Karnataka Assembly Election 2023: ಚುನಾವಣೆ ಹೊಸ್ತಿಲಲ್ಲಿದ್ದ ಪಕ್ಷಗಳಿಗೆ ಟಿಕೆಟ್ ಕಗ್ಗಂಟು ದೊಡ್ಡ ತಲೆನೋವಾಗಿತ್ತು. ಅದರಲ್ಲೂ ಬಿಜೆಪಿಗೆ ಎಲ್ಲರನ್ನೂ ಸಮಾಧಾನ ಮಾಡಿ ಟಿಕೆಟ್ ಹಂಚುವುದರಲ್ಲಿ ಸುಸ್ತಾಗಿ ಬಿಟ್ಟಿತ್ತು. ಪಕ್ಷದವರ ಮಧ್ಯೆಯೇ ಪೈಪೋಟಿ ಇರುವುದರ ಜೊತೆ ಪ್ರಭಾವಿ ನಾಯಕರ ಲಾಬಿ ಬೇರೆ ಪಕ್ಷವನ್ನು ಧರ್ಮ ಸಂಕಟಕ್ಕೆ ಸಿಲುಕಿಸಿತ್ತು.
ಅಚ್ಚರಿಯ ನಡೆಯಲ್ಲಿ, ಒಂದು ವರ್ಷದ ಹಿಂದೆ ಕಲಬುರಗಿಯಿಂದ ಉಚ್ಛಾಟಿತಗೊಂಡ ವಿವಾದಾತ್ಮಕ ಅಭ್ಯರ್ಥಿ ಮಣಿಕಂಠ ರಾಥೋಡ್ ಅವರ ಹೆಸರನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಚಿತ್ತಾಪುರದ ಸಂಸತ್ ಚುನಾವಣೆಗೆ ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದೆ.
30 ಕೋಟಿ ಆಸ್ತಿ ಒಡೆಯ ಮಣಿಕಂಠ ರಾಥೋಡ್ ಮೇಲೆ 40 ಪೊಲೀಸ್ ಕೇಸ್!
ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ನಾಮಪತ್ರ ಸಲ್ಲಿಸಿದ್ದು, ನಾಮಪತ್ರದ ಜೊತೆಗೆ ಅಫಿಡವಿಟ್ ಕೂಡ ಸಲ್ಲಿಸಿದ್ದಾರೆ. ಇದರಲ್ಲಿ ತಮ್ಮ ಮೇಲೆ 40 ಪ್ರಕರಣಗಳು ಇರುವುದನ್ನ ಮಣಿಕಂಠ ರಾಥೋಡ್ ಉಲ್ಲೇಖಿಸಿದ್ದಾರೆ. ಹೌದು ಕಲಬುರಗಿ, ಯಾದಗಿರಿ ಜಿಲ್ಲೆ ಸೇರಿದಂತೆ ರಾಜ್ಯ ಮತ್ತು ನೆರೆಯ ತೆಲಂಗಾಣದ ಅನೇಕ ಪೊಲೀಸ್ ಠಾಣೆಗಳಲ್ಲಿ ಮಣಿಕಂಠ ರಾಥೋಡ್ ವಿರುದ್ದ ಪ್ರಕರಣಗಳು ಇವೆ.
ಬಹುತೇಕ ಪ್ರಕರಣಗಳು ಅಕ್ಕಿ, ಹಾಲಿನ ಪುಡಿ ಅಕ್ರಮ ಸಾಗಾಟದ ಪ್ರಕರಣಗಳಾಗಿದ್ದು ಜೊತೆಗೆ ಜೀವ ಬೆದರಿಕೆ ನೀಡಿದ ಪ್ರಕರಣಗಳು ಕೂಡ ಇವೆ. ಯಾದಗಿರಿ ಜಿಲ್ಲಾ ಕೋರ್ಟ್ನಿಂದ ಎರಡು ವರ್ಷ ಶಿಕ್ಷೆ ಕೂಡ ವಿಧಿಸಲಾಗಿದ್ದು, ಅದಕ್ಕೆ ತಡೆಯಾಜ್ಞೆಯನ್ನ ಮಣಿಕಂಠ ರಾಥೋಡ್ ಪಡೆದಿದ್ದಾರೆ.
ಇನ್ನು ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿರುವ ಮಣಿಕಂಠ ರಾಥೋಡ್, ತಮ್ಮ ಮೇಲೆ ಪ್ರಿಯಾಂಕ್ ಖರ್ಗೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ನಾನು ಚುನಾವಣೆಗೆ ಅನರ್ಹವಾಗಬೇಕು ಎಂದು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: SP Rishyanth: ಶಾಮನೂರು ಕುಟುಂಬದ ಮೇಲೆ ಕೇಸ್ ಮಾಡಿದ್ದ ದಾವಣಗೆರೆ ಎಸ್‌ಪಿ ದಿಢೀರ್ ವರ್ಗಾವಣೆ!
ಮಣಿಕಂಠನ ಪತ್ನಿ ಬೆಂಜ್ ಕಾರಿನ ಒಡತಿ:
ಚಿತ್ತಾಪುರ ಕಣದಿಂದ ಸ್ಪರ್ಧೆ ಬಯಸಿ ಮಣಿಕಂಠ ರಾಥೋಡ್ ನಾಮಪತ್ರ ಸಲ್ಲಿಸಿದ್ದು, ಈ ಸಂದರ್ಭದಲ್ಲಿ ಅವರೇ ಖುದ್ದು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿತ್‍ನಲ್ಲಿ ಆಸ್ತಿಪಾಸ್ತಿ, ವಾಹನಗಳು, ಅಪರಾಧ ಪ್ರಕರಣಗಳೆಲ್ಲದರ ಸಂಪೂರ್ಣ ಮಾಹಿತಿ ನೀಡಿದ್ದಾರೆ.
ಮಣಿಕಂಠ ಕೈಯಲ್ಲಿ 6.75 ಲಕ್ಷ ರೂ, ಪತ್ನಿ ಬಳಿ 1.90 ಲಕ್ಷ ರೂ., ವಿವಿಧ ಬ್ಯಾಂಕುಗಳಲ್ಲಿ 33.64 ಲಕ್ಷ ರೂ., ಪತ್ನಿ ಹೆಸರಲ್ಲಿ 64 ಲಕ್ಷ ರೂ., ಎಲ್ಲೈಸಿಯಲ್ಲಿ ಹೂಡಿಕೆ, ವಿವಿಧ ಮಾದರಿಗಳ ಆಧುನಿಕ ಕಾರುಗಳು, ಚಿನ್ನಾಭರಣ ಬೆಳ್ಳಿ ಸೇರಿದಂತೆ ಮಣಿಕಂಠ ಬಳಿಯ ಚರಾಸ್ತಿಯ ಒಟ್ಟು ಮೊತ್ತ 11.34 ಕೋಟಿ ರೂ. ಇರುವುದಾಗಿ ಹೇಳಿದ್ದಾರೆ. ಇವರ ಪತ್ನಿ ಬಳಿ ಇರುವ ಚರಾಸ್ತಿ ಮೌಲ್ಯ 3.22 ಕೋಟಿ ರೂ. ಇಬ್ಬರು ಮಕ್ಕಳ ಹೆಸರಲ್ಲಿ ಕ್ರಮವಾಗಿ 25 ಹಾಗೂ 50 ಲಕ್ಷ ರೂ. ಚರಾಸ್ತಿಗಳಿವೆ.
ಅಕ್ಕಿ ಗಿರಣಿ ಮಾಲೀಕ ಮಣಿಕಂಠ!
ಉಮ್ಮರ್ಗಾದಲ್ಲಿನ ಅಕ್ಕಿ ಗಿರಣಿ ಸೇರಿದಂತೆ ಕಲಬುರಗಿ, ಹೈದ್ರಾಬಾದ್, ಯಾದಗಿರಿ ಸೇರಿದಂತೆ ಹಲವೆಡೆ ಮಣಿಕಂಠ ಹೊಂದಿರುವ ಒಟ್ಟು ಸ್ಥಿರಾಸ್ತಿ ಮೌಲ್ಯ 17.83 ಕೋಟಿ ರೂಪಾಯಿಯಾದರೆ, ಇವರ ಪತ್ನಿ ಹೆಸರಲ್ಲಿ 13.48 ಕೋಟಿ ರೂ. ಒಟ್ಟು ಮೌಲ್ಯಸ್ಥಿರಾಸ್ತಿ ಇದೆ. ಮಣಿಕಂಠ ರಾಥೋಡ್ ದಂಪತಿ ಮೇಲೆ 15.33 ಕೋಟಿ ರೂ. ಮೊತ್ತದ ಸಾಲದ ಹೊರೆಯೂ ಇದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರದಲ್ಲಿ ಜಿದ್ದಾಜಿದ್ದಿ
ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರ, ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದು. ಇದಕ್ಕೆ ಕಾರಣ, ಚಿತ್ತಾಪುರ ಎಸ್ಸಿ ಮೀಸಲು ಕ್ಷೇತ್ರ, ಹಾಲಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುತ್ತಿರುವ ಕ್ಷೇತ್ರ.
ಈಗಾಗಲೇ ಎರಡು ಬಾರಿ ಗೆದ್ದಿರುವ ಪ್ರಿಯಾಂಕ್ ಖರ್ಗೆ, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದು ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ಪ್ರಿಯಾಂಕ್ ಖರ್ಗೆ ಅವರನ್ನ ಸೋಲಿಸಲೇಬೇಕು ಎಂದು ಬಿಜೆಪಿ ನಾಯಕರು ಜಿದ್ದಿಗೆ ಬಿದ್ದಿದ್ದಾರೆ.
ಇದನ್ನೂ ಓದಿ: Katta Jagadish Naidu: ಹೆಬ್ಬಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಟ್ಟಾ ಜಗದೀಶ್ ನಾಯ್ಡು ಬಗ್ಗೆ ಗೊತ್ತಿರಬೇಕಾದ ಸಂಗತಿಗಳಿವು!
ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ವಿಚಾರ ಬಿಜೆಪಿ ನಾಯಕರದ್ದು. ಹೌದು ರಾಜ್ಯ ಸರ್ಕಾರಕ್ಕೆ ಮಗ್ಗಲು ಮುಳ್ಳಾಗಿ ಕಾಡಿದ್ದ ಪ್ರಿಯಾಂಕ್ ಖರ್ಗೆಗೆ ಸೋಲಿನ ರುಚಿ ತೋರಿಸಬೇಕು. ಜೊತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರನನ್ನು ಸೋಲಿಸುವ ಮೂಲಕ, ರಾಷ್ಟ್ರಮಟ್ಟದಲ್ಲಿ ಕೂಡ ಖರ್ಗೆ ಇಮೇಜ್ಗೆ ಡ್ಯಾಮೇಜ್ ಮಾಡಬೇಕು ಅನ್ನೋದು ಬಿಜೆಪಿ ನಾಯಕರ ಲೆಕ್ಕಾಚಾರವಾಗಿದೆ.
ಹೀಗಾಗಿ ಅನೇಕ ತಂತ್ರಗಳನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಆದ್ರೆ ಇದೀಗ ಬಿಜೆಪಿಗೆ ಆರಂಭದಲ್ಲಿಯೇ ಶಾಕ್ ಉಂಟಾಗಿದೆ. ಹೌದು ಚಿತ್ತಾಪುರ ಬಿಜೆಪಿ ಟಿಕೆಟ್ ವಿಚಾರ, ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ. ಚಿತ್ತಾಪುರ ಬಿಜೆಪಿ ಟಿಕೆಟ್ಗಾಗಿ ಮಾಜಿ ಜಿಲ್ಲಾ ಪಂಚಾಯತ್ ಸಧಸ್ಯ ಅರವಿಂದ್ ಚೌಹಾಣ್, ಮಣಿಕಂಠ ರಾಠೋಡ್ ಸೇರಿದಂತೆ ಎಂಟು ಜನರು ಟಿಕೆಟ್ಗಾಗಿ ಬೇಡಿಕೆ ಇಟ್ಟಿದ್ದರು.
ಆದ್ರೆ, ಹೈಕಮಾಂಡ್, ಮಣಿಕಂಠ ರಾಥೋಡ್ಗೆ ಟಿಕೆಟ್ ನೀಡಿದೆ. ಇದು ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ. ಒಂದೆಡೆ ಟಿಕೆಟ್ ನಿರೀಕ್ಷೆಯಲ್ಲಿದ್ದ ಅರವಿಂದ್ ಚೌಹಾಣ್ ಗೆ ನಿರಾಸೆಯಾದ್ರೆ, ಮತ್ತೊಂದಡೆ ಮಾಜಿ ಶಾಸಕ ಮತ್ತು ಲಿಂಗಾಯತ ಮುಖಂಡ, ವಿಶ್ವನಾಥ್ ಪಾಟೀಲ್ ಹೆಬ್ಬಾಳ್ ಕೂಡಾ ಟಿಕೆಟ್ ವಿಚಾರಕ್ಕೆ ನಾಯಕರ ವಿರುದ್ದ ಮುನಿಸಿಕೊಂಡಿದ್ದಾರೆ.
ಇನ್ನು ಕ್ಷೇತ್ರದಲ್ಲಿ ಸಜ್ಜನರನ್ನು ಬಿಟ್ಟು ರೌಡಿ ಶೀಟರ್ ಆಗಿರುವ, ಅನೇಕ ಪ್ರಕರಣಗಳು ಇರೋ ಮಣಿಕಂಠ ರಾಥೋಡ್ಗೆ ಟಿಕೆಟ್ ನೀಡಿದ್ದಕ್ಕೆ, ಮಾಜಿ ಶಾಸಕ ವಿಶ್ವನಾಥ್ ಪಾಟೀಲ್ ಮತ್ತು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅರವಿಂದ್ ಚೌಹಾಣ್ ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ