Karnataka Assembly Election 2023: ಚುನಾವಣಾ ಸಮರಕ್ಕೆ ಸಜ್ಜಾಗಿರುವ ಹೆಬ್ಬಾಳ ಕ್ಷೇತ್ರ ಕರ್ನಾಟಕ ರಾಜ್ಯದ 224 ಕ್ಷೇತ್ರಗಳ ಪೈಕಿ ಒಂದು. ತಂದೆಯ ಕುಟುಂಬ ರಾಜಕಾರಣವನ್ನು ಮುಂದುವರೆಸುತ್ತಿರುವ ಜಗದೀಶ್ ಕಟ್ಟಾ (Katta Jagadish Naidu) ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ಹೆಬ್ಬಾಳದಲ್ಲಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪುತ್ರ ಸ್ಪರ್ಧೆ
ಬಿಜೆಪಿಯ ಹಿರಿಯ ರಾಜಕಾರಣಿ, ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪುತ್ರನಾದ ಜಗದೀಶ್ ಕಟ್ಟಾ ಈ ಬಾರಿ ಬೆಂಗಳೂರಿನ ಹೆಬ್ಬಾಳ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಐಟಿ ಮತ್ತು ಬಿಟಿ ಸಚಿವ, ವಸತಿ ಸಚಿವ, ಅಬಕಾರಿ ಸಚಿವ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹೀಗೆ ನಾನಾ ಕ್ಷೇತ್ರಗಳಲ್ಲಿ ಜವಾಬ್ದಾರಿ ನಿಭಾಯಿಸಿರುವ ಕಟ್ಟಾ ಸುಬ್ರಹ್ಮಣ್ಯ ಪುತ್ರ ಅಪ್ಪನ ಪರಂಪರೆಯನ್ನು ಮುಂದುವರೆಸಿ, ಶಾಸಕ ಸ್ಥಾನ ಅಲಂಕರಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ: Dr K Annadani: ಗೆದ್ದೇ ಗೆಲ್ಲುವ ಛಲದಲ್ಲಿರುವ ಮಳವಳ್ಳಿ ಶಾಸಕ ಡಾ ಕೆ ಅನ್ನದಾನಿಯವರ ಬಗ್ಗೆ ನಿಮಗೆಷ್ಟು ಗೊತ್ತು?
ಕಾರ್ಪೋರೇಟರ್ ಆಗಿದ್ದ ಜಗದೀಶ್
ಹಿರಿಯ ರಾಜಕಾರಣಿ, ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪುತ್ರನಾಗಿರುವ ಕಟ್ಟಾ ಜಗದೀಶ್ ರಾಜಕೀಯ ಪ್ರವೇಶಕ್ಕೆ ಬಿಬಿಎಂಪಿ ವಲಯದಿಂದಲೇ ಸಿದ್ಧತೆ ನಡೆಸಿದ್ದರು. ಪಾಲಿಕೆ ಸದಸ್ಯನಾಗಿ, ಕಾರ್ಪೋರೇಟರ್ ಆಗಿ ಕೆಲಸ ನಿಭಾಯಿಸಿದ ಇವರಿಗೆ ಕೊನೆಗೂ ವಿಧಾನಸಭಾ ಎಲೆಕ್ಷನ್‌ನಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿದೆ.
ಪಾಲಿಕೆ ಸದಸ್ಯರಾಗಿದ್ದ ಮತ್ತು ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ಇವರಿಗೆ ತಂದೆಯ ವರ್ಚಸ್ಸಿನ ಮೇರೆಗೆ ಟಿಕೆಟ್ ನೀಡಲಾಗಿದೆ.
ಭರ್ಜರಿ ಮತಬೇಟೆ
ಸೋಶಿಯಲ್ ಮೀಡಿಯಾ ಸೇರಿದಂತೆ ಎಲ್ಲೆಡೆ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ ಕಟ್ಟಾ ಜಗದೀಶ್.
ಆರೋಪ ಪ್ರಕರಣ
ಜಗದೀಶ್ ವಿರುದ್ಧ ಅನೇಕ ಹಲ್ಲೆ ಪ್ರಕರಣ, ಲಂಚದ ಆರೋಪಗಳು ಕೇಳಿ ಬಂದಿದ್ದವು. ಕೆಐಎಡಿಬಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರ ತನಿಖೆಯಲ್ಲಿ ತಮಗೆ ನೆರವಾಗುವಂತೆ ಸಾಕ್ಷಿ ಹೇಳಲು ಹಾಗೂ ತನಿಖೆಯ ದಿಕ್ಕು ತಪ್ಪಿಸುವ ಸಲುವಾಗಿ ಪ್ರಕರಣದ ದೂರುದಾರ ಹಾಗೂ ಸಾಕ್ಷಿಯಾಗಿರುವ ತಮಗೆ ಪಾಲಿಕೆ ಸದಸ್ಯ ಕಟ್ಟಾ ಜಗದೀಶ್ ಲಂಚದ ಆಮಿಷವೊಡ್ಡಿದ್ದರು ಎಂದು ರಾಮಾಂಜಿನಪ್ಪ ಎಂಬುವವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಜಗದೀಶ್ ಸೂಚನೆಯಂತೆ ರುದ್ರೇಶ್ ಕುಮಾರ್ ಸದಾಶಿವನಗರದ ನಿವಾಸದಲ್ಲಿ ರಾಮಾಂಜಿನಪ್ಪ ಅವರಿಗೆ 1 ಲಕ್ಷ ರೂ. ನೀಡುತ್ತಿದ್ದ ವೇಳೆ ದಾಳಿ ನಡೆಸಿದ್ದ ಪೊಲೀಸರು ಹಣ ಜಪ್ತಿ ಮಾಡಿಕೊಂಡಿದ್ದರು. ಆದರೆ, ರುದ್ರೇಶ್ ಸ್ಥಳದಿಂದ ಪರಾರಿಯಾಗಿದ್ದ. ಇದೇ ವೇಳೆ ಗಾಂಧಿನಗರದ ತಮ್ಮ ಕಚೇರಿಯಲ್ಲಿದ್ದ ಕಟ್ಟಾ ಜಗದೀಶ್ ಅವರನ್ನು ಅರೆಸ್ಟ್ ಮಾಡಲಾಗಿತ್ತು.
ನಂತರ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಕೇಸ್ಅನ್ನು ಕೈ ಬಿಡುವಂತೆ ಕೋರಿ ಕಟ್ಟಾ ಜಗದೀಶ್ ನಾಯ್ಡು ಹಾಗೂ ಮತ್ತೋರ್ವ ಆರೋಪಿ ರುದ್ರೇಶ್ ಕುಮಾರ್ ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿರುವ ಲೋಕಾಯುಕ್ತ ವಿಶೇಷ ನ್ಯಾಯಾಲಯ ಇಬ್ಬರನ್ನೂ ದೋಷಮುಕ್ತ ಎಂದು ಆದೇಶ ಹೊರಡಿಸಿತ್ತು.
ಪ್ರಕರಣದ ಆರೋಪಿ ಹಾಗೂ ದೂರುದಾರ ಇಬ್ಬರೂ ಸರ್ಕಾರಿ ನೌಕರರು ಆಗಿಲ್ಲದಿರುವುದರಿಂದ ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಕಲಂ 10ರ ಅನ್ವಯ ಹೊರಿಸಲಾಗಿರುವ ಲಂಚ ನೀಡಿಕೆ ಆರೋಪ ಮಾನ್ಯವಾಗುವುದಿಲ್ಲ ಎಂಬ ಜಗದೀಶ್ ಪರ ವಕೀಲರ ವಾದವನ್ನು ನ್ಯಾಯಾಲಯ ಒಪ್ಪಿಕೊಂಡು ನಿರ್ದೋಷಿ ಎಂದು ತೀರ್ಪು ನೀಡಿತ್ತು.
ಹಲ್ಲೆ ಪ್ರಕರಣ
2018,ರಲ್ಲಿ ಕಾಂಗ್ರೆಸ್ ಶಾಸಕರಿದ್ದ ಈಗಲ್ಟನ್ ರೆಸಾರ್ಟ್ ಬಳಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಪುತ್ರ ಜಗದೀಶ್ ಕಟ್ಟಾ ಮೇಲೆ ಹಲ್ಲೆ ನಡೆದಿತ್ತು. ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಂದಿದ್ದರೆಂದು ತಿಳಿದು ಹಲ್ಲೆ ಮಾಡಲಾಗಿತ್ತು. ಈ ವರ್ಷದ ಮಾರ್ಚ್‌ನಲ್ಲೂ ಕೂಡ ಬ್ಯಾನರ್ ವಿಚಾರವಾಗಿ ಕೆಲವರ ಮೇಲೆ ಹಲ್ಲೆ ಮಾಡಿದ್ದರು. ಈ ಸಂಬಂಧ ಇವರ ವಿರುದ್ಧ ಕೊಲೆ ಯತ್ನದ ಕೇಸ್ ದಾಖಲಾಗಿದೆ.
ಹೆಬ್ಬಾಳದಲ್ಲಿ 2018 ರಲ್ಲಿ ಕಾಂಗ್ರೆಸ್ನ ಬೈರತಿ ಎಸ್. ಸುರೇಶ್ ಗೆಲುವು ಸಾಧಿಸಿದ್ದರು. ಭಾರತೀಯ ಜನತಾ ಪಾರ್ಟಿಯ ಡಾ. ವೈಎ ನಾರಾಯಣ ಸ್ವಾಮಿ 21140 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಈ ಬಾರಿ ಕೂಡ ಕಾಂಗ್ರೆಸ್‌ನ ಬೈರತಿ ಎಸ್. ಸುರೇಶ್ ಕಣದಲ್ಲಿದ್ದು, ಜೆಡಿಎಸ್‌ನಿಂದ ಮೊಹಿದ್ ಅಲ್ತಾಫ್ಜೆ ಹಾಗೂ ಬಿಜೆಪಿಯಿಂದ ಕಟ್ಟಾ ಜಗದೀಶ್ ಸ್ಪರ್ಧಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ