ಬೆಂಗಳೂರು: ಬಿಜೆಪಿ ಪಕ್ಷದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ (Laxman Savadi) ಅವರು ಇಂದು ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ವಿವಿಧ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರಿಗೆ ರಾಜೀನಾಮೆ ಪತ್ರವನ್ನು ಸವದಿ ಸಲ್ಲಿಕೆ ಮಾಡಿದ್ದಾರೆ. ಇದರೊಂದಿಗೆ ಲಕ್ಷ್ಮಣ ಸವದಿ ಕಾಂಗ್ರೆಸ್ ಪಕ್ಷ (Congress) ಸೇರ್ಪಡೆಯಾಗುವುದು ಖಚಿತವಾಗಿದೆ. ಉಳಿದಂತೆ ಇಂದು ಸಂಜೆ 5-6 ಗಂಟೆ ವೇಳೆಗೆ ಲಕ್ಷ್ಮಣ್ ಸವದಿ ಅವರಿಗೆ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ (Basavaraj Horatti) ಭೇಟಿಗೆ ಸಮಯಾವಕಾಶ ನೀಡಿದ್ದಾರೆ. ಮೈಸೂರಿನಿಂದ (Mysuru) ಬೆಂಗಳೂರಿಗೆ (Bengaluru) ಬಸವರಾಜ್ ಹೊರಟ್ಟಿ ಆಗಮಿಸುತ್ತಿದ್ದಾರೆ. ಹೀಗಾಗಿ ಸಂಜೆ 6ರ ಬಳಿಕ ಲಕ್ಷ್ಮಣ್ ಸವದಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದಕ್ಕೂ ಮುನ್ನ ಮಾತನಾಡಿದ ಲಕ್ಷ್ಮಣ ಸವದಿ ಅವರು, ನಾನು ನನ್ನ ಮಗನಿಗೆ ಟಿಕೆಟ್ ಕೇಳಿಲ್ಲ. ನನಗೆ ಪುತ್ರ ವ್ಯಾಮೋಹ ಇಲ್ಲ. ನಾನು ಅಥಣಿಯಿಂದ ಟಿಕೆಟ್ ಕೇಳಿದ್ದೇನೆ. ನಾನು ಅಥಣಿಯಿಂದ ಟಿಕೆಟ್ ಕೇಳಿದ್ದೇನೆ. ಅದಕ್ಕೆ ಒಪ್ಪಿಗೆಯಾಗಿದೆ, ಯಡಿಯೂರಪ್ಪರಿಂದ ಯಾವುದೇ ಕರೆ ಬಂದಿಲ್ಲ. ಯಾರು ನನ್ನ ಬಳಿ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು, ನನಗೆ ಎಂಎಲ್‌ಸಿ ಮಾಡು ಅಂದವರು ಯಾರು? ಡಿಸಿಎಂ ಮಾಡಿ ಅಂದವರು ಯಾರು? ಡಿಸಿಎಂ ತೆಗಿ ಅಂದವರು ಯಾರು? ಕೊಟ್ಟ ಮಾತನ್ನು ತಪ್ಪಿದ್ದಾರೆ. ಸಾರ್ವತ್ರಿಕ ಚುನಾವಣೆಯಲ್ಲಿ ನಿಮಗೆ ಟಿಕೆಟ್ ಕೊಡುತ್ತೇವೆ ಅಂತ ಮಾತು ಕೊಟ್ಟಿದ್ದರು. ಯಾರು ಕೂಡಾ ಈ ಬಗ್ಗೆ ಮಾತನಾಡಿಲ್ಲ.
ನಾನು ಯಾವುದೇ ಡಿಮ್ಯಾಂಡ್ ಇಟ್ಟಿಲ್ಲ. ನಾನು ಇಟ್ಟಿರುವುದು ಒಂದೇ ಬೇಡಿಕೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಕ್ಷೇತ್ರದಲ್ಲಿ ಬಾಕಿ ಇರುವ ನೀರಾವರಿ ಯೋಜನೆ ಪೂರ್ಣಗೊಳಿಸಬೇಕು. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇನೆ. ಎಲ್ಲಾ ಜಿಲ್ಲೆಗಳಲ್ಲೂ ನನ್ನನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ನನ್ನ ಶಕ್ತಿ ಮೀರಿ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ