ಕೋಲಾರ: ಮಾಜಿ ಡಿಸಿಎಂ, ತುಮಕೂರು (Tumakuru) ಜಿಲ್ಲೆಯ ಕೊರಟಗೆರೆ (Koratagere) ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ ಜಿ ಪರಮೇಶ್ವರ್ (G Parameshwar) ವಿರುದ್ಧ ಕಲ್ಲು ತೂರಾಟವೇ ಆಗಿಲ್ಲ. ಆಕಸ್ಮಿಕವಾಗಿ ಘಟನೆಯಾಗಿದೆ ಅಷ್ಟೇ. ಅವರದ್ದೇ ಪಕ್ಷದ ಕಾರ್ಯಕರ್ತರು ಅವರನ್ನು ಮೇಲೆ ಎತ್ತಿಕೊಂಡು ಕುಣಿಯಲು ಮುಂದಾದ ಸಂದರ್ಭದಲ್ಲಿ, ಹೂ ಎರೆಚ ಬೇಕಾದರೆ ಯಾವುದೋ ಒಂದು ಬಾವುಟದ (Flag) ಕಂಬಿ ಚುಚ್ಚಿಕೊಂಡು ಗಾಯ ಆಗಿರಬಹುದು. ಯಾರೂ ಕಲ್ಲು ಹೊಡೆದಿಲ್ಲ, ಹೂವನ್ನೂ ಎರಚಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಅವರು ಹೇಳಿದ್ದಾರೆ.
ಪ್ರಧಾನಿ ಮೋದಿ ಬರ್ತಾರೆ, ಟಾಟಾ ಮಾಡಿ ಹೋಗುತ್ತಾರೆ
ಕೋಲಾರದ ಮಾಲೂರು ಪಟ್ಟಣಕ್ಕೆ ಆಗಮಿಸಿದ ಮಾಜಿ ಸಿಎಂ ಕುಮಾರಸ್ವಾಮಿ ಅವರು, ವೈಟ್ ಗಾರ್ಡನ್ ಬಡಾವಣೆಯಲ್ಲಿ ಜೆಡಿಎಸ್ ಸಮಾವೇಶ ನಡೆಸಿದರು. ಮಾಲೂರು ಜೆಡಿಎಸ್ ಅಭ್ಯರ್ಥಿ ರಾಮೇಗೌಡ ಪರವಾಗಿ ಪ್ರಚಾರ ಸಮಾವೇಶಕ್ಕೆ ಎಚ್ಡಿಕೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಪ್ರಧಾನಿ ಮೋದಿ ಬರ್ತಾರೆ, ಟಾಟಾ ಮಾಡಿ ಹೋಗುತ್ತಾರೆ, ಆದರೆ ಇದರಿಂದ ರಾಜ್ಯಕ್ಕೆ ಏನೂ ಪ್ರಯೋಜನ ಇಲ್ಲ.
ಮೋದಿ 10 ವರ್ಷದಲ್ಲಿ ಮಾಡದ್ದನ್ನು 14 ತಿಂಗಳಲ್ಲಿ ಮಾಡಿದ್ದೇನೆ
ರಾಜ್ಯದ ರೈತರಿಗೆ ಮೋದಿ ಕೊಡುಗೆ ಏನು? ಫಸಲ್ ಭೀಮಾ ಯೋಜನೆ, ಖಾಸಗಿ ಕಂಪನಿಗಳಿಗೆ ದುಡ್ಡು ಮಾಡಿ ಕೊಡುವ ಯೋಜನೆಯಾಗಿದೆ. ಮೋದಿ 10 ವರ್ಷದಲ್ಲಿ ಮಾಡಲು ಆಗದ್ದನ್ನು, ನಾನು 14 ತಿಂಗಳಲ್ಲೇ ಮಾಡಿದ್ದೇನೆ. ನಾನು ಸಿಎಂ ಆಗಿದ್ದಾಗ 25 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದೆ. ಅಭಿವೃದ್ಧಿ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ, ಸರ್ಕಾರದಲ್ಲಿ ಲೂಟಿ ಮಾಡಿದ ಹಣದಲ್ಲಿ ಈಗ ಚುನಾವಣೆ ನಡೆಸಲು ಬಂದಿದ್ದಾರೆ. ಒಂದು ಮನೆ ಕಟ್ಟುವ ಯೋಗ್ಯತೆಯಿಲ್ಲ, 100 ದಿನದಲ್ಲಿ ಮನೆ ಕಟ್ಟಿ ಕೊಡೊದಾಗಿ ಸುಳ್ಳು ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕೋಲಾರಕ್ಕೆ ಕೊಳಚೆ ನೀರು ಕೊಟ್ಟಿದ್ದೆ ಕಾಂಗ್ರೆಸ್ ಸಾಧನೆ
ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ರಚನೆಯಾದ 24 ಗಂಟೆಯಲ್ಲೆ ಸ್ತ್ರೀ ಶಕ್ತಿ ಸಂಘದ ಸಾಲಮನ್ನಾ ಮಾಡಲಾಗುತ್ತದೆ. ನಾನು ಸಿಎಂ ಆಗಿದ್ದಾಗ ಟೊಮೆಟೊ, ಮಾವು ರೈತರಿಗೆ ಬೆಂಬಲ ಬೆಲೆ ಘೋಷಿಸಿದ್ದೆ. ಕೋಲಾರಕ್ಕೆ ಕೊಳಚೆ ನೀರು ಕೊಟ್ಟಿದ್ದೆ ಕಾಂಗ್ರೆಸ್ ಸಾಧನೆ. ಕೆ.ಸಿ ವ್ಯಾಲಿ ಯೋಜನೆ ನೀರು ವಿಷಯುಕ್ತ ನೀರು, ನೀರು ಲಭ್ಯವಿರುವ ಯರಗೋಳ ಡ್ಯಾಂ ನೀರು ಬಳಸುವ ಕಾಳಜಿ ಈ ದಾರಿದ್ರ ಬಿಜೆಪಿ ಸರ್ಕಾರಕ್ಕಿಲ್ಲ. ರೈತರ ಗಂಡು ಮಕ್ಕಳಿಗೆ ಮದುವೆಗೆ ಹೆಣ್ಣು ಕೊಡಲು ಹಿಂದೆ ಮುಂದೆ ನೋಡುವಂತಾಗಿದೆ. ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ 2 ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡುತ್ತೇವೆ.
ವಾರ್ಷಿಕ 5 ಸಿಲಿಂಡರ್ ಉಚಿತವಾಗಿ ನೀಡುತ್ತೇವೆ. ಕಾಂಗ್ರೆಸ್ ನ ಗ್ಯಾರೆಂಟಿ ಕಾರ್ಡ್, ಡೂಪ್ಲಿಕೇಟ್ ಕಾರ್ಡ್ ಅದನ್ನ ನಂಬಬೇಡಿ. ಎರಡೂವರೆ ಲಕ್ಷ ಕೋಟಿ ಸಂಗ್ರಹಿಸಿ ಪಂಚರತ್ನ ಕಾರ್ಯಕ್ರಮಕ್ಕೆ ಜೀವ ಕೊಡುವೆ. ನಾನು ಎರಡು ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದೇನೆ. ನನ್ನ ಆರೋಗ್ಯ ಲೆಕ್ಕಿಸದೆ ಬಡಜನರಿಗಾಗಿ ಹೋರಾಟ ಮುಂದುವರೆಸಿದ್ದೇನೆ.
2 ಬಾರಿ ಸಿಎಂ ಆಗಿದ್ದೇನೆ, 3 ಬಾರಿ ಸಿಎಂ ಆಗುವ ಆನಂದ ನನಗಿಲ್ಲ, ಜನತೆಗಾಗಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು. ನಾನು 10, 20 ಕೋಟಿ ರೂಪಾಯಿ ಹಣ ಕೊಟ್ಟಿದ್ದರೆ ಜೆಡಿಎಸ್ ಪಕ್ಷಕ್ಕೂ 129 ಸೀಟ್ ಎಂದು ಪ್ರಚಾರ ಮಾಡಬಹುದು ಎಂದರು. ನನ್ನ ಮುಂದಿನ ಆಯಸ್ಸು, ನಾಡಿನ ಜನತೆಯ ಅಭಿವೃದ್ಧಿಗೆ ಮೀಸಲು, ದೇವೇಗೌಡರು ಸಿಎಂ ಆಗಿದ್ದಾಗ ಕೆಲವರ ನಿರೀಕ್ಷೆ ಈಡೇರಿಲ್ಲ, ನಾನು ಅವರ ಕನಸು ನನಸು ಮಾಡಲು ಹೊರಟಿದ್ದೇನೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ