Karnataka Assembly Election: ಚುನಾವಣಾ ಕಣ ದಿನೇ ದಿನೇ ರಂಗೇರುತ್ತಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ತಮ್ಮ ತಮ್ಮ ಲೆಕ್ಕಾಚಾರದ ಅನುಸಾರ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಪ್ರತಿ ಹಂತದಲ್ಲಿ ಎಚ್ಚರದಿಂದ ಹೆಜ್ಜೆ ಇಡುತ್ತಿರುವ ಪಕ್ಷಗಳು ಮೇ 10ರಂದು ನಡೆಯಲಿರುವ ಮತದಾನಕ್ಕೆ ತಮ್ಮ ಪಕ್ಷಗಳ ಗೆಲ್ಲುವ ಕುದುರೆಗಳನ್ನು ಕಣಕ್ಕಿಳಿಸಿ ಸಜ್ಜಾಗುತ್ತಿದ್ದಾರೆ.
ಗೆಲುವಿನ ನಾಗಾಲೋಟದ ಬೆನ್ನತ್ತಿರುವ ಪಕ್ಷಗಳ ಅಂತಿಮ ಫಲಿತಾಂಶ ಮೇ 13ರಂದು ನಿರ್ಣಯವಾಗಲಿದ್ದು, ಮತದಾರರು ಯಾವ ಪಕ್ಷದ, ಯಾರ ಕೈ ಮೇಲೆತ್ತಿದ್ದಾರೆ ಎಂದು ನಿರ್ಧಾರವಾಗಲಿದೆ.
ಜೆಡಿಎಸ್ ಸಹ ಗೆಲ್ಲುವ ಕುದುರೆಗೆ ಬಾಜಿ ಕಟ್ಟಿದ್ದು, ಇದರಲ್ಲಿ ಹೊಸ ಮುಖಗಳಿಗೆ ಆಹ್ವಾನ ನೀಡಿರುವುದರೊಂದಿಗೆ ಹಳಬರನ್ನು ಉಳಿಸಿಕೊಂಡಿದೆ. ಅಂದರೆ ರಾಜಕೀಯವು ಯುವಕರತ್ತ ಮುಖ ಮಾಡಿದ್ದು, ಯುವಕರಿಗೂ ಮಣೆ ಹಾಕುತ್ತಿದೆ. ಈ ಇದರಲ್ಲಿ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಅವರ ಪುತ್ರ ಜಿಡಿ ಹರೀಶ್ ಗೌಡ (GD Harish Gowda) ಅವರ ಹೆಸರು ಕೂಡ ಇದೆ.
ಇದನ್ನೂ ಓದಿ: Dr K Annadani: ಗೆದ್ದೇ ಗೆಲ್ಲುವ ಛಲದಲ್ಲಿರುವ ಮಳವಳ್ಳಿ ಶಾಸಕ ಡಾ ಕೆ ಅನ್ನದಾನಿಯವರ ಬಗ್ಗೆ ನಿಮಗೆಷ್ಟು ಗೊತ್ತು?
ಜಿಡಿ ಹರೀಶ್ ಗೌಡ
ಮಾಜಿ ಉನ್ನತ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ ಹಿರಿಯ ರಾಜಕಾರಣಿ, ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡರ ಪುತ್ರ ಜಿಡಿ ಹರೀಶ್ ಗೌಡ. ಇವರು ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದು, ಈ ಬಾರಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಹುಣಸೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಈಗಾಗಲೇ ಸಹಕಾರಿ ಕ್ಷೇತ್ರ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಜನನಾಯಕರಾಗಿ ಗುರುತಿಸಿಕೊಂಡಿದ್ದಾರೆ.
ರಾಜಕೀಯ ಯುವಕರತ್ತ ಸಾಗುತ್ತಿರುವ ಈ ಹೊತ್ತಿನಲ್ಲಿ ಸಹಕಾರ, ರಾಜಕೀಯ ಕ್ಷೇತ್ರದಲ್ಲಿ ಹೊಸ ಮುಖಗಳು ಮುಂದೆ ಬರುತ್ತಿರುವ ಸಂದರ್ಭದಲ್ಲಿ ಸಹಕಾರಿ ಕ್ಷೇತ್ರ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಯುವನಾಯಕರಾಗಿ ಹೊರಹೊಮ್ಮಿದವರು ಜಿಡಿ ಹರೀಶ್ ಗೌಡ.
ಯುವ ನಾಯಕ
ಮೈಸೂರಿನ ಹುಣಸೂರು ಕ್ಷೇತ್ರದ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಮತ್ತು ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್‌ನ ಉಪಾಧ್ಯಕ್ಷರಾಗಿರುವ ಹರೀಶ್ ಗೌಡ ಅವರು ಅವಿರತವಾಗಿ ಶ್ರಮಿಸುತ್ತಿದ್ದಾರೆ ಮತ್ತು ಈ ಪ್ರದೇಶದಲ್ಲಿ ಯುವಕರ ಐಕಾನ್ ಆಗಿ ಹೊರಹೊಮ್ಮುವುದರ ಜೊತೆಗೆ ರೈತರ ಸಂಕಷ್ಟಗಳಿಗೆ, ಜನತೆಯ ನೋವುಗಳಿಗೆ ಸ್ಪಂದಿಸುತ್ತಾ ಬೆಂಬಲಕ್ಕೆ ನಿಂತಿದ್ದಾರೆ.
ಸಹಕಾರಿ ತತ್ವದಲ್ಲಿ ನಂಬಿಕೆ
ಭಾರತದಲ್ಲಿ ಸಹಕಾರಿ ಚಳವಳಿಯ ಪ್ರವರ್ತಕರಾದ ಫ್ರೆಡ್ರಿಕ್ ನಿಕೋಲ್ಸನ್ ಅವರ ಬೋಧನೆಗಳು ಮತ್ತು ತತ್ವಶಾಸ್ತ್ರದಿಂದ ಪ್ರಭಾವಿತರಾಗಿ, ತಂದೆಯೂ ಅಳವಡಿಸಿಕೊಂಡ, ಸಹಕಾರಿ ಚಳುವಳಿ ಬಗ್ಗೆ ಅರಿತಿರುವ ಹರೀಶ್ ಗೌಡ ಅವರು ರಾಜ್ಯದಲ್ಲಿ ಸಹಕಾರಿ ಚಳುವಳಿಯ ಪಾತ್ರದ ಹೆಚ್ಚಳಕ್ಕೆ ತಮ್ಮದೇ ನಿಲುವಿನ ಮುಖೇನ ಒತ್ತು ನೀಡಿದ್ದಾರೆ.
ಹರೀಶ್ ಗೌಡ ಅವರು ಕೋವಿಡ್-೧೯ರ ನೂರಾರು ಮಂದಿಗೆ ಸಹಾಯ ಹಸ್ತ ಚಾಚಿದ್ದಾರೆ. ಯುವಬ್ರಿಗೇಡ್‌ನಲ್ಲಿ ಗುರುತಿಸಿಕೊಂಡಿರುವ ಇವರು ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ ಅವರ ಆತ್ಮೀಯ ಸ್ನೇಹಿತ ಕೂಡ ಹೌದು. ರೈತ ಪರ, ಜನಪರ ಅಭಿವೃದ್ದಿಗಳಿಗೆ ಪಣತೊಟ್ಟಿದ್ದಾರೆ.
ಕಾಂಗ್ರೆಸ್‌ನಲ್ಲಿದ್ದ ಹರೀಶ್ ಗೌಡ
ಹರೀಶ್ ಗೌಡ ಹಾಗೂ ಅವರ ತಂದೆ ಜಿಟಿ ದೇವೇಗೌಡ ಅವರು ಈ ಮೊದಲು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಇದೀಗ ಜೆಡಿಎಸ್ ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ. 2019 ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್ ಪಿ ಮಂಜುನಾಥ್ : 92,725 ಮತಗಳು ಪಡೆದು ಜಯ ಸಾಧಿಸಿದ್ದರು.
ಒಟ್ಟಾರೆ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಅಖಾಡ ರಂಗೇರಿದೆ. ಈ ಚುನಾವಣೆಯಲ್ಲಿ ಜೆಡಿಎಸ್ ಗೆಲ್ಲಿಸಲೇಬೇಕು ಎಂಬ ಹಟಕ್ಕೆ ಬಿದ್ದಿರುವ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಘೋಷಿತ ಅಭ್ಯರ್ಥಿ ಶಾಸಕ ಜಿ.ಟಿ ದೇವೇಗೌಡ ಪುತ್ರ ಜಿಡಿ ಹರೀಶ್ ಗೌಡಗೆ ಭರಪೂರ ಪ್ರೋತ್ಸಾಹ ನೀಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ