ಬೆಂಗಳೂರು: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Election 2023) ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ನಾ ಮುಂದೆ ತಾ ಮುಂದೆ ಎಂದು ಹಗಲಿರುಳು ಶ್ರಮಿಸುತ್ತಿರುವ ಪಕ್ಷಗಳ ಅಭ್ಯರ್ಥಿಗಳು ಕ್ಷೇತ್ರ ಸಂಚಾರ ನಡೆಸಿ ಮತಯಾಚಿಸಲು ಆರಂಭಿಸಿದ್ದಾರೆ. ಮತದಾರರ ಮನಓಲೈಕೆಗೆ ಪಣ ತೊಟ್ಟಿದ್ದಾರೆ. ಇಂದಿನ ಲೇಖನದಲ್ಲಿ ಕಾಂಗ್ರೆಸ್ ಪಕ್ಷದ ವಿಜಯನಗರದ ಅಭ್ಯರ್ಥಿ ಎಮ್.ಕೃಷ್ಣಪ್ಪ (Congress Candidate M Krishnappa) ಪರಿಚಯ ಮಾಡಿಕೊಳ್ಳೋಣ.
ಕಾಂಗ್ರೆಸ್ ಪಕ್ಷದ ಸದಸ್ಯರು ಹಾಗೂ ರಾಜಕಾರಣಿಗಳಾಗಿರುವ ಎಮ್. ಕೃಷ್ಣಪ್ಪ ಬಿಎಸ್‌ಸಿ ಪದವೀಧರರು. ಇವರ ತಂದೆ ಮುನಿಸ್ವಾಮಪ್ಪ. ಗೋವಿಂದ ರಾಜನಗರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾ ಕೃಷ್ಣ ಇವರ ಹಿರಿಯ ಪುತ್ರ.
ಕೃಷ್ಣಪ್ಪನವರು ಶ್ರೀ ಜಗದ್ಗುರು ರೇಣುಕಾಚಾರ್ಯ ಕಾಲೇಜಿನಲ್ಲಿ 1973 ರಲ್ಲಿ ಪದವೀಧರರಾದರು. ಕರ್ನಾಟಕದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಸೆನೆಟ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.
ರಾಜಕೀಯಕ್ಕೆ ಬರುವ ಮುನ್ನ ರಿಯಲ್ ಎಸ್ಟೇಟ್ ಮತ್ತು ಭೂ ಅಭಿವೃದ್ಧಿಯಲ್ಲಿ ಕೆಲಸ ಮಾಡುತ್ತಿದ್ದರು ಹಾಗೂ ಅವರು ದಕ್ಷಿಣ ರೈಲ್ವೆ ಮಂಡಳಿ ಸಮಿತಿ ಮತ್ತು ಬೆಂಗಳೂರು ದೂರಸಂಪರ್ಕ ಜಿಲ್ಲಾ ಸಲಹಾ ಸಮಿತಿಯ ಮಾಜಿ ಸದಸ್ಯರಾಗಿದ್ದಾರೆ.
ಎಮ್.ಕೃಷ್ಣಪ್ಪ ರಾಜಕೀಯ ವೃತ್ತಿಜೀವನ
ಕೃಷ್ಣಪ್ಪ 2000 ರಿಂದ 2006 ರವರೆಗೆ ಕರ್ನಾಟಕ ಲೆಜಿಸ್ಲೇಟಿವ್ ಕೌನ್ಸಿಲ್ ಸದಸ್ಯರಾಗಿ ಸೇವೆ ಸಲ್ಲಿಸಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೂಲಕ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿದರು ಮತ್ತು 2004 ರ ಸಾರ್ವತ್ರಿಕ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಸಂಸತ್ತಿನ ಕ್ಷೇತ್ರಕ್ಕೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಸದಸ್ಯ ಮತ್ತು ಕೆಪಿಸಿಸಿ ಖಜಾಂಚಿಯಾಗಿದ್ದಾರೆ.
2008 ರಲ್ಲಿ ಬೆಂಗಳೂರಿನ ವಿಜಯನಗರ ಕ್ಷೇತ್ರದ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿ ನೇಮಕಗೊಂಡರು. ಅವರು ವಿಜಯನಗರ ವಿಧಾನಸಭಾ ಕ್ಷೇತ್ರದಿಂದ ಸತತ ಮೂರನೇ ಅವಧಿಗೆ ಶಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಿದ್ದರಾಮಯ್ಯ ಸಂಪುಟದಲ್ಲಿ ಸ್ಥಾನ
ಕರ್ನಾಟಕ ಸರ್ಕಾರದಲ್ಲಿ ವಸತಿ ಸಚಿವರಾಗಿ ಸೇವೆ ಸಲ್ಲಿಸಿದರು ಮತ್ತು ಅಕ್ಟೋಬರ್ 2016 ರಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡರು. ಸಿದ್ಧರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾಗ ವಸತಿ ಸಚಿವರಾಗಿ ಒಂದು ಲಕ್ಷ ವಸತಿ ಯೋಜನೆಯನ್ನು ಪ್ರಸ್ತಾಪಿಸಿದರು.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸದಸ್ಯರಾಗಿ ದಕ್ಷಿಣ ಬೆಂಗಳೂರಿನಲ್ಲಿರುವ ವಿಜಯ್ ನಗರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಇವರ ವಿರುದ್ಧ 2 ಕ್ರಿಮಿನಲ್ ಮೊಕ್ಕದ್ದಮೆಗಳೂ ಇವೆ.
ಆಸ್ತಿಪಾಸ್ತಿ ವಿವರ ಹೀಗಿದೆ:
ಎಮ್.ಕೃಷ್ಣಪ್ಪನವರು ರೂ 147 ಕೋಟಿಗಳ ಆಸ್ತಿಯನ್ನು ಹೊಂದಿದ್ದು, ಒಟ್ಟು ಆದಾಯ 1 ಕೋಟಿ ಎಂಬುದಾಗಿ ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ಸೂಚಿಸಿದ್ದಾರೆ.
ರೂ 40 ಲಕ್ಷ ನಗದು ಇವರ ಬಳಿ ಇದ್ದು ರೂ 85 ಲಕ್ಷ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಜಮೆಯಾಗಿರಿಸಿಕೊಂಡಿದ್ದಾರೆ. ಬಾಂಡ್ ಹಾಗೂ ಷೇರುಗಳ ರೂಪದಲ್ಲಿ ಶಾಸಕರ ಬಳಿ ರೂ 32 ಲಕ್ಷಹಣವಿರುವುದಾಗಿ ಘೋಷಿಸಿದ್ದಾರೆ.
ಇದನ್ನೂ ಓದಿ: Leaders Profile : JDS ಭದ್ರಕೋಟೆಯಲ್ಲಿ ಕಮಾಲ್ ಮಾಡುತ್ತಾ ʻಕೈʼ ಪಡೆ? ಗೆಲುವಿನ ನಿರೀಕ್ಷೆಯಲ್ಲಿ ಚೆಲುವರಾಯ ಸ್ವಾಮಿ!
ಪೋಸ್ಟಲ್ ಸೇವಿಂಗ್ಸ್ ರೂಪದಲ್ಲಿ ರೂ 56 ಸಾವಿರ ಅಂತೆಯೇ ಎಲ್‌ಐಸಿ ಹಾಗೂ ವಿಮೆಯ ರೂಪದಲ್ಲಿ ರೂ 48 ಕೋಟಿ ಶಾಸಕರ ಹೆಸರಿನಲ್ಲಿದೆ. ರೂ 1 ಕೋಟಿ ಬೆಲೆಯ ವಾಹನಗಳು ಶಾಸಕರ ಹೆಸರಿನಲ್ಲಿದೆ.
ಅಂತೆಯೇ 7 ಕೋಟಿಯ ಚಿನ್ನಾಭರಣಗಳನ್ನು ಎಮ್.ಕೃಷ್ಣಪ್ಪ ಹೊಂದಿದ್ದಾರೆ. ಇನ್ನಿತರ ಆಸ್ತಿಪಾಸ್ತಿಯಾಗಿ ರೂ 14 ಕೋಟಿ ಇವರ ಹೆಸರಿನಲ್ಲಿದೆ ಎಂದು ಘೋಷಿಸಿದ್ದಾರೆ.
ಶಾಸಕರ ಸ್ಥಿರಾಸ್ತಿ ವಿವರ:
ಎಮ್.ಕೃಷ್ಣಪ್ಪ ರೂ 21 ಕೋಟಿ ಬೆಲೆಯ ಭೂಮಿಯನ್ನು ಹೊಂದಿದ್ದು, ರೂ 98 ಕೋಟಿ ಬೆಲೆಯ ಕೃಷಿಯೇತರ ಭೂಮಿ ಹೊಂದಿದ್ದಾರೆ. ರೂ 14 ಕೋಟಿ ಮೌಲ್ಯದ ವಾಣಿಜ್ಯ ಸಂಕೀರ್ಣಗಳು, ರೂ 28 ಕೋಟಿ ಮೌಲ್ಯದ ನಿವೇಶನ ಕಟ್ಟಡಗಳನ್ನು ಶಾಸಕರು ಹೊಂದಿದ್ದಾರೆ ಎಂದು ಘೋಷಿಸಿದ್ದಾರೆ.
ಇವೆಲ್ಲದರ ಪ್ರಸ್ತುತ ಮಾರುಕಟ್ಟೆ ಮೌಲ್ಯ ರೂ 163 ಕೋಟಿಗಿಂತಲೂ ಮಿಗಿಲಾದುದು ಎಂಬ ಮಾಹಿತಿಯನ್ನು ಶಾಸಕರು ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ