕ್ಷಗಳನ್ನು ನೋಡಿ ಮತ ಹಾಕುವುದಿಲ್ಲ
ಯಾವುದೇ ಪಕ್ಷ ಬರಲಿ ಯಾವುದೇ ಅಭ್ಯರ್ಥಿ ಬರಲಿ ಮುಖ ನೋಡಿ ಮಣೆ ಹಾಕುವ ಪ್ರಶ್ನೆಯೇ ಇಲ್ಲ ಎಂಬುದು ಜನಸಾಮಾನ್ಯರ ಅಭಿಮತವಾಗಿದೆ. ನಮ್ಮ ರಾಜ್ಯಕ್ಕೆ ಕ್ಷೇತ್ರಕ್ಕೆ ಯಾವ ಅಭ್ಯರ್ಥಿಯಿಂದ ಪ್ರಯೋಜನವಾಗಲಿದೆಯೋ ಅಂಹ ಅಭ್ಯರ್ಥಿಯನ್ನೇ ಆಯ್ಕೆ ಮಾಡಲಾಗುತ್ತದೆ ಎಂಬುದು ಅವರ ಅಚಲ ನಿರ್ಧಾರವಾಗಿದೆ.
ಕಾಂಗ್ರೆಸ್‌ನ ಭದ್ರಕೋಟೆ ಯಮಕನಮರಡಿ
ಕಾಂಗ್ರೆಸ್‌ನ ಭದ್ರಕೋಟೆ ಎಂದೆನಿಸಿರುವ ಬೆಳಗಾವಿಯ ಯಮಕನಮರಡಿಯಲ್ಲಿ ಈ ಬಾರಿ ಪಕ್ಷಗಳ ಮತಪ್ರಚಾರ ಭರ್ಜರಿಯಿಂದಲೇ ನಡೆಯುತ್ತಿದೆ. ಬಿಜೆಪಿಯಿಂದ ಕಣಕ್ಕಿಳಿದಿರುವ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬಸವರಾಜ್ ಎಸ್ ಹುಂದ್ರಿ ಸಾಮಾಜಿಕ ಕೆಲಸ ಕಾರ್ಯಗಳ ಮೂಲಕ ಗುರುತಿಸಿಕೊಂಡವರು ಅಂತೆಯೇ ಸಾಮಾಜಿಕ ತಾಣಗಳಲ್ಲಿ ಕೂಡ ಹೆಚ್ಚು ಸಕ್ರಿಯರಾಗಿರುವ ಕ್ಯಾಂಡಿಡೇಟ್ ಎಂದೆನಿಸಿದ್ದಾರೆ.
ಯಮಕನಮರಡಿಯಲ್ಲಿ ಶೈಕ್ಷಣಿಕ ಪ್ರಗತಿ ಹಾಗೂ ಉತ್ತಮ ಶಿಕ್ಷಣವನ್ನು ಜಾರಿಗೆ ತರುವುದರೊಂದಿಗೆ ಸಂಪೂರ್ಣ ಕ್ಷೇತ್ರವನ್ನೇ ಅಭಿವೃದ್ಧಿಗೊಳಿಸುವುದು ನನ್ನ ಗುರಿಯಾಗಿದೆ. ಅದಕ್ಕಾಗಿ ಬಿಜೆಪಿಗೆ ಮತ ನೀಡಿ ಎಂಬುದು ಬಿಜೆಪಿ ಅಭ್ಯರ್ಥಿ ಬಸವರಾಜ್ ಹೇಳಿಕೆಯಾಗಿದೆ.
ಕಾಂಗ್ರೆಸ್‌ಗೆ ಇಲ್ಲಿ ಪ್ರಾಶಸ್ತ್ಯ
ಮತ್ತೊಮ್ಮೆ ಚುನಾವಣಾ ಸಮರಕ್ಕೆ ಸಜ್ಜಾಗಿರುವ ಯಮಕನರಮರಡಿ ಕ್ಷೇತ್ರ ಕರ್ನಾಟಕದ ರಾಜ್ಯದ 224 ಕ್ಷೇತ್ರಗಳ ಪೈಕಿ ಒಂದಾಗಿದೆ. 2018 ರಲ್ಲಿ ಕಾಂಗ್ರೆಸ್ ಪಕ್ಷದ ಸತೀಶ್ ಜಾರಕಿಹೊಳಿ ಜಯಭೇರಿ ಬಾರಿಸಿದ್ದರು. ಅಂತೆಯೇ ಬಿಜೆಪಿಯ ಅಭ್ಯರ್ಥಿ ಮಾರುತಿ ಅಷ್ಟಗಿ 2,850 ಮತಗಳ ಅಂತರದಿಂದ ಸೋಲನುಭವಿಸಬೇಕಾಯಿತು.
ಒಟ್ಟಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಈ ಕ್ಷೇತ್ರದಲ್ಲಿ ಜಯ ಸಾಧಿಸುತ್ತಿದ್ದು ಇತರ ಪಕ್ಷಗಳ ಅಭ್ಯರ್ಥಿಗಳು ನಿರಾಯಾಸವಾಗಿ ಸೋಲುಣ್ಣುತ್ತಿದ್ದಾರೆ.
ಯಮಕನಮರಡಿಯಲ್ಲಿ ಬಿಜೆಪಿ ಮಾಡಲಿದೆಯೇ ಕಮಾಲ್
ಕಾಂಗ್ರೆಸ್‌ನ ಅಭ್ಯರ್ಥಿಗಳೇ ನಿರಾಯಾಸವಾಗಿ ಗೆಲುವಿನ ಬಾವುಟ ಹಾರಿಸುತ್ತಿರುವ ಯಮಕನಮರಡಿಯಲ್ಲಿ ಈ ಬಾರಿಯಾದರೂ ಬಿಜೆಪಿ ಗೆಲ್ಲಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ಹಲವಾರು ರೋಡ್ ಶೋಗಳು, ಭಾಷಣ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಬಿಜೆಪಿ ಅಭ್ಯರ್ಥಿ ಬಸವರಾಜ್ ಹುಂದ್ರಿ ಈ ಬಾರಿ ಬಿಜೆಪಿಯೇ ಗೆಲ್ಲಲಿದೆ ಎಂಬ ಭವಿಷ್ಯ ನುಡಿದಿದ್ದಾರೆ.
ಅಭ್ಯರ್ಥಿ ಆಯ್ಕೆಗೆ ಪ್ಲಾನ್ ಮಾಡಿರುವ ಬಿಜೆಪಿ
ಯಮಕನಮರಡಿ ಕ್ಷೇತ್ರದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಅಳೆದು ಸುರಿದು ಸರಿಯಾಗಿ ಯೋಚಿಸಿಯೇ ಕಣಕ್ಕಿಳಿಸಿದೆ. ಈ ಕ್ಷೇತ್ರದಲ್ಲಿ ಬಿಜೆಪಿಯ ಬಸವರಾಜ್ ಹುಂದ್ರಿ ಹಾಗೂ ಮಾರುತಿ ಅಷ್ಟಿಗಿ ಮಧ್ಯೆಯೇ ಪೈಪೋಟಿ ಏರ್ಪಟ್ಟಿತ್ತು ಅಂತೆಯೇ ಯಾರನ್ನು ಅಖಾಡಾಕ್ಕೆ ಇಳಿಸುವುದು ಎಂಬುದು ಬಿಜೆಪಿಯ ಮುಂದಿದ್ದ ಪ್ರಶ್ನೆಯಾಗಿತ್ತು.
ಬಸವರಾಜ್ ಹುಂದ್ರಿಯವರು ಪಕ್ಷದ ಪರ ಮಾಡುತ್ತಿದ್ದ ಪ್ರಚಾರ ಹಾಗೂ ಅವರ ಚಟುವಟಿಕೆಗಳನ್ನು ನೋಡಿ ಕೊನೆಗೆ ಬಿಜೆಪಿ ಅವರನ್ನೇ ಆಯ್ಕೆಮಾಡಿತ್ತು.
ಸಾಮಾಜಿಕ ತಾಣದಲ್ಲಿಯೂ ಮತಪ್ರಚಾರ
ಬಿಜೆಪಿಯು ಈ ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುತ್ತದೆ ಎಂಬ ಆಶಾಭಾವನೆ ಹೊರಹಾಕಿರುವ ಹುಂದ್ರಿಯವರು ಕಾಂಗ್ರೆಸ್‌ನ ಭದ್ರಕೋಟೆಯನ್ನು ಈ ಬಾರಿಯಾದರೂ ಪುಡಿಮಾಡಿ ಬಿಜೆಪಿ ಕಮಲದ ಬಾವುಟವನ್ನು ಹಾರಿಸಬೇಕೆಂಬ ಛಲ ಹೊಂದಿದ್ದಾರೆ.
ಅದಕ್ಕಾಗಿಯೇ ಕ್ಷೇತ್ರದಲ್ಲೆಲ್ಲಾ ಪಾದಯಾತ್ರೆಗಳನ್ನು ನಡೆಸಿರುವ ಹುಂದ್ರಿಯವರು ಅನೇಕ ಸಮಸ್ಯೆಗಳನ್ನು ಗುರುತಿಸಿದ್ದು ಅವುಗಳನ್ನೆಲ್ಲಾ ಪರಿಹರಿಸುವ ಆಶ್ವಾಸನೆ ನೀಡಿದ್ದಾರೆ ಹಾಗೂ ಬಿಜೆಪಿಯ ಆಡಳಿತವೇ ಈ ಕ್ಷೇತ್ರದಲ್ಲಿ ಈ ಬಾರಿ ನಡೆಯಬೇಕು ಎಂಬ ಇಂಗಿತ ವ್ಯಕ್ತಪಡಿಸಿದ್ದರೆ.
ಇದನ್ನೂ ಓದಿ: Siddu Savadi: ಗೆಲುವಿನ ನಗೆ ಬೀರಲು ಚುನಾವಣಾ ಸಂಗ್ರಾಮದಲ್ಲಿರುವ ಶಾಸಕರ 'ಕೈ' ಹಿಡಿತಾರಾ ತೇರದಾಳದ ಜನತೆ!
ಟ್ವಿಟರ್, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ತಾಣಗಳಲ್ಲಿಯೂ ಚುನಾವಣಾ ಪ್ರಚಾರದ ಮಾಹಿತಿಗಳನ್ನು ನೀಡುತ್ತಿರುವ ಹುಂದ್ರಿಯವರು ಅವಿರತ ಪರಿಶ್ರಮ ಪಡುತ್ತಿದ್ದಾರೆ ಹಾಗೂ ಮತದಾರರನ್ನು ಓಲೈಸುತ್ತಿದ್ದಾರೆ ಎಂಬುದು ನಿಚ್ಚಳವಾಗಿ ಕಂಡುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ