ಬೆಂಗಳೂರು: ಕೇಂದ್ರ ಚುನಾವಣಾ ಆಯೋಗವು (Election Commission) ಕರ್ನಾಟಕದ (Karnataka) 224 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ (Election) ದಿನಾಂಕವನ್ನು ಘೋಷಣೆ ಮಾಡಿದೆ. ಒಂದೇ ಹಂತದಲ್ಲಿ ಮೇ 10 ರಂದು ಮತದಾನ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ (Counting of votes) ನಡೆಯಲಿದೆ. ಇನ್ನು ಈಗಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ತಿಳಿಸಿದರು. ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ 2023 ವೇಳಾಪಟ್ಟಿ ಕುರಿತು ಪತ್ರಿಕಾಗೋಷ್ಠಿ ನಡೆಸಿ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ (Manoj Kumar Meena) ಮಾಹಿತಿ ನೀಡಿದ್ದಾರೆ.
ಏಪ್ರಿಲ್ 11ರೊಳಗೆ ಮತದಾರ ಪಟ್ಟಿ ಸೇರಿಸಲು ಅವಕಾಶ
ಬೆಂಗಳೂರಿನ ಶೇಷಾದ್ರಿ ರಸ್ತೆಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮನೋಜ್ ಕುಮಾರ್ ಮೀನಾ ಅವರು, ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಈಗಾಗಲೇ ಕೇಂದ್ರ ಚುನಾವಣಾ ಆಯೋಗ ಸುದ್ದಿಗೋಷ್ಠಿ ನಡೆಸಿ ಚುನಾವಣೆ ಕುರಿತಂತೆ ಮಾಹಿತಿ ನೀಡಿದೆ.
ಇದನ್ನೂ ಓದಿ: Karnataka Election Dates 2023 LIVE: ಮೇ 10ಕ್ಕೆ ಕರ್ನಾಟಕ ವಿಧಾನಸಭೆ ಚುನಾವಣೆ, ಮೇ 13ಕ್ಕೆ ಫಲಿತಾಂಶ
ಏಪ್ರಿಲ್ 11ರೊಳಗೆ ಮತದಾರ ಪಟ್ಟಿ ಸೇರಿಸಲು ಇನ್ನೂ ಅವಕಾಶ ಇದೆ. ಈವರೆಗೆ 5,24,11,557 ಮತದಾತರಿದ್ದಾರೆ. 80 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ಮತದಾರರಿಗೆ ಮತದಾನ ಮಾಡಲು ಮನೆಯಲ್ಲಿಯೇ ಅವಕಾಶ ಕಲ್ಪಿಸಲಾಗಿದೆ. ಚುನಾವಣಾ ಅಧಿಕಾರಿ ಸಿಬ್ಬಂದಿ ತಂಡ ಮನೆಗೆ ಹೋಗಲಿದೆ, ಇಬ್ಬರು ಅಧಿಕಾರಿಗಳು, ಒಬ್ಬರು ಪೊಲೀಸ್ ಮನೆಗೆ ಹೋಗುತ್ತಾರೆ. ಪೋಸ್ಟಲ್ ಬ್ಯಾಲೆಟ್ ನಲ್ಲಿ ಮತದಾನ ಮಾಡಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ12,15,142 ಹಿರಿಯ ಮತದಾರರು, 5,60,908 ವಿಶೇಷ ಚೇತನ ಮತದಾರರಿದ್ದಾರೆ. 30,570 ಜೇನುಕುರುಬರು, 41,212 ತೃತೀಯ ಲಿಂಗಿಗಳು ಇದ್ದಾರೆ. ರಾಜ್ಯದಲ್ಲಿ ಬೆಂಗಳೂರು ದಕ್ಷಿಣ ಅಂದರೆ ಅತಿ ಹೆಚ್ಚು 6,27,247 ಮತದಾರರಿದ್ದಾರೆ. ಅತ್ಯಂತ ಕಡಿಮೆ ಶೃಂಗೇರಿಯಲ್ಲಿ 1,68,564 ಮತದಾರರಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ 58,282 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. ಬೆಳಗಾವಿಯಲ್ಲಿ ಅತಿ ಹೆಚ್ಚು, ಕೊಡಗು ಜಿಲ್ಲೆಯಲ್ಲಿ ಕಡಿಮೆ ಮತಗಟ್ಟೆಗಳು ಇರಲಿದೆ. ಸಾರ್ವತ್ರಿಕ ಚುನಾವಣೆ ನಡೆಸಲು 2,79,752 ಸಿಬ್ಬಂದಿಗಳು ಅಗತ್ಯವಿದ್ದು, 18,000 ಮೈಕ್ರೋ ವೀಕ್ಷಕರ ಅಗತ್ಯವಿದೆ. ಇವಿಎಂನಲ್ಲಿ ಹೈದರಾಬಾದ್ ನಿಂದ ಎಂ3 ಮಿಷನ್ ಬಂದಿದೆ. ಹೊಸತಾಗಿ ತಯಾರಾದ ಯಂತ್ರಗಳು ಇದುವರೆಗೂ ಎಲ್ಲೂ ಬಳಕೆಯಾಗದ 1,15,709 ಹೊಸ ಮೆಷಿನ್ ಗಳು ಇವೆ. ಈ ಬಾರಿ ಚುನಾವಣೆಗೆ ಶೇಕಡಾ 200 ರಷ್ಟು ಹೆಚ್ಚು ಇವಿಎಂ ಮೆಷಿನ್ ಹೊಂದಿದ್ದೇವೆ ಎಂದು ವಿವರಿಸಿದರು.
ಇದುವರೆಗೂ 34 ಕೋಟಿ ರೂಪಾಯಿ ಸೀಜ್
ರಾಜಕೀಯ ಪಕ್ಷಗಳ ಪ್ರತಿನಿಧಿ ಮುಂದೆ ತಪಾಸಣೆ ಮಾಡಲಾಗುತ್ತದೆ. 7,506 ರಾಜ್ಯ ಮೀಸಲು ಪಡೆ, 942 ಚೆಕ್ ಪೋಸ್ಟ್ ನಿರ್ಮಿಸಲಾಗಿದ್ದು, ಇದುವರೆಗೂ 58 ಕೋಟಿ ರೂಪಾಯಿ ಸೀಜ್ ಮಾಡಲಾಗಿದೆ.
ಪೊಲೀಸ್ 34 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಅಬಕಾರಿ ಇಲಾಖೆ ಕೂಡ ಕಾರ್ಯಾಚರಣೆ ನಡೆಸಿ ವಸ್ತುಗಳನ್ನು ವಶಕ್ಕೆ ಪಡೆದಿದೆ. ಸೆಂಟ್ರಲ್ ಜಿಎಸ್ಟಿ 4 ಕೋಟಿ ರೂಪಾಯಿ ಸೀಜ್ ಮಾಡಿದೆ. ಈ ಸಂಬಂಧ 1,985 ಎಫ್ ಐ ಆರ್ ಈವರೆಗೆ ದಾಖಲು ಮಾಡಿದ್ದೇವೆ. ಅಬಕಾರಿ ಇಲಾಖೆ 4,000 ಕೇಸ್ ಬುಕ್ ಮಾಡಿದ್ದಾರೆ.
ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ 40 ಲಕ್ಷ ರೂಪಾಯಿ ಖರ್ಚು ಮಾಡಲು ಅವಕಾಶ ಇದೆ. ಮತದಾರರು ದೊಡ್ಡ ಸಂಖ್ಯೆಯಲ್ಲಿ ಚುನಾವಣೆಯಲ್ಲಿ ಭಾಗಿಯಾಗಬೇಕು, ಅಮಿಷಗಳನ್ನು ತಡೆಗಟ್ಟಲು ಸಾಥ್ ನೀಡಬೇಕು. ಅಧಿಕಾರಿಗಳು ಪಕ್ಷ ಪರವಾಗಿ ಕೆಲಸ ಮಾಡುವ ದೂರು ಬಂದರೆ ವರ್ಗಾವಣೆ ಹಾಗೂ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.
ಈ ಸಂಬಂಧ ಬಿ.ಕೆ ಹರಿಪ್ರಸಾದ್ ದೂರು ನೀಡಿದ್ದಾರೆ. ಒಬ್ಬ ಜಿಲ್ಲಾಧಿಕಾರಿ ವಿರುದ್ದ ದೂರು ನೀಡಿದ್ದಾರೆ, ಈ ಕುರಿತು ಅವರಿಂದ ಸ್ಪಷ್ಟೀಕರಣ ಪಡೆದ ನಂತರ ಕಾರ್ಯ ಪ್ರವೃತ್ತರಾಗುತ್ತೇವೆ. ಸರ್ವೆ ವಿಚಾರದಲ್ಲಿ ಮತದಾರರ ವೈಯಕ್ತಿಕ ಮಾಹಿತಿ ಕೇಳುವಂತಿಲ್ಲ. ಎಪಿಕ್ ನಂಬರ್, ಮೊಬೈಲ್ ನಂಬರ್ ಕೇಳುವಂತಿಲ್ಲ ಎಂದು ಸ್ಪಷ್ಟಪಡಿಸಿದರು.
ಮನೆಯಲ್ಲಿ ಮತದಾನ ಮಾಡುವವರಿಗೆ ಫಾರ್ಮ್ 12 ಡಿ ವಿತರಣೆ
ಕರಗ, ಜಾತ್ರೆ, ಸಮಾರಂಭ ಧಾರ್ಮಿಕ ಸ್ಥಳಗಳಲ್ಲಿ ರಾಜಕೀಯ ಪ್ರಚಾರ ಮಾಡುವಂತಿಲ್ಲ. ಅಭ್ಯರ್ಥಿ, ರಾಜಕೀಯ ಮುಖಂಡರು ಭಾಗಿಯಾಗಬಹುದು ಆದರೆ ಪಕ್ಷದ ಪರ, ಅಭ್ಯರ್ಥಿ ಪತ ಪ್ರಚಾರ ಮಾಡುವಂತಿಲ್ಲ.
ಇದನ್ನೂ ಓದಿ: Election Boycott: ಚುನಾವಣೆ ಘೋಷಣೆ ಬೆನ್ನಲ್ಲೇ ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ ಹಾಸನದ ಜನರು!
ಮನೆಯಲ್ಲಿ ಮತದಾನ ಮಾಡುವವರಿಗೆ ಫಾರ್ಮ್ 12 ಡಿ ವಿತರಣೆ ಮಾಡುತ್ತೇವೆ ಅವರಿಗೆ ವಾಹನ ವ್ಯವಸ್ಥೆ ಇರುತ್ತದೆ. ನೋಟಿಫಿಕೇಷನ್ ಆದ ಐದು ದಿನಗಳ ಒಳಗಡೆ ಒಪ್ಪಿಗೆ ಕೊಡಬೇಕು, ಬಳಿಕ ತಂಡ ರಚನೆ ಮಾಡಿ ಓರ್ವ ವಿಡಿಯೋ ಗ್ರಾಫರ್, ಎರಡು ಸಿಬ್ಬಂದಿ, ಓರ್ವ ಪೊಲೀಸ್ ಹಾಗೂ ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡಿ ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನಕ್ಕೆ ಅವಕಾಶ ನೀಡಲಾಗುತ್ತದೆ. ಯಾವುದೇ ಸಮೀಕ್ಷೆಗಳಲ್ಲಿ ವೈಯಕ್ತಿಕ ಮಾಹಿತಿ ಸಂಗ್ರಹ ಮಾಡುವ ಹಾಗಿಲ್ಲ. ಒಂದು ವೇಳೆ ಸಂಗ್ರಹ ಮಾಡಿದರೆ ಪ್ರಕರಣ ದಾಖಲು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪತ್ರಕರ್ತರಿಗೆ ಕೆಲಸ ಮಾಡುವ ಸ್ಥಳದಿಂದಲೇ ಮತದಾನಕ್ಕೆ ಅವಕಾಶ
ಚುನಾವಣೆಯಲ್ಲಿ ಈ ಬಾರಿ ಪತ್ರಕರ್ತರಿಗೆ ತಾವು ಕೆಲಸ ಮಾಡುವ ಸ್ಥಳದಿಂದ ಮತದಾನಕ್ಕೆ ಅವಕಾಶ ನೀಡಲಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಮಾನ್ಯತಾ ಕಾರ್ಡ್ ಹೊಂದಿರುವ ಪತ್ರಕರ್ತರು, ತಮ್ಮ ಸಂಸ್ಥೆಯ ಒಪ್ಪಿಗೆಯೊಂದಿಗೆ ಮತದಾನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ.
ಮಾಧ್ಯಮ ಸಂಸ್ಥೆ ಒಪ್ಪಿಗೆ ನೀಡಿದ, ಮಾನ್ಯತಾ ಕಾರ್ಡ್ ಹೊಂದಿದವರಿಗೆ ಮತದಾನಕ್ಕೆ ಅವಕಾಶ ನೀಡುವ ಕುರಿತು ಕೆಲವೇ ದಿನಗಳಲ್ಲಿ ರಾಜ್ಯ ಚುನಾವಣಾ ಆಯೋಗ ಮಾಧ್ಯಮಗಳಿಗೆ ಮಾಹಿತಿ ನೀಡಲಿದೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ