ಚಿತ್ರದುರ್ಗ: ರಾಜ್ಯದಾದ್ಯಂತ ಚುನಾವಣಾ (Karnataka Elections) ಕಾವು ಜೋರಾಗಿಯೇ ಇದೆ. ಇದೀಗ ಎಲ್ಲಾ ಪಕ್ಷಗಳ ಅಭ್ಯರ್ಥಿಗಳ ಹೆಸರುಗಳು (Candidates) ಫೈನಲ್ ಆಗಿದ್ದು, ಪ್ರತಿಯೊಬ್ಬ ಅಭ್ಯರ್ಥಿಯೂ ನಾಮಪತ್ರ ಸಲ್ಲಿಸಿ (Nomination) ಪ್ರಚಾರಕ್ಕಾಗಿ, ಜನರ ಓಲೈಕೆಗಾಗಿ, ಮತಬೇಟೆಗಾಗಿ ಫೀಲ್ಡಿಗಿಳಿದ್ದಾರೆ. ಈ ಬಾರಿ ಹೊಸ ಮುಖಗಳ ಜೊತೆಗೆ ಹಳಬರನ್ನು ಸಂಭಾಳಿಸಲು ಎಲ್ಲಾ ಪಕ್ಷಗಳು (Political Parties) ಅವಿರತ ಶ್ರಮಿಸಿದೆ. ಇನ್ನು ಪುರುಷ ಅಭ್ಯರ್ಥಿಗಳು ಮಾತ್ರವಲ್ಲದೇ ಮಹಿಳಾ ಅಭ್ಯರ್ಥಿಗಳು (Woman Candidates) ಕಣದಲ್ಲಿದ್ದಾರೆ. ಇದರಲ್ಲಿ ಕೋಟೆ ನಾಡು ಚಿತ್ರದುರ್ಗ (Chitradurga) ಹೊರತಾಗಿಲ್ಲ.
ಇಲ್ಲಿ ಚುನಾವಣೆಯ ಬಿಸಿ ಇಲ್ಲಿನ ಕಲ್ಲುಬಂಡೆಗಳಷ್ಟೇ ಸುಡುತ್ತಿದೆ. ಬಿಜೆಪಿಯು ಇಲ್ಲಿ ಈ ಹಿಂದೆ ಕಾಂಗ್ರೆಸ್‍ನಿಂದ ಬಿಜೆಪಿಗೆ ಬಂದು ಚಿತ್ರದುರ್ಗದ ರಾಜಕೀಯ ರಂಗದಲ್ಲಿ ಇತಿಹಾಸ ನಿರ್ಮಿಸಿದ್ದ ಕೆ. ಪೂರ್ಣಿಮಾ ಶ್ರೀನಿವಾಸ್ (K Poornima Srinivas) ಅವರಿಗೆ ಟಿಕೆಟ್ ನೀಡಿದೆ.
ಈ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ದಿ ಕಾರ್ಯಗಳ ಮೂಲಕ ಇದೀಗ ಮರು ಆಯ್ಕೆ ಬಯಸಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ ಕೆ. ಪೂರ್ಣಿಮಾ ಶ್ರೀನಿವಾಸ್.
ರಾಜಕೀಯ ಕುಟುಂಬದಲ್ಲಿ ಬೆಳೆದ ಪೂರ್ಣಿಮಾ ಅವರಿಗೆ ರಾಜಕೀಯ ಗುರು ಅವರ ಅಪ್ಪ ಎ. ಕೃಷ್ಣಪ್ಪ ಎಂದರೆ ತಪ್ಪಾಗಲಾರದು. ಇದೀಗ ಅಪ್ಪ ಹೇಳಿದ ರಾಜಕೀಯ ಪಾಠಗಳನ್ನು ಕಲಿತು ಮತ್ತೊಮ್ಮೆ ಶಾಸಕಿಯಾಗುವ ಕನಸು ಕಾಣುತ್ತಿರುವ ಕೆ. ಪೂರ್ಣಿಮಾ ಶ್ರೀನಿವಾಸ್ ಅವರ ಸಂಪೂರ್ಣ ವಿವರ.
ವೈಯಕ್ತಿಕ ವಿವರ
ಕೋಟೆನಾಡಿನಲ್ಲೇ ಮೊದಲ ಶಾಸಕಿಯಾಗಿ ಇತಿಹಾಸ ಸೃಷ್ಟಿಸಿದ ಪೂರ್ಣಿಮಾ ಅವರು 25 ಸೆಪ್ಟೆಂಬರ್ 1976ರಲ್ಲಿ ಉದ್ಯಾನ ನಗರಿ ಬೆಂಗಳೂರಿನಲ್ಲಿ ಜನಿಸಿದರು.
ತಂದೆ ಎ ಕೃಷ್ಣಪ್ಪ. ತಾಯಿ ಮಂಜುಳಾ. ಪೂರ್ಣಿಮಾ ಅವರು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಮಾಜಶಾಸ್ತ್ರ ವಿಷಯದಲ್ಲಿ ಎಂಎ ಪದವಿ ಗಳಿಸಿಕೊಂಡಿದ್ದಾರೆ. ಪತಿ ಶ್ರೀನಿವಾಸ್ ಇವರು ಶಿಕ್ಷಣ ತಜ್ಞರಾಗಿದ್ದಾರೆ.
ರಾಜಕೀಯ ಹಿನ್ನೆಲೆ
ಕಳೆದ 2018ರಲ್ಲಿ ಕೆ ಪೂರ್ಣಿಮಾ ಶ್ರೀನಿವಾಸ್ ಅವರು ಚಿತ್ರದುರ್ಗ ಜಿಲ್ಲೆಯ ಇತಿಹಾಸದಲ್ಲೇ ಮೊದಲ ಮಹಿಳಾ ಶಾಸಕಿಯಾಗಿ ಆಯ್ಕೆಯಾಗಿದ್ದರು. ಅದರಲ್ಲೂ ಕಾಂಗ್ರೆಸ್‍ನ ಭದ್ರಕೋಟೆ ಎಂದೇ ಹೆಸರಾಗಿದ್ದ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು ಸಾಧಿಸಿತ್ತು.
2013ರಲ್ಲಿ ಹಿರಿಯೂರು ಕ್ಷೇತ್ರದಿಂದ ಪೂರ್ಣಿಮಾ ಶ್ರೀನಿವಾಸ್ ಅವರ ತಂದೆ ದಿವಂಗತ ಮಾಜಿ ಸಚಿವ ಎ. ಕೃಷ್ಣಪ್ಪ ಅವರು ಸ್ಪರ್ಧಿಸಿದ್ದರು. ಈ ವೇಳೆ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಡಿ ಸುಧಾಕರ್ ವಿರುದ್ಧ ಸೋಲುಂಡಿದ್ದರು.
ಬಳಿಕ ಪೂರ್ಣಿಮಾ ಕಾಂಗ್ರೆಸ್‍ನಿಂದ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಅಂದಿನಿಂದ ಬಿಜೆಪಿ ಪಕ್ಷ ಸಂಘಟನೆಗಾಗಿ ಅವಿರತ ಶ್ರಮಿಸಿ 2018ರಲ್ಲಿ ತಂದೆ ಸೋತ ಕ್ಷೇತ್ರದಲ್ಲಿಯೇ ಭರ್ಜರಿ ಗೆಲುವನ್ನು ತಮ್ಮದಾಗಿಸಿಕೊಂಡರು. ಅಲ್ಲದೇ ಪೂರ್ಣಿಮಾ ಅವರು ಅಖಿಲ ಭಾರತ ಯಾದವ ಮಹಾಸಭಾ ಮಹಿಳಾ ಕೋಶದ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದಾರೆ.
ಆಸ್ತಿ ವಿವರ:
ಅಭ್ಯರ್ಥಿ ಕೆ.ಪೂರ್ಣಿಮಾ ಅವರು ತಮ್ಮ ಆಸ್ತಿ ವಿವರವನ್ನು ಸಲ್ಲಿಸಿದ್ದು, ಅವರ ಹೆಸರಿನಲ್ಲಿ 63.88 ಕೋಟಿ ರೂಪಾಯಿ, ಪತಿ ಡಿ.ಟಿ.ಶ್ರೀನಿವಾಸ್ 29.18 ಕೋಟಿ ರೂಪಾಯಿ, ಮಗ ಬ್ರಿಜೇಶ್ ಎಸ್ ಯಾದವ್ 14.6 ಕೋಟಿ ರೂಪಾಯಿ ಹಾಗೂ ಮಗಳು ವಿನಿಶಾ ಎಸ್ ಯಾದವ್ 32.40 ಲಕ್ಷ ರೂಪಾಯಿ ಸೇರಿದಂತೆ ಒಟ್ಟು ರೂ 104.8 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ ಎಂದು ಘೋಷಿಸಿಕೊಂಡಿದ್ದಾರೆ.
ಇದನ್ನೂ ಓದಿ: Roopali Naik: ಮತ್ತೊಮ್ಮೆ ಗೆದ್ದು ಬೀಗುತ್ತಾರಾ ರೂಪಾಲಿ ನಾಯ್ಕ್? ಕಾರವಾರ ಶಾಸಕಿಯ ಪರಿಚಯ ಇಲ್ಲಿದೆ
ವಿರುದ್ಧ ಅಭ್ಯರ್ಥಿ ಯಾರು?
ಕೆ ಪೂರ್ಣಿಮಾ ಅವರು ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಪುನಃ ಕಾಂಗ್ರೆಸ್ ಅಭ್ಯರ್ಥಿ ಡಿ. ಸುಧಾಕರ್ ಅವರನ್ನು ಎದುರಿಸಬೇಕಾಗಿದೆ.
ಈ ಮೊದಲು ಕಾಂಗ್ರೆಸ್‍ನಲ್ಲಿ ಗುರುತಿಸಿಕೊಂಡಿದ್ದ ಪೂರ್ಣಿಮಾ ಅವರು 2018ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದು ಮಾಜಿ ಸಚಿವ ಡಿ. ಸುಧಾಕರ್ ಅವರನ್ನು 12,875 ಮತಗಳ ಅಂತರದಿಂದ ಸೋಲಿಸಿದ್ದರು. ಇನ್ನು ಜೆಡಿಎಸ್‍ನಿಂದ ರವೀಂದ್ರಪ್ಪ ಎಂಬುವವರು ಸ್ಪರ್ಧೆಗಿಳಿದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ