Karnataka Assembly Election: ಚುನಾವಣೆಯ ಕಾವು ದಿನದಿಂದ ದಿನಕ್ಕೆ ಕಾವೇರುತ್ತಿದೆ. ಪ್ರತಿಯೊಂದು ಪಕ್ಷದ ಅಭ್ಯರ್ಥಿಗಳು ನಾ ಮುಂದು ತಾ ಮುಂದು ಎಂದು ಭರದಲ್ಲಿ ಪ್ರಚಾರ ಮಾಡುತ್ತಿದ್ದಾರೆ ಹಾಗೂ ಮತಬೇಟೆಗೆ ಇಳಿದಿದ್ದಾರೆ. ಒಟ್ಟಿನಲ್ಲಿ ಅಭ್ಯರ್ಥಿಗಳ ಭವಿಷ್ಯ ಶ್ರೀಸಾಮಾನ್ಯನ ಕೈಯಲ್ಲಿರುವುದರಿಂದ ಅವರನ್ನು ಪರಿಪರಿಯಾಗಿ ಓಲೈಸಿಕೊಳ್ಳುತ್ತಿದ್ದಾರೆ.
ಯಾವ ಪಕ್ಷ ಗೆಲ್ಲುತ್ತದೆಯೋ ಸೋಲುತ್ತದೆಯೋ ಆದರೆ ಚಾಣಾಕ್ಷ ಮತದಾರರು ಅಳೆದು ಸುರಿದು ತುಂಬಾ ಬುದ್ಧಿವಂತಿಕೆಯಿಂದಲೇ ಈ ಬಾರಿ ಮತಹಾಕಲಿದ್ದಾರೆ ಎಂಬುದಂತೂ ನಿಜ. ಪ್ರತೀ ಚುನಾವಣೆಯಲ್ಲಿಯೂ ಆಶ್ವಾಸನೆಗಳನ್ನು ಆಲಿಸಿಕೊಂಡೇ ಬಂದಿರುವ ಮತದಾರರು ಯಾರು ಇಲ್ಲಿ ಸಾಚಾ ಎಂಬುದನ್ನು ಅರಿತುಕೊಂಡಿದ್ದಾರೆ.
ಹುನಗುಂದದ ಅಭ್ಯರ್ಥಿ ವಿಜಯಾನಂದ ಕಾಶಪ್ಪನವರ್
ಇಂದಿನ ಲೇಖನದಲ್ಲಿ ಬಾಗಲಕೋಟೆಯ ಹುನಗುಂದ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ವಿಜಯಾನಂದ ಕಾಶಪ್ಪನವರ್ (Vijayanand Kashappanavar) ಕುರಿತು ಕಿರುಪರಿಚಯ ಮಾಡಿಕೊಳ್ಳೋಣ.
ಹುನಗುಂದ ವಿಧಾನಸಭಾ ಕ್ಷೇತ್ರವು ಭಾರತದ ಕರ್ನಾಟಕದಲ್ಲಿರುವ 224 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಬಾಗಲಕೋಟೆ (ಲೋಕಸಭಾ ಕ್ಷೇತ್ರ) ಭಾಗವಾಗಿದೆ.
ಸಾಮಾಜಿಕ ತಾಣದಲ್ಲಿ ಸದಾ ಆ್ಯಕ್ಟೀವ್
ವಿಜಯಾನಂದ ಎಸ್ ಕಾಶಪ್ಪನವರ್ ಹುನಗುಂದ ಕ್ಷೇತ್ರದಿಂದ ಈ ಬಾರಿ ಸ್ಪರ್ಧಿಸುತ್ತಿದ್ದು, 41 ರ ಹರೆಯದ ವಿಜಯಾನಂದ್ ಭರ್ಜರಿಯಾಗಿಯೇ ಮತಬೇಟೆಗೆ ಇಳಿದಿದ್ದಾರೆ. ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಮ್ ಮೊದಲಾದ ತಾಣಗಳಲ್ಲಿ ಕೂಡ ತಮ್ಮ ಪಾದಯಾತ್ರೆ, ಮತಯಾಚನೆಯ ವಿವರಗಳನ್ನು ಶಾಸಕರು ನೀಡಿದ್ದು, ಗೆದ್ದೇ ಗೆಲ್ಲುತ್ತೇನೆಂಬ ವಿಶ್ವಾಸದಲ್ಲಿದ್ದಾರೆ.
ಪಕ್ಷದ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸುವ ವಿಜಯಾನಂದ ಚೈತನ್ಯದ ಚಿಲುಮೆ ಎಂದೆನಿಸಿದ್ದಾರೆ. ಕ್ಷಣ ಕ್ಷಣದ ಸುದ್ದಿಗಳನ್ನು ತಮ್ಮ ಜಾಲತಾಣದಲ್ಲಿ ಹಂಚಿಕೊಳ್ಳುವ ಶಾಸಕರು ತಾಣದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.
ವಿಜಯಾನಂದರ ತಂದೆ ಶಿವಶಂಕರಪ್ಪ ಕಾಶಪ್ಪನವರ್, ಹಾಗೂ ಶಾಸಕರು ದ್ವಿತೀಯ ಪಿಯುಸಿ ಪೂರ್ತಿಗೊಳಿಸಿದ್ದಾರೆ. ಇವರ ಆದಾಯ ಒಟ್ಟು 1 ಕೋಟಿ ಎಂಬ ಮಾಹಿತಿಯನ್ನು ನೀಡಿದ್ದು ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ಒಟ್ಟು ಆದಾಯವಾಗಿ ರೂ 2 ಲಕ್ಷವೆಂಬುದಾಗಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Venkatarao Nada Gowda: ಸಿಂಧನೂರು ಕ್ಷೇತ್ರದ ಜೆಡಿಎಸ್ ಶಾಸಕ ವೆಂಕಟರಾವ್ ನಾಡಗೌಡರ ರಾಜಕೀಯ ಜೀವನ ಹೀಗಿದೆ
ಶಾಸಕರ ಮೇಲಿರುವ ಪ್ರಕರಣಗಳು
ಕ್ರಿಮಿನಲ್ ಬೆದರಿಕೆಗೆ ಸಂಬಂಧಿಸಿದ 2 ಆರೋಪಗಳು, ಆಸ್ತಿ ಸುಲಿಗೆ ಆರೋಪ, ಅಪಾಯಕಾರಿ ಶಸ್ತ್ರಾಸ್ತ್ರಗಳು ಅಥವಾ ಆಯುಧಗಳಿಂದ ದಾಳಿ ಸಂಬಂಧಿಸಿ ಆರೋಪಗಳು ಇವರ ಮೇಲಿವೆ. ಐಪಿಸಿ ಸೆಕ್ಷನ್ 307 ರ ಪ್ರಕಾರ ಕೊಲೆ ಯತ್ನದ ಕೇಸು ದಾಖಲಾಗಿದೆ.
ಶಾಸಕರ ಚರಾಸ್ತಿ ವಿವರ
ಶಾಸಕರು ನಗದು ಮೌಲ್ಯವಾಗಿ ರೂ 5 ಲಕ್ಷ ಹಣವನ್ನು ಜಮೆ ಮಾಡಿದ್ದು ಅಪೆಕ್ಸ್ ಬ್ಯಾಂಕ್‌ನಲ್ಲಿ ರೂ 13 ಸಾವಿರ ನಗದು ಜಮೆ ಮಾಡಿದ್ದಾರೆ ಎಂಬ ವಿವರ ನೀಡಿದ್ದಾರೆ. ಶಾಸಕರು ಯಾವುದೇ ಬಾಂಡ್‌ಗಳನ್ನು ಹೊಂದಿಲ್ಲ ಅಂತೆಯೇ ಎಲ್‌ಐಸಿ ಮೊತ್ತವಾಗಿ ರೂ 10 ಲಕ್ಷ ಇವರ ಹೆಸರಿನಲ್ಲಿದೆ.
ವಾಹನಗಳ ವಿವರಗಳನ್ನು ನೋಡುವುದಾದರೆ ಶಾಸಕರು ರೂ 65,000 ದ ಕಾಂಟೆಸ್ಸಾ ಕಾರು ಹಾಗೂ ರೂ 3 ಲಕ್ಷ ಮೌಲ್ಯದ ಜೀಪು ಹೀಗೆ ಒಟ್ಟು ರೂ 3,65,000 ಮೌಲ್ಯದ ವಾಹನಗಳನ್ನು ಹೊಂದಿದ್ದಾರೆ. ಆಭರಣಗಳ ವಿವರ ನೋಡುವುದಾದರೆ ರೂ 14,28,000 ಮೌಲ್ಯದ ಚಿನ್ನಾಭರಣಗಳಿವೆ ಎಂಬ ಮಾಹಿತಿ ನೀಡಿದ್ದಾರೆ.
ಶಾಸಕರ ಸ್ಥಿರಾಸ್ತಿ ವಿವರ ಹೀಗಿದೆ
ಶಾಸಕರು ರೂ 33 ಲಕ್ಷ ಬೆಲೆಯ ಕೃಷಿ ಭೂಮಿಯನ್ನು ಹೊಂದಿದ್ದು ರೂ 34 ಲಕ್ಷದ ಕೃಷಿಯೇತರ ಭೂಮಿಯನ್ನು ಹೊಂದಿರುವುದಾಗಿ ಮಾಹಿತಿ ನೀಡಿದ್ದಾರೆ. ಅಂತೆಯೇ ತಮ್ಮ ಹೆಸರಿನಲ್ಲಿ ಯಾವುದೇ ವಾಣಿಜ್ಯ ಸಂಕೀರ್ಣವಾಗಲೀ ನಿವೇಶನ ಕಟ್ಟಡಗಳಾಗಿ ಇಲ್ಲವೆಂದು ತಿಳಿಸಿದ್ದಾರೆ.
ಇನ್ನು ಎರಡೂ ಭೂಮಿಗಳ ಪ್ರಸ್ತುತ ಮೌಲ್ಯ ಅಂದಾಜು ರೂ 68,15,000 ಎಂಬ ಮಾಹಿತಿ ನೀಡಿದ್ದಾರೆ. ಬ್ಯಾಂಕ್‌ನಿಂದ ಲೋನ್‌ಗಳನ್ನು ಪಡೆದುಕೊಂಡಿದ್ದು ರೂ 42,ಲಕ್ಷದ ಲೋನ್ ತಮ್ಮ ಹೆಸರಿನಲ್ಲಿದೆ ಎಂಬ ಮಾಹಿತಿ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ