ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Assembly ELection) ಫಲಿತಾಂಶ ಮೇ 13ರ ಶನಿವಾರ ಪ್ರಕಟವಾಗಲಿದ್ದು, ಇದರ ನಡುವೆಯೇ ಹಲವು ಅಭ್ಯರ್ಥಿಗಳು ಸೋಲು ಗೆಲುವಿನ ಲೆಕ್ಕಾಚಾರ ಶುರು ಮಾಡಿದ್ದಾರೆ. ಇದರ ನಡುವೆ ಸಚಿವ ಆರ್ ಅಶೋಕ್ (R Ashok), ಮುಖ್ಯಮಂತ್ರಿ (Chief Minister) ಆಗಿರುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ನ್ಯೂಸ್ 18 ಕನ್ನಡದೊಂದಿಗೆ ಮಾತನಾಡಿದ ಆರ್ ಅಶೋಕ್ ಅವರು, ನಾನು ಕನಕಪುರದಲ್ಲಿ (Kanakapura) ಗೆಲ್ಲುವ ಪ್ರಯತ್ನ ಮಾಡಿದ್ದೇನೆ. ಅಂತಿಮವಾಗಿ ಜನರು ತೀರ್ಮಾನ ಮಾಡ್ತಾರೆ. ನಮ್ಮ ಸಮೀಕ್ಷೆ ಪ್ರಕಾರ ಬಿಜೆಪಿಗೆ (BJP) ಸ್ಪಷ್ಟ ಬಹುಮತ ಬರೋದು ನಿಶ್ಚಿತ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ನಾಯಕರು ಏನು ಬೇಕಾದರೂ ಮಾಡಲಿ. ಅಂತಿಮವಾಗಿ ಸರ್ಕಾರ ರಚನೆ ಮಾಡುವುದು ನಾವೇ, ಮುಖ್ಯಮಂತ್ರಿ ಆಗುವ ಅವಕಾಶ ನನಗೂ ಬರಬಹುದು. ಎಲ್ಲರಿಗೂ ಒಂದೊಂದು ಅವಕಾಶ ಸಿಗುತ್ತದೆ. ಯಾರು ನಿರೀಕ್ಷೆ ಮಾಡದಂತೆ ಕಳೆದ ಬಾರಿ ಬೊಮ್ಮಾಯಿ ಆಗಿಲ್ವಾ? ಹಾಗೇ ನನಗೂ ಒಂದು ಅವಕಾಶ ಸಿಗಬಹುದು. ಆದರೆ ಅಂತಿಮವಾಗಿ ಈ ಬಗ್ಗೆ ಸಂಸದೀಯ ಮಂಡಲಿ ತೀರ್ಮಾನ ಮಾಡುತ್ತದೆ ಎಂದು ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: HD Kumaraswamy: ಮತದಾನ ಮುಕ್ತಾಯವಾಗುತ್ತಿದ್ದಂತೆ ವಿದೇಶಕ್ಕೆ ಹಾರಿದ ಮಾಜಿ ಸಿಎಂ ಎಚ್ಡಿಕೆ
ಕಾಂಗ್ರೆಸ್ ವಯಸ್ಸಾಗಿರುವ ಪಕ್ಷ, ಇಡೀ ದೇಶದಲ್ಲಿ ಸತ್ತು ಹೋಗಿದೆ. ಕರ್ನಾಟಕದಲ್ಲೂ ಸ್ವಲ್ಪ ಉಸಿರಾಡಿದರೆ, ಆ ಉಸಿರು ಇನ್ನೂ ಎಷ್ಟಿದೆ ಎಂದು ಫಲಿತಾಂಶದಿಂದ ಗೊತ್ತಾಗುತ್ತದೆ. ಕೂಸು ಹುಟ್ಟೋಕು ಮುನ್ನ ಕುಲಾವಿ ಹೊಲಿಸುವ ಜಾಯ ಮಾನ ನಮ್ಮದಲ್ಲ. ಮೊದಲು ಕೂಸು ಹುಟ್ಟಲಿ, ಆಮೇಲೆ ನಾವು ಕುಲಾವಿ ಹೊಲಿಸ್ರೀವಿ. ಆದರೆ ಕಾಂಗ್ರೆಸ್ ನಾಯಕರು ಕೂಸು ಹುಟ್ಟೋಕು ಮುನ್ನ ಕುಲಾವಿ ಹೊಲಿಸೋಕೆ ಹೊರಟಿದ್ದಾರೆ. ದೊಂಬರಾಟ ಬಿಡಿ, ಚುನಾವಣೆ ಫಲಿತಾಂಶದ ವರೆಗೂ ಕಾಯಿರಿ ಎಂದು ವಾಗ್ದಾಳಿ ನಡೆಸಿದರು.
ಗೋವಾದಲ್ಲಿ ಸರ್ಕಾರ ಮಾಡುತ್ತೇವೆ ಅಂತಾ ಫ್ಲೈಟ್ ಹತ್ತಿಕೊಂಡು ಹೋದ ಡಿಕೆ ಶಿವಕುಮಾರ್ ಕಥೆ ಏನಾಗಿದೆ ಅಂತಾ ನೋಡಿಲ್ವಾ? ಹಾಗೇ ಇಲ್ಲೂ ಕೊನೆಗೆ ಅವರಿಗೆ ಅದೇ ಪರಿಸ್ಥಿತಿ ಆಗುತ್ತೆ ನೋಡಿ ಎಂದು ಟಾಂಗ್ ಅಶೋಕ್, ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ