Karnataka Election 2023: ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಭರದಿಂದ ಮತಪ್ರಚಾರ ನಡೆಸುತ್ತಿದ್ದು ಮತದಾರರ ಓಲೈಕೆಯಲ್ಲಿ ನಿರತರಾಗಿದ್ದಾರೆ. ಈ ಬಾರಿಯ ಚುನಾವಣೆ ಎಲ್ಲಾ ಚುನಾವಣಾ ಅಭ್ಯರ್ಥಿಗಳಿಗೆ ಅಗ್ನಿಪರೀಕ್ಷೆ ಎಂದೆನಿಸಿದ್ದು ಶ್ರೀಸಾಮಾನ್ಯ ಯಾರಿಗೆ ಮತ ಹಾಕಲಿದ್ದಾರೆ ಎಂಬುದೇ ಕೌತುಕದ ಅಂಶವಾಗಿದೆ.
ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್
ಇಂದಿನ ಲೇಖನದಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ M. P. ಅಪ್ಪಚ್ಚು ರಂಜನ್ (Appachu Ranjan) ಪರಿಚಯ ಮಾಡಿಕೊಳ್ಳೋಣ. ಮಡಿಕೇರಿ ಕ್ಷೇತ್ರದ ಶಾಸಕರಾಗಿರುವ ಅಪ್ಪಚ್ಚು ರಂಜನ್, ಇದೇ ಕ್ಷೇತ್ರದಿಂದ ಚುನಾವಣಾ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ದಕ್ಷಿಣ ಭಾರತದ ರಾಜ್ಯವಾದ ಕರ್ನಾಟಕದಲ್ಲಿ ಯುವಜನ ಸೇವೆಗಳು ಮತ್ತು ಕ್ರೀಡೆಗಳ ಮಾಜಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿಯ ನಾಯಕರಾಗಿರುವ ಅಪ್ಪಚ್ಚು ರಂಜನ್, ಕರ್ನಾಟಕದ ಕೊಡಗು ಜಿಲ್ಲೆಯ ಮಡಿಕೇರಿ ಕ್ಷೇತ್ರದಿಂದ ಐದನೇ ಬಾರಿಗೆ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿದ್ದಾರೆ.
ಇದನ್ನೂ ಓದಿ: Dr K Annadani: ಗೆದ್ದೇ ಗೆಲ್ಲುವ ಛಲದಲ್ಲಿರುವ ಮಳವಳ್ಳಿ ಶಾಸಕ ಡಾ ಕೆ ಅನ್ನದಾನಿಯವರ ಬಗ್ಗೆ ನಿಮಗೆಷ್ಟು ಗೊತ್ತು?
ಬಾಲ್ಯ ಹಾಗೂ ವಿದ್ಯಾಭ್ಯಾಸ
ಮಂಡೇಪಂಡ ಪೂವಯ್ಯ ಅಪ್ಪಚ್ಚು ರಂಜನ್ ಅವರು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಚೆಂಬೆಬೆಳ್ಳೂರು ಎಂಬ ಗ್ರಾಮದಲ್ಲಿ 11 ಸೆಪ್ಟೆಂಬರ್ 1957 ರಂದು ಜನಿಸಿದರು.
ಮಂಡೇಪಂಡ ಮನೆತನದ ಪೂವಯ್ಯ ಮತ್ತು ಕಾಮವ್ವ ಇವರ ತಂದೆ ತಾಯಿ. ಅವರು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪದವಿ ಪೂರ್ವ ಕಾಲೇಜು ಶಿಕ್ಷಣ ಮತ್ತು ಕಲಾ ಪದವಿಯನ್ನು ಪೂರ್ಣಗೊಳಿಸಿದರು.
ಉತ್ತಮ ಕ್ರೀಡಾಪಟು ಆಗಿರುವ ಅಪ್ಪಚ್ಚು ರಂಜನ್ ಕಾಲೇಜು ಹಾಕಿ ಮತ್ತು ಫುಟ್ಬಾಲ್ ತಂಡಗಳ ಸದಸ್ಯರಾಗಿದ್ದರು. 1997ರಲ್ಲಿ ದಕ್ಷಿಣ ಭಾರತದ ಶಾಸಕರಿಗಾಗಿ ಆಯೋಜಿಸಿದ್ದ ಕ್ರೀಡಾ ಟೂರ್ನಿಯಲ್ಲಿ ಅತ್ಯುತ್ತಮ ಕ್ರೀಡಾ ಪಟು ಪ್ರಶಸ್ತಿ ಗೆದ್ದಿದ್ದರು.
ಅಪ್ಪಚ್ಚು ರಂಜನ್ ರಾಜಕೀಯ ಜೀವನ
1978ರಲ್ಲಿ ಅಂದಿನ ಜನತಾ ಪಕ್ಷದ ಸದಸ್ಯರಾಗಿ ರಾಜಕೀಯ ಪ್ರವೇಶಿಸಿದ ಅವರು ಕುಂಬೂರು ಶಾಲಾಭಿವೃದ್ಧಿ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ, ಮಾದಾಪುರ ವಿಎಸ್‌ಎಸ್‌ಎಸ್‌ಎನ್ ಅಧ್ಯಕ್ಷರಾಗಿ, ಮಾದಾಪುರದ ಚೆನ್ನಮ್ಮ ಜೂನಿಯರ್ ಕಾಲೇಜಿನ ವರದಿಗಾರರಾಗಿ, ನಿರ್ದೇಶಕರಾಗಿ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದರು.
ಮಡಿಕೇರಿಯಲ್ಲಿ ಕೊಡಗು ಜಿಲ್ಲಾ ಕಾಫಿ ಬೆಳೆಗಾರರ ಸಂಘದ ಸದಸ್ಯ, ಕುಶಾಲನಗರ ಎಪಿಎಂಸಿ ಸದಸ್ಯ, ಔಪಚಾರಿಕವಾಗಿ ಮಂಡಲ ಪಂಚಾಯತ್ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಸಹಕಾರ ಮತ್ತು ಕೃಷಿ ಸಂಸ್ಥೆಗಳನ್ನು ನಿರ್ವಹಿಸುವ ಕ್ಷೇತ್ರದಲ್ಲಿ ಅಪಾರ ಅನುಭವವನ್ನು ಗಳಿಸಿದ ಅವರು ವರ್ಷಗಳಲ್ಲಿ ವಿವಿಧ ಹುದ್ದೆಗಳನ್ನು ಏರಿದರು.
1980 ರಲ್ಲಿ ಮಾದಾಪುರದ ಬಿಜೆಪಿ ಯುವ ಘಟಕದ ಅಧ್ಯಕ್ಷರಾಗಿ ಚುನಾಯಿತರಾದಾಗ ಶ್ರೀ ರಂಜನ್ ಅವರ ರಾಜಕೀಯಕ್ಕೆ ಪ್ರಮುಖ ಪ್ರವೇಶವಾಯಿತು. 1986 ರಿಂದ 1991 ರವರೆಗೆ ಸೋಮವಾರಪೇಟೆ ತಾಲ್ಲೂಕು ಬಿಜೆಪಿ ಅಧ್ಯಕ್ಷ ಸ್ಥಾನವನ್ನು ಆಕ್ರಮಿಸಿಕೊಂಡ ಅವರು ನಂತರ 1991 ರಿಂದ 1995 ರವರೆಗೆ ಕೊಡಗು ಬಿಜೆಪಿ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅವರ ಅಧಿಕಾರಾವಧಿಯಲ್ಲಿ ಬಿಜೆಪಿ ಎಲ್ಲಾ ಮೂರು ವಿಧಾನಸಭಾ ಕ್ಷೇತ್ರಗಳನ್ನು ಗೆದ್ದುಕೊಂಡಿತು.
ಇದನ್ನೂ ಓದಿ: GK Venkata Shiva Reddy: 5ನೇ ಬಾರಿ ಗೆಲುವಿನ ಸಿದ್ಧತೆ ನಡೆಸುತ್ತಿರುವ ವೆಂಕಟಶಿವಾರೆಡ್ಡಿ, ಹೀಗಿದೆ ಅವರು ನಡೆದು ಬಂದ ಹಾದಿ
ಆಸ್ತಿಪಾಸ್ತಿ ವಿವರ ಹೀಗಿದೆ
ಅಪ್ಪಚ್ಚು ರಂಜನ್ ತಮ್ಮ ಆಸ್ತಿಪಾಸ್ತಿ ವಿವರಗಳ ಮಾಹಿತಿ ನೀಡಿದ್ದು ರೂ 10 ಕೋಟಿ ಎಂಬುದಾಗಿ ಘೋಷಿಸಿದ್ದಾರೆ. ಕಾಫಿ ಬೆಳೆಗಾರರು ಆಗಿರುವ ಅಪ್ಪಚ್ಚು ರಂಜನ್ ರೂ 19 ಲಕ್ಷ ಆದಾಯದ ವಿವರವನ್ನು ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ನೀಡಿದ್ದಾರೆ.
ನಗದು ರೂಪದಲ್ಲಿ ರೂ 10 ಲಕ್ಷವಿರುವುದಾಗಿ ಶಾಸಕರು ಘೋಷಿಸಿದ್ದು, ರೂ 51 ಲಕ್ಷ ಬ್ಯಾಂಕ್‌ಗಳಲ್ಲಿ ಡಿಪಾಸಿಟ್ ಇರಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ಎಲ್‌ಐಸಿ ಹಾಗೂ ಇನ್ನಿತರ ವಿಮೆಗಳ ರೂಪದಲ್ಲಿ ರೂ 10 ಲಕ್ಷವಿರುವುದಾಗಿ ಘೋಷಿಸಿದ್ದಾರೆ.
ರೂ 28 ಲಕ್ಷದ ವಾಹನಗಳನ್ನು ಹೊಂದಿರುವುದಾಗಿ ಶಾಸಕರು ಘೋಷಿಸಿದ್ದು ರೂ 19 ಲಕ್ಷ ಚಿನ್ನಾಭರಣವಿರುವುದಾಗಿ ಮಾಹಿತಿ ನೀಡಿದ್ದಾರೆ. ಈ ಎಲ್ಲಾ ವಸ್ತುಗಳ ಒಟ್ಟು ಮಾರುಕಟ್ಟೆ ಮೌಲ್ಯ ರೂ 1 ಕೋಟಿ ಎಂಬುದಾಗಿ ಘೋಷಿಸಿದ್ದಾರೆ.
ಕೃಷಿ ಭೂಮಿ ಹಾಗೂ ವಸತಿ ಸಂಕೀರ್ಣಗಳ ಮಾಹಿತಿ
ರೂ 6 ಕೋಟಿ ಮೌಲ್ಯದ ಕೃಷಿ ಭೂಮಿ ಇರುವುದಾಗಿ ಶಾಸಕರು ಮಾಹಿತಿ ನೀಡಿದ್ದು ರೂ 75 ಲಕ್ಷ ಮೌಲ್ಯದ ಕೃಷಿಯೇತರ ಭೂಮಿ ಹೊಂದಿದ್ದಾರೆ. ರೂ 60 ಲಕ್ಷ ಮೌಲ್ಯದ ವಸತಿ ಸಂಕೀರ್ಣಗಳು ಶಾಸಕರ ಹೆಸರಿನಲ್ಲಿವೆ ಎಂದು ಮಾಹಿತಿ ನೀಡಿದ್ದಾರೆ. ಈ ಎಲ್ಲಾ ಆಸ್ತಿ ಪಾಸ್ತಿಗಳ ಒಟ್ಟು ಮಾರುಕಟ್ಟೆ ಮೌಲ್ಯ ರೂ 8 ಕೋಟಿ ಎಂದು ಶಾಸಕರು ಘೋಷಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ