ಮೈಸೂರು: ಕಾಂಗ್ರೆಸ್ (Congress) ಘಟಾನುಘಟಿಗಳೆಲ್ಲಾ ಟಿಕೆಟ್ ಪಡೆದುಕೊಂಡು ವಿಧಾನಸಭೆ ಚುನಾವಣಾ (Assembly Election 2023) ಸಂಗ್ರಾಮಕ್ಕೆ ರಣಕಹಳೆ ಊದಿದ್ದಾರೆ. ಕ್ಷೇತ್ರದಲ್ಲಿ ಗೆದ್ದವರು ಮತ್ತೆ ಗೆಲ್ಲಲು ಪ್ರಯತ್ನ ನಡೆಸಿದರೆ, ಸೋತವರು ಮತ್ತೆ ಹೇಗಾದರೂ ವಿರೋಧಿಗಳ ವಿರುದ್ಧ ಗೆಲ್ಲಲು ರಣತಂತ್ರ ಹಣೆಯುತ್ತಿದ್ದಾರೆ. ಹೀಗೆ ಕಳೆದ ಚುನಾವಣೆಯಲ್ಲಿ ಭಾರೀ ಮತಗಳ ಅಂತರದಿಂದ ಸೋತು ಸುಣ್ಣವಾಗಿದ್ದ ಕಾಂಗ್ರೆಸ್ ಪಕ್ಷದ ನಾಯಕ, ಮಾಜಿ ಸಚಿವ ಡಾ. ಹೆಚ್. ಸಿ. ಮಹದೇವಪ್ಪ (Former Minister HC Mahadevappa) ಈ ಬಾರಿ ಗೆಲುವಿನ ನಗೆ ಬೀರಲು ಶತಾಯ-ಗತಾಯ ಪ್ರಯತ್ನ ಮಾಡುತ್ತಿದ್ದಾರೆ.
ಮನೆ ಮನೆ ಭೇಟಿ, ಪ್ರಚಾರ ಅಂತಾ ನಿರತವಾಗಿರುವ ಮೈಸೂರಿನ ಟಿ. ನರಸೀಪುರ ಕ್ಷೇತ್ರದ ಅಭ್ಯರ್ಥಿ ಬಗ್ಗೆ ಕೆಲ ವಿಚಾರಗಳ ಬಗ್ಗೆ ಒಂದಿಷ್ಟು ತಿಳಿಯೋಣ.
ಟಿಕೆಟ್ ಫೈಟ್
ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗೆ ಮಾಜಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಮತ್ತು ಧ್ರುವನಾರಾಯಣ್ ನಡುವೆ ಫೈಟ್ ನಡೆಯುತ್ತಿತ್ತು. ಸಿದ್ದರಾಮಯ್ಯ ಆಪ್ತರಲ್ಲಿ ಯಾರಿಗೆ ಟಿಕೆಟ್ ಸಿಗುತ್ತೆ ಅಂತಾ ಜನ ಕಾಯ್ತಾ ಇದ್ದರು.
ಆದರೆ ದುರದೃಷ್ಟವಶಾತ್ ಧ್ರುವನಾರಾಯಣ್ ಅವರು ಅಕಾಲಿಕವಾಗಿ ಮರಣ ಹೊಂದಿದರು. ಇವರ ಮರಣ ನಂತರ ಕ್ಷೇತ್ರದ ಟಿಕೆಟ್ ರೇಸ್‌ನ ವರಸೆಯೇ ಬದಲಾಯಿತು.
ಧ್ರುವ ನಾರಾಯಣ್ ಪುತ್ರ ದರ್ಶನ್‌ಗೆ ಟಿಕೆಟ್ ನೀಡಬೇಕು ಎಂಬ ಆಗ್ರಹ ಹೆಚ್ಚಿತು. ಮುಂದಿನ ಭವಿಷ್ಯದ ಬಗ್ಗೆ ತಿಳಿದ ಮಹದೇವಪ್ಪ ಟಿಕೆಟ್ ರೇಸ್‌ನಿಂದ ಹಿಂದೆ ಸರಿದರು. ನಂತರ ಮಾಜಿ ಸಚಿವರು ಟಿ. ನರಸೀಪುರ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದರು.
ಹೆಚ್.ಸಿ.ಮಹದೇವಪ್ಪ ಪರಿಚಯ
ಹೆಚ್.ಸಿ.ಮಹದೇವಪ್ಪ ಅವರು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹದಿನಾರು ಎಂಬ ಹಳ್ಳಿಯವರು. ತಂದೆ ದಿವಂಗತ ಚಿಕ್ಕಮಾದಯ್ಯ. ಹಳ್ಳಿಯಲ್ಲಿಯೇ ಆರಂಭಿಕ ಶಿಕ್ಷಣ ಮುಗಿಸಿದ ನಂತರ ಮುಂದೆ ವೈದ್ಯಕೀಯ ವೃತ್ತಿಯನ್ನು ಆರಿಸಿಕೊಂಡು 1999ರಲ್ಲಿ ದಾವಣಗೆರೆಯ ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿದರು.
ವೈದ್ಯಕೀಯ ಕ್ಷೇತ್ರ ಬಿಟ್ಟು ರಾಜಕೀಯ ಕಡೆಗೆ ಒಲವು
ವೈದ್ಯಕೀಯ ಅಭ್ಯಾಸವನ್ನು ಮುಗಿಸಿದರೂ ಸಹ ರಾಜಕೀಯ ಸೆಳೆತ ಇವರನ್ನು ರಾಜಕಾರಣಕ್ಕೆ ಕರೆತಂದಿತು. ಸೋಲು-ಗೆಲುವುಗಳ ರುಚಿಕಂಡ ಮಹದೇವಪ್ಪ ತಿರುಮಕೂಡಲ ನರಸೀಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಮೊದಲು ಜೆಡಿಎಸ್‌ಪಕ್ಷದಲ್ಲಿ ಗುರುತಿಸಿಕೊಂಡ ಇವರು 2008ರವರೆಗೆ ಜೆಡಿಎಸ್‌ನಲ್ಲಿದ್ದರು. ನಂತರ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿದರು.
ಮೂರು ಬಾರಿ ಸಚಿವ ಸ್ಥಾನ
ಡಾ. ಹೆಚ್. ಸಿ. ಮಹದೇವಪ್ಪ 2013ರ ಚುನಾವಣೆಯಲ್ಲಿ ಗೆದ್ದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಲೋಕೋಪಯೋಗಿ ಇಲಾಖೆ ಸಚಿವರಾಗಿ ಕೆಲಸ ಮಾಡಿದರು.
ಒಟ್ಟು ಮೂರು ಬಾರಿ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಡಾ. ಹೆಚ್. ಸಿ. ಮಹದೇವಪ್ಪ 1985-89, 1994-99, 2004-2007, 2008-2013 ಮತ್ತು 2013-2018ರ ತನಕ ಶಾಸಕರಾಗಿದ್ದರು. 1994-1999, 2004-2007, 2013-2018ರ ತನಕ ಮೂರು ಬಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ.
ಟಿ.ನರಸೀಪುರದಲ್ಲಿ ನಿರ್ಮಿಸಲಿರುವ ನೂತನ ಮಾಧವ ಮಂತ್ರಿ ಅಣೆಕಟ್ಟಿಗೆ ಮತ್ತು ಮೈಸೂರಿನಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಕಾಲೇಜು ಕಟ್ಟಡಕ್ಕೆ ಮಾಜಿ ಸಚಿವರು ಶಂಕುಸ್ಥಾಪನೆ ನಡೆಸಿದ್ದಾರೆ.
ಆಸ್ತಿ ವಿವರ
ಅಫಿಡವಿಟ್‌ನಲ್ಲಿ 2 ಕೋಟಿಗಿಂತ ಹೆಚ್ಚು ಆಸ್ತಿ ಇರುವ ಬಗ್ಗೆ ವಿವರಣೆ ನೀಡಿದ್ದಾರೆ. ನಗದು 95 ಸಾವಿರ, 52 ಲಕ್ಷ ಠೇವಣಿ, 13 ಲಕ್ಷ ಮೌಲ್ಯದ ವಾಹನ, 2 ಲಕ್ಷ ಆಭರಣ, 75 ಲಕ್ಷ ಮೌಲ್ಯದ ಕೃಷಿ ಭೂಮಿ, ಒಂದು ಕೋಟಿ ಮೌಲ್ಯದ ಕಟ್ಟಡಗಳು ಹೀಗೆ ಎರಡು ಕೋಟಿಗಿಂತ ಹೆಚ್ಚಿನ ಆಸ್ತಿ ಒಡೆಯ ಟಿ.ನರಸೀಪುರ ಅಭ್ಯರ್ಥಿ.
ಇದನ್ನೂ ಓದಿ: Election Candidate: ಡಿಕೆಶಿ, ಎಂಟಿಬಿ, ಹೆಚ್ಡಿಕೆ ಬಳಿಯಲ್ಲಿರೋ ಆಸ್ತಿ ಎಷ್ಟು?
ಕಳೆದ ಚುನಾವಣೆಯಲ್ಲಿ ಸೋಲು
ಕಳೆದ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ವಿರುದ್ಧ ಸೋತಿದ್ದರು. ಈ ವರ್ಷ ಮತ್ತದೇ ಅಭ್ಯರ್ಥಿಗಳ ಜೊತೆ ಅಖಾಡಕ್ಕಿಳಿದ ಮಹದೇವಪ್ಪ ಅವರನ್ನು ಟಿ ನರಸೀಪುರದ ಜನರು ಗೆಲ್ಲಿಸ್ತಾರಾ? ಸೋಲಿಸ್ತಾರಾ.. ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ